Thursday, November 19, 2026

ಪ್ರಾಯೋಗಿಕ ಆವೃತ್ತಿ

ಕಾಂಗ್ರೆಸ್ ಅಭ್ಯರ್ಥಿಗಳನ್ನು ಚುನಾಯಿಸಲು ನರೇಂದ್ರಸ್ವಾಮಿ ಮನವಿ

ಜನಸಾಮಾನ್ಯರಿಗೆ ವರದಾನವಾಗಲಿರುವ ಪ್ರಣಾಳಿಕೆಯನ್ನು ಕಾಂಗ್ರೆಸ್ ಪಕ್ಷ ಜಾರಿಗೆ ತರಲಿದ್ದು, ಮೇ 10ರಂದು ನಡೆಯಲಿರುವ ಚುನಾವಣೆಯಲ್ಲಿ ಜಿಲ್ಲೆಯ ಮತದಾರ ಬಂಧುಗಳು ಕಾಂಗ್ರೆಸ್ ಅಭ್ಯರ್ಥಿಗಳನ್ನು ಚುನಾಯಿಸುವಂತೆ ಮಳವಳ್ಳಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪಿ.ಎಂ.ನರೇಂದ್ರಸ್ವಾಮಿ ಮನವಿ ಮಾಡಿದರು.

ಮಳವಳ್ಳಿ ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಡಳಿತರೂಢ ಬಿಜೆಪಿ ಪಕ್ಷದ ಕಾರ್ಯಕ್ರಮಗಳಿಂದ ಜನರು ಬೇಸತ್ತಿದ್ದಾರೆ. ಭ್ರಷ್ಟಾಚಾರ ಹಾಗೂ ಬೆಲೆ ಏರಿಕೆಯಿಂದ ಜೀವನ ದುಸ್ತರವಾಗಿದ್ದು, ಜನಪರ ಯೋಜನೆಗಳು ಜಾರಿಗೊಳ್ಳಬೇಕಾದರೆ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕೆಂಬ ಆಶಯ ಹೊಂದಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಪೂರ್ಣ ಪ್ರಮಾಣದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದರು.

ಮಹಿಳೆಯರು, ಜನಸಾಮಾನ್ಯರು ಹಾಗೂ ಯುವ ಸಮುದಾಯಕ್ಕೆ ಆಸರೆಯಾಗುವ ಕಾರ್ಯಕ್ರಮಗಳು ನಮ್ಮ ಪಕ್ಷದ ಪ್ರಣಾಳಿಕೆಯಲ್ಲಿದ್ದು, ರಸಗೊಬ್ಬರ ಬೆಲೆ ಏರಿಕೆ, ರೈತರ ಪಾಲಿಗೆ ಮರಣ ಶಾಸನವಾಗಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷವನ್ನು ತಿರಸ್ಕರಿಸಿ ಕಾಂಗ್ರೆಸ್ ಬೆಂಬಲಿಸುವ ವಿಶ್ವಾಸವಿದೆ ಎಂದರು.

ಆಡಳಿತ ನಡೆಸಿದವರ ನಿರ್ಲಕ್ಷ್ಯತನದಿಂದ ಜಿಲ್ಲೆ ನಿರೀಕ್ಷಿತ ಅಭಿವೃದ್ದಿ ಕಂಡಿಲ್ಲ, ತಾಲ್ಲೂಕಿನಲ್ಲಿ ನನ್ನ ಅಧಿಕಾರಾವಧಿಯಲ್ಲಿ ಜಾರಿಗೊಂಡ ಹಲವು ಯೋಜನೆಗಳು ಪೂರ್ಣಗೊಂಡಿಲ್ಲ, ಅವುಗಳನ್ನು ಪೂರ್ಣಗೊಳಿಸಿ ತಾಲ್ಲೂಕಿನ ಅಭಿವೃದ್ದಿಗೆ ಮತ್ತಷ್ಟು ಹೊಸ ಯೋಜನೆಗಳನ್ನು ಜಾರಿಗೊಳಿಸಲು ಕಾಂಗ್ರೆಸ್ ಅಭ್ಯರ್ಥಿಯಾದ ನನ್ನನ್ನು ತಾಲ್ಲೂಕಿನ ಮತದಾರರು ಬೆಂಬಲಿಸಬೇಕೆಂದು ಮನವಿ ಮಾಡಿದರು.

ಅಸಹನೆಯ ಹೇಳಿಕೆ
ಜೆಡಿಎಸ್ ವರಿಷ್ಟರಾದ ಹೆಚ್.ಡಿ.ದೇವೇಗೌಡ್ರು ರಾಜ್ಯದ ಹಿರಿಯ ನಾಯಕರಾಗಿದ್ದು, ಅವರ ಪುತ್ರ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಚುನಾವಣಾ ಪ್ರಚಾರದ ವೇಳೆ ಅವರ ಅಭ್ಯರ್ಥಿ ಉಪಸ್ಥಿತಿಯಲ್ಲೇ ದುರಂಹಕಾರಿ ಶಾಸಕನನ್ನು ಸೋಲಿಸಿ ಎಂದು ಹೇಳಿಕೆ ನೀಡಿರುವುದು ಜೆಡಿಎಸ್ ಅಭ್ಯರ್ಥಿ ಮೇಲಿನ ಅಸಹನೆಯಿಂದ ಇರಬಹುದೆಂದು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ಕುಮಾರಸ್ವಾಮಿ ಹೇಳಿಕೆ ನನಗೆ ಆಶೀರ್ವಾದವಾಗಬಹುದೇನೋ ಆ ಬಗ್ಗೆ ನಾನು ಹೆಚ್ಚೆನು ಹೇಳುವುದಿಲ್ಲ ಎಂದರು. ನಮ್ಮ ಪಕ್ಷದ ಪ್ರಣಾಳಿಕೆ ಹಾಗೂ ನಮ್ಮ ವಿಚಾರಗಳನ್ನು ಮುಂದಿಟ್ಟುಕೊಂಡು ಮತಯಾಚಿಸುವ ಬದಲು ವೈಯಕ್ತಿಕ ಟೀಕೆ, ಟಿಪ್ಪಣಿ ಹಾಗೂ ಸುಳ್ಳು ಸುದ್ದಿಗಳನ್ನು ಹಬ್ಬಿಸಿ ಮತಯಾಚಿಸುವ ರಾಜಕಾರಣ ಜಿಲ್ಲೆ ಹಾಗೂ ತಾಲ್ಲೂಕಿನಲ್ಲಿ ಕೊನೆಯಾಗಬೇಕೆಂದರು.

ರೈತರಿಗೆ ಪೂರಕವಾದ ಕೃಷಿ ಪದ್ದತಿ ಅನುಷ್ಠಾನಗೊಳಿಸಿ, ಕೃಷಿಯನ್ನು ಕೈಗಾರಿಕೆಯಾಗಿ ಪರಿವರ್ತಿಸಬೇಕು. ಹೈನುಗಾರಿಕೆಯನ್ನು ಉದ್ದಿಮೆಯಾಗಿಸಲು ಯೋಜನೆ ಸಾಕಾರಗೊಳಿಸಬೇಕು. ದೂರದೃಷ್ಠಿ ಹಾಗೂ ಒಗ್ಗಟ್ಟಿನ ಮಂತ್ರದಿಂದ ಜಿಲ್ಲೆಯ ಅಭಿವೃದ್ದಿಯನ್ನು ಗಣನೆಗೆ ತೆಗೆದುಕೊಳ್ಳಬೇಕು, ಆ ನಿಟ್ಟಿನಲ್ಲಿ ಚಿಂತಿಸುವ ರಾಜಕೀಯ ಪಕ್ಷ ಹಾಗೂ ಅಭ್ಯರ್ಥಿಗಳನ್ನು ಜಿಲ್ಲೆಯ ಜನರು ಬೆಂಬಲಿಸಬೇಕೆಂದು ಕರೆ ನೀಡಿದರು.

ಗೋಷ್ಠಿಯಲ್ಲಿ ತಾ.ಪಂ. ಮಾಜಿ ಅಧ್ಯಕ್ಷರಾದ ನಾಗೇಶ್, ವಿಶ್ವಾಸ್, ಪುರಸಭೆ ಮಾಜಿ ಸದಸ್ಯ ದೊಡ್ಡಯ್ಯ ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ