Wednesday, September 25, 2024

ಪ್ರಾಯೋಗಿಕ ಆವೃತ್ತಿ

ಬಿಜೆಪಿ ಸರ್ಕಾರ RSS ಅಂಗಸಂಸ್ಥೆಗೆ 35.33 ಎಕರೆ ಭೂಮಿ ಹಂಚಿಕೆ ಮಾಡಿದ್ದ ಆದೇಶಕ್ಕೆ ತಡೆ: ಸಚಿವ ಕೃಷ್ಣಭೈರೇಗೌಡ

ಬೆಂಗಳೂರಿನಲ್ಲಿ RSS ಅಂಗಸಂಸ್ಥೆ ಜನಸೇವಾ ಟ್ರಸ್ಟ್‌ಗೆ ಹಿಂದಿನ ಬಿಜೆಪಿ ಸರ್ಕಾರ ಮಂಜೂರು ಮಾಡಿದ್ದ 35.33 ಎಕರೆ ಗೋಮಾಳ ಭೂಮಿಯ ಆದೇಶಕ್ಕೆ ತಡೆಹಿಡಿಯಲಾಗಿದೆ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ತಿಳಿಸಿದ್ದಾರೆ.

ಬೆಂಗಳೂರಿನ ತಾವರೆಕೆರೆ ಬಳಿಯ ಕುರುಬರಹಳ್ಳಿಯಲ್ಲಿ 35.33 ಎಕರೆ ಗೋಮಾಳವನ್ನು ಜನಸೇವಾ ಟ್ರಸ್ಟಿಗೆ ನೀಡಿ, 2022ರ ಸೆಪ್ಟೆಂಬರ್‌ನಲ್ಲಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಆದೇಶ ಹೊರಡಿಸಿತ್ತು.

ಈಗ ನಡೆಯುತ್ತಿರುವ ಬಜೆಟ್ ಅಧಿವೇಶನದಲ್ಲಿ ವಿವಿಧ ಸಂಸ್ಥೆಗಳಿಗೆ ಸರ್ಕಾರಿ ಭೂಮಿ ಹಂಚಿಕೆ ಮಾಡಿರುವ ಬಗ್ಗೆ ಬಿಜೆಪಿ ಶಾಸಕ ಎಸ್.ಟಿ ಸೋಮಶೇಖರ್ ಕೇಳಿದ್ದ ಪ್ರಶ್ನೆಗೆ ಉತ್ತರಿಸಿರುವ ಕಂದಾಯ ಸಚಿವ ಕೃಷ್ಣಭೈರೇಗೌಡ, “ಜನಸೇವಾ ಟ್ರಸ್ಟಿಗೆ 35.33 ಎಕರೆ ಭೂಮಿಯನ್ನು ನೀಡುವುದನ್ನು ತಡೆಹಿಡಿಯಲಾಗಿದೆ. ಅಲ್ಲದೆ, ಚುನಾವಣೆಗೂ ಮುಂಚೆ ಹಂಚಿಕೆಯಾಗಿದ್ದ ಎಲ್ಲ ಹಂಚಿಕೆಗಳಿಗೂ ತಡೆ ನೀಡಲಾಗಿದೆ” ಎಂದು ಹೇಳಿದ್ದಾರೆ.

ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ನಂತರ ಬಿಜೆಪಿ ಸರ್ಕಾರ ಮಂಜೂರು ಮಾಡಿದ್ದ ಕಾಮಗಾರಿಗಳನ್ನು ತಡೆಹಿಡಿಯುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶಿಸಿದ್ದರು. ಆ ವೇಳೆ, ಗೋಮಾಳ ಮಂಜೂರಾತಿಗೂ ತಡೆ ನೀಡಿದ್ದರು. ಆ ಗೋಮಾಳ ಭೂಮಿಯಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದರು.

ಹಿಂದಿನ ಬಿಜೆಪಿ ಸರ್ಕಾರವು ಆದಿಚುಂಚನಗಿರಿ ಮಠ, ಸಿದ್ಧಗಂಗಾ ಮಠ, ಇಸ್ಕಾನ್, ರಾಷ್ಟ್ರೋತ್ಥಾನ ಪರಿಷತ್, ಕರ್ನಾಟಕ ಲಾನ್ ಟೆನ್ನಿಸ್ ಅಸೋಸಿಯೇಷನ್, ಒಕ್ಕಲಿಗರ ಸಂಘ ಸೇರಿದಂತೆ ವಿವಿಧ ಸಂಸ್ಥೆಗಳಿಗೆ ರಾಜ್ಯಾದ್ಯಂತ 252.36 ಎಕರೆ ಗೋಮಾಳ ಭೂಮಿಯನ್ನು ಮಂಜೂರು ಮಾಡಿತ್ತು ಎಂದು ತಿಳಿದುಬಂದಿದೆ.

“ಆ ಆದೇಶಗಳಿಗೆ ತಡೆಯೊಡ್ಡಲಾಗಿದೆ. ಹಿಂದಿನ ಸರ್ಕಾರ ಮಾಡಿರುವ ಅವಸರದ ಹಂಚಿಕೆ ಪ್ರಕರಣಗಳನ್ನು ಪರಿಶೀಲಿಸುತ್ತಿದ್ದೇವೆ. ಅರ್ಹತೆ ಮತ್ತು ಉದ್ದೇಶದ ಆಧಾರದ ಮೇಲೆ ನಾವು ಅನುದಾನವನ್ನು ಪರಿಶೀಲಿಸುತ್ತೇವೆ” ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ಹೇಳಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!