Friday, September 20, 2024

ಪ್ರಾಯೋಗಿಕ ಆವೃತ್ತಿ

ಪ್ರಜಾಪ್ರಭುತ್ವ ವ್ಯವಸ್ಥೆ ಬಲಗೊಳಿಸಲು ಚುನಾವಣೆ ಅವಶ್ಯ : ಡಾ.ಗೋಪಾಲಕೃಷ್ಣ

ಪ್ರಜಾಪ್ರಭುತ್ವ ವ್ಯವಸ್ಥೆ ಬಲಗೊಳಿಸಲು ಚುನಾವಣೆ ಅವಶ್ಯಕ. ಅಭಿವೃದ್ಧಿ ಮತ್ತು ಆಡಳಿತದ ಬಲವರ್ಧನೆಗೆ ಸರ್ಕಾರ ರಚಿಸಲು ಚುನಾವಣೆ ಪ್ರಧಾನ ಪಾತ್ರ ವಹಿಸುತ್ತದೆ ಎಂದು ಜಿಲ್ಲಾಧಿಕಾರಿ ಡಾ.ಹೆಚ್.ಎನ್. ಗೋಪಾಲಕೃಷ್ಣ ತಿಳಿಸಿದರು.

ಮಂಡ್ಯ ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಭಾಂಗಣದಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆ ಪ್ರಯುಕ್ತ ಶನಿವಾರ ನಡೆದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ 1952 ರಿಂದ ಇದುವರೆಗೆ ನಡೆದ ಚುನಾವಣೆಗಳನ್ನು ನೋಡಿದರೆ ಹಂತ ಹಂತವಾಗಿ ಹಲವಾರು ಬದಲಾವಣೆಗಳನ್ನು ನೋಡುತ್ತಾ ಬಂದಿದ್ದೇವೆ.1952 ರಲ್ಲಿ ಜನಸಂಖ್ಯೆ ಪ್ರಮಾಣ ಹಾಗೂ ಸಾಕ್ಷರತೆ ಪ್ರಮಾಣದಲ್ಲಿ ಬಹಳ ಕಡಿಮೆಯಿತ್ತು.ಆಗ ಚುನಾವಣೆಯಲ್ಲಿ ಸ್ಪರ್ಧಿಸಿದವರ ಹೆಸರಿನ ಬಾಕ್ಸ್ ಗೆ ಮತಪತ್ರ ಹಾಕುವ ವ್ಯವಸ್ಥೆ ಇತ್ತು. ಕಾಲಾನಂತರ ರಹಸ್ಯ ಮತದಾನ ನಡೆಯಿತು.ಈಗ ಎಲೆಕ್ಟ್ರಾನಿಕ್ ಮತಯಂತ್ರದ ಮೂಲಕ ಮತ ಹಾಕುವ ವ್ಯವಸ್ಥೆ ಬಂದಿದೆ.ಹೀಗೆ ಹಂತ ಹಂತವಾಗಿ ಚುನಾವಣಾ ವ್ಯವಸ್ಥೆಯಲ್ಲಿ ಹಲವು ಬದಲಾವಣೆ ಆಗಿದೆ‌ ಎಂದರು.

ಜನರಿಂದ, ಜನರಿಗಾಗಿ, ಜನರಿಗೋಸ್ಕರ ಇರುವ ವ್ಯವಸ್ಥೆಯೇ ಪ್ರಜಾಪ್ರಭುತ್ವ. ಸಂವಿಧಾನ, ಚುನಾವಣಾ ವ್ಯವಸ್ಥೆಯ ತಳದಿಯ ಮೇಲೆ ಪ್ರಜಾಪ್ರಭುತ್ವವಿದೆ. 1952ರಿಂದ ಈವರೆಗೆ ಚುನಾವಣಾ ವ್ಯವಸ್ಥೆಯಲ್ಲಿ ಸಾಕಷ್ಟು ಬದಲಾವಣೆ, ಸುಧಾರಣೆಗಳಾಗಿವೆ.1990 ರಲ್ಲಿ ಟಿ.ಎನ್.ಶೇಷನ್ ಅವರು ಮುಖ್ಯ ಚುನಾವಣಾಧಿಕಾರಿಯಾಗಿದ್ದಾಗ ಇನ್ನಷ್ಟು ಕಟ್ಟುನಿಟ್ಟಿನ ನಿಯಮಗಳು ಜಾರಿಗೊಂಡವು.ಚುನಾವಣೆ ವೆಚ್ಚಕ್ಕೆ ಕಡಿವಾಣ ಹಾಕುವುದು, ಮತದಾರರಿಗೆ ಜಾಗೃತಿ, ಪ್ರಜಾಪ್ರಭುತ್ವ ಗಟ್ಟಿಯಾಗಲು ಅಕ್ರಮಗಳಿಗೆ ತಡೆ ಹಾಕುವ ಮೂಲಕ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಯಿತು ಎಂದರು.

ಮೊದಲ ಮತದಾನದ ಸಂದರ್ಭದಲ್ಲಿ ಮತದಾನ ಮಾಡುವ ಹಕ್ಕು ಎಲ್ಲರಿಗೂ ಇರಲಿಲ್ಲ. ಭಾರತ ಸ್ವಾತಂತ್ರ್ಯ ನಂತರ ಎಲ್ಲರಿಗೂ ಮತದಾನದ ಹಕ್ಕು ದೊರೆಯಿತು. ಆಗೆಲ್ಲಾ ಚೆನ್ನಾಗಿಯೇ ನೈತಿಕ ಮತದಾನ ನಡೆಯುತ್ತಿತ್ತು. ಅಭ್ಯರ್ಥಿವಾರು ಮತಪಟ್ಟಿಗೆಗಳು ಇಡಲಾಗುತ್ತಿತ್ತು. ಆದರೂ ಅಭ್ಯರ್ಥಿಗಳ ನಡುವೆ ದ್ವೇಷ ಭಾವನೆ ಇರಲಿಲ್ಲ. ನಂತರ ಬದಲಾದ ಪರಿಸ್ಥಿತಿಯಲ್ಲಿ ಗೌಪ್ಯ ಮತದಾನಕ್ಕೆ ಅವಕಾಶ ಕಲ್ಪಿಸಲಾಯಿತು. ಹಣಬಲ, ಜಾತಿಬಲ, ತೋಳ್ಬಲದ ಪ್ರಾಬಲ್ಯ ಸಾಧಿಸತೊಡಗಿದಾಗ ಅಬ್ಬರದ ಪ್ರಚಾರ ನಡೆಯುತ್ತಿತ್ತು. ನಂತರ ಅದಕ್ಕೂ ಕಡಿವಾಣ ಹಾಕಲಾಯಿತು. ಎಲ್ಲ ಅಭ್ಯರ್ಥಿಗಳಿಗೂ ಒಂದೇ ರೀತಿಯ ಮಾನದಂಡಗಳೊಂದಿಗೆ ವೆಚ್ಚಮಿತಿ ನಿಗದಿಪಡಿಸಲಾಯಿತು. ಜತೆಗೆ, ಹತ್ತಾರು ರೀತಿಯ ನಿಯಮಗಳನ್ನು ಜಾರಿಗೊಳಿಸಲಾಯಿತು ಎಂದರು.

ಮತದಾನ ಪ್ರಮಾಣ ಹೆಚ್ಚಿಸಲು ಆದ್ಯತೆ
ಮತದಾನದಲ್ಲಿ ಎಲ್ಲರನ್ನೂ ಒಳಗೊಳ್ಳುವ ಚುನಾವಣೆಗೆ ಆದ್ಯತೆ ನೀಡಲಾಗಿದೆ‌. ಇದರಿಂದ ಪ್ರತಿಯೊಬ್ಬರೂ ಮತದಾನ ಮಾಡಬೇಕೆಂಬ ಆಶಯದೊಂದಿಗೆ ಮತದಾನದ ಬಗ್ಗೆ ಜನಜಾಗೃತಿ ಮೂಡಿಸಲಾಗುತ್ತಿದೆ. ಶೇ.100ರಷ್ಟು ಮತದಾನವಾಗಬೇಕು ಎಂಬುದು ಚುನಾವಣಾ ಆಯೋಗದ ಆಶಯವಾಗಿದೆ. 18 ವರ್ಷ ತುಂಬಿದ ಯುವಜನತೆಯ ಹೆಸರನ್ನು ಮತದಾರರ ಪಟ್ಟಿಗೆ ಸೇರಿಸಲಾಗಿದೆ.ಚುನಾವಣೆ ಮತ ಪ್ರಮಾಣ ಹೆಚ್ಚಿಸಲು ಹಲವು ವಿವಿಧ ಕ್ರಮ ಕೈಗೊಳ್ಳಲಾಗಿದೆ‌. 80 ವರ್ಷ ಮೇಲ್ಪಟ್ಟ ವೃದ್ಧರು, ಅಶಕ್ತರು,ಅಂಗವಿಕಲರು, ರೋಗ ಪೀಡಿತರಿಗೆ ಮನೆಯಿಂದಲೇ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ‌ ಎಂದರು.

ಪ್ರವಾಸಿ ಸ್ಥಳಗಳು ಬಂದ್
ಚುನಾವಣಾ ಆಯೋಗ ಕರೆದಿದ್ದ ಸಭೆಯಲ್ಲಿ ಶುಕ್ರವಾರ, ಶನಿವಾರ ಚುನಾವಣೆ ನಡೆಸಿದರೆ ಬಹುತೇಕ ಜನರು ಪ್ರವಾಸ ಹೋಗುವ ಕಾರಣ ತಿಳಿಸಿದ್ದರಿಂದ, ಚುನಾವಣಾ ಆಯೋಗ ಬುಧವಾರ ಚುನಾವಣೆ ದಿನಾಂಕ ನಿಗದಿ ಮಾಡಿದೆ‌. ಅಲ್ಲದೆ ಮತದಾನದ ದಿನದಂದು ಪ್ರವಾಸಿ ಸ್ಥಳಗಳ ಬಂದ್ ಮಾಡಲು ಪ್ರವಾಸೋದ್ಯಮ ಇಲಾಖೆಗೆ ಆದೇಶ ನೀಡಲಾಗಿದೆ. ಮತದಾರರು ಮತಗಟ್ಟೆಗೆ ಬಂದು ಮತ ಹಾಕುವ ಮೂಲಕ ಪ್ರಜಾಪ್ರಭುತ್ವ ಎತ್ತಿಹಿಡಿಯಬೇಕು ಎಂದರು.

ಈ ಹಿಂದೆ ನಡೆಯುತ್ತಿದ್ದ ಪ್ರಮಾಣ ನೋಡಿದರೆ ಈಗ ನಡೆಯುವ ಮತ ಪ್ರಮಾಣ ನೋಡಿದರೆ ಮತದಾನದ ಪ್ರಮಾಣ ಹೆಚ್ಚಾಗಿದೆ.ಮಂಡ್ಯ ಜಿಲ್ಲೆ ರಾಜಕೀಯವಾಗಿ ಪ್ರಬುದ್ಧತೆಯಿಂದ ಕೂಡಿದ್ದು,ಇಲ್ಲಿ ಮತದಾನದ ಶೇಕಡವಾರು ಪ್ರಮಾಣ ಪ್ರತಿ ಚುನಾವಣೆಯಲ್ಲಿ ಹೆಚ್ಚಾಗುತ್ತಲೇ ಇದೆ ಎಂದರು.

ವಿದ್ಯಾವಂತರು, ಮೇಲ್ವರ್ಗದ ಜನರಿರುವ ನಗರ ಪ್ರದೇಶಗಳಲ್ಲಿ ಮತದಾನ ಪ್ರಮಾಣ ಕಡಿಮೆ ಇದೆ ಎಂದು ವಿಷಾದಿಸಿದ ಅವರು, ನಗರ ಪ್ರದೇಶಗಳಲ್ಲಿ ಮತದಾನ ಕಡಿಮೆ ಇರುವುದಕ್ಕೂ ಆಯೋಗ ಕಾರಣಗಳನ್ನು ಪಟ್ಟಿ ಮಾಡುತ್ತಿದೆ. ಇದಕ್ಕಾಗಿಯೇ ಬ್ಯಾಲೆಟ್ ಯೂನಿಟ್‌ನಲ್ಲಿ “ನೋಟಾ”ವನ್ನು ಸೇರ್ಪಡೆ ಮಾಡಿದೆ. ಪ್ರಸ್ತುತ ನೋಟಾಗೆ ಮೌಲ್ಯ ಇಲ್ಲದಿರುವ ಬಗ್ಗೆ ಚರ್ಚೆ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ನೋಟಾ ವಿಚಾರವಾಗಿಯೂ ಆಯೋಗ ಸುಧಾರಣೆಗಳನ್ನು ತರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಆಮಿಷಕ್ಕೆ ಬಲಿಯಾಗಬೇಡಿ
ಪ್ರಜಾಪ್ರಭುತ್ವ ಬಲಗೊಳ್ಳಲು ನಡೆಯುವ ಚುನಾವಣೆಯಲ್ಲಿ ಮತದಾರರು ಆಸೆ,ಆಮಿಷಗಳಿಗೆ ಬಲಿಯಾಗದೆ ಸೂಕ್ತ ಜನಪ್ರತಿನಿಧಿಯನ್ನು ಆಯ್ಕೆ ಮಾಡಿಕೊಳ್ಳಬೇಕಿದೆ.ಅವರು ಕೊಡುವ ಹಣ, ಕುಕ್ಕರ್ ಮೊದಲಾದ ವಸ್ತುಗಳಿಗೆ ಮರುಳಾಗಿ ಮತ ಹಾಕದೆ ವಿವೇಚನೆಯಿಂದ ಮತ ಹಾಕಿ ಸರ್ಕಾರ ರಚನೆಗೆ ಕಾರಣವಾಗಬೇಕೆಂದರು.

ದೂರು ನೀಡಿ
ಮತದಾರರಿಗೆ ಅಭ್ಯರ್ಥಿಗಳು ಆಮಿಷ ನೀಡುವುದು, ಅಕ್ರಮ ನಡೆಸುವುದು ಕಂಡು ಬಂದರೆ ದೂರು ನೀಡಲು ಚುನಾವಣಾ ಆಯೋಗ ಸಿ-ವಿಜಿಲ್ ಮೂಲಕ ಅವಕಾಶ ಕಲ್ಪಿಸಿದೆ‌.ಅಕ್ರಮಗಳ ಬಗ್ಗೆ ಪೋಟೋ ತೆಗೆದು ವಾಟ್ಸಾಪ್ ಮೂಲಕ ದೂರು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದರು.

ಸಂವಾದದಲ್ಲಿ ಜಿಲ್ಲಾ ವಾರ್ತಾಧಿಕಾರಿ ಎಸ್.ಎಚ್.ನಿರ್ಮಲ, ಪತ್ರಕರ್ತರ ಸಂಘದ ಕಾರ‍್ಯದರ್ಶಿ ಕೆರೆಗೋಡು ಸೋಮಶೇಖರ್, ಜಿಲ್ಲಾಧ್ಯಕ್ಷ ಕೆ.ಸಿ.ಮಂಜುನಾಥ, ಪ್ರಧಾನ ಕಾರ್ಯದರ್ಶಿ ಕೆ.ಎನ್.ನವೀನ್‌ಕುಮಾರ್ ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!