Saturday, May 18, 2024

ಪ್ರಾಯೋಗಿಕ ಆವೃತ್ತಿ

ಮನ್ ಮುಲ್ ಅಧ್ಯಕ್ಷರ ಚುನಾವಣೆ ಮುಂದೂಡಿಕೆ : ದಳಪತಿಗಳ ವಿರುದ್ಧ ಮುಯ್ಯಿಗೆ ಮುಯ್ಯಿ ತೀರಿಸಿಕೊಂಡ ಕಾಂಗ್ರೆಸ್

ಮಂಡ್ಯ ಜಿಲ್ಲೆಯ ಪ್ರತಿಷ್ಟಿತ ಸಹಕಾರಿ ಸಂಸ್ಥೆಯಾಗಿರುವ ಮಂಡ್ಯ ಜಿಲ್ಲಾ ಹಾಲು ಒಕ್ಕೂಟ (ಮನ್ ಮುಲ್)ದ ಉಳಿದ ಅವಧಿಯ ಅಧ್ಯಕ್ಷ ಸ್ಥಾನಕ್ಕೆ ಇಂದು ನಿಗದಿಯಾಗಿದ್ದ ಚುನಾವಣೆ ಕೋರಂ ಕೊರತೆಯಿಂದ ಮುಂದೂಡಲ್ಪಟ್ಟಿತು. ಈ ಮೂಲಕ ಕಾಂಗ್ರೆಸ್ ನಾಯಕರು ದಳಪತಿಗಳ ವಿರುದ್ದ ಮುಯ್ಯಿಗೆ ಮಯ್ಯಿ ತೀರಿಸಿಕೊಂಡಿದ್ದಾರೆ.

ಗುರುವಾರ ಬೆಳಿಗ್ಗೆ 9ರಿಂದ 11 ಗಂಟೆಯೊಳಗೆ ನಾಮಪತ್ರ ಸಲ್ಲಿಸಲು ನೀಡಿದ್ದ ಕಾಲಾವಕಾಶದಲ್ಲಿ ಹೆಚ್.ಟಿ.ಮಂಜು, ರಘುನಂದನ್, ನೆಲ್ಲಿಗೆರೆ ಬಾಲಕೃಷ್ಣ ಮತ್ತು ಬೋರೇಗೌಡ ಸೇರಿ ನಾಲ್ವರು ನಾಮಪತ್ರ ಸಲ್ಲಿಸಿದ್ದರು. ಮಧ್ಯಾಹ್ನ 1 ಗಂಟೆಗೆ ನಿಗದಿಯಾಗಿದ್ದ ಚುನಾವಣಾ ಸಮಯಕ್ಕೆ ಯಾವುದೇ ನಿರ್ದೇಶಕರು ಹಾಜರಾಗದ ಹಿನ್ನೆಲೆಯಲ್ಲಿ ಸಹಕಾರ ಸಂಘಗಳ ಕಾಯ್ದೆಯಡಿ ಹೆಚ್ಚುವರಿಯಾಗಿ 1 ಗಂಟೆಗಳ ಕಾಲ ಚುನಾವಣಾ ಪ್ರಕ್ರಿಯೆಯನ್ನು ವಿಸ್ತರಿಸಿ, ಮಧ್ಯಾಹ್ನ 2 ಗಂಟೆಯವರೆಗೆ ಕಾಲಾವಕಾಶ ನೀಡಲಾಗಿತ್ತು.

ಹೆಚ್ಚುವರಿ ಸಮಯದಲ್ಲೂ ನಿರ್ದೇಶಕ ಡಾಲು ರವಿ ಹೊರತು ಪಡಿಸಿ, ಇತರೆ ನಿರ್ದೇಶಕರು ಸಭೆಗೆ ಹಾಜರಾಗದ ಹಿನ್ನೆಲೆಯಲ್ಲಿ ಸಹಕಾರ ಸಂಘಗಳ ಕಾಯ್ದೆಯಡಿ ಒಂದು ವಾರಗಳ ಕಾಲ ಅಧ್ಯಕ್ಷ ಹುದ್ದೆಯ ಚುನಾವಣಾ ಪ್ರಕ್ರಿಯೆಯನ್ನು ಮುಂದೂಡಿ ಚುನಾವಣಾಧಿಕಾರಿಗಳಾದ ಅಪರ ಜಿಲ್ಲಾಧಿಕಾರಿ ಡಾ.ಹೆಚ್.ಎಲ್.ನಾಗರಾಜು ಆದೇಶ ಹೊರಡಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಚುನಾವಣಾಧಿಕಾರಿಗಳು, 12 ಮಂದಿ ಚುನಾಯಿತ ನಿರ್ದೇಶಕರು, ಓರ್ವ ನಾಮ ನಿರ್ದೇಶಿತ ನಿರ್ದೇಶಕ ಹಾಗೂ ನಾಲ್ವರು ಅಧಿಕಾರಿ ವರ್ಗದ ನಿರ್ದೇಶಕರಿಗೆ ಚುನಾವಣಾ ಪ್ರಕ್ರಿಯೆಯಲ್ಲಿ ಮತ ಚಲಾಯಿಸಲು ಅವಕಾಶವಿದ್ದು, ಸಂಬಂಧಿಸಿದ ಎಲ್ಲರಿಗೂ ಲಿಖಿತವಾಗಿ ಅಂಚೆ ಮೂಲಕ ನೋಟೀಸ್ ನೀಡಲಾಗಿತ್ತು. ಆದರೆ ನಾಮಪತ್ರ ಸಲ್ಲಿಕೆ ನಂತರ ನಿಗದಿಯಾಗಿದ್ದ ಸಂದರ್ಭದಲ್ಲಿ ಚುನಾವಣಾ ಪ್ರಕ್ರಿಯೆಗೆ ನಿರ್ದೇಶಕರು ಆಗಮಿಸದ ಹಿನ್ನೆಲೆಯಲ್ಲಿ ಚುನಾವಣೆ ಮುಂದೂಡುವುದು ಅನಿವಾರ್ಯವಾಯಿತು. ಮುಂದಿನ 7 ದಿನಗಳೊಳಗೆ ಬಾಕಿ ಇರುವ ಚುನಾವಣಾ ಪ್ರಕ್ರಿಯೆಯನ್ನು ಮುಕ್ತಾಯಗೊಳಿಸುವುದಾಗಿ ತಿಳಿಸಿದರು.

ಈ ಮಧ್ಯೆ ಮಂಡ್ಯ ತಾಲ್ಲೂಕು ಜಿಲ್ಲಾ ಸಹಕಾರ ಸಂಘಗಳ ಉಪ ನೋಂದಣಾಧಿಕಾರಿಗಳು ಆದೇಶವೊಂದನ್ನು ಹೊರಡಿಸಿ ನಿಯಮ ಅನುಸರಿಸದೇ ಸಹಕಾರಿ ಸಂಸ್ಥೆಗೆ ನಿವೇಶನ ಖರೀದಿಸಿರುವುದು, ಪ್ರಾಧಿಕಾರದ ಅನುಮತಿ ಪಡೆಯದೇ ಸಹಕಾರಿ ಸಂಘದ ಕಟ್ಟಡ ನಿರ್ಮಾಣ ಮಾಡಲು ಮುಂದಾಗಿರುವ ಅಂಶಗಳನ್ನು ಪರಿಗಣಿಸಿ ಮನ್ ಮುಲ್ ನಿರ್ದೇಶಕರಾದ ಬಿ.ಆರ್.ರಾಮಚಂದ್ರು ಹಾಗೂ ವಿಶ್ವನಾಥ್ ಅವರನ್ನು ಅನರ್ಹಗೊಳಿಸಿ, ಸಹಕಾರ ಸಂಘಗಳ ಯಾವುದೇ ಸಭೆಯಲ್ಲಿ ಭಾಗವಹಿಸದಂತೆ ಆದೇಶ ಹೊರಡಿಸಿದ್ದಾರೆಂದು ಚುನಾವಣಾಧಿಕಾರಿಗಳು ಮಾಹಿತಿ ನೀಡಿದರು. ಈ ಹಿನ್ನೆಲೆಯಲ್ಲಿ ಇಂದು ನಿಗದಿಯಾಗಿದ್ದ ಮನ್ ಮುಲ್ ಅಧ್ಯಕ್ಷ ಸ್ಥಾನದ ಚುನಾವಣೆ ಮುಂದೂಡಲ್ಪಟ್ಟಿತು.

ಮುಯ್ಯಿಗೆ ಮುಯ್ಯಿ

ಕಳೆದ ಎರಡು ವರ್ಷಗಳ ಹಿಂದೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವದಲ್ಲಿದಾಗ ಜರುಗಿದ ಮಂಡ್ಯ ಡಿಸಿಸಿ ಬ್ಯಾಂಕ್ ವರಿಷ್ಟರ ಚುನಾವಣೆಯಲ್ಲಿ ಇಬ್ಬರು ಕಾಂಗ್ರೆಸ್ ಬೆಂಬಲಿತ ನಿರ್ದೇಶಕರನ್ನು ಅಮಾನತುಗೊಳಿಸಿ ಬ್ಯಾಂಕ್ ಅಧಿಕಾರವನ್ನು ಗಿಟ್ಟಿಸಿಕೊಂಡಿದ್ದ ಬಿಜೆಪಿ-ಜೆಡಿಎಸ್ ಮೈತ್ರಿಗೆ ಟಕ್ಕರ್ ಕೊಟ್ಟ ಕಾಂಗ್ರೆಸ್ ಮುಖಂಡರು, ಇಂದು ಇಬ್ಬರು ಜೆಡಿಎಸ್ ನಿರ್ದೇಶಕರನ್ನು ಅಮಾನತುಗೊಳಿಸಿ ಅಂದು ಜಾ.ದಳ ನೀಡಿದ್ದ ಏಟಿಗೆ ತಿರುಗೇಟು ನೀಡುವ ಮೂಲಕ ಮುಯ್ಯಿಗೆ ಮುಯ್ಯಿ ತೀರಿಸಿಕೊಂಡಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!