Friday, September 20, 2024

ಪ್ರಾಯೋಗಿಕ ಆವೃತ್ತಿ

ದಿಕ್ಕು ತಪ್ಪಿರುವ ಆಡಳಿತ ಸರಿದಾರಿಗೆ ತರುವ ಜವಾಬ್ದಾರಿ ನಿಮ್ಮದು : ಪಿ.ಎಂ.ನರೇಂದ್ರಸ್ವಾಮಿ

ಮಳವಳ್ಳಿ ತಾಲ್ಲೂಕಿನಲ್ಲಿ ಆಡಳಿತ ದಿಕ್ಕು ತಪ್ಪಿದ್ದು,ಜನರು ತಮ್ಮ ಮತವೆಂಬ ಚಾಟಿಯೇಟಿನ ಮೂಲಕ ದಿಕ್ಕು ತಪ್ಪಿರುವ ಆಡಳಿತವನ್ನು ಸರಿದಾರಿಗೆ ತರಬೇಕಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಪಿ.ಎಂ.ನರೇಂದ್ರಸ್ವಾಮಿ ಮನವಿ ಮಾಡಿದರು.

ಮಳವಳ್ಳಿ ಪಟ್ಟಣದ ಟಿಎಪಿಸಿಎಂಎಸ್ ಮುಂಭಾಗ ನಡೆದ ಹಿಂದುಳಿದ ವರ್ಗಗಳ ಸಮಾವೇಶದಲ್ಲಿ ಅವರು ಮಾತನಾಡಿದರು.

ಕಳೆದ ಐದು ವರ್ಷಗಳ ಅವಧಿಯಲ್ಲಿ ಆಡಳಿತ ದಿಕ್ಕುತಪ್ಪಿ ಅಭಿವೃದ್ದಿ ಎಂಬುದು ಮರೀಚಿಕೆಯಾಗಿದೆ. ಸುಳ್ಳೇ ಆಡಳಿತಗಾರರ ಮನೆ ದೇವರಾಗಿದೆ.ಜನರ ಕಣ್ಣೀರು ಒರೆಸಲು ಯಾರೂ ಕೈ ಚಾಚುತ್ತಿಲ್ಲ. ಜನರನ್ನು ಯಾರೂ ಗಮನಿಸುತ್ತಿಲ್ಲ.ಸೂರಿಲ್ಲದ ಜನರಿಗೆ ಸೂರು ಕೊಡುತ್ತಿಲ್ಲ,ದುಡಿಯುವ ಜನರನ್ನು ಕೇಳವವರಿಲ್ಲ, ಶೋಷಿತರ ಬದುಕು ದುಸ್ತರವಾಗಿದೆ.ಇದನ್ನು ಮೆಟ್ಟಿ ಜನಸಾಮಾನ್ಯರಿಗೆ ನ್ಯಾಯ ಒದಗಿಸಲು ಕಾಂಗ್ರೆಸ್ ಪಕ್ಷ ಬೆಂಬಲಿಸಬೇಕೆಂದರು.

ಬಡವರ ಹಸಿವು ನೀಗಿಸಲು ಸಿದ್ದರಾಮಯ್ಯ ಜಾರಿಗೊಳಿಸಿದ ಅನ್ನ ಭಾಗ್ಯ ಯೋಜನೆ ಕಡಿತಗೊಳಿಸಿ 10 ಕೆಜಿಯಿಂದ 5ಕೆಜಿಗೆ ಇಳಿಕೆ ಮಾಡಲಾಗಿದೆ, ಬಡವರ ಭಾಗ್ಯಜ್ಯೋತಿ ವಿದ್ಯುತ್ ಸಂಪರ್ಕವನ್ನು ಸ್ಥಗಿತಗೊಳಿಸಲಾಗಿದೆ, ಕಳೆದ ಐದು ವರ್ಷಗಳ ಅವಧಿಯಲ್ಲಿ ಒಂದು ಮನೆ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿಲ್ಲ. ನನ್ನ ಅಧಿಕಾರದ ಅವಧಿಯಲ್ಲಿ ಅನುಷ್ಠಾನಗೊಂಡ ಬಿಪಿಎಲ್ ಫಲಾನುಭವಿಗಳ ವಸತಿ ಯೋಜನೆಯನ್ನು ಅನರ್ಹರಿಗೆ ನೀಡಲಾಗಿದೆ ಎಂದು ದೂರಿದರು.

ಪಟ್ಟಣದ ಶಾಂತಿ ಕಾಲೇಜು ಮುಂಭಾಗದ 33.20 ಎಕರೆ ಜಮೀನಿನಲ್ಲಿ 1030 ನಿವೇಶನಗಳ ಹಂಚಿಕೆಗೆ ಆಗತ್ಯ ಕ್ರಮ ಕೈಗೊಳ್ಳಲಾಗಿತ್ತು. ಹಾಲಿ ಶಾಸಕರು ಭೂಮಾಲೀಕರೊಬ್ಬರಿಂದ ತಡೆಯಾಜ್ಞೆ ತಂದು ನಿವೇಶನ ಹಂಚಿಕೆಗೆ ಅಡ್ಡಿ ಪಡಿಸಿದರು. ಆದರೆ ಕಳೆದ ಐದು ವರ್ಷಗಳ ಅವಧಿಯಲ್ಲಿ ತಡೆಯಾಜ್ಞೆ ತೆರವುಗೊಳಿಸಿ ಏಕೆ ನಿವೇಶನ ಹಂಚಿಕೆ ಮಾಡಿಲ್ಲ ಎಂದರು.

ನಾನು ಶಾಸಕನಾಗಿ ಆಯ್ಕೆಯಾದರೇ ಒಂದು ತಿಂಗಳ ಅವಧಿಯಲ್ಲಿ ತಡೆಯಾಜ್ಞೆಯನ್ನು ತೆರವುಗೊಳಿಸಿ ನಿವೇಶನ ಹಂಚಿಕೆಗೆ ಕ್ರಮ ವಹಿಸುತ್ತೇನೆ.ಸಿದ್ದರಾಮಯ್ಯ ರ‍್ಕಾರದಲ್ಲಿ ಅನುಷ್ಠಾನಗೊಂಡ 71 ಕೋಟಿ ರೂ. ವೆಚ್ಚದ ಅಮೃತ್ ಕುಡಿಯುವ ನೀರಿನ ಯೋಜನೆ ಪೂರ್ಣಗೊಳ್ಳುವ ಮೊದಲೇ ಪುರಸಭೆಗೆ ಹಸ್ತಾಂತರಿಸಿ ಶಾಸಕ ಅನ್ನದಾನಿ ಪಟ್ಟಣದ ಜನತೆಗೆ ದ್ರೋಹ ಬಗೆದಿದ್ದಾರೆಂದು ಕಿಡಿಕಾರಿದರು.

ನನ್ನ ಅಧಿಕಾರ ಅವಧಿಯಲ್ಲಿ ಹಲವು ವಸತಿ ಶಾಲೆಗಳು, ಉದ್ಯಾನವನ ಹಾಗೂ ಕೆರೆ ಅಭಿವೃದ್ದಿಗೆ ಒತ್ತು ನೀಡಲಾಗಿತ್ತು, ಬಿಜಿ ಪುರ ವ್ಯಾಪ್ತಿಯಲ್ಲಿ ಜಾರಿಗೊಳಿಸಲಾಗಿರುವ ನೀರಾವರಿ ಯೋಜನೆಯಿಂದ 29 ಕೆರೆಗಳಿಗೆ ನೀರುಣಿಸುವ ಯೋಜನೆ ಪೂರ್ಣಗೊಳ್ಳದಿರಲು ಯಾರು ಕಾರಣ ಎಂದು ಮತದಾರರಾದ ನೀವೇ ಪ್ರಶ್ನಿಸಬೇಕೆಂದರು.

ಕ್ಷೇತ್ರದಲ್ಲಿ ನಡೆಯುತ್ತಿರುವ ಬೂಟಾಟಿಕೆ ರಾಜಕಾರಣಕ್ಕೆ ಅಂತ್ಯವಾಡಲು, ಅಪಪ್ರಚಾರದ ಸೋಲಿಗೆ ಕಾರಣರಾದವರ ಬಗ್ಗೆ ಎಚ್ಚರಿಸಲು ನಾನುಪ್ರತಿ ಗ್ರಾಮಗಳಿಗೆ ತೆರಳಿ ಮತದಾರರನ್ನು ಎಚ್ಚರಿಸುತ್ತೇನೆ, ಶಾಸಕರಂತೆ ಗಡ್ಡಬಿಟ್ಟು, ಹಳೆ ಬಟ್ಟೆ ಧರಿಸಿ ಕಣ್ಣಿರು ಹಾಕುವ ನಾಟಕ ಮಾಡುವುದಿಲ್ಲ, ಧೈರ್ಯದಿಂದ ಮತದಾರರ ಕಾವಲುಗಾರನಾಗಿ ಕಾರ್ಯ ನಿರ್ವಹಿಸಲು ಶಕ್ತಿ ತುಂಬಿ ಎಂದು ಮನವಿ ಮಾಡಿದರು.

ಕಾರ್ಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ ಗಂಗಾಧರ್,ಪುರಸಭೆ ಮಾಜಿ ಅಧ್ಯಕ್ಷ ದೊಡ್ಡಯ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೇವರಾಜು, ರಾಜ್ಯ ಕಾಂಗ್ರೆಸ್ ಘಟಕದ ಹಿಂದುಳಿದ ವರ್ಗಗಳ ಅಧ್ಯಕ್ಷ ಪಾಲಯ್ಯ, ಹೊನ್ನನಾಯಕ, ಬಸವಣ್ಣ, ಮಹದೇವು, ಯಶೋಧಮ್ಮ, ಮಾದನಾಯಕ, ಗಂಗರಾಜೇಆರಸ್, ಪ್ರಕಾಶ್, ಶಿವರಾಜ್ ಸೇರಿದಂತೆ ಇತರರಿದ್ದರು.

ಜೆಡಿಎಸ್‌ಗೆ ದೊಡ್ಡಯ್ಯ ವಿದಾಯ
ಮಳವಳ್ಳಿಯಲ್ಲಿ 1977 ರ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಜನತಾಪರಿವಾರದ ವಿವಿಧ ಅಂಗ ಪಕ್ಷಗಳಲ್ಲಿ ಶ್ರಮಿಸಿದ್ದ ತಾಲೂಕಿನ ಹಿಂದುಳಿದ ವರ್ಗಗಳ ಮುಖಂಡ ಹಾಗೂ ಪುರಸಭೆ ಮಾಜಿ ಅಧ್ಯಕ್ಷ ದೊಡ್ಡಯ್ಯ ಮಾತೃಪಕ್ಷ ಜೆಡಿಎಸ್‌ಗೆ ಗುಡ್‌ಬೈ ಹೇಳಿ ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.

ನಂತರ ಮಾತನಾಡಿದ ಅವರು, ತುರ್ತು ಪರಿಸ್ಥಿತಿ ವೇಳೆ ರಾಜ್ಯಾದ್ಯಂತ ಡಾ. ರಾಜ್‌ಕುಮಾರ್ ಅಭಿಮಾನಿ ಬಳಗವನ್ನು ಸಂಘಟಿಸುವುದರ ಮೂಲಕ ಸಮಾಜ ಸೇವೆಗೆ ಮುಂದಾದ ನಾನು ಜನತಾ ಪಕ್ಷ, ಜನತಾದಳ ಹಾಗೂ ಜೆಡಿಎಸ್ ಪಕ್ಷದಲ್ಲಿ ಕಾರ್ಯ ನಿರ್ವಹಿಸಿದ್ದೇನೆ. ದೇವೇಗೌಡರ ಆಶಯಗಳನ್ನು ಜಾರಿಗೊಳಿಸಲು ಶ್ರಮಿಸಿದ್ದೇನೆ.ಆದರೆ ಪಕ್ಷದಿಂದ ನನಗೆ ಯಾವುದೇ ಸ್ಥಾನಮಾನ ದೊರೆತಿಲ್ಲ.ನಮ್ಮ ಕುಟುಂಬಕ್ಕೆ ಒಂದೇ ಒಂದು ಜವಾನ ಹುದ್ದೆಯೂ ದೊರೆತಿಲ್ಲ‌.ನಮ್ಮನ್ನು ಕೇವಲ ಪ್ರಚಾರಕ್ಕೆ ಮಾತ್ರ ಬಳಸಿಕೊಂಡರು ಎಂದು ಬೇಸರ ವ್ಯಕ್ತಪಡಿಸಿದರು.

ಮಳವಳ್ಳಿ ಶಾಸಕ ಅನ್ನದಾನಿ ಅವರು ಗೆಯ್ಯುವ ಎತ್ತುಗಳಿಗೆ ಹುಲ್ಲು ಹಾಕುವುದಿಲ್ಲ ಎಂಬ ನಾಣ್ಣುಡಿಗೆ ಒತ್ತು ನೀಡಿ ನನ್ನನ್ನು ಬಡಕಲು ಮಾಡಿದ್ದಾರೆ. ನನ್ನ ಕುಟುಂಬಕ್ಕೆ ಒಂದು ಜವಾನ ಹುದ್ದೆಯನ್ನು ಕರುಣಿಸಿಲ್ಲ. ತಾಲ್ಲೂಕಿನ ನನ್ನ ಸಮಾಜದ ವೀಳ್ಯೆದೆಲೆ ಬೆಳೆಗಾರರ ಸಂಕಷ್ಟ ಆಲಿಸಲು ಮುಂದಾಗಲಿಲ್ಲ, ಕ್ಷೇತ್ರದ 45 ಹಳ್ಳಿಗಳಲ್ಲಿ ಗಂಗಾಮತಸ್ಥ ಜನಾಂಗದ ಜನರಿದ್ದು, ಅವರ ಅಭ್ಯುದಯಕ್ಕೆ ಯಾವುದೇ ಕಾರ‍್ಯಕ್ರಮ ರೂಪಿಸಲ್ಲಿಲ್ಲ. ಅದರಿಂದ ಬೇಸತ್ತು ಸುಧೀರ್ಘ ಒಡನಾಟದ ಜೆಡಿಎಸ್ ಪಕ್ಷವನ್ನು ತೊರೆದು ತಾಲ್ಲೂಕಿನ ಅಭಿವೃದ್ದಿಯ ದೂರದೃಷ್ಠಿ ಹಾಗೂ ಸಮಾನತೆಯ ಸಿದ್ದಾಂತವನ್ನು ಆಡಳಿತದಲ್ಲಿ ಜಾರಿಗೊಳಿಸಿರುವ ನರೇಂದ್ರಸ್ವಾಮಿ ಅವರ ನಾಯಕತ್ವದಲ್ಲಿ ಮುಂದಿನ ರಾಜಕೀಯ ಬದುಕು ಸವೆಸಲು ನಿರ್ಧರಿಸಿದ್ದೇನೆಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ತಾಲ್ಲೂಕು ಗಂಗಾಮತಸ್ಥ ಸಮಾಜದಿಂದ ಸತೀಶ್ ಜಾರಕಿಹೊಳಿ ಅವರಿಗೆ ಬೃಹತ್ ಹೂವಿನ ಹಾರಹಾಕಿ ಅಭಿನಂದಿಸಲಾಯಿತು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!