Thursday, September 19, 2024

ಪ್ರಾಯೋಗಿಕ ಆವೃತ್ತಿ

ಚೆ ಗುವಾರನ ನೆನೆಯುತ್ತಾ……

ಚೆ ಗುವಾರನ ನೆನೆಯುತ್ತಾ…

ಬೇಕಿತ್ತು…

ದೀರ್ಘ ನಡಿಗೆಯ ದಣಿವು
ಮರುಳು ನಿದ್ರೆಗೆ
ದೂಡುತ್ತಿರುವ
ಹೊತ್ತಿನಲ್ಲಿ….

ಕಡು ಕತ್ತಲಿನಲ್ಲೂ
ಬೆಳಕಿನ ಬೇಸಾಯ ಬಿಡದ
ಚೆ ಗುವಾರ ನೊಬ್ಬ ಬೇಕಿತ್ತು…

ಮಬ್ಬು ಮುಸುಕಿರುವ ಕಾಲದಲ್ಲಿ ..

ಗಸ್ತು ಹೊಡೆವ ಮೆರವಣಿಗೆಗಳು
ಗಮ್ಯದ ದಾರಿ
ಮರೆತ ಹೊತ್ತಿನಲ್ಲಿ…

ಚೆ ಗುವಾರನೊಬ್ಬ ಬೇಕಿತ್ತು ..

ಹಸಿವಿನ ಉರಿಯಿಂದ
ಬೆಳಗದಾ ದೀಪಗಳು…

ಕಡು ಕತ್ತಲನ್ನು
ಕರಗಿಸುವುದಿಲ್ಲವೆಂದೂ..

ಕರುಣೆಯ ಜೊತೆಗಿನ
ಕಾಲಕ್ಷೇಪಗಳು
ಕ್ರಾಂತಿಯಲ್ಲವೆಂದು…

ಸಾರಿಸಾರಿ ಹೇಳಿದ
ಚೆಗುವಾರ ಇರಬೇಕಿತ್ತು….

ಮುಂಬೆಳಕಿನ
ದೊಂದಿಯಾಗದೆ….

ಮಂದೆಯೊಳಗಿನ
ಮಂದಿಯಾದರೆ…

ಕಟುಕನ ಕೆಲಸ
ಸುಲಭವಾಗುವುದೆಂದು..

ತಿಳಿಹೇಳಿದ ಚೆ ಗುವಾರ ಬೇಕಿತ್ತು ..

ನಿನ್ನೆಗಳ ಹಂಗಿರದೆ
ನಾಳಿನ ನಿಜಗಳಿಗಾಗಿ ..

ಸೋಲನ್ನು ಸೋಲೆಂದು
ಶತ್ರುವನ್ನು ಶತ್ರುವೆಂದೂ
ಬೆತ್ತಲು ಮಾಡಿ ತೋರಿದ್ದ…

ಚೆ ಗುವಾರನೊಬ್ಬ ಬೇಕಿತ್ತು…

ಯುದ್ಧವನ್ನು ಯುದ್ಧದಿಂದಲೇ
ಸೋಲಿಸಬೇಕೆಂದೂ…

ಯುದ್ಧದಲ್ಲಿ ವಿರಾಮ ಇರದೆಂದೂ..

ಸಾರಿಸಾರಿ ಹೇಳಿದ್ದ
ಚೆಗುವಾರ ಇರಬೇಕಿತ್ತು ..

ಶತ್ರುವಿನ ಔದಾರ್ಯ ವನ್ನು
ರಣತಂತ್ರವೆಂದೂ..

ಯುದ್ಧ ಮರೆತ
ಕ್ರಾಂತಿಕಾರಿಯ ಕಾರುಣ್ಯವನ್ನು
ಐತಿಹಾಸಿಕ ಅವಘಡವೆಂದು ..

ಪತ್ತೆ ಮಾಡಿದ್ದ
ಡಾಕ್ಟರ್ ಚೆಗುವಾರ
ಇರ ಬೇಕಿತ್ತು ..

ಶಿವಸುಂದರ್

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!