Tuesday, April 30, 2024

ಪ್ರಾಯೋಗಿಕ ಆವೃತ್ತಿ

ಆ ಗುಡಿಯಲ್ಲಿ ದೇವರಿಲ್ಲ….

✍️ ರವೀಂದ್ರನಾಥ ಟ್ಯಾಗೋರ್

ಸಂತ ಹೇಳಿದ:
“ಆ ಗುಡಿಯಲ್ಲಿ ದೇವರಿಲ್ಲ”.

ರಾಜನಿಗೆ ರೇಗಿಹೋಯ್ತು.

“ದೇವರಿಲ್ಲವೆ? ಎಲೈ ಸಂತನೆ,
ನೀನೊಬ್ಬ ನಾಸ್ತಿಕನಂತೆ ಮಾತಾಡುತ್ತಿರುವೆಯಲ್ಲವೆ?

ಬೆಲೆ ಕಟ್ಟಲಾಗದ ಮುತ್ತುರತ್ನ ಖಚಿತವಾದ ಆ ಸಿಂಹಾಸನದಲ್ಲಿ ಬಂಗಾರದ ಮೂರ್ತಿ ರಾರಾಜಿಸುತ್ತಿದೆ.

ಆದರೂ ‘ದೇಗುಲ ಖಾಲಿಯಿದೆ’ ಎನ್ನುವೆಯಲ್ಲ?”

“ಅದು ಖಾಲಿಯಿಲ್ಲ, ಬದಲಿಗೆ ರಾಜಾಹಂಕಾರದಿಂದ ತುಂಬಿಹೋಗಿದೆ.

ರಾಜಾ, ನೀನಲ್ಲಿ ಸ್ಥಾಪಿಸಿರುವುದು ಈ ಜಗದ ದೇವರನ್ನಲ್ಲ” ಸಂತನ ಉತ್ತರ.

ರಾಜ ಹುಬ್ಬೇರಿಸಿ ಹೇಳಿದ,

“ಗಗನಚುಂಬಿಯಾದ ಆ ಭವ್ಯ ಕಟ್ಟಡಕ್ಕಾಗಿ ನಾನು ಇಪ್ಪತ್ತು ಲಕ್ಷ ವರಹಗಳನ್ನು ನೀರಿನಂತೆ ವ್ಯಯಿಸಿದ್ದೇನೆ.
ಎಲ್ಲಾ ಅಗತ್ಯ ಪೂಜಾವಿಧಿಗಳನ್ನೂ ನೆರವೇರಿಸಿಯೇ ನಾನದನ್ನು ದೇವತೆಗಳಿಗೆ ಸಮರ್ಪಿಸಿದ್ದೇನೆ.

ಆದರೂ, ಇಂತಹ ಮಹೋನ್ನತ ದೇಗುಲದಲ್ಲಿ
ದೇವರು ನೆಲೆಸಿಲ್ಲ ಎನ್ನಲು ನಿನಗೆಷ್ಟು ಧೈರ್ಯ!?”

ಶಾಂತಚಿತ್ತನಾಗಿ ಸಂತನೆಂದ,

“ಆ ವರ್ಷ ನಿನ್ನ ಎರಡು ಕೋಟಿ ಪ್ರಜೆಗಳು ಭೀಕರ ಬರಗಾಲದಿಂದ ತತ್ತರಿಸಿದ್ದರು;

ಉಣ್ಣಲು ಆಹಾರವಾಗಲಿ, ಇರಲು ನೆಲೆಯಾಗಲಿ ಇಲ್ಲದ ಅವರೆಲ್ಲ ಸಹಾಯ ಯಾಚಿಸಿ ನಿನ್ನ ಬಳಿ ಬಂದು ಗೋಳಿಟ್ಟರು. ಆದರೆ ನೀನು ಅವರನ್ನೆಲ್ಲ ಬರಿಗೈಲಿ ಹಿಂದಕ್ಕೆ ಕಳಿಸಿದೆ.

ರಾಜಾ, ಅವರೆಲ್ಲ ಕಾಡು, ಗುಹೆಗಳಲ್ಲಿ, ಕಸ ತುಂಬಿದ ಹಾದಿಬೀದಿಗಳ ಮರಗಳಡಿಯಲ್ಲಿ, ನಿರ್ಜನ ಗುಡಿಗಳಲ್ಲಿ ಆಶ್ರಯ ಪಡೆಯಬೇಕಾಯಿತು.

ಆ ನಿನ್ನ ಮಹೋನ್ನತವಾದ ಗುಡಿಯ ಕಟ್ಟಲು ನೀನು ಇಪ್ಪತ್ತು ಲಕ್ಷ ಬಂಗಾರದ ವರಹಗಳನ್ನು ವ್ಯಯಿಸಿದ ಅದೇ ವರ್ಷ

ದೇವರು ಘೋಷಿಸಿದ,

‘ನೀಲಾಕಾಶದ ನಡುವೆ
ನನ್ನ ಶಾಶ್ವತ ಮನೆ ಎಂದೂ ಆರದ ದೀಪಗಳಿಂದ ಜಗಮಗಿಸುತ್ತಿದೆ.

ಸತ್ಯ, ಶಾಂತಿ, ಪ್ರೀತಿ, ಕರುಣೆಗಳಂಥ ಮೌಲ್ಯಗಳ ಬುನಾದಿಯ ಮೇಲೆ ನನ್ನ ಮನೆ ನಿಂತಿದೆ.

ನೆಲೆಯಿರದ ತನ್ನ ಪ್ರಜೆಗಳಿಗೇ ನೆಲೆ ಒದಗಿಸಲಾಗದ ಈ ಕುಬ್ಜ ಜಿಪುಣ

ನನಗೊಂದು ಮನೆ ಕಟ್ಟುವನಂತೇನು!?’

ಅಂದೇ ದೇವರು ಆ ನಿನ್ನ ಗುಡಿಯನ್ನು ತೊರೆದು,
ಹಾದಿಬೀದಿಗಳಲ್ಲಿ, ಮರಗಳಡಿಯಲ್ಲಿ ಜೀವಿಸಿದ್ದ ಬಡವರ ಜೊತೆ ಸೇರಿಕೊಂಡು ಬಿಟ್ಟ.

ಕಡಲ ನೀರ ಮೇಲಿನ ಟೊಳ್ಳು ಬುರುಗಿನಂತೆ
ನಿನ್ನೀ ನಶ್ವರ ಗುಡಿಯೂ ಟೊಳ್ಳು.

ಅದೊಂದು ಕೇವಲ ಸಂಪತ್ತು ಮತ್ತು ಅಹಂಕಾರದ ಗಾಳಿ ಗುಳ್ಳೆ ಅಷ್ಟೇ.”

ಕೋಪೋದ್ರಿಕ್ತ ರಾಜ ಕಿರುಚಿದ,

“ಏಯ್ ಕುರೂಪಿ ದಡ್ಡ ಮನುಷ್ಯನೆ,
ಈಗಿಂದೀಗಲೇ ನನ್ನ ರಾಜ್ಯವನ್ನು ತೊರೆ!”

ಸಂತ ಶಾಂತಚಿತ್ತದಿಂದ ಮತ್ತೆ ನುಡಿದ,

“ದೇವರನ್ನು ಎಲ್ಲಿಗೆ ಗಡೀಪಾರು ಮಾಡಿದೆಯೋ ಅಲ್ಲಿಗೇ ಧರ್ಮನಿಷ್ಠನಾದ ನನ್ನನ್ನೂ ಸಾಗಹಾಕಿಬಿಡು!”

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!