Friday, September 20, 2024

ಪ್ರಾಯೋಗಿಕ ಆವೃತ್ತಿ

ಅಕ್ಕಿ ಮತ್ತು ಅರಸ

ಒಂದರೆಗಳಿಗೆ
ಯೋಚಿಸಿ ನೋಡಿ,
ರೈತನೇ ಬೆಳೆದ ಅಕ್ಕಿ
ಅವನ ತಟ್ಟೆಗೆ
ಅನ್ನವಾಗಿ
ಮರಳುವ ಮುನ್ನ
ದೊಣ್ಣೆನಾಯಕನ
ದುರಹಂಕಾರವ
ದಾಟಿ ಬರಬೇಕಂತೆ!
ಇದ್ಯಾವ ಸೀಮೆಯ ನ್ಯಾಯ?

ಒಂದರೆಗಳಿಗೆ
ಯೋಚಿಸಿ ನೋಡಿ,
ಅಕ್ಕಿ ಬೆಳೆವ
ಅನ್ನದಾತನನು
ವರ್ಷವಿಡೀ ಕಾಲ
ಬೀದಿಯ
ಒಣಬಿಸಿಲು
ಸುರಿಮಳೆಯಲಿ
ಸತಾಯಿಸಿದವನೇ,
ಆ ಅಕ್ಕಿಯ ಮೇಲೆ
ಯಜಮಾನಿಕೆ
ಮೆರೆಯುತ್ತಾನಂತೆ!
ಇದ್ಯಾವ ಸೀಮೆಯ ನ್ಯಾಯ?

ಒಂದರೆಗಳಿಗೆ
ಯೋಚಿಸಿ ನೋಡಿ,
ಅರವತ್ತು ಸಹಸ್ರದ
ದುಬಾರಿ ಅಣಬೆಯ
ತಿಂಬುವ ದೊರೆಯೇ,
ತನ್ನ ಪ್ರಜೆಗಳು
ಹಿಡಿಯಷ್ಟು ಅನ್ನವ
ನೆಮ್ಮದಿಯಿಂ ತಿನ್ನಬಾರದೆಂಬ
ಜಿದ್ದಿಗೆ ಬೀಳುತ್ತಾನಂತೆ!
ಇದ್ಯಾವ ಸೀಮೆಯ ನ್ಯಾಯ?

ಒಂದರೆಗಳಿಗೆ
ಯೋಚಿಸಿ ನೋಡಿ,
ಸಮುದ್ರ ತಡಿಯ
ಮರಳು ಹಾಸಿನ ಮೇಲೆ
ಕಸವ ಹೆಕ್ಕಿ
ಬಣ್ಣಬಣ್ಣದ ಚಿತ್ರಗಳಾಗಿ
ರಾರಾಜಿಸಿದವನೇ,
ಹಸಿದವರ ಬಟ್ಟಲಿನಲಿ
ಅನ್ನದ ಅಗುಳಾಗಬೇಕಿದ್ದ
ಅಕ್ಕಿಯನು
ಮುಗ್ಗುಲು ಬಡಿಸಿ
ಗೋದಾಮಿನ
ವ್ಯರ್ಥ ಕಸವಾಗಿಸುತ್ತಾನಂತೆ!
ಇದ್ಯಾವ ಸೀಮೆಯ ನ್ಯಾಯ?

ಒಂದರೆಗಳಿಗೆ
ಯೋಚಿಸಿ ನೋಡಿ,
ಚಿಕ್ಕ ವಯಸಿನಲಿ
ಚಹಾ ಮಾರಿದ
ಕರುಳುಹಿಂಡುವ
ಕಥೆಯ ಕಟ್ಟಿದ ವ್ಯಕ್ತಿಯೇ
ಬಡವರ
ಹಸಿದ ಹೊಟ್ಟೆಗಳಿಗೆ
ತಣ್ಣೀರು ಬಟ್ಟೆಯ ಸುತ್ತಲು
ಮುಂದಾಗುತ್ತಾನಂತೆ!
ಇದ್ಯಾವ ಸೀಮೆಯ ನ್ಯಾಯ?

ತಪ್ಪದೇ
ಒಂದರೆಗಳಿಗೆ
ಯೋಚಿಸಿ‌ ನೋಡಿ….

✍️ಗಿರೀಶ್ ತಾಳಿಕಟ್ಟೆ

 

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!