Friday, September 20, 2024

ಪ್ರಾಯೋಗಿಕ ಆವೃತ್ತಿ

ಒಳಮೀಸಲಾತಿ – ಸಾಮಾಜಿಕ ನ್ಯಾಯದ ಬಿಜೆಪಿ ಅಸಲಿಯತ್ತು ಬಯಲು

✍️ ಶಿವಸುಂದರ್

ಇಷ್ಟು ದಿನಗಳ ಕಾಲ ತಾನು ಒಳಮೀಸಲಾತಿಯ ಪರ ಎಂದು ಸೋಗಲಾಡಿ ನಿಲುವನ್ನು ತೋರುತ್ತಿದ್ದ ಬಿಜೆಪಿಯ ಅಸಲಿಯತ್ತು ನಿನ್ನೆ ಸಂಸತ್ತಿನಲ್ಲಿ ನಡೆದ ಪ್ರಶ್ನೋತ್ತರಗಳಲ್ಲಿ ಬಯಲಾಗಿದೆ.

ನಿನ್ನೆ , 26-07-2023, ರಂದು ರಾಜ್ಯಸಭೆಯಲ್ಲಿ ಬಿಜೆಪಿಯ ಸದಸ್ಯರಾದ ಜಿ.ವಿ.ಎಲ್ ನರಸಿಂಹರಾವ್ ಅವರು

1.ಒಳಮೀಸಲಾತಿಯ ಬಗ್ಗೆ ಈವರೆಗೆ ಬೇರೆಬೇರೆ ರಾಜ್ಯಗಳು ನೀಡಿರುವ ಅಭಿಪ್ರಾಯಗಳ ಕುರಿತು..

2. ಕೇಂದ್ರ ಸರ್ಕಾರದ ಮುಂದೆ ಸಂವಿಧಾನಕ್ಕೆ ತಿದ್ದುಪಡಿ ತಂದು ರಾಜ್ಯ ಸರ್ಕಾರಗಳಿಗೆ ಒಳಮೀಸಲಾತಿ ಅಧಿಕಾರ ನೀಡುವ ಯೋಜನೆ ಇದೆಯೇ ಎಂಬುದರ ಕುರಿತು..

3. ಹಾಗೂ ಅಂಥ ಯೋಜನೆಯಿದ್ದಲ್ಲಿ ಎಷ್ಟು ಕಾಲಾವಧಿಯೊಳಗೆ ಅದು ಜಾರಿಯಾಗಲಿದೆ ಎಂಬುದರ ಕುರಿತು
ಪ್ರಶ್ನೆಗಳನ್ನು ಕೇಳಿದ್ದಾರೆ.

ಅದಕ್ಕೆ ಮೋದಿ ಸರ್ಕಾರದ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಇಲಾಖೆಯ ಮಂತ್ರಿ ನಾರಾಯಣಸ್ವಾಮಿಯವರು ನೀಡಿರುವ ಉತ್ತರ ಇದು:

ಸಂವಿಧಾನದಲ್ಲಿ ಈಗಿರುವ ಅವಕಾಶಗಳಂತೆ ಒಳಮೀಸಲಾತಿಯನ್ನು ಕಲ್ಪಿಸಲು ಸಾಧ್ಯವಾಗದು.

-ಇದರ ಬಗ್ಗೆ ರಚಿಸಲಾಗಿದ್ದ ರಾಷ್ಟ್ರೀಯ ಆಯೋಗವು ಒಳಮೀಸಲಾತಿಯನ್ನು ಕಲ್ಪಿಸಿಕೊಡುವಂತೆ ಸಂವಿಧಾನದ ಆರ್ಟಿಕಲ್ 341 ಕ್ಕೆ ತಿದ್ದುಪಡಿ ತರಲು ಶಿಫಾರಸ್ಸು ಮಾಡಿತ್ತು.

-ಈ ಶಿಫಾರಸ್ಸಿನ ಬಗ್ಗೆ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ತಮ್ಮ ಅಭಿಪ್ರಾಯಗಳನ್ನು ನೀಡುವಂತೆ ಕೋರಲಾಗಿತ್ತು.

ಈವರೆಗೆ 20ರಾಜ್ಯ ಸರ್ಕಾರಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳು ತಮ್ಮ ಅಭಿಪ್ರಾಯಗಳನ್ನು ನೀಡಿವೆ.

ಅದರಲ್ಲಿ

– 7 ರಾಜ್ಯಗಳು ಒಳಮೀಸಲಾತಿಯ ಪರವಾಗಿಯೂ..

13 ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶವು ಒಳಮೀಸಲಾತಿಯ ವಿರುದ್ಧವಾಗಿಯೂ ಅಭಿಪ್ರಾಯಗಳನ್ನು ನೀಡಿವೆ.

ಎಲ್ಲಕ್ಕಿಂತ ಮುಖ್ಯವಾಗಿ … ..

– ಹಾಲಿ ಈ ವಿಷಯವು ಸಬ್ -ಜುಡೀಸ್ – ನ್ಯಾಯಾಲಯಾಧೀನ -ವಾಗಿದೆ.

– ಐವರು ನ್ಯಾಯಾಧೀಶರ ಪೀಠವು ಈ ವಿಷಯವನ್ನು ಏಳು ನ್ಯಾಯಾಧೀಶರ ಅಥವಾ ಹೆಚ್ಚಿನ ಪೀಠಕ್ಕೆ ವರ್ಗಾಯಿಸಬೇಕೆಂದು ಕೋರಿದೆ .. ಎಂದು ಉತ್ತರವನ್ನು ಮುಗಿಸಿದ್ದಾರೆ.

ಆದರೆ ಕರ್ನಾಟಕದ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿಯ ಘಟಾನುಘಟಿಗಳೆಲ್ಲಾ ಒಳಮೀಸಲಾತಿ ಒದಗಿಸಲು ಮೋದಿ ಸರ್ಕಾರ ಕಟಿಬದ್ಧವಾಗಿದೆ ಎಂದೆಲ್ಲಾ ಬೊಗಳೆ ಬಿಟ್ಟಿದ್ದರು.

ಆದರೆ ಈ ಉತ್ತರದಲ್ಲಿ ಸ್ಪಷ್ಟವಾಗಿರುವಂತೆ

ಒಳಮೀಸಲಾತಿಯನ್ನು ಸಂವಿಧಾನ ತಿದ್ದುಪಡಿಯ ಮೂಲಕ ತರುವ ಉದ್ದೇಶವಿದೆಯೇ ಎಂಬ ಪ್ರಶ್ನೆಗೆ ಸರ್ಕಾರ ಉತ್ತರವನ್ನೇ ಕೊಡದೆ ಜಾರಿ ಕೊಂಡಿದೆ.

-ಅಷ್ಟು ಮಾತ್ರವಲ್ಲ..

ಈ ವಿಷಯವು ಸಬ್ ಜುಡೀಸ್- ಅರ್ಥಾತ್ ನ್ಯಾಯಾಲಯದ ಅಧೀನದಲ್ಲಿರುವುದರಿಂದ ಸರ್ಕಾರ ಯಾವ ಕ್ರಮಗಳನ್ನು ತೆಗೆದುಕೊಳ್ಳಲಾಗದು ಎಂದು ಸ್ಪಷ್ಟವಾಗಿ ಹೇಳಿದೆ.

– ಆದರೆ ಸುಪ್ರೀಂ ಕೋರ್ಟಿನ ಅಧೀನದಲ್ಲಿರುವ ಅಥವಾ ಸುಪ್ರೀಂ ಕೋರ್ಟು ಆದೇಶ ನೀಡಿದ್ದರು ಅದಕ್ಕೆ ತದ್ವಿರುದ್ಧವಾದ ಕ್ರಮಗಳನ್ನು ಸರ್ಕಾರ ತೆಗೆದುಕೊಂಡಿಲ್ಲವೇ?

ಇತಿಹಾಸದಲ್ಲಿ ಸಂಸತ್ತು ತನ್ನ ಸಾರ್ವಭೌಮತೆಯನ್ನು ಚಲಾಯಿಸಿ ಸಂವಿಧಾನ ತಿದ್ದುಪಡಿಯ ಮೂಲಕ ಸುಪ್ರೀಂ ಕೋರ್ಟು ಆದೇಶಗಳನ್ನು ಅಮಾನ್ಯಗೊಳಿಸಿಲ್ಲವೇ?

– ಅಷ್ಟೆಲ್ಲ ಏಕೆ?

ದೆಹಲಿ ಸರ್ಕಾರಕ್ಕೆ ಅಧಿಕಾರಿಶಾಹಿಯ ಮೇಲಿನ ಅಧಿಕಾರದ ವ್ಯಾಪ್ತಿಯನ್ನು ಸುಪ್ರೀಂ ಕೋರ್ಟು ಎತ್ತಿ ಹಿಡಿದರೂ ಮೋದಿ ಸರ್ಕಾರ ಅದನ್ನು ಅಮಾನ್ಯಗೊಳಿಸಲು ಸುಗ್ರೀವಾಜ್ಞೆ ತರಲಿಲ್ಲವೇ? ಈಗ ಅದನ್ನು ಸಂಸತ್ತಿನಲ್ಲಿ ಮಸೂದೆಯಾಗಿ ಮಂಡಿಸುತ್ತಿಲ್ಲವೇ?

– ಸುಪ್ರೀಂ ಕೋರ್ಟಿನ ಉನ್ನತ ಪೀಠ ಈ ವಿಷಯದಲ್ಲಿ ಇನ್ನು ರಚನೆಯೇ ಆಗಿಲ್ಲ. ಆದರೆ ಸುಪ್ರೀಂ ಪೀಠ ವಿಚಾರಣಾ ನೋಟೀಸ್ ಕೊಟ್ಟ ವಿಷಯಗಳಲ್ಲೂ ಸಂಸತ್ತು ಕಾನೂನು ಮಾಡಿಲ್ಲವೇ? ಸಂವಿಧಾನ ತಿದ್ದುಪಡಿಗಳನ್ನು ಮಾಡಿಲ್ಲವೇ?

ಅಂದರೆ ಮೋದಿ ಸರ್ಕಾರ ಒಳಮೀಸಲಾತಿ ನಿರಾಕರಿಸಲು ಸಬ್ ಜುಡೀಸ್ ಸಬೂಬು ಹೇಳುತ್ತಿದೆಯಷ್ಟೆ.

ಅದರ ಜೊತೆಗೆ 20 ರಾಜ್ಯಗಳಲ್ಲಿ ಒಳಮೀಸಲಾತಿಯನ್ನು ಒಪ್ಪಿರುವುವು ಕೇವಲ 7 ರಾಜ್ಯಗಳು- ಉಳಿದ 13 ರಾಜ್ಯಗಳು ವಿರೋಧಿಸಿವೆ ಎಂಬ ನೆಪವೂ ಈಗ ಮೋದಿ ಸರ್ಕಾರ ಮುಂದಿಟ್ಟಿದೆ.

– ವಾಸ್ತವದಲ್ಲಿ ಸುಪ್ರೀಂ ನ ಐದು ನ್ಯಾಯಾಧೀಶರ ಪೀಠ ಮುಖ್ಯ ನ್ಯಾಯಾಧೀಶರಿಗೆ ಈ ವಿಷಯದ ಬಗ್ಗೆ..

ಏಳು ನ್ಯಾಯಾಧೀಶರ ಪೀಠ ರಚಿಸಲು ಸಲಹೆ ಮಾಡಿದ್ದು 2020ರ ಆಗಸ್ಟ್ 20 ರಂದು ..

ದವಿಂದರ್ ಸಿಂಗ್ ವರ್ಸಸ್ ಸ್ಟೇಟ್ ಆಫ್ ಪಂಜಾಬ್ ಪ್ರಕರಣದಲ್ಲಿ.

ಹಾಗಿದ್ದರೂ ಕೂಡ ಕಳೆದ ಎರಡು ವರ್ಷಗಳಲ್ಲಿ ಒಳಮೀಸಲಾತಿ ವಿಷಯವು ಸಬ ಜುಡೀಸ್ ಆಗಿದೆ ಎಂದು ಒಮ್ಮೆಯೂ ಹೇಳದೆ ಕರ್ನಾಟಕದ ಬಿಜೆಪಿ , ಸಂಘಪರಿವಾರ ಮತ್ತು ಕೇಂದ್ರದ ಮೋದಿ ಸರ್ಕಾರ ಒಳಮೀಸಲಾತಿ ಕಲ್ಪಿಸುವುದಾಗಿ ಭರವಸೆ ಕೊಟ್ಟಿದ್ದೇಕೆ?

– ಇದೆ ಪ್ರಶ್ನೆಯನ್ನು ಹೊರಟಗಾರರು ಕೇಳಿದಾಗ ಸಂವಿಧಾನ ತಿದ್ದುಪಡಿಯನ್ನು ಮಾಡದೆ, ಸುಪ್ರೀಂ ಕೋರ್ಟಿಗೂ ಹೋಗದೆ ಹೇಗೋ ಒಳಮೀಸಲಾತಿ ಕೊಟ್ಟೆ ತೀರುವುದಾಗಿ ಬಿಜೆಪಿ ಮತ್ತು ಸಂಘಪರಿವಾರದ ಮುಖಂಡರು ಸಮುದಾಯಕ್ಕೆ ಮೋಸ ಮಾಡಿದ್ದೇಕೆ?*

ಸಂಘಪರಿವಾರ ಉತ್ತರಿಸುತ್ತದೆಯೇ?

ಉತ್ತರಿಸುವಂತೆ ಸಮುದಾಯ ಪಟ್ಟುಹಿಡಿದು ಕೇಳುತ್ತದೆಯೇ?

ಅಥವಾ 2024ರ ಚುನಾವಣೆಯ ಹಿನ್ನೆಲೆಯಲ್ಲಿ ಮತ್ತೊಮ್ಮೆ ಬಣ್ಣದ ಮಾತಾಡಿ ಸಮುದಾಯವನ್ನು ಮೋಸಗೊಳಿಸುವ ಪ್ರಯತ್ನಗಳನ್ನು ಮಾಡುತ್ತದೆಯೇ?
……

ದೇಶಮಟ್ಟದಲ್ಲಿ ಒಳಮೀಸಲಾತಿಗೆ ದೊಡ್ಡ ಹೋರಾಟ ಕಟ್ಟದೆ…

ಬಿಜೆಪಿಯನ್ನೂ, ಸಂಘಪರಿವಾರವನ್ನೋ, ಇತರ ಪಕ್ಷಗಳನ್ನೂ ನಂಬಿ ಕೂತರೆ ಒಳಮೀಸಲಾತಿ ಕನ್ನಡಿಯೊಳಗಿನ ಗಂಟಾಗಿಯೇ ಉಳಿಯುವುದಿಲ್ಲವೇ?

ಜಸ್ಟ್ ಆಸ್ಕಿಂಗ್
(ಜುಲೈ 26ರಂದು ರಾಜ್ಯ ಸಭೆಯಲ್ಲಿ ಸರ್ಕಾರ ಕೊಟ್ಟ ಉತ್ತರ)

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!