Thursday, September 19, 2024

ಪ್ರಾಯೋಗಿಕ ಆವೃತ್ತಿ

ಪ್ರಜಾಪ್ರಭುತ್ವದಿಂದ ದೇಶದಲ್ಲಿ ಸಾಕಷ್ಟು ಸುಧಾರಣೆ : ಆಯುಷ್ಮಾನ್ ರಾಜರತ್ನ ಅಂಬೇಡ್ಕರ್

ಡಾ.ಬಿ.ಆರ್.ಅಂಬೇಡ್ಕರ್ ಅವರು ದೇಶದಲ್ಲಿ ಚಾಲ್ತಿಯಲ್ಲಿದ್ದ ಮನುಧರ್ಮದ ಕಾನೂನನ್ನು ಅಂತ್ಯಗೊಳಿಸಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಜಾರಿಗೆ ತರಲು ಶ್ರಮಿಸಿದ ಫಲವಾಗಿ ಇಂದು ದೇಶದಲ್ಲಿ ಅನೇಕ ಸುಧಾರಣೆಗಳು ಕಂಡಿವೆ ಎಂದು ಆಯುಷ್ಮಾನ್ ರಾಜರತ್ನ ಅಂಬೇಡ್ಕರ್(ಡಾ.ಬಿ.ಆರ್.ಅಂಬೇಡ್ಕರ್ ಮೊಮ್ಮಗ) ತಿಳಿಸಿದರು.

ಮದ್ದೂರು ಪಟ್ಟಣದ ಪುರಸಭೆ ಆವರಣದಲ್ಲಿ ಶಾಸಕ ಡಿ.ಸಿ.ತಮ್ಮಣ್ಣ ಅವರು ತಮ್ಮ ಹಣದಿಂದ (20 ಲಕ್ಷ ರೂ.ವೆಚ್ಚ) ನಿರ್ಮಿಸಿರುವ ವಿಶ್ವಜ್ಞಾನಿ, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 8 ಅಡಿ ಎತ್ತರದ ಕಂಚಿನ ಪುತ್ಥಳಿಯ ಅನಾವರಣಗೊಳಿಸಿ ಅವರು ಮಾತನಾಡಿದರು.

ಒಳ್ಳೆಯ ಉದ್ದೇಶದಿಂದ ಮತದಾನದ ಹಕ್ಕನ್ನು ದೇಶದ ಪ್ರಜೆಗಳಿಗೆ ನೀಡಲಾಗಿದೆ. ದೇಶದಲ್ಲಿ ಸಂವಿಧಾನ ರಚನೆಯಾಗುವ ಮೊದಲು ದೇಶದಲ್ಲಿ ಮನುಧರ್ಮದ ಕಾನೂನು ಜಾರಿಯಲ್ಲಿದ್ದು ಒಂದೊಂದು ಸಮುದಾಯಕ್ಕೆ ಒಂದೊಂದು ವೃತ್ತಿಯನ್ನು ಘೋಷಿಸಿತ್ತು, ಆ ವೃತ್ತಿಯನ್ನು ಬಿಟ್ಟು ಬೇರೆ ವೃತ್ತಿ ಮಾಡಿದವರ ಹತ್ಯೆ ಮಾಡಲಾಗುತ್ತಿತ್ತು. ದೇಶದಲ್ಲಿರುವ ಶೂದ್ರ ವರ್ಗದ ಜನರು ಮೇಲ್ಮಟ್ಟಕ್ಕೆ ಹೋಗಬಾರದು ಅನ್ನುವುದೇ ಮನೋಧರ್ಮದ ಕಾನೂನಾಗಿತ್ತು ಉದಾ: ಸವಿತಾ ಸಮಾಜದ ಮಕ್ಕಳು ಸವಿತಾ ಸಮಾಜವನ್ನು, ದಲಿತರ ಮಕ್ಕಳು ದಲಿತ ಕಾಯಕವನ್ನು ಮಾಡುವ ಕಾನೂನನ್ನು ಮನುವಾದಿಗಳು ರೂಪಿಸಿದ್ದರು ಎಂದು ತಿಳಿಸಿದರು.

ಶೋಷಿತರು ಅತ್ಯುನ್ನತ ಹುದ್ದೆಗೆ
ಡಾ.ಬಿ.ಆರ್. ಅಂಬೇಡ್ಕರ್ ಸಂವಿಧಾನ ರಚನೆ ಮಾಡಿದ ನಂತರ ಸಂವಿಧಾನದ ಆರ್ಟಿಕಲ್ 13 ರಲ್ಲಿ ಮನುವಾದದ ಕಾನೂನುಗಳನ್ನು ಅಂತ್ಯಗೊಳಿಸಿ ಪ್ರಜಾಪ್ರಭುತ್ವ ಸಂವಿಧಾನವನ್ನು ಜಾರಿಗೆ ತಂದ ಫಲವಾಗಿ ಶೋಷಿತ ವರ್ಗದ ಎಲ್ಲಾ ಸಮುದಾಯಗಳ ಮಕ್ಕಳು ಐಎಎಸ್, ಐಪಿಎಸ್, ಡಾಕ್ಟರ್, ಇಂಜಿನಿಯರ್ ಸೇರಿದಂತೆ ದೇಶದ ಅತ್ಯುನ್ನತ ಹುದ್ದೆಗಳನ್ನು ಏರಲು ಸಹಕಾರಿಯಾಗಿದೆ ಎಂದರು.

ಭಾರತದ ಸಂವಿಧಾನವು ಮನುಧರ್ಮದ ಕಾನೂನು ಅಂತ್ಯಗೊಳಿಸಿ ಪ್ರತಿಯೊಬ್ಬ ಪ್ರಜೆಗೂ ಮತದಾನದ ಹಕ್ಕು ನೀಡಿದ್ದು ಜನರು ಮತದಾನದ ಮಹತ್ವವನ್ನು ತಿಳಿದು ಮತದಾನ ಮಾಡಬೇಕು ಎಂದರು.

ಡಾ.ಬಿ.ಆರ್.ಅಂಬೇಡ್ಕರ್ ಅವರು ಬಹಳ ಪರಿಶ್ರಮದಿಂದ ಸಂವಿಧಾನವನ್ನು ರಚನೆ ಮಾಡಿದ್ದಾರೆ. ಅಂಬೇಡ್ಕರ್ ಅವರ ಮಡದಿ ರಮಾಬಾಯಿ ಅವರು ಮಾಸಿದ ಸೀರೆಯನ್ನು ಉಟ್ಟುಕೊಂಡು ಅಂಬೇಡ್ಕರ್ ಅವರು ಭಾಷಣ ಮಾಡುವ ಕಾರ್ಯಕ್ರಮಕ್ಕೆ ಹೋಗುವ ಕಾಲವೊಂದಿತ್ತು. ಈಗ ಸುಂದರವಾದ ಸೀರೆಗಳನ್ನು ಉಟ್ಟ ಮಹಿಳೆಯರು ಕಾರ್ಯಕ್ರಮಕ್ಕೆ ಬಂದಿರುವಿರಿ. ಇಂದು ಭಾರತದ ಮಹಿಳೆಯರು ಅನೇಕ ಸ್ವತಂತ್ರ ಭಾರತದಲ್ಲಿ ಉನ್ನತ ಹುದ್ದೆಗೆ ಏರಲು ಸಹಕಾರಿಯಾಗಿದೆ ಎಂದರು.

ಮತ ಮಾರಾಟ ಮಾಡಿಕೊಳ್ಳುವುದು ಅಪಮಾನ
ಮಹಿಳೆಯರು ಸೀರೆ ಮತ್ತು ಕುಕ್ಕರಿಗೆ ಮತದಾನದ ಹಕ್ಕನ್ನು ಮಾರಿಕೊಳ್ಳುವುದು. ಪುರುಷರು ಎಣ್ಣೆಗೆ ಹಾಗೂ ಯುವಕರು ಹಣಕ್ಕೆ ಮತದಾನದ ಹಕ್ಕನ್ನು ಮಾರಿಕೊಳ್ಳುವುದು, ಅಂಬೇಡ್ಕರ್ ಅವರಿಗೆ ಮಾಡುವ ಅಪಮಾನವಾಗಿದೆ. ಡಾ.ಬಿ.ಆರ್.ಅಂಬೇಡ್ಕರ್ ಅವರು ಮನಸ್ಸು ಮಾಡಿದ್ದರೆ ಅದಾನಿ, ಅಂಬಾನಿಗಿಂತಲೂ ಹೆಚ್ಚು ಹಣವನ್ನು ಸಂಪಾದನೆ ಮಾಡಬಹುದಿತ್ತು. ಆದರೆ ದೇಶದ ಶೋಷಿತ ಸಮುದಾಯಕ್ಕೆ ಮತದಾನದ ಹಕ್ಕನ್ನು ನೀಡಿದ್ದು,ದೇಶದ ಶೂದ್ರ ಮಕ್ಕಳು ಇದರ ಮಹತ್ವವನ್ನು ತಿಳಿದು ಅಭ್ಯರ್ಥಿಗಳಿಗೆ ಮತದಾನ ಮಾಡಬೇಕು ಎಂದು ಮನವಿ ಮಾಡಿದರು.

ಶಾಸಕ ಡಿ.ಸಿ.ತಮ್ಮಣ್ಣ ಮಾತನಾಡಿ, ಡಾ.ಬಿ.ಆರ್‌.ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ದೇಶದ ಪ್ರತಿ ಪ್ರಜೆಗಳಿಗೆ ಮತದಾನದ ಹಕ್ಕು ಮತ್ತು ಮಹಿಳೆಯರಿಗೆ ಸ್ವಾಭಿಮಾನದ ಹಕ್ಕನ್ನು ನೀಡಿದ್ದಾರೆ. ದೇವೇಗೌಡರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಮಾಧ್ಯಮದವರು ಕೇಳಿದ ಪ್ರಶ್ನೆಗೆ ನಾನು ರೈತನ ಮಗ ಡಾ.ಬಿ.ಆರ್. ಅಂಬೇಡ್ಕರವರು ರಚನೆ ಮಾಡಿದ ಸಂವಿಧಾನದಿಂದ ಪ್ರಧಾನಿ ಹುದ್ದೆಗೆ ಏರಿದ್ದೇನೆ ಎಂದು ಹೇಳಿದರು, ಅಂತೆಯೇ ದೇವೇಗೌಡರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಮಹಿಳೆಯರಿಗೆ ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲಾತಿ ನೀಡಿದರು ಎಂದರು.

11 ತಿಂಗಳು ಪ್ರಧಾನಿಯಾಗಿದ್ದ ದೇವೇಗೌಡರು ಪಾರ್ಲಿಮೆಂಟ್‌ನಲ್ಲಿ ಮಹಿಳೆಯರಿಗೆ ಶೇ.35 ರಷ್ಟು ಮೀಸಲಾತಿ ನೀಡುವ ಬಿಲ್ ತಂದಿದ್ದರು. ಆದರೆ ಬಹುಮತದ ಕೊರತೆಯಿಂದ ಅದು ಯಶಸ್ವಿಯಾಗಲಿಲ್ಲ ಎಂದು ತಿಳಿಸಿದರು.
ಆಸೆ,ಆಮಿಷಗಳಿಗೆ ಒಳಗಾಗದೆ ಅಭಿವೃದ್ಧಿ ಕೆಲಸ ಮಾಡುವವರಿಗೆ ಮತದಾನ ಮಾಡುವ ಮೂಲಕ ಅಂಬೇಡ್ಕರ್ ಅವರ ಆಶಯವನ್ನು ಉಳಿಸಬೇಕು ಎಂದರು.

ಉರಿಲಿಂಗಿ ಪೆದ್ದಿಮಠದ ಜ್ಞಾನ ಪ್ರಕಾಶ ಸ್ವಾಮೀಜಿ ಮಾತನಾಡಿ, ಮತದಾನದ ಮೂಲಕ ದೇಶವನ್ನು ಬದಲಾವಣೆ ಮಾಡಬಹುದು. ಗುಡಿ, ಗೋಪುರ, ಚರ್ಚ್ ಗಳಿಂದ ಅಲ್ಲ ಎಂದರು.

ಕಾರ್ಯಕ್ರಮಕ್ಕೂ ಮುನ್ನ ಮದ್ದೂರು ಪಟ್ಟಣದ ಶ್ರೀ ಉಗ್ರನರಸಿಂಹ ಸ್ವಾಮಿ ದೇವಾಲಯದಿಂದ ಬೆಳ್ಳಿ ರಥದಲ್ಲಿ ಡಾ.ಬಿ.ಆರ್.ಅಂಬೇಡ್ಕರವರ ಭಾವಚಿತ್ರವನ್ನು ಪ್ರತಿಷ್ಟಾಪನೆ ಮಾಡಿ ಪ್ರಮುಖ ಬೀದಿಗಳ ಮೂಲಕ ಪುರಸಭೆವರೆಗೆ ವಿವಿಧ ಜಾನಪದ ಕಲಾ ತಂಡಗಳು, ದಲಿತ ಮತ್ತು ಪ್ರಗತಿ ಪರ ಸಂಘಟನೆಗಳ ನಾಯಕರು ಬೃಹತ್ ಮೆರವಣಿಗೆ ಮೂಲಕ ತರಲಾಯಿತು.

ಕಾರ್ಯಕ್ರಮದಲ್ಲಿ ಶಾಸಕ ಕೆ,ಅಂದಾನಿ, ಬಿಎಸ್ಪಿ ರಾಜ್ಯಾಧ್ಯಕ್ಷ ಕೃಷ್ಣಮೂರ್ತಿ, ಪುರಸಭೆ ಅಧ್ಯಕ್ಷ ಸುರೇಶ್ ಕುಮಾರ್,ಸ್ಥಾಯಿಸಮಿತಿ ಅಧ್ಯಕ್ಷ ಪ್ರಸನ್ನ ಕುಮಾರ್, ಉಪಾಧ್ಯಕ್ಷೆ ಸುಮಿತ್ರ ರಮೇಶ್, ಡಾ.ಮೂರ್ತಿ, ಮಾದನಾಯಕನಹಳ್ಳಿ ರಾಜಣ್ಣ, ವೆಂಕಟಚಲಯ್ಯ, ಸುರೇಶ್‌ಕಂಠಿ, ಬೋರಯ್ಯ, ವೆಂಕಟಗಿರಿಯಯ್ಯ, ಅಂದಾನಿ, ಜೆಡಿಎಸ್ ತಾಲೂಕು ಅಧ್ಯಕ್ಷ ಚಿಕ್ಕತಿಮ್ಮೇಗೌಡ, ಜೆಡಿಎಸ್ ತಾಲೂಕು ಎಸ್ಸಿ,ಎಸ್ಟಿ ಅಧ್ಯಕ್ಷ ಕಾಳಯ್ಯ, ಗ್ರಾ,ಪಂ, ಅಧ್ಯಕ್ಷ ರವಿ, ಹಾಗೂ ರವಿಕೀರ್ತಿ ಸೇರಿದಂತೆ ವಿವಿಧ ದಲಿತ ಸಂಘಟನೆ ಹಾಗೂ ಪ್ರಗತಿಪರ ಸಂಘಟನೆಯ ನಾಯಕರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!