Thursday, September 19, 2024

ಪ್ರಾಯೋಗಿಕ ಆವೃತ್ತಿ

ಜಲಜೀವನ್ ಮಿಷನ್ ವ್ಯಾಪಕ ಭ್ರಷ್ಟಾಚಾರ ತನಿಖೆಯಾಗಲಿ – ನರೇಂದ್ರಸ್ವಾಮಿ

ಪ್ರಧಾನಿ ನರೇಂದ್ರಮೋದಿಯವರ ಬಹು ನಿರೀಕ್ಷಿತ ಯೋಜನೆಗಳಲ್ಲೊಂದಾಗಿರುವ ಜಲ ಜೀವನ್ ಮಿಷನ್ ಯೋಜನೆಯಲ್ಲಿ ಅಪಾರ ಪ್ರಮಾಣದ ಅವ್ಯವಹಾರ ಜರುಗಿದ್ದು ಈ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕೆಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ಒತ್ತಾಯಿಸಿದರು.

ಜಿ.ಪಂ.ಕಾವೇರಿ ಸಭಾಂಗಣದಲ್ಲಿ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅಧ್ಯಕ್ಷತೆಯಲ್ಲಿ ಜರುಗಿದ ಪ್ರಥಮ ಕೆಡಿಪಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಜಿಲ್ಲೆಯ ಮಳವಳ್ಳಿ ಸೇರಿದಂತೆ ಎಲ್ಲಾ ತಾಲ್ಲೂಕುಗಳಲ್ಲಿ ಕುಡಿಯುವ ನೀರಿನ ಯೋಜನೆ ಅನುಷ್ಠಾನಗೊಂಡಿರುವ ಗ್ರಾಮಗಳಲ್ಲಿಯೂ ಜಲಜೀವನ್ ಮಿಷನ್ ಯೋಜನೆ ಜಾರಿಗೊಳಿಸಿ ಕಳಪೆ ಗುಣಮಟ್ಟದ, ಅನಗತ್ಯ ಪೈಪ್ ಲೈನ್ ಅಳವಡಿಕೆ, ನಲ್ಲಿಗಳಿಗೆ ಮೀಟರ್ ಅಳವಡಿಸಿರುವುದು ಸರಿಯಾದ ಕ್ರಮವಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮುಂದುವರಿದು ಮಾತನಾಡಿದ ಅವರು, ಮಳವಳ್ಳಿ ತಾಲ್ಲೂಕಿನ ಬಿ.ಜಿ ಪುರ, ನೆಟ್ಕಲ್ ಬಹು ಗ್ರಾಮ ಕುಡಿಯುವ ನೀರು ಯೋಜನೆ ಅನುಷ್ಟಾನಗೊಂಡು ಪ್ರತಿ ಮನೆಗೆ ನೀರು ಪೂರೈಸುತ್ತಿದ್ದ ಯೋಜನೆಗೆ ಹೆಚ್ಚುವರಿಯಾಗಿ ಅನಗತ್ಯ ಪೈಪ್ ಲೈನ್ ಅಳವಡಿಕೆ ಮತ್ತು ಕಿರುಗಾವಲು ಬಹು ಗ್ರಾಮ ಕುಡಿಯುವ ನೀರು ಯೋಜನೆ ಜಾರಿಯಾಗುತ್ತಿರುವಾಗ ಹೆಚ್ಚುವರಿಯಾಗಿ ಜಲ ಜೀವನ್ ಯೋಜನೆ ಜಾರಿಗೊಳಿಸಿ ಕೋಟ್ಯಾಂತರ ರೂಪಾಯಿ ದುರ್ಬಳಕೆ ಮಾಡಲಾಗಿದೆ ಎಂದು ದೂರಿದರು.

ಹೆದ್ದಾರಿ ಭೂ ಖರೀದಿ ಅನ್ಯಾಯ : ಹೆಚ್.ಟಿ.ಮಂಜು

ಬೆಂಗಳೂರು – ಜಲಸೂರು ಹೆದ್ದಾರಿ ನಿರ್ಮಾಣದಲ್ಲಿ ಕೆ.ಆರ್.ಪೇಟೆ ತಾಲ್ಲೂಕಿನ 160 ರೈತರಿಂದ ನೇರ ಖರೀದಿ ಮೂಲಕ ಅತೀ ಕಡಿಮೆ ಬೆಲೆಗೆ ಜಮೀನು ಖರೀದಿಸಿ ರೈತರಿಗೆ ವಂಚಿಸಲಾಗಿದೆ. ಸದರಿ ಹೆದ್ದಾರಿ ನಿರ್ಮಾಣದಲ್ಲಿ ಭೂ ಸ್ವಾಧೀನವಾಗಿರುವ ರೈತರಿಗೆ ನೀಡಿರುವ ಮೌಲ್ಯವನ್ನು ಇತರೆ ರೈತರಿಗೂ ನೀಡಲು ಕ್ರಮ ವಹಿಸಬೇಕೆಂದು ಶಾಸಕ ಹೆಚ್.ಟಿ ಮಂಜು ಮನವಿ ಮಾಡಿದರು.

nudikarnataka.com

ಕೆಡಿಪಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಹೆದ್ದಾರಿ ನಿರ್ಮಾಣದ ಕೆಶಿಫ್ ಅಧಿಕಾರಿಗಳು ನೇರ ಖರೀದಿ ಮೂಲಕ ರೈತರಿಗೆ ಬೆದರಿಸಿ ಪ್ರತಿ ಗುಂಟೆಗೆ 13,500 ಹಣ ಪರಿಹಾರ ನೀಡಿದರೆ, ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ಸದರಿ ಹೆದ್ದಾರಿ ಜಮೀನಿಗೆ 2,67,500 ನೀಡಿ ನೇರ ಖರೀದಿಗೆ ಒಪ್ಪಿದ 160 ರೈತರಿಗೆ ವಂಚಿಸಲಾಗಿದೆ, ಈ ಸಂಬಂಧ ಜಿಲ್ಲಾಡಳಿತ ಹಾಗೂ ಉಸ್ತುವಾರಿ ಸಚಿವರು  ಮಧ್ಯ ಪ್ರವೇಶಿಸಬೇಕೆಂದು ಒತ್ತಾಯಿಸಿದರು.

ಕೆ.ಆರ್.ಪೇಟೆ, ಅಗ್ರಹಾರ ಬಾಚಹಳ್ಳಿ, ಚಿಕ್ಕನಹಳ್ಳಿ, ಚಿಕ್ಕ ಹೊಸಹಳ್ಳಿ, ಬಿಲ್ಲರಾಮನಹಳ್ಳಿ, ಹೊಸಹೊಳಲು, ಸಾದಗೋನಹಳ್ಳಿ ವ್ಯಾಪ್ತಿಯ ರೈತರಿಗೆ ವಂಚನೆ ಆಗಿದೆ ಎಂದು ವಿವರಿಸಿದರು.

ಈ ಸಂಬಂಧ ಮಾನವೀಯ ದೃಷ್ಠಿಯಿಂದ ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ಉಸ್ತುವಾರಿ ಸಚಿವರು ನಿರ್ದೇಶನ ನೀಡಿದರು.

ಪಂಚಾಯತ್ ರಾಜ್ ಇಲಾಖೆಯ ಕುಡಿಯುವ ನೀರು ಪೂರೈಸುವ ಅಧಿಕಾರಿ ವರ್ಗ ಮತ್ತು ಗುತ್ತಿಗೆದಾರರು ಹಣ ಕಬಳಿಸಲು ಈ ಹಿಂದೆ ಅಧಿಕಾರದಲ್ಲಿದ್ದ ಜನಪ್ರತಿನಿಧಿಗಳು ಸಹಕಾರ ನೀಡಿದ್ದು, ಇದರ ಬಗ್ಗೆ ಉನ್ನತ ತನಿಖೆಯಾಗಬೇಕು ಬಹುಕೋಟಿ ಹಗರಣವಾಗಿರುವ ಪ್ರಕರಣದ ತಪ್ಪಿತಸ್ಥರನನ್ನು  ಶಿಕ್ಷಿಸಬೇಕು ಈ ಮೂಲಕ ನಿವಾಸಿಗಳು ಅನಗತ್ಯವಾಗಿ ನಲ್ಲಿ ಮೀಟರ್ ಬಿಲ್ ಪಾವತಿಸುವ ಕ್ರಿಯೆಗೆ ತಡೆಯೊಡ್ಡಬೇಕೆಂದು ಒತ್ತಾಯಿಸಿದರು.

ಸದರಿ ವಿಚಾರಕ್ಕೆ ಸಂಬಂಧಿಸಿದಂತೆ ಶಾಸಕರಾದ ಕದಲೂರು ಉದಯ್, ರಮೇಶ್ ಬಾಬು ಬಂಡಿಸಿದ್ದೇಗೌಡ ಅವರು ದನಿಗೂಡಿಸಿದರು. ಮಧ್ಯೆ ಪ್ರವೇಶಿಸಿದ ಉಸ್ತುವಾರಿ ಸಚಿವರು ಮೇಲ್ನೊಟಕ್ಕೆ ದುರ್ಬಳಕೆಯಾಗಿರುವುದು ಗೋ‍ಚರಿಸುತ್ತಿರುವ ಹಿನ್ನೆಲೆಯಲ್ಲಿ ಸಿಇಓ ತನ್ವೀರ್ ಆಸಿಫ್ ನೇತೃತ್ವದಲ್ಲಿ ಸಮಗ್ರ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ನಿರ್ದೇಶನ ನೀಡಿದರು.

ವರದಿ ಬಳಿಕ ಇಲಾಖಾ ತನಿಖೆ ಅಥವಾ ಉನ್ನತ ತನಿಖೆಗೆ ವಹಿಸುವ ಬಗ್ಗೆ ನಿರ್ದರಿಸಲಾಗುವುದೆಂದು ಸಚಿವರು ಸಭೆಯಲ್ಲಿ ತಿಳಿಸಿದರು.

ಭೂ ಸ್ವಾಧೀನ ಅಕ್ರಮ ಪತ್ತೆಗೆ ತಂಡ

ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಅವಶ್ಯವಿದ್ದ ಜಮೀನು ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಗೋಲ್ ಮಾಲ್ ಆಗಿದ್ದು, ರೈತರನ್ನು ವಂಚಿಸಿ ಪ್ರಭಾವಿಗಳು ಕೋಟ್ಯಾಂತರ ರೂ. ಪರಿಹಾರ ಪಡೆದಿರುವ ಪ್ರಕರಣದ ಬಗ್ಗೆ ತನಿಖೆ ನಡೆಸಿ, ವರದಿ ಸಲ್ಲಿಸಲು ಅಪರ ಜಿಲ್ಲಾಧಿಕಾರಿ ಡಾ.ಹೆಚ್.ಎಲ್ ನಾಗರಾಜು ಅವರಿಗೆ ಸಭೆ ಸೂಚಿಸಿತು.

ಭೂ ಸ್ವಾಧೀನ ಅವ್ಯವಹಾರ ಸಂಬಂಧ ಶಾಸಕರಾದ ರಮೇಶ್ ಬಾಬು, ರವಿ ಕುಮಾರ್ ಗಣಿಗ ಇತರರು ಮಾತನಾಡಿ, ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ಕೆಲವು ಪ್ರಭಾವಿಗಳ ಒತ್ತಡಕ್ಕೆ ಮಣಿದ ಅಧಿಕಾರಿಗಳು ಗುಂಟೆ ಜಮೀನಿಗೆ ವಿವಿಧ ಬೆಲೆಗಳನ್ನು ನೀಡಿ ವಂಚಿಸಿದ್ದಾರೆ. ಈ ಬಗ್ಗೆ ದಾಖಲೆ ನೀಡಲು ಬದ್ಧನಾಗಿದ್ದು, ತಪ್ಪಿತಸ್ಥರ ವಿರುದ್ದ ಕ್ರಮ ಜರುಗಿಸುವಂತೆ ರಮೇಶ್ ಬಾಬು ಆಗ್ರಹಿಸಿದರು.

ಅನ್ಯಕ್ರಾಂತ ಮಂಜೂರಾಗದ ಜಮೀನುಗಳಿಗೂ ಹೆಚ್ಚುವರಿ ಹಣ ಪಾವತಿಸಲಾಗಿದೆ. ಸೆಟ್ ಬ್ಯಾಕ್ ಜಾಗಕ್ಕೂ ಕೋಟ್ಯಾಂತರ  ರೂ. ಪರಿಹಾರ ನೀಡಲಾಗಿದೆ. ಈ ಬಗ್ಗೆ ಸಮಗ್ರ ತನಿಖೆಯಾಗಬೇಕೆಂದು ಶಾಸಕ ರವಿಕುಮಾರ್ ಗಣಿಗ ‍ಒತ್ತಾಯಿಸಿದರು.

ಶಾಸಕರ ಒತ್ತಾಯಕ್ಕೆ ಸ್ಪಂದಿಸಿದ ಉಸ್ತುವಾರಿ ಸಚಿವರು ಅಪರ ಜಿಲ್ಲಾಧಿಕಾರಿ ಡಾ.ಹೆಚ್.ಎಲ್ ನಾಗರಾಜು ನೇತೃತ್ವದಲ್ಲಿ ತನಿಖೆ ನಡೆಸಿ ಅವ್ಯವಹಾರ ಸಂಬಂಧ ವರದಿ ನೀಡುವಂತೆ ಸೂಚಿಸಿದರು.

ವೈದ್ಯರ ನೇಮಕಕ್ಕೆ ಆಗ್ರಹ

ಗ್ರಾಮೀಣ ಜನರ ಬದುಕಿಗೆ ಆಸರೆಯಾಗಿರುವ ಜಾನುವಾರುಗಳನ್ನು ಮಾರಣಾಂತಿಕ ಕಾಯಿಲೆಯಿಂದ ರಕ್ಷಿಸಲು ಪಶು ವೈದ್ಯರ ಕೊರತೆ ಇದ್ದು, ಈ ಸಂಬಂದ ಸರ್ಕಾರದ ಮಟ್ಟದಲ್ಲಿ ಕ್ರಮ ವಹಿಸಿ, ವೈದ್ಯರ ನೇಮಕಕ್ಕೆ ಕ್ರಮ ವಹಿಸುವಂತೆ ಶಾಸಕ ನರೇಂದ್ರಸ್ವಾಮಿ ಒತ್ತಾಯಿಸಿದರು.

ಸದರಿ ವಿಚಾರಕ್ಕೆ ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಹಾಗೂ ಕದಲೂರು ಉದಯ್ ದನಿಗೂಡಿಸಿ, ಸಂಚಾರಿ ಪಶು ಚಿಕಿತ್ಸಾಲಯಗಳ ಸೇವೆಯನ್ನು ಗ್ರಾಮೀಣ ಜನರಿಗೆ ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಸಭೆಯಲ್ಲಿ ಶಾಸಕರಾದ ಹೆಚ್.ಟಿ.ಮಂಜು, ದರ್ಶನ್ ಪುಟ್ಟಣ್ಣಯ್ಯ, ಮಧು ಮಾದೇಗೌಡ, ದಿನೇಶ್ ಗೂಳೀಗೌಡ,  ಜಿಲ್ಲಾಧಿಕಾರಿ ಡಾ.ಕುಮಾರ್, ಪೊಲೀಸ್ ವರಿಷ್ಟಾಧಿಕಾರಿ ಯತೀಶ್ ಇತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!