Monday, May 20, 2024

ಪ್ರಾಯೋಗಿಕ ಆವೃತ್ತಿ

ಭ್ರಷ್ಟ ಬಿಜೆಪಿ ಸರ್ಕಾರ ಕಿತ್ತೊಗೆಯಬೇಕಿದೆ : ಯತೀಂದ್ರ ಸಿದ್ದರಾಮಯ್ಯ

ರಾಜ್ಯದಲ್ಲಿ ಭ್ರಷ್ಟ ಆಡಳಿತ ನಡೆಸುತ್ತಿರುವ ಬಿಜೆಪಿ ಪಕ್ಷವನ್ನು ಬುಡ ಸಮೇತ ಕಿತ್ತೊಗೆಯಬೇಕಿದೆ ಎಂದು ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಕಿಡಿಕಾರಿದರು.

ಮಳವಳ್ಳಿ ತಾಲ್ಲೂಕಿನ ಬೋಸೇಗೌಡನದೊಡ್ಡಿ ಗ್ರಾಮದ ಹೊರವಲಯದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು,

ಈ ಚುನಾವಣೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಕಡೆಯ ಚುನಾವಣೆ ಆಗಿರುವುದರಿಂದ ಕುರುಬ ಸಮುದಾಯ ಹಾಗೂ ಹಿಂದುಳಿದ ಸಮುದಾಯ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಮತ ಹಾಕುವುದರ ಮೂಲಕ ಅಧಿಕಾರಕ್ಕೆ ತರಬೇಕು. ಮಳವಳ್ಳಿಯಲ್ಲಿ ಪಿ.ಎಂ ನರೇಂದ್ರಸ್ವಾಮಿ ಅವರನ್ನು ಗೆಲ್ಲಿಸಿ ಸಿದ್ದರಾಮಯ್ಯ ಅವರ ಕೈ ಬಲ ಪಡಿಸಬೇಕೆಂದು ಮನವಿ ಮಾಡಿದರು.

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಭ್ರಷ್ಟರಹಿತವಾಗಿ ಆಡಳಿತ ನಡೆಸುವುದರ ಜೊತೆಗೆ ಜನತೆಗೆ ನೀಡಿದ್ದ 165 ಭರವಸೆಗಳಲ್ಲಿ ಬಹುತೇಕ ಎಲ್ಲವನ್ಮು ಈಡೇರಿಸಿದ್ದರು.ಆದರೆ ಬಿಜೆಪಿ ಪಕ್ಷದ ನಾಯಕರು ಕೊಟ್ಟಿದ್ದ ಭರವಸೆಗಳನ್ನು ಈಡೇರಿಸಲಿಲ್ಲ‌.ಕಾಂಗ್ರೆಸ್ ನಂಬಿಕೆಯ ಸರ್ಕಾರವಾಗಿದೆ,ನುಡಿದಂತೆ ನಡೆದು ಬಡವರ ಹಸಿವನ್ನು ನಿವಾರಿಸಿದ ಕಾಂಗ್ರೆಸ್ ಸರ್ಕಾರವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.

ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಎಲ್ಲಾ ಸಮುದಾಯದ ಅಭಿವೃದ್ದಿಗೆ ಹಲವು ಯೋಜನೆಗಳನ್ನು ಕೊಟ್ಟಿದೆ, ಕಾರ್ಯಕರ್ತರು ಧೈರ್ಯದಿಂದ ಮನೆ ಮನೆಗೆ ಹೋಗಿ ಕಾಂಗ್ರೆಸ್ ಸರ್ಕಾರದ ಸಾಧನೆಗಳನ್ನು ತಿಳಿಸಿ ಮುಂದಿನ ಅಧಿಕಾರ ಅವಧಿಯಲ್ಲಿ ಕೊಟ್ಟಿರುವ ಭರವಸೆಗಳನ್ನು ತಿಳಿಸುವುದರ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಮತಹಾಕುವಂತೆ ಮನವೊಲಿಸಬೇಕೆಂದು ಸಲಹೆ ನೀಡಿದರು.

ಹಿಂದುಳಿದ ಸಮುದಾಯದ ರಾಜಕಾರಣಿಗಳನ್ನು ತುಳಿಯುವ ಯತ್ನ ನಡೆಯುತ್ತಿರುತ್ತದೆ, ಹಿಂದುಳಿದ ಸಮುದಾಯ ಒಂದು ಶಕ್ತಿಯಾಗಿ ಒಗ್ಗಟ್ಟಾಗಿ ನಿಂತರೇ ವಿರೋಧಿಗಳನ್ನು ಮಟ್ಟಹಾಕಬಹುದಾಗಿರುವುದರಿಂದ ಕಾಂಗ್ರೆಸ್ ಪಕ್ಷ ಗೆಲುವಿಗೆ ಪ್ರತಿಯೊಬ್ಬರು ಕೈಜೋಡಿಸಬೇಕೆಂದು ಹೇಳಿದರು.

ಮೀಸಲಾತಿಯಲ್ಲಿ ಅನ್ಯಾಯವಾದಾಗ ಧ್ವನಿ ಎತ್ತುವ ನಾಯಕನನ್ನು ಬೆಂಬಲಿಸಬೇಕಿದೆ, ಸಮಾಜಿಕ ನ್ಯಾಯದ ಸಿದ್ದಂತದ ಮೇಲೆ ನಂಬಿಕೆ ಇಟ್ಟಿರುವ ಪಿ,ಎಂ ನರೇಂದ್ರಸ್ವಾಮಿ ಅವರನ್ನು ಚುನಾವಣೆಯಲ್ಲಿ ಗೆಲ್ಲಿಸುವುದರ ಮೂಲಕ ಸಿದ್ದರಾಮಯ್ಯ ಅವರಿಗೆ ಶಕ್ತಿ ತುಂಬಬೇಕಿದೆ, ಸಿದ್ದರಾಮಯ್ಯ ಅವರು ಮತ್ತೊಮ್ಮೆ ಮುಖ್ಯಮಂತ್ರಿಯಾಗುವ ಸಾಧ್ಯತೆ ಹೆಚ್ಚಾಗಿರುವುದರಿಂದ ಹಿಂದುಳಿದ ಸಮುದಾಯ ಜನರು ದೊಡ್ಡ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಬೇಕೆಂದು ಮನವಿ ಮಾಡಿದರು.

ಕೆಪಿಸಿಸಿ ಉಪಾಧ್ಯಕ್ಷ ಪಿ.ಎಂ ನರೇಂದ್ರಸ್ವಾಮಿ ಮಾತನಾಡಿ,10 ವರ್ಷದ ಅವಧಿಯಲ್ಲಿ ಹಲವಾರು ಯೋಜನೆಗಳನ್ನು ತಂದು ಕ್ಷೇತ್ರವನ್ನು ಮಾದರಿ ತಾಲ್ಲೂಕನ್ನಾಗಿ ಮಾಡಲು ಕನಸು ಕಂಡಿದ್ದೆ. ಬದಲಾದ ರಾಜಕೀಯ ವ್ಯವಸ್ಥೆಯಲ್ಲಿ ಜನಮನ ಸೇರಬೇಕಾದ ಯೋಜನೆಗಳು ಸತ್ತು ಬಿದ್ದಿವೆ. ಜವಾಬ್ದಾರಿ ತೆಗೆದುಕೊಳ್ಳುವವರ ನಿರ್ಲಕ್ಷ್ಯದಿಂದಾಗಿ ಮಳವಳ್ಳಿ ತಾಲ್ಲೂಕು ಅಭಿವೃದ್ದಿಯಲ್ಲಿ ಹಿನ್ನಡೆ ಕಂಡಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಹಸಿವನ್ನು ದೂರ ಮಾಡಿದ ಕಾಂಗ್ರೆಸ್ ಪಕ್ಷ ಮತ್ತೊಮ್ಮೆ ಅಧಿಕಾರಕ್ಕೆ ತರಬೇಕಿದೆ, ಮತದಾರರ ನಂಬಿಕೆಗೆ ಚ್ಯುತಿ ಬಾರದ ರೀತಿಯಲ್ಲಿ ಕ್ಷೇತ್ರವನ್ನು ಇನ್ನಷ್ಟು ಅಭಿವೃದ್ದಿಪಡಿಸುವ ಕನಸುಕಂಡಿದ್ದೇನೆ. ಬಸವಜಯಂತಿ ದಿನದಂದು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಪ್ರಮಾನವಚನ ಸ್ವೀಕರಿಸಿದರು, ಅದೇ ಬಸವ ಜಯಂತಿ ದಿನದಂದು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತರಲು ಅಂದೇ ಫಲಿತಾಂಶ ಬರುತ್ತಿರುವುದು ಕಾಂಗ್ರೆಸ್ ಪಕ್ಷಕ್ಕೆ ಮತ್ತಷ್ಟು ಸ್ಪೂರ್ತಿ ಬಂದಂತಾಗಿದೆ ಎಂದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ದಡದಪುರ ಬಿ.ಎಸ್.ಶಿವಣ್ಣ ಮಾತನಾಡಿ,ಸಿದ್ದರಾಮಯ್ಯ ಅವರು ದೇಶ ಕಂಡ ಸಾಮಾಜಿಕ ನ್ಯಾಯದ ನಾಯಕ.ಇನ್ನು ಬಮುಂದೆ ಎಂದೂ ಕೂಡ ಸಿದ್ದರಾಮಯ್ಯ ಅಂತಹ ಮತ್ತೊಬ್ಬ ನಾಯಕ ಹುಟ್ಟಲು ಸಾಧ್ಯವಿಲ್ಲ. ಸಿದ್ದರಾಮಯ್ಯ ಅವರು ಎಲ್ಲಾ ವರ್ಗದ ಜನರಿಗೂ ಆದ್ಯತೆ ನೀಡಿ ಅವರಿಗೆ ರಾಜಕೀಯ ಹಾಗೂ ಸಾಮಾಜಿಕ ಸ್ಥಾನಮಾನ ನೀಡಿದರು.ರಾಜ್ಯದ ಅಭಿವೃದ್ಧಿಗೆ ನೂರಾರು ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ತಂದ ಸರ್ವತೋಮುಖ ಅಭಿವೃದ್ಧಿ ಮಾಡಿದರು ಎಂದು ತಿಳಿಸಿದರು.

ಇಂದು ದೇಶದಲ್ಲಿ ಕೋಮುವಾದಿಗಳು,ಮನುವಾದಿಗಳ ಆರ್ಭಟ ಹೆಚ್ಚಾಗಿದೆ.ಸಿದ್ದರಾಮಯ್ಯ ಅವರನ್ನು ರಾಜಕೀಯ ವಾಗಿ ಮುಗಿಸಲು ಎಲ್ಲರೂ ಒಂದಾಗಿದ್ದಾರೆ.ಹಿಂದೆ ಚಾಮುಂಡೇಶ್ವರಿ ಕ್ಷೇತ್ರದ ಉಪಚುನಾವಣೆಯಲ್ಲಿ ಸಿದ್ದರಾಮಯ್ಯ ಅವರನ್ನು ಸೋಲಿಸಲು ಹಲವರು ಒಂದಾಗಿದ್ದರು.ಆದರೆ ಜನರು ಅವರನ್ನ ಗೆಲ್ಲಿಸಿದರು.ಸಿದ್ದರಾಮಯ್ಯ ಅವರು ವ್ಯಕ್ತಿಯಲ್ಲ,ಅವರೊಂದು ದೊಡ್ಡ ಶಕ್ತಿ ಎಂದರು.

2008ರಲ್ಲಿ ಪಿ.ಎಂ.ನರೇಂದ್ರಸ್ವಾಮಿ ಅವರಿಗೆ ಟಿಕೆಟ್ ತಪ್ಪಿದ ಸಂದರ್ಭದಲ್ಲೂ ನೀವೆಲ್ಲರೂ ಸಂಕಲ್ಪ ಮಾಡಿ ಅವರನ್ನು ಗೆಲ್ಲಿಸಿದ ರೀತಿಯಲ್ಲಿ ಮತ್ತೆ ಒಗ್ಗಟ್ಟಿನಿಂದ ಈ ಬಾರಿಯೂ ಗೆಲ್ಲಿಸಲು ಮುಂದಾಗಬೇಕು. 2013ರಂತೆ ಪಿ.ಎಂ.ನರೇಂದ್ರಸ್ವಾಮಿ ಅವರು ಗೆಲುವು ಸಾಧಿಸಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದ ರೀತಿಯಲ್ಲಿ 2023ರ ಮೇ.15ರಂದು ಮತ್ತೆ ಸಿದ್ದರಾಮಯ್ಯ ಅವರು ಸಿಎಂ ಆಗಲಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಪ್ರದೇಶ ಕುರುಬರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಸುಬ್ರಮ್ಮಣಿ, ಉಪಾಧ್ಯಕ್ಷ ಬಿ.ಪುಟ್ಟಬಸವಯ್ಯ, ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎನ್.ಸುರೇಶ್, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಡಿ.ಗಂಗಾಧರ್, ಕೆಪಿಸಿಸಿ ಸದಸ್ಯ ಚನ್ನಪಿಳ್ಳೆಕೊಪ್ಪಲು ಸಿದ್ದೇಗೌಡ, ತಾ.ಪಂ.ಮಾಜಿ ಅಧ್ಯಕ್ಷ ಚಿಕ್ಕಲಿಂಗಯ್ಯ, ಬ್ಲಾಕ್ ಕಾಂಗ್ರೆಸ್ ಕೆ.ಜೆ.ದೇವರಾಜು, ಬಂಕ್ ಮಹದೇವು ಮತ್ತಿತರರಿದ್ದರು

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!