Friday, September 20, 2024

ಪ್ರಾಯೋಗಿಕ ಆವೃತ್ತಿ

ಸಿಎಂ ಕುಟುಂಬದ ಬಗ್ಗೆ ಅವಹೇಳನಕಾರಿ ಪೋಸ್ಟ್ ಮಾಡಿದ್ದ ಬಿಜೆಪಿ ನಾಯಕಿ ಶಕುಂತಲಾ ಬಂಧನ

ಉಡುಪಿ ಕಾಲೇಜಿನ ಶೌಚಗೃಹದಲ್ಲಿ ಹಿಂದೂ ಹುಡುಗಿಯರ ವಿಡಿಯೋ ಸೆರೆಹಿಡಿದ ವಿವಾದದ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಕುಟುಂಬದ ವಿರುದ್ಧ ಅವಹೇಳನಕಾರಿ ಪೋಸ್ಟ್‌ ಮಾಡಿದ್ದ ತುಮಕೂರಿನ ಬಿಜೆಪಿ ನಾಯಕಿ ಶಕುಂತಲಾ ಅವರನ್ನು ಪೊಲೀಸರು ಇಂದು ಬಂಧಿಸಿದ್ದಾರೆ.

ಉಡುಪಿಯ ಕಾಲೇಜೊಂದರ ಟಾಯ್ಲೆಟ್​ನಲ್ಲಿ 3 ಮುಸ್ಲಿಂ ಯುವತಿಯರು ಹಿಂದೂ ಯುವತಿಯ ವಿಡಿಯೋ ಮಾಡಿದ ಆರೋಪ ಇತ್ತೀಚೆಗೆ ಕೇಳಿಬಂದಿದ್ದು ಅದರ ಸುತ್ತ ನಾನಾ ಬಗೆಯ ವಿವಾದಗಳು ಹುಟ್ಟಿಕೊಳ್ಳುತ್ತಿವೆ. ಕೆಲವರು ರಾಜ್ಯಸರ್ಕಾರದ ಮೇಲೆ ಆರೋಪ ಮಾಡಿದರೆ ಇನ್ನೂ ಕೆಲವರು ಮಹಿಳಾ ಆಯೋಗದ ಸದಸ್ಯೆ ಖುಷ್ಬೂ ಸುಂದರ್​ ವಿರುದ್ಧ ಮಾತನಾಡುತ್ತಿದ್ದಾರೆ. ಈ ನಡುವೆ ಬಿಜೆಪಿಯ ಕಾರ್ಯಕರ್ತೆಯೊಬ್ಬರು, ಸಿದ್ದರಾಮಯ್ಯ ಕುಟುಂಬದ ವಿರುದ್ಧ ಮಾತನಾಡಿ ಜೈಲು ಪಾಲಾಗಿದ್ದಾರೆ.

“>

ಬಿಜೆಪಿ ನಾಯಕಿ ಶಕುಂತಲಾ ಅವರು ಪ್ರಧಾನಿ ಮೋದಿ ಅವರೊಂದಿಗಿನ ಫೋಟೋಗಳನ್ನು ಕ್ಲಿಕ್ಕಿಸಿಕೊಂಡಿದ್ದಾರೆ. ಇವರನ್ನು ಬಿಜೆಪಿ ರಾಷ್ಟ್ರೀಯ ಸಂಘಟನಾಕಾರ್ಯದರ್ಶಿ ಸಿಟಿ ರವಿ ಅವರು ಟ್ವಿಟರ್ ನಲ್ಲಿ ಫಾಲೋ ಮಾಡುತ್ತಾರೆ. ಆದರೆ ಶಕುಂತಲಾ ಇದೇ ಮೊದಲ ಬಾರಿಗೆ ಇಂತಹ ಪೋಸ್ಟಗಳನ್ನು ಹಂಚಿಕೊಂಡವರಲ್ಲ, ಇದೇ ರೀತಿ ಸಾಮಾಜಿಕ ಜಾಲತಾಣದಲ್ಲಿ ವಿವಾದಾತ್ಮಕವಾಗಿ ಪೋಸ್ಟ್ ಮಾಡುವ ಮೂಲಕ ಕುಖ್ಯಾತಿಗಳಿಸಿದ್ದಾರೆ.

ಉಡುಪಿ ಕಾಲೇಜಿನ ಶೌಚಗೃಹದಲ್ಲಿ ವಿಡಿಯೋ ಮಾಡಿದ ಪ್ರಕರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಕುಟುಂಬದ ವಿರುದ್ಧ ಬಿಜೆಪಿ ನಾಯಕಿ ಶಕುಂತಲಾ ಎನ್ನುವವರು ಅವಹೇಳನ ಟ್ವೀಟ್ ಮಾಡಿದ್ದರು. ಇದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಸಾಕಷ್ಟು ವಿರೋಧ ವ್ಯಕ್ತವಾಗಿತ್ತು, ಸಾಮಾಜಿಕ ಮಾಧ್ಯಮಗಳಲ್ಲಿ ಅವರ ವಿರುದ್ಧ ಕ್ರಮಕ್ಕೆ ಆಗ್ರಹ ವ್ಯಕ್ತವಾಗಿತ್ತು.

ಈ ಹಿಂದೆ ಕಾಂಗ್ರೆಸ್ ಅಧಿಕೃತ ಟ್ವಿಟರ್​ ಖಾತೆಯಲ್ಲಿ ಪೋಸ್ಟ್ ”ಉಡುಪಿಯ ಕಾಲೇಜಿನಲ್ಲಿ ವಿದ್ಯಾರ್ಥಿನಿಯರ ವಿಡಿಯೋ ಚಿತ್ರೀಕರಣ ಎಂದು ನಕಲಿ ಸುದ್ದಿ ಸೃಷ್ಟಿಸಿ ಕೋಮು ಪ್ರಚೋದನೆಗೆ ಮುಂದಾಗಿರುವ ಬಿಜೆಪಿ ತೀರ್ಥಹಳ್ಳಿಯಲ್ಲಿ ಹಿಂದೂ ವಿದ್ಯಾರ್ಥಿನಿಯರ ಅಶ್ಲೀಲ ವಿಡಿಯೋ ಚಿತ್ರೀಕರಿಸಿದ ABVP ಅಧ್ಯಕ್ಷನ ಅಸಲಿ ಸುದ್ದಿಯ ಬಗ್ಗೆ ಮೌನ ಮುರಿಯುವುದು ಯಾವಾಗ?” ಎಂದು ಪ್ರಶ್ನೆ ಮಾಡಿತ್ತು.

ವಿದ್ಯಾರ್ಥಿನಿಯರ ಮಕ್ಕಳಾಟವನ್ನು ರಾಜಕೀಯದ ಕಳ್ಳಾಟಕ್ಕೆ ಬಳಸಿಕೊಳ್ಳಲು ಉಪ್ಪು ಖಾರ, ಮಸಾಲೆಗಳನ್ನು ಬೆರೆಸಿ ಚಪ್ಪರಿಸಲು ಹೊರಟಿದ್ದ ಬಿಜೆಪಿಗೆ ನಮ್ಮ ದಕ್ಷ ಪೊಲೀಸರು ತಡ ಮಾಡದೆ ತನಿಖೆ ಮಾಡಿ ಸತ್ಯಾಂಶ ಬಯಲಿಗೆಳೆದು ನಿರಾಸೆ ಮೂಡಿಸಿದ್ದಾರೆ” ಎಂದು ಕಾಂಗ್ರೆಸ್ ಟ್ವೀಟ್ ಮಾಡಲಾಗಿತ್ತು.

ಇದರ ಬೆನ್ನಲ್ಲೇ ಬಿಜೆಪಿ ನಾಯಕಿ ಶಕುಂತಲಾ ಅವರು ಸಿಎಂ ಸೊಸೆ, ಹೆಂಡ್ತಿ ವೀಡಿಯೋ ಮಾಡಿದ್ರೆ ಹೀಗೆ ಹೇಳ್ತಿದ್ರಾ? ಎಂದು ಅವಹೇಳನಕಾರಿಯಾಗಿ ಟ್ವೀಟ್ ಮಾಡಿದ್ದಾರೆ.

“>

ಟ್ವೀಟ್‌ನಲ್ಲಿ ಶಕುಂತಲಾ ಅವರು, ”ಮುಸ್ಲಿಂ ಯುವತಿಯರು ಹಿಂದೂ ಹುಡುಗಿಯರ ನಗ್ನ ಚಿತ್ರ ವೀಡಿಯೋ ಮಾಡಿದ್ದು ತಮಾಷೆ, ಮಕ್ಕಳಾಟ ಎನ್ನುತ್ತಿರುವ ಕಾಂಗ್ರೆಸ್ ಮತ್ತದರ ಅನುಯಾಯಿಗಳು, ಅನ್ಯಾಯವಾದ ಹೆಣ್ಣು ಮಕ್ಕಳು ಬರೆದಿರುವ ದೂರು ಕೂಡ ನಕಲಿ ಎಂದು ಹೇಳುತ್ತಾರೆಯೇ?” ಎಂದು ಪ್ರಶ್ನೆ ಮಾಡಿದ್ದರು.

ಸಿಎಂ ವಿರುದ್ಧ ಅವಹೇಳನಕಾರಿಯಾಗಿ ಟ್ವೀಟ್ ಮಾಡಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿದ ದೂರು ದಾಖಲು ಮಾಡಲಾಗಿತ್ತು. ದೂರು ದಾಖಲಿಸಿಕೊಂಡು ಹೈಗ್ರೌಂಡ್ಸ್ ಪೊಲೀಸರು ಬಿಜೆಪಿ ನಾಯಕಿ ಶಕುಂತಲಾರನ್ನು ಬಂಧಿಸಿದ್ದಾರೆ.

ಉಡುಪಿಯ ಕಾಲೇಜಿನಲ್ಲಿ ಮೂವರು ಮುಸ್ಲಿಂ ವಿದ್ಯಾರ್ಥಿನಿಯರು ಶೌಚಾಲಯದಲ್ಲಿ ಹಿಂದೂ ವಿದ್ಯಾರ್ಥಿನಿಯರ ರಹಸ್ಯ ಚಿತ್ರೀಕರಣವನ್ನು ಮಾಡಿರುವ ಘಟನೆಯನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಮುಚ್ಚಿ ಹಾಕಲು ಪ್ರಯತ್ನಿಸುತ್ತಿದೆ ಎಂದು, ಅಲ್ಲದೇ ಈ ಪ್ರಕರಣದ ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿ ತುಮಕೂರು ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ವತಿಯಿಂದ ನಗರದ ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ನಡೆದ ಪ್ರತಿಭಟನೆಯಲ್ಲಿ ಶಕುಂತಲಾ ಭಾಗಿಯಾಗಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!