Friday, September 20, 2024

ಪ್ರಾಯೋಗಿಕ ಆವೃತ್ತಿ

ಬೊಮ್ಮಾಯಿ ಸರ್ಕಾರದ ಕೋಮುವಾದಿ ಮತ್ತು ನಯವಂಚಕ ಮೀಸಲಾತಿ ಸೂತ್ರ

✍️ ಶಿವಸುಂದರ್

ಸರ್ಕಾರದ ಅವಧಿ ಮುಗಿಯುವ ಕೊನೆಯವೆರಗೂ ಕಾದಿದ್ದು ನೀತಿ ಸಂಹಿತೆ ಜಾರಿಯಾಗುವ ಮುನ್ನ ಬೊಮ್ಮಾಯಿ ಸರ್ಕಾರ ಘೋಷಿಸಿರುವ ಮೀಸಲಾತಿ ಸೂತ್ರ ಅತ್ಯಂತ ಕುತಂತ್ರಿಯೂ, ಕೋಮುವಾದಿ ದುಷ್ಟತನದಿಂದಲೂ ಕೂಡಿದ್ದು, ನಿಷ್ಪಕ್ಷಪಾತಿ ನ್ಯಾಯಾಲಯದಲ್ಲಿ ಮೊದಲ ಅಹವಾಲಿನಲ್ಲಿ ಅನೂರ್ಜಿತಗೊಳ್ಳುವಂತಿದೆ.

ಮುಸ್ಲಿಮರಿಗೆ ಹಿಂದುಳಿದ ವರ್ಗಗಳಡಿ ಮೀಸಲಾತಿ ರದ್ಧತಿ- ಅಕ್ಷಮ್ಯ ಕೋಮುವಾದಿ ಕ್ರಮ

ಸಂವಿಧಾನದಲ್ಲಿ ಧರ್ಮಾಧಾರಿತ ಮೀಸಲಾತಿ ಇಲ್ಲದಿರುವುದರಿಂದ 2 (ಬಿ) ಪ್ರವರ್ಗದಡಿ ಮುಸ್ಲಿಮರು ಪಡೆಯುತ್ತಿದ್ದ ಮೀಸಲಾತಿಯನ್ನು ರದ್ದುಗೊಳಿಸಿ EWS ಮೀಸಲಾತಿಯಡಿ ತರಲಾಗಿದೆ..

ಸಾಚಾರ್ ವರದಿಯ ಪ್ರಕಾರ ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ದಲಿತರಿಗಿಂತಲೂ ಹಿಂದುಳಿದಿರುವ ಮುಸ್ಲಿಮರನ್ನು ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಅತ್ಯಂತ ಮುಂದುವರೆದಿರುವ ಬ್ರಾಹ್ಮಣರ ಜೊತೆ ಪೈಪೋಟಿಗಿಳಿಸಿ ಮುಸ್ಲಿಮರನ್ನು ಸಾವ್ರಜನಿಕ ಕ್ಷೇತ್ರದಿಂದ ಸಂಪೂರ್ಣವಾಗಿ ಅದ್ರೂಶ್ಯಗೊಳಿಸುವ ಹಿಂದೂತ್ವದ ಹುನ್ನಾರವಿದು ..

ಆದರೆ

ಮುಸ್ಲಿಮರಿಗೆ 2(ಬಿ) ಪ್ರವರ್ಗದಡಿ ಮೀಸಲಾತಿ ಕೊಟ್ಟಿರುವುದು ಧರ್ಮದ ಆಧಾರದಲ್ಲಲ್ಲ.

ಇತರ ಹಿಂದುಳಿದ ವರ್ಗಗಳಂತೆ ಕರ್ನಾಟಕದ ಮುಸ್ಲಿಂ ಸಮುದಾಯ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳೆಂದು ವೈಜ್ನಾನಿಕ ಅಧ್ಯಯನದ ಮೂಲಕ ಗುರುತಿಸಿ ಒಬಿಸಿ- ಇತರ ಹಿಂದುಳಿದ ವರ್ಗ- ಮೀಸಲಾತಿಯನ್ನು ನೀಡಲಾಗಿದೆ.

1920 ರ ಮಿಲ್ಲರ್ ಸಮಿತಿಯಿಂದಲೂ ಕರ್ನಾಟಕದ ಮುಸ್ಲಿಂ ಸಮುದಾಯವನ್ನು ಅಬ್ರಾಹ್ಮಣ ಹಿಂದುಳಿದ ಸಮುದಾಯವೆಂದು ಪರಿಗಣಿಸಿ ಮೀಸಲಾತಿ ಒದಗಿಸಲಾಗಿದೆ.

ಸ್ವಾತಂತ್ರ್ಯ ನಂತರದಲ್ಲಿ 1961ರ ನಾಗನಗೌಡ ಸಮಿತಿ, ವೆಂಕಟಸ್ವಾಮಿ ಅಯೋಗ ಮತ್ತು 1990 ರ ಚಿನ್ನಪ್ಪ ರೆಡ್ಡಿ ಅಯೋಗ ಕೂಡ ಮುಸ್ಲಿಮರನ್ನು ಹಿಂದುಳಿದ ವರ್ಗಗಳಿಗೆ ಸೇರಿಸಿರುವುದನ್ನು ಎತ್ತಿ ಹಿಡಿದಿದೆ.

2013 ರಲ್ಲಿ ಬಿಜೆಪಿ ಸರ್ಕಾರವು ಸಹ ಮುಸ್ಲಿಮರಿಗೆ ಒಬಿಸಿ ಪ್ರಮಾಣ ಪತ್ರ ಕೊಡುವ ವಿವಾವದವೊಂದರಲ್ಲಿ ಹೊರಡಿಸಿದ ಸುತ್ತೋಲೆ ಕ್ರಮಾಂಕ No:BCW 68 BCA 2013 ಪ್ರಕಾರ ಎಲ್ಲಾ ಮುಸ್ಲಿಮರಿಗೂ ಒಬಿಸಿ ಸರ್ಟಿಫ಼ಿಕೇಟ್ ಕೊಡಲು ಅದೇಶಿಸಿತ್ತು.

ಮುಸ್ಲಿಮರನ್ನು ಯಾವುದೇ ಅಧ್ಯಯನವಿಲ್ಲದೆ ಏಕಾಏಕಿ ಮುಂದುವರೆದ ಪಟ್ಟಿಗೆ ಸೇರಿಸಲು ಅವಕಾಶವಿಲ್ಲ.

ಹಾಗೂ ಧರ್ಮದ ಮೀಸಲಾತಿ ಸಲ್ಲ ಎನ್ನುವ ಬಿಜೆಪಿ ಸರ್ಕಾರ 3 (ಬಿ) (ಈಗ 2 (ಡಿ) ಯಲ್ಲಿರುವ ಕ್ರಿಶ್ಚಿಯನ್ ಮೀಸಲಾತಿ ಮುಂದುವರೆಸಿರುವುದು ಬಿಜೆಪಿಯ ಕೋಮುವಾದಕ್ಕೆ ಮತ್ತೊಂದು ಉದಾಹರಣೆ

ಒಳಮೀಸಲಾತಿ ಆದೇಶ- ಒಣಮಾತಿನ ನಯವಂಚನೆ

ರಾಜ್ಯದ ಶಾಸನ ಸಭೆಗಳಿಗೆ ಪರಿಶಿಷ್ಟ ಜಾತಿಗಳ ಮೀಸಲಾತಿಯನ್ನು ಒಳವರ್ಗೀಕರಣ ಮಾಡುವ ಶಾಸನಾತ್ಮಕ ಅಧಿಕಾರವಿಲ್ಲವೆಂದು 2004 ರಲ್ಲಿ ಐವರು ನ್ಯಾಯಾಧೀಶರ ಸಾಂವಿಧಾನಿಕ ಪೀಠ ಆದೆಶಿಸಿದೆ.

2020 ರಲ್ಲಿ ಮತ್ತೊಂದು ಸಾಂವಿಧಾನಿಕ ಪೀಠ ಅದಕ್ಕೆ ವ್ಯತಿರಿಕ್ತವಾದ ಅಭಿಪ್ರಾಯ ನೀಡಿದ್ದರೂ ಅದೂ ಕೂಡ ಐವರು ಸದಸ್ಯರ ಪೀಠವಾಗಿದ್ದರಿಂದ ಏಳು ಸದಸ್ಯರ ಪೀಠಕ್ಕೆ ಶಿಫ಼ಾರಸ್ಸು ಮಾಡಲಾಯಿತು. ಈವರೆಗೆ ಅಂಥಾ ಉನ್ನತ ಪೀಠ ರಚನೆಯಾಗಿಲ್ಲ. ಹೀಗಾಗಿ ಅಲ್ಲಿಯವರೆಗೆ ಒಳಮೀಸಲಾತಿ ಜಾರಿ ಮಾಡುವ ಶಾಸನಾತ್ಮಕ ಅಧಿಕಾರ ರಾಜ್ಯ ಶಾನಸಭೆಗಳಿಗೆ ಇರುವುದಿಲ್ಲ.

ಇದನ್ನೂ ಓದಿ : ಮುಸ್ಲಿಂರು ಭಾರತೀಯ ಪ್ರಜೆಗಳೇ ಅಥವಾ ವಿದೇಶಿಯರೇ ಎಂಬುದು ಮೊದಲು‌ ತೀರ್ಮಾನವಾಗಲಿ…

ಮತ್ತೊಂದು ಮಾರ್ಗ : ಸಂವಿಧಾನದ 341 ನೇ ಕಲಮಿಗೆ 341 (3) ತಿದ್ದುಪಡಿ ತಂದು ರಾಜ್ಯ ಶಾಸನ ಸಭೆಗಳಿಗೆ ಒಳಮೀಸಲಾತಿಯ ಅಧಿಕಾರ ಕಲ್ಪಿಸುವುದು

ರಾತ್ರೋ ರಾತ್ರಿ ಸಂವಿಧಾನ ತಿದ್ದುಪಡಿ ಮಾಡಿ ಮೇಲ್ಜಾತಿಗಳಿಗೆ EWS ಮೀಸಲಾತಿ ಕಲ್ಪಿಸಿದ ಬಿಜೆಪಿಗೆ ರಾಜಕೀಯ ಇಚ್ಚಾಶಕ್ತಿ ಇದ್ದರೆ ಇದು ಅತ್ಯಂತ ಸುಲಭದ ಕೆಲಸ.

ಆದರೆ ಕೇಂದ್ರದ ಬಿಜೆಪಿಯ ಮುಂದೆ ಜಸ್ಟಿಸ್ ಉಷಾ ಮೆಹ್ರ ಅಯೋಗದ ವರದಿಯನ್ನು ಒಳಗೊಂಡಂಂತೆ ಈಗಾಗಲೇ ಆಂಧ್ರ, ಪಂಜಾಬ್ ಇನ್ನಿತರ ರಾಜ್ಯಗಳು ಈ ಬಗೆಯ ಸಂವಿಧಾನ ತಿದ್ದುಪಡಿ ಮಾಡಬೇಕೆಂಬ ಆಗ್ರಹಗಳಿದ್ದರೂ ಅದನ್ನು ಮೋದಿ ಸರ್ಕಾರ ಪರಿಗಣಿಸುತ್ತಿಲ್ಲ.

ಹೆಚ್ಚೆಂದರೆ ಈಗಾಗಲೇ ಮೋದಿ ಸರ್ಕಾರದ ಕಸದ ಬುಟ್ಟಿಗೆ ಹಾಕಿರುವ ಇಂಥಾ ಶಿಫ಼ಾರಸ್ಸುಗಳ ಜೊತೆಗೆ ಕರ್ನಾಟಕ ಸರ್ಕಾರದ ಶಿಫ಼ಾರಸ್ಸು ಸೇರಿಕೊಳ್ಳುತ್ತದೆ. ಹೀಗಾಗಿ ಒಳಮೀಸಲಾತಿ ಸದ್ಯಕ್ಕೆ ಜಾರಿಯಾಗುವುದಿಲ್ಲ

ಇದಲ್ಲದೆ ಎಸ್ಸಿ-ಎಸ್ಟಿ ಮೀಸಲಾತಿಯ ಹೆಚ್ಚಳವನ್ನು ಒಂಭತ್ತನೇ ಶೆಡ್ಯೂಲಿಗೆ ಸೇರಿಸಲು ಸಂಸತ್ತು ಒಂದು ಕಾನೂನು ಮಾಡಬೇಕು. ಅದರ ಬಗ್ಗೆ ಯಾವುದೇ ಪ್ರಸ್ತಾಪವಿಲ್ಲವೆಂದು ಮೊನ್ನೆ ಸಮಾಜ ಕಲ್ಯಾಣ ಸಚಿವರೇ ಹೇಳಿದ್ದಾರೆ. ಇದಲ್ಲದೆ ಈಗ ಸರ್ಕಾರದ ಆದೇಶವು ಹೆಚ್ಚಿಸಿರುವ ಪ್ರಮಾಣದ ರೀತಿಗೆ ಯಾವುದೇ ವೈಜ್ನಾನಿಕ ಆಧಾರವಿಲ್ಲ. ಹೀಗಾಗಿಯೂ ಅದು ಊರ್ಜಿತವಾಗುವುದಿಲ್ಲ.

ಲಿಂಗಾಯತ-ಒಕ್ಕಲಿಗ ಮೀಸಲಾತಿ ಹೆಚ್ಚಳದ ಮೋಸ

ಮುಸ್ಲಿಂ ಮೀಸಲಾತಿಯನ್ನು ರದ್ದುಗೊಳಿಸಿ ಅದನ್ನು 3 (ಎ )ಒಕ್ಕಲಿಗ ಮತ್ತು 3 (ಬಿ )ಲಿಂಗಾಯತ ಗುಂಪಿಗೆ ತಲಾ ಎರಡೆರೆದು ಹಂಚಿರುವುದರ ಹಿಂದೆ ಯಾವುದೇ ವೈಜಾನಿಕ ಬುನಾದಿಯಿಲ್ಲ. ಏಕೆಂದರೆ ಅದೇ ರೀತಿಯಲ್ಲಿ 2 (ಎ) ಪ್ರವರ್ಗಕ್ಕೆ ಏಕೆ ಯಾವುದೇ ಹೆಚ್ಚಳವಿಲ್ಲ ಎಂಬುದಕ್ಕೆ ತರ್ಕವೆನು? ಅಧ್ಯಯನವೇನು ?

ಚುನಾವಣೆಗೆ ಮುಂಚೆ ಬಲಾಢ್ಯ ಜಾತಿಗಳನ್ನು ತುಷ್ಟೀಕರಿಸುವ ಉದ್ದೇಶವನ್ನು ಬಿಟ್ಟರೆ ಬೇರೆ ಯಾವುದೇ ಕಾನೂನು ಸಮಜಾಯಿಷಿ ಇದಕ್ಕಿಲ್ಲ. . ಹೀಗಾಗಿ ಇದು ಆರಂಭದಲ್ಲೇ ಅನೂರ್ಜಿತಗೊಳ್ಳುವ ಸೂತ್ರವಾಗಿದೆ.

ಹೀಗೆ ಒಕ್ಕಲಿಗರಿಗೂ, ಲಿಂಗಾಯತರಿಗೂ ಮೋಸವಾಗಿದೆ. ಶೇ. 50 ರ ಮೀಸಲಾತಿಯ ಮೇಲ್ಮಿತಿಯನ್ನು ಹೆಚ್ಚಿಸದೆ ಇದಕ್ಕೆ ಪರಿಹಾರವಿಲ್ಲ.

ಅದಕ್ಕೆ ಮುಂದಾಗದ ಬಿಜೆಪಿ ಸರ್ಕಾರ ತನ್ನ ಕೋಮುವಾದಿ ಪಾಪದಲ್ಲಿ ಲಿಂಗಾಯತ ಮತ್ತು ಒಕ್ಕಲಿಗರನ್ನು ಒಳಗೊಳ್ಳುತ್ತಿದೆ.

ಆದ್ದರಿಂದ ಈ ಬಿಜೆಪಿ ಸರ್ಕಾರದ ಈ ಕೋಮುವಾದಿ-ನಯವಂಚನೆಯ ಮೋಸದ ಮೀಸಲಾತಿ ಸೂತ್ರವನ್ನು ಇಡೀ ನಾಡಿನ ಜನತೆ ತಿರಸ್ಕರಿಸಿ ಬಿಜೆಪಿಯ ದುಷ್ಟತನಕ್ಕೆ ಬರಲಿರುವ ಚುನಾವಣೆಯಲ್ಲಿ ಸರಿಯಾದ ಪಾಠ ಕಲಿಸಬೇಕಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!