Thursday, September 19, 2024

ಪ್ರಾಯೋಗಿಕ ಆವೃತ್ತಿ

”ಆಪರೇಷನ್ ಕಮಲ”ಕ್ಕೆ ಒಳಗಾಗಿದ್ದ 10 ಮಂದಿಯನ್ನು ಮಕಾಡೆ ಮಲಗಿಸಿದ ಮತದಾರರು”

2019ರಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಕೆಡವಲು ಬಿಜೆಪಿ ಪಕ್ಷವು ಕಾಂಗ್ರೆಸ್-ಜೆಡಿಎಸ್ ಪಕ್ಷದ 16 ಶಾಸಕರ ರಾಜೀನಾಮೆ ಕೊಡಿಸಿ, ”ಆಪರೇಷನ್ ಕಮಲ” ನಡೆಸಿತ್ತು. ಆನಂತರ ನಡೆದಿದ್ದ ಉಪ ಚುನಾವಣೆಯಲ್ಲಿ 14 ಕಡೆ ಬಿಜೆಪಿ ಗೆಲುವು ಕಂಡಿತ್ತು. ಆದರೆ 2023ರ ಚುನಾವಣೆಯಲ್ಲಿ ಆಪರೇಷನ್ ಕಮಲಕ್ಕೆ ಒಳಗಾಗಿದ್ದ 10 ಮಂದಿಯನ್ನು ಮತದಾರರು ಸೋಲಿಸಿ ಮನೆಗೆ ಕಳಿಸಿದ್ದಾರೆ. ಇನ್ನೂ ಆಪರೇಷನ್ ಕಮಲಕ್ಕೆ ಒಳಗಾಗಿದ್ದ 4 ಮಂದಿ ಮಾತ್ರ ಗೆಲುವು ಸಾಧಿಸಲು ಸಾಧ್ಯವಾಗಿದೆ.

1. ಗೋಕಾಕ್: ರಮೇಶ್ ಜಾರಕಿಹೊಳಿ – ಗೆಲುವು

ಬೆಳಗಾವಿ ಜಿಲ್ಲೆಯ ಗೋಕಾಕ್‌ನಲ್ಲಿ ರಮೇಶ್ ಜಾರಕಿಹೊಳಿ ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಸೇರಿದರು. ಆನಂತರ ನಡೆದ ಉಪಚುನಾವಣೆಯಲ್ಲಿ ಗೆಲುವು ಕಂಡಿದ್ದರು. ಈ ಬಾರಿ ಅವರ ವಿರುದ್ಧ ಕಾಂಗ್ರೆಸ್‌ನಿಂದ ಮಹಾಂತೇಶ್ ಕಡಾಡಿ, ಜೆಡಿಎಸ್‌ನಿಂದ ಚನ್ನಬಸಪ್ಪ ಬಾಳಪ್ಪ ಸ್ಪರ್ಧಿಸಿದ್ದರು. ಆದರೆ ಬಿಜೆಪಿಯ ರಮೇಶ್ ಜಾರಕಿಹೊಳಿ ಗೆಲುವು ಕಂಡರು.

2. ಅಥಣಿ: ಮಹೇಶ್ ಕುಮಟಳ್ಳಿ – ಸೋಲು

2018ರಲ್ಲಿ ಬಿಜೆಪಿಯ ಲಕ್ಷ್ಮಣ ಸವದಿ ವಿರುದ್ಧ ಗೆದ್ದಿದ್ದ ಕಾಂಗ್ರೆಸ್ ಪಕ್ಷದ ಮಹೇಶ್ ಕುಮಟಳ್ಳಿ ಸಹ ರಮೇಶ್ ಜಾರಕಿಹೊಳಿ ಜೊತೆ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದ್ದರು. 2019ರ ಉಪ ಚುನಾವಣೆಯಲ್ಲಿ ಅವರು ಗೆಲುವು ಸಾಧಿಸಿದ್ದರು. ಈಗ ಅವರ ವಿರುದ್ಧ ಕಾಂಗ್ರೆಸ್ ಸೇರಿದ ಲಕ್ಷ್ಮಣ ಸವದಿ ಗೆಲುವು ಸಾಧಿಸಿದ್ದಾರೆ.

3. ಕಾಗವಾಡ: ಶ್ರೀಮಂತ ಪಾಟೀಲ್ – ಸೋಲು

ಬಿಜೆಪಿ ಸೇರಿದ ಶ್ರೀಮಂತ ಪಾಟೀಲ್ ಸಹ ಅನರ್ಹಗೊಂಡು ಮುಂಬೈ ಸೇರಿದ್ದರು. ಆನಂತರ ಉಪ ಚುನಾವಣೆಯಲ್ಲಿ ಗೆಲುವು ಕಂಡಿದ್ದರು. ಈ ಬಾರಿ ಅವರ ವಿರುದ್ಧ ಕಾಂಗ್ರೆಸ್‌ನಿಂದ ಭರಮಗೌಡ ಆಲಗೌಡ ಕಾಗೆ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ.

4. ಯಲ್ಲಾಪುರ: ಶಿವರಾಮ ಹೆಬ್ಬಾರ – ಗೆಲುವು

ಉತ್ತರ ಕನ್ನಡದ ಯಲ್ಲಾಪುರದ ಕಾಂಗ್ರೆಸ್ ಶಾಸಕ ಆಪರೇಷನ್ ಕಮಲಕ್ಕೆ ಒಳಗಾಗಿ ಬಿಜೆಪಿ ಸೇರಿದ್ದರು. ಅಲ್ಲದೆ ಉಪ ಚುನಾವಣೆಯಲ್ಲಿ ದೊಡ್ಡ ಅಂತರದಲ್ಲಿ ಗೆದ್ದು ಶಾಸಕರಾಗಿದ್ದರು. ಅವರ ವಿರುದ್ಧ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್ ಪಾಟೀಲ್ ಸ್ಪರ್ಧಿಸಿದ್ದಾರೆ. ಜೆಡಿಎಸ್‌ನಿಂದ ನಾಗೇಶ ನಾಯ್ಕ ಕಣಕ್ಕಿಳಿದಿದ್ದರು. ಶಿವರಾಮ್ ಹೆಬ್ಬಾರ್ ಮತ್ತೆ ಗೆದ್ದಿದ್ದಾರೆ.

5. ವಿಜಯನಗರ: ಸಿದ್ಧಾರ್ಥ ಸಿಂಗ್ – ಸೋಲು

ವಿಜಯನಗರದ ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ಬಿಜೆಪಿ ಸೇರಿ ಉಪ ಚುನಾವಣೆಯಲ್ಲಿ ಗೆದ್ದಿದ್ದರು. ಈ ಬಾರಿ ಅವರು ಸ್ಪರ್ಧಿಸದೆ ಅವರ ಮಗ ಸಿದ್ಧಾರ್ಥ ಸಿಂಗ್ ರನ್ನು ಬಿಜೆಪಿಯಿಂದ ಕಣಕ್ಕಿಳಿಸಿದ್ದಾರೆ. ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಿದ ಎಚ್.ಆರ್ ಗವಿಯಪ್ಪ ಗೆಲುವು ಸಾಧಿಸಿದರು.

6. ಹಿರೇಕೆರೂರು: ಬಿ.ಸಿ ಪಾಟೀಲ್ – ಸೋಲು

ಕಾಂಗ್ರೆಸ್‌ನಿಂದ ಗೆದ್ದಿದ್ದ ಬಿ.ಸಿ ಪಾಟೀಲ್ ಆಪರೇಷನ್ ಕಮಲದ ಕಾರಣಕ್ಕೆ ಈಗ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಆಗ ಬಿಜೆಪಿಯಲ್ಲಿ ಯು.ಬಿ ಬಣಕಾರ್ ಕಾಂಗ್ರೆಸ್ ಸೇರಿ ಗೆಲುವು ಸಾಧಿಸಿದರು.

7. ಚಿಕ್ಕಬಳ್ಳಾಪುರ: ಡಾ.ಕೆ ಸುಧಾಕರ್ – ಸೋಲು

ಚಿಕ್ಕಬಳ್ಳಾಪುರದ ಕಾಂಗ್ರೆಸ್ ಶಾಸಕ ಡಾ.ಕೆ ಸುಧಾಕರ್ ಬಿಜೆಪಿ ಸೇರಿ ಸಚಿವರಾದರು. ಈಗ ಅವರೆದುರು ಕಾಂಗ್ರೆಸ್ ಪಕ್ಷದ ಬಲಿಜ ಸಮುದಾಯದ ಪ್ರದೀಪ್ ಈಶ್ವರ್‌ರವರನ್ನು ಕಣಕ್ಕಿಳಿಸಿದೆ. ಜೆಡಿಎಸ್‌ನಿಂದ ಕೆ.ಪಿ ಬಚ್ಚೇಗೌಡ ಕಣದಲ್ಲಿದ್ದರು. ಪ್ರದೀಪ್ ಈಶ್ವರ್ ಅಚ್ಚರಿಯ ರೀತಿಯಲ್ಲಿ ಡಾ.ಕೆ ಸುಧಾಕರ್‌ರನ್ನು ಸೋಲಿಸಿದ್ದಾರೆ.

8. ಕೆ.ಆರ್ ಪುರಂ: ಭೈರತಿ ಬಸವರಾಜು – ಗೆಲುವು

ಕಾಂಗ್ರೆಸ್ ಪಕ್ಷದಿಂದ ಗೆದ್ದಿದ್ದ ಭೈರತಿ ಬಸವರಾಜು ಬಿಜೆಪಿ ಸೇರಿದ್ದಾರೆ. ಅವರ ಎದುರು ಡಿ.ಕೆ ಮೋಹನ್ ಎಂಬುವವರನ್ನು ಕಾಂಗ್ರೆಸ್ ಕಣಕ್ಕಿಳಿಸಿತ್ತು. ಆದರೆ ಭೈರತಿ ಬಸವರಾಜು ಗೆಲುವು ಸಾಧಿಸಿದ್ದಾರೆ.

9. ಯಶವಂತಪುರ: ಎಸ್‌.ಟಿ ಸೋಮಶೇಖರ್ – ಗೆಲುವು

ಕಾಂಗ್ರೆಸ್ ತೊರೆದಿದ್ದ ಎಸ್‌.ಟಿ ಸೋಮಶೇಖರ್ ಈಗ ಬಿಜೆಪಿ ಹುರಿಯಾಳು ಆಗಿದ್ದಾರೆ. ಅವರ ವಿರುದ್ಧ ಜೆಡಿಎಸ್‌ನ ಜವರಾಯೀಗೌಡ ಸ್ಪರ್ಧಿಸಿದ್ದರು. ಎಸ್.ಬಾಲರಾಜಗೌಡ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರೂ ಎಸ್.ಟಿ ಸೋಮಶೇಖರ್ ಗೆಲುವು ಸಾಧಿಸಿದ್ದಾರೆ.

10. ರಾಜರಾಜೇಶ್ವರಿ ನಗರ: ಮುನಿರತ್ನ ನಾಯ್ಡು – ಗೆಲುವು

ಆಪರೇಷನ್ ಕಮಲಕ್ಕೆ ಒಳಗಾಗಿದ್ದ ಮುನಿರತ್ನ ನಾಯ್ಡು ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಗೆದ್ದಿದ್ದರು. ಈಗ ಮತ್ತೆ ಅವರೇ ಬಿಜೆಪಿ ಅಭ್ಯರ್ಥಿ. ಕುಸುಮ ಹನುಮಂತರಾಯಪ್ಪ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರು.

11. ಮಹಾಲಕ್ಷ್ಮಿ ಲೇಔಟ್: ಕೆ.ಗೋಪಾಲಯ್ಯ – ಸೋಲು

ಜೆಡಿಎಸ್‌ನಿಂದ ಗೆಲುವು ಕಂಡಿದ್ದ ಗೋಪಾಲಯ್ಯನವರು ಬಿಜೆಪಿ ಸೇರಿ ಸಚಿವರಾದರು. ಅವರೀಗ ಬಿಜೆಪಿಯಿಂದ ಕಣಕ್ಕಿಳಿದಿದ್ದಾರೆ. ಅವರ ಎದುರು ಕೇಶವಮೂರ್ತಿ ಕಾಂಗ್ರೆಸ್ ಎದುರಾಳಿಯಾದರೆ, ರಾಜಣ್ಣ ಜೆಡಿಎಸ್ ಅಭ್ಯರ್ಥಿಯಾಗಿದ್ದರು. ಆದರೂ ಗೋಪಾಲಯ್ಯ ಗೆಲುವು ಸಾಧಿಸಿದ್ದಾರೆ.

12. ಹೊಸಕೋಟೆ: ಎಂಟಿಬಿ ನಾಗರಾಜ್ – ಸೋಲು

ಎಂಟಿಬಿ ನಾಗರಾಜ್ ಬಿಜೆಪಿ ಸೇರಿ ಉಪಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡರ ಎದುರು ಸೋಲು ಕಂಡಿದ್ದರು. ಈ ಬಾರಿ ಶರತ್ ಬಚ್ಚೇಗೌಡರು ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ.

13. ಕೆ.ಆರ್ ಪೇಟೆ: ಕೆ.ಸಿ ನಾರಾಯಣಗೌಡ – ಸೋಲು

ಕೆ.ಆರ್ ಪೇಟೆಯಲ್ಲಿ ಜೆಡಿಎಸ್‌ನಿಂದ ಗೆಲುವು ಕಂಡಿದ್ದ ನಾರಾಯಣಗೌಡ ಬಿಜೆಪಿ ಸೇರಿ ಉಪಚುನಾವಣೆ ಗೆದ್ದರು. ಮೊದಲ ಬಾರಿಗೆ ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿ ಖಾತೆ ತೆರೆದಿದ್ದರು. ಈಗ ಅವರ ಎದುರು ಬಿ.ಎಲ್ ದೇವರಾಜು ಕಾಂಗ್ರೆಸ್‌ನಿಂದ ಮತ್ತು ಹೆಚ್.ಟಿ ಮಂಜುನಾಥ್ ಜೆಡಿಎಸ್ ಅಭ್ಯರ್ಥಿಗಳಾಗಿದ್ದರು. ಹೆಚ್ ಟಿ ಮಂಜುನಾಥ್ ಗೆಲುವು ಕಂಡರು.

14. ಮಸ್ಕಿ: ಪ್ರತಾಪ್ ಗೌಡ ಪಾಟೀಲ – ಸೋಲು

ಕಾಂಗ್ರೆಸ್‌ನಿಂದ ಗೆಲುವು ಸಾಧಿಸಿದ್ದ ಪ್ರತಾಪಗೌಡ ಪಾಟೀಲ್ ಬಿಜೆಪಿ ಸೇರಿ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ನ ಬಸನಗೌಡ ತುರ್ವಿಹಾಳ್ ಎದುರು ಸೋಲು ಕಂಡಿದ್ದರು. ಈ ಬಾರಿಯೂ ಬಸನಗೌಡ ತುರ್ವಿಹಾಳ್ ಗೆಲುವು ಕಂಡಿದ್ದಾರೆ.

15. ರಾಣೇಬೆನ್ನೂರು: ಆರ್ ಶಂಕರ್ – ಸೋಲು

ಪಕ್ಷೇತರ ಅಭ್ಯರ್ಥಿಯಾದ ಆರ್. ಶಂಕರ್ ಕಾಂಗ್ರೆಸ್ ಗೆ ಬೆಂಬಲ ನೀಡಿದ್ದರು. ಆದರೆ ಆಪರೇಷನ್‌ಗೆ ಒಳಗಾದರು. ಉಪ ಚುನಾವಣೆಯಲ್ಲಿ ಅವರಿಗೆ ಬಿಜೆಪಿ ಟಿಕೆಟ್ ನೀಡಲಿಲ್ಲ. ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಅಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಅರುಣ್ ಕುಮಾರ್ ಇದ್ದರು. ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಪ್ರಕಾಶ್ ಕೋಳಿವಾಡ ಗೆಲುವು ಸಾಧಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!