ಕಲೆಗೆ ನೋವು ಮರೆಸುವ ಶಕ್ತಿ ಇದ್ದು,ಕಲೆಗೆ-ಕಲಾವಿದರಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಎಲ್ಲರೂ ಕಲೆಯನ್ನು ಉಳಿಸಿ,ಕಲಾವಿದರನ್ನು ಬೆಳೆಸಬೇಕೆಂದು ಪಿಇಟಿ ಟ್ರಸ್ಟ್ ಅಧ್ಯಕ್ಷ ಕೆ.ಎಸ್.ವಿಜಯ್ ಆನಂದ್ ಅಭಿಪ್ರಾಯ ವ್ಯಕ್ತಪಡಿಸಿದರು.
ಮಂಡ್ಯದ ಪಿಇಎಸ್ ಇಂಜಿನಿಯರಿಂಗ್ ಕಾಲೇಜಿನ ಪ್ಲೇಸ್ ಮೆಂಟ್ ಸಭಾಂಗಣದಲ್ಲಿ ಜನತಾ ಶಿಕ್ಷಣ ಟ್ರಸ್ಟ್ ವತಿಯಿಂದ ನಡೆದ ಕೆ.ವಿ.ಶಂಕರಗೌಡರ 107 ಜನ್ಮದಿನೋತ್ಸವ ಮತ್ತು 2022 ನೇ ಸಾಲಿನ ರಾಜ್ಯಮಟ್ಟದ ಕೆ.ವಿ.ಶಂಕರಗೌಡ ಮತ್ತು ಕೆ.ಎಸ್.ಸಚ್ಚಿದಾನಂದ ರಂಗಭೂಮಿ ಹಾಗೂ ಸಮಾಜಸೇವಾ ಪ್ರಶಸ್ತಿಗಳ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬರೂ ಕಲೆಯನ್ನು ಉಳಿಸಿ ಬೆಳೆಸುವ ಕೆಲಸ ಮಾಡಬೇಕು.ಕಲಾವಿದರಿಗೆ ಎಷ್ಟೇ ನೋವಿದ್ದರೂ ಇತರರ ಮನ ರಂಜಿಸುವುದೇ ಅವರ ಗುರಿಯಾಗಿರುತ್ತದೆ. ಮನಸ್ಸಿಗೆ ನೆಮ್ಮದಿ ಇಲ್ಲದೆ ಇದ್ದಾಗ ರಂಗಗೀತೆ,ಭಾವಗೀತೆ ಕೇಳುವ ಮೂಲಕ ನೋವು ಮರೆಯಬಹುದು.ಕಲೆಗೆ ನೋವು ಮರೆಸುವ ಶಕ್ತಿ ಇದೆ ಎಂದರು.
ಶಾಂತಕುಮಾರ್ ಅವರು ಚಿತ್ರದುರ್ಗ ಜಿಲ್ಲೆಯ ಸುದೀರ್ಘ ಜೀವನವನ್ನು ಹೂಡಿ ಗ್ರಾಮದವರು. ಹತ್ತನೇ ವಯಸ್ಸಿನಲ್ಲಿಯೇ ನಾಟಕದ ಆಸೆ ಬೆಳೆಸಿಕೊಂಡು ರಂಗಭೂಮಿಗೆ ಬಂದ ಅವರು ಕಲೆಗಾಗಿ ತಮ್ಮ ಜೀವನ ಮುಡಿಪಾಗಿಟ್ಟಿದ್ದಾರೆ ಎಂದರು.
ಮಂಗಲ ಎಂ. ಯೋಗೀಶ್, ಮತ್ತು ಆರುಣಕುಮಾರಿ ದಂಪತಿಗಳು ಮಮತೆಯ ಮಡಿಲು ಅನ್ನದಾಸೋಹ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಮಾಜಸೇವೆ ಮಾಡುತ್ತ ಬಂದಿದ್ದಾರೆ. ತಮ್ಮ ಸೇವೆಯನ್ನು ಪ್ರಾಮಾಣಿಕವಾಗಿ, ಶುದ್ಧ ಹಸ್ತದಿಂದ ಮಾಡಿಕೊಂಡು ಬರುತ್ತಿದ್ದಾರೆ.
ಮನಸಿದ್ದರೆ ಮಾತ್ರ ಯಾವುದೇ ಸಾಧನೆಯನ್ನು ಮಾಡಲು ಸಾಧ್ಯ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.ಸಾರ್ವಜನಿಕರು ಇವರ ಅನ್ನದಾಸೋಹ ಸೇವೆಗೆ ಸಹಕಾರ ನೀಡಬೇಕು. ಯೋಗೇಶ್ ಸಾಕ್ಷರತೆಯ ತಂಡದಲ್ಲಿದ್ದು, 300ಕ್ಕೂ ಹೆಚ್ಚು ಬೀದಿ ನಾಟಕ ಮಾಡಿದ್ದಾರೆ. ಗಿಡಗಳನ್ನು ನೆಡುವ ಮೂಲಕ ಪರಿಸರ ರಕ್ಷಣೆ ಮಾಡಿದ್ದಾರೆ ಎಂದರು.
ರಂಗಭೂಮಿ ಕಲಾವಿದ ಶಾಂತಕುಮಾರ್ ಅವರಿಗೆ ಕೆ.ವಿ.ಶಂಕರಗೌಡ ರಂಗಭೂಮಿ ಪ್ರಶಸ್ತಿ ಹಾಗೂ ಅರುಣ ಕುಮಾರಿ- ಯೋಗೇಶ್ ದಂಪತಿಗಳಿಗೆ ಕೆ.ಎಸ್.ಸಚ್ಚಿದಾನಂದ ಸಮಾಜ ಸೇವಾ ಪ್ರಶಸ್ತಿ ಹಾಗೂ 25,000 ನಗದು ಹಣ ನೀಡಿ ಅಭಿನಂದಿಸಲಾಯಿತು.ಪ್ರಶಸ್ತಿ ಸ್ವೀಕರಿಸಿದ ಶಾಂತಕುಮಾರ್ ಹಾಗೂ ಮಂಗಲ ಯೋಗೇಶ್ ತಮ್ಮ ಅನುಭವ ಹಂಚಿಕೊಂಡರು.
ಸಮಾರಂಭದಲ್ಲಿ ಜನತಾ ಶಿಕ್ಷಣ ಟ್ರಸ್ಟ್ ಕಾರ್ಯದರ್ಶಿ ಎಸ್. ಎಲ್. ಶಿವಪ್ರಸಾದ್, ನಿರ್ದೇಶಕ ಡಾ. ರಾಮಲಿಂಗಯ್ಯ, ಕೆ.ವಿ. ಶಂಕರಗೌಡ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರಾದ ವಿ.ಡಿ. ಸುವರ್ಣ ಹಾಜರಿದ್ದರು.