ಅನ್ನಭಾಗ್ಯ ಯೋಜನೆಗೆ 10 ವರ್ಷ ತುಂಬಿದ ಹಿನ್ನೆಲೆಯಲ್ಲಿ ಲೋಡಿಂಗ್ ಮತ್ತು ಅನ್ ಲೋಡಿಂಗ್ ಕಾರ್ಮಿಕರ ದಶಮಾನೋತ್ಸವ ಹಾಗೂ ಶ್ರಮಿಕರ ಹಕ್ಕೊತ್ತಾಯ ಸಮಾವೇಶವನ್ನು ಜು.10ರಂದು ಬೆಳಿಗ್ಗೆ 11 ಗಂಟೆಗೆ ಬೆಂಗಳೂರಿನ ಪ್ರೀಡಂ ಪಾರ್ಕ್ ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಜನಶಕ್ತಿ ರಾಜ್ಯ ಕಾರ್ಯದರ್ಶಿ ಪೂರ್ಣಿಮ ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅನ್ನಭಾಗ್ಯ ಯೋಜನೆ ಜಾರಿ ಮಾಡುವ ಹಮಾಲಿ ಕಾರ್ಮಿಕರಿಗೆ ಸರ್ಕಾರಿ ಅಧಿಕಾರಿಗಳು, ಗುತ್ತಿಗೆದಾರರು ಕಿರುಕುಳ ನೀಡುವುದನ್ನು ತಡೆಯಬೇಕು, ಕೆಲಸದಿಂದ ಕಿತ್ತು ಹಾಕುವುದನ್ನು ತಪ್ಪಿಸಿಲು ಕೆಲಸದ ಭದ್ರತೆ ನೀಡಬೇಕು. ಕಾರ್ಮಿಕ ವಿರೋಧಿಯಾದ 8 ಗಂಟೆಗಳ ಕೆಲಸದ ಅವಧಿಯನ್ನು 12 ಗಂಟೆಗೆ ಹೆಚ್ಚಿಸಿದ ಆದೇಶವನ್ನು ಈ ಕೂಡಲೇ ವಾಪಸ್ ಪಡೆಯಬೇಕೆಂದು ಒತ್ತಾಯಿಸಿದರು.
ಹಮಾಲಿ ಕಾರ್ಮಿಕರ ಕೆಲಸದ ಭದ್ರತೆ ಮತ್ತು ಸಂಬಳ ಭದ್ರತೆಗಾಗಿ ಮಹಾರಾಷ್ಟ್ರ ಮಾದರಿಯಲ್ಲಿ ಹಮಾಲಿ ಕಾರ್ಮಿಕರ ಕಲ್ಯಾಣ ಮಂಡಲಿ ಸ್ಥಾಪನೆ ಮಾಡಬೇಕು. ಅನ್ನಭಾಗ್ಯ ಜಾರಿ ಮಾಡುವ ಹಮಾಲಿ ಕಾರ್ಮಿಕರಿಗೆ ಕಾರ್ಮಿಕ ಇಲಾಖೆಯ ನಿಯಮಕ್ಕನುಸಾರವಾಗಿ ಪ್ರತಿ ವರ್ಷ ಕೂಲಿ ದರ ಹೆಚ್ಚಿಸಲು ಸಮಗ್ರ ನಿಯಮ ರೂಪಿಸಬೇಕು. ‘ಸಮಾನ ಕೆಲಸಕ್ಕೆ ಸಮಾವೆ ವೇತನ’ ನೀತಿಯನ್ನು ಜಾರಿಗೆ ತಂದು, ಗುತ್ತಿಗೆ ಕಾರ್ಮಿಕರ ಹಿತ ಕಾಪಾಡಬೇಕು. ಎಲ್ಲಾ ರೀತಿಯ ಕಾರ್ಮಿಕರಿಗೂ ಉದ್ಯೋಗ ಭದ್ರತೆಯನ್ನ ಒದಗಿಸಿ, ಕನಿಷ್ಟ 30 ಸಾವಿರ ವೇತನ ನೀಡಬೇಕು ಎಂದರು.
ಅನ್ನಭಾಗ್ಯ ಯೋಜನೆಯಡಿ 5 ಕೆಜಿ ಅಕ್ಕಿ ಬದಲು ಹಣ ನೀಡುವುದನ್ನು ಸ್ಥಗಿತಗೊಳಿಸಿ, ಅಕ್ಕಿಯನ್ನೇ ನೀಡಬೇಕು. ಅನ್ನಭಾಗ್ಯ ಹಮಾಲಿ ಕಾರ್ಮಿಕರಿಗೆ ಸರ್ಕಾರವೇ ಆಹಾರ ನಿಗಮದ ಮೂಲಕವೇ ನೇರ ಸಂಬಳ ಪಾವತಿ (DPS) ಮಾಡಲು ಮುಂದಾಗಬೇಕು ಎಂದು ಆಗ್ರಹಿಸಿದರು.
ಈ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ, ಆಹಾರ ಸಚಿವ ಕೆ.ಹೆಚ್.ಮನಿಯಪ್ಪ ಹಾಗೂ ಕಾರ್ಮಿಕ ಸಚಿವ ಸಂತೋಷ್ ಲಾಡ್, ಹೈಕೋರ್ಟ್ ಹಿರಿಯ ವಕೀಲ ಎಸ್. ಬಾಲನ್, ಪ್ರೊ.ಬಾಬು ಮ್ಯಾಥ್ಯೂ ಹಾಗೂ ಡಾ.ಹೆಚ್.ವಿ.ವಾಸು ಸೇರಿದಂತೆ ಹಲವು ಗಣ್ಯರು ಭಾಗವಹಿಸುವರು ಎಂದರು.
ಗೋಷ್ಟಿಯಲ್ಲಿ ಲೋಡಿಂಗ್ ಮತ್ತು ಅನ್ ಲೋಡಿಂಗ್ ಕಾರ್ಮಿಕರ ಒಕ್ಕೂಟದ ಮಂಡ್ಯ ಜಿಲ್ಲಾಧ್ಯಕ್ಷ ಬಿ.ಕೃಷ್ಣ, ಕರ್ನಾಟಕ ಜನಶಕ್ತಿ ಜಿಲ್ಲಾ ಕಾರ್ಯದರ್ಶಿ ಸಿದ್ದರಾಜು, ಮುಖಂಡರಾದ ಮೊಗಣ್ಣ, ಮಹೇಶ್, ಪುಟ್ಟಸ್ವಾಮಿ, ವೈದುನ, ಕೆ.ದೇವರಾಜು ಸೇರಿದಂತೆ ಮತ್ತಿತರರಿದ್ದರು.




