Thursday, September 19, 2024

ಪ್ರಾಯೋಗಿಕ ಆವೃತ್ತಿ

ಭೂಮಿ- ವಸತಿ ಹಕ್ಕು ವಂಚಿತರ ಹೋರಾಟ| ಆ.14ಕ್ಕೆ ಸಾಮೂಹಿಕ ಬರಿಹೊಟ್ಟೆ ಸತ್ಯಾಗ್ರಹ

ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್‌ ಸರ್ಕಾರ ಬಡ ಜನರಿಗೆ ನೀಡಿರುವ ಐದು ಗ್ಯಾರಂಟಿಗಳ ಸಂದರ್ಭದಲ್ಲಿಯೇ, ಸರ್ಕಾರದ ಸೌಲಭ್ಯಗಳನ್ನು ಆಧರಿಸುವ ಬದಲು ಸ್ವಾವಲಂಬಿ ಬದುಕಿನ ಗ್ಯಾರಂಟಿ ನೀಡಬೇಕೆಂದು ಆಗ್ರಹಿಸಿ ‘ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ’ ವತಿಯಿಂದ ಬೆಂಗಳೂರಿನ ಪ್ರೀಡಂ ಪಾರ್ಕ್ ನಲ್ಲಿ ಸಾಮೂಹಿಕ ಬರಿಹೊಟ್ಟೆ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಕರ್ನಾಟಕ ಜನಶಕ್ತಿಯ ರಾಜ್ಯ ಕಾರ್ಯದರ್ಶಿ ಪೂರ್ಣಿಮ ತಿಳಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಗರ್ ಹುಂ ಸಾಗುವಳಿ ಭೂಮಿಯ ಮಂಜೂರಾತಿಗಾಗಿ ಫಾರಂ ನಂ, 50, 53 ಮತ್ತು 57ರಲ್ಲಿ ಅರ್ಜಿ ಸಲ್ಲಿಸಿರುವವರಿಗೆ ಆರಣ್ಯ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿರುವ ಆದಿವಾಸಿ ಬುಡಕಟ್ಟು ಜನರಿಗೆ ಮತ್ತು ಪಾರಂಪರಿಕ ಅರಣ್ಯ ಹಕ್ಕುದಾರರಿಗೆ ಭೂಮಿಯ ಹಕ್ಕುಪತ್ರಗಳನ್ನೂ, 94/94ಸಿಸಿಯಡಿ ಮನೆಗಳಿಗಾಗಿ ಅರ್ಜಿ ಸಲ್ಲಿಸಿರುವವರಿಗೆ ಹಾಗೂ ರಾಜ್ಯದಾದ್ಯಂತದ ಸ್ಲಂ ನಿವಾಸಿಗಳಿಗೆ ಮನೆಗಳ ಹಕ್ಕುಪತ್ರಗಳನ್ನೂ ನೀಡಬೇಕು ಎಂದು ನಮ್ಮ ಹಕ್ಕೊತ್ತಾಯವಾಗಿದೆ ಎಂದು ವಿವರಿಸಿದರು.

ಸ್ವಾತಂತ್ರ್ಯ ದಿನಾಚರಣೆಯ ಮುಂಚಿನ ದಿನವಾದ ಆಗಸ್ಟ್ 14ರಂದು ಸಾಮೂಹಿಕ ‘ಬರಿಹೊಟ್ಟೆ ಸತ್ಯಾಗ್ರಹ’ವನ್ನು ಹಮ್ಮಿಕೊಳ್ಳಲಾಗಿದೆ. ದಶಕಗಳಿಂದ ಹಕ್ಕುಪತ್ರಗಳಿಗಾಗಿ ಕಾದಿರುವ ಈ ನಾಲ್ಕೂ ಬಗೆಯ ಒಟ್ಟು ಸುಮಾರು 60ರಿಂದ 70 ಲಕ್ಷದಷ್ಟು ಅಗಾಧ ಸಂಖ್ಯೆಯ ಅರ್ಜಿಗಳು ಬಾಕಿಯಿದ್ದು, ಈ ಸಮಸ್ಯೆಯಿಂದ ನಲುಗಿರುವ ರಾಜ್ಯದ ಎಲ್ಲ ಜಿಲ್ಲೆಗಳ ಸಾವಿರಾರು ಮಂದಿ ಭೂಮಿ-ವಸತಿ ವಂಚಿತ ಬಡ ಜನರು ಈ ಸತ್ಯಾಗ್ರಹದಲ್ಲಿ ಭಾಗವಹಿಸಲಿದ್ದಾರೆ ಎಂದರು.

nudikarnataka.com

ಮುಖ್ಯ ಒತ್ತಾಯಗಳು

  • ಮುಖ್ಯಮಂತ್ರಿಗಳ ನೇತೃತ್ವದಲ್ಲಿ, ಕಂದಾಯ, ಅರಣ್ಯ, ವಸತಿ ಹಾಗೂ ಗ್ರಾಮೀಣಾಭಿವೃದ್ಧಿ ಮಂತ್ರಿಗಳು ಮತ್ತು ಹೋರಾಟದ ಪ್ರತಿನಿಧಿಗಳು ಇರುವಂತೆ ಶೀಘ್ರವೇ ‘ಉನ್ನತ ಮಟ್ಟದ ಸಭೆ’ ಕರೆಯಬೇಕು.
  • ಭೂಮಿ, ಮನೆ ಮತ್ತು ನಿವೇಶನಗಳ ಮಂಜೂರಾತಿಯನ್ನು ಯುದ್ಧೋಪಾದಿಯಲ್ಲಿ ಕೈಗೆತ್ತಿಕೊಳ್ಳಬೇಕು. ಕಾಲಮಿತಿಯೊಳಗೆ ಇದನ್ನು ಜಾರಿಗೊಳಿಸಲಿಕ್ಕಾಗಿ ‘ಹೈ ಪವರ್ ಕಮಿಟಿ’ಯನ್ನು ರಚಿಸಬೇಕು. ಈ ಹಿಂದಿನಂತೆ ಇದರಲ್ಲಿ ಹೋರಾಟರೂ ಪ್ರತಿನಿಧಿಗಳೂ ಇರಬೇಕು. ಸಂಬಂಧಪಟ್ಟ ವಿವಿಧ ಇಲಾಖೆಗಳ ನಡುವೆ ಉನ್ನತ
    ಮಟ್ಟದಲ್ಲಿ ಸಮನ್ವಯವನ್ನು ಸುಲಲಿತಗೊಳಿಸಲು ಈ ಕಮಿಟಿ ಒಬ್ಬರು ಸಂಪುಟ ದರ್ಜೆ ಮಂತ್ರಿಗಳ ನೇತೃತ್ವದಲ್ಲಿ ಕಾರ್ಯ ನಿರ್ವಹಿಸಬೇಕು.
  • ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲೂ ಭೂ ಮಂಜೂರಾತಿ ಸಮಿತಿಗಳನ್ನು ಕೂಡಲೇ ರಚಿಸಬೇಕು. ಈ ಸಮಿತಿಗಳಲ್ಲಿ ಭೂಮಿ-ವಸತಿ ಹೋರಾಟದ ಒಬ್ಬ ಪ್ರತಿನಿಧಿ ಕೂಡ ಇರಬೇಕು.
  • ಭೂ ಮಂಜೂರಾತಿಯ ಪ್ರಕ್ರಿಯೆಯನ್ನು ಸರಳ ಹಾಗೂ ತ್ವರಿತಗೊಳಿಸಬೇಕು. ಅರ್ಜಿ ಸಲ್ಲಿಸಿ ಉಳುತ್ತಿರುವ ಭೂಮಿಗೆ ಮತ್ತು ವಾಸಿಸುತ್ತಿರುವ ಮನೆಗೆ ತಡ ಮಾಡದೆ ಹಕ್ಕುಪತ್ರ ನೀಡುವಂತಹ ಪದ್ಧತಿಯನ್ನು ಜಾರಿಗೆ ತರಬೇಕು.
  • ರೈತರು ಮತ್ತು ಹೋರಾಟಗಾರರ ಮೇಲೆ ಅರಣ್ಯ ಇಲಾಖೆ, ಪೊಲೀಸರು ದಾಖಲಿಸಿರುವ ಕೇಸುಗಳನ್ನು ವಾಪಸ್ ತೆಗೆಯಬೇಕು.
  • ಯಾವುದೇ ಸರ್ಕಾರಿ ಅಥವಾ ಅರಣ್ಯ ಭೂಮಿಯಲ್ಲಿ 5 ಎಕರೆಗಿಂತ ಕಡಿಮೆ ಸಾಗುವ ಇಲ್ಲವೇ ಒತ್ತುವರಿ ಮಾಡಿಕೊಂಡಿರುವ ಯಾವುದೇ ಅರ್ಜಿದಾರರನ್ನು ಪರ್ಯಾಯ ಒದಗಿಸದೆ ತೆರವುಗೊಳಿಸಬಾರದು. ಶ್ರೀಮಂತರು ಮಾಡಿರುವ ಒತ್ತುವರಿಯನ್ನು ತೆರವುಗೊಳಿಸಿ ಭೂ ರಹಿತರಿಗೆ ಭೂಮಿ ಮತ್ತು ನಿವೇಶನಗಳನ್ನು ಹಂಚಬೇಕು

ಗೋಷ್ಠಿಯಲ್ಲಿ ಭೂಮಿ ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ರಾಜ್ಯ ಕಾರ್ಯದರ್ಶಿ ಸಿದ್ದರಾಜು, ಕರ್ನಾಟಕ ಜನಶಕ್ತಿಯ ಮುಖಂಡ ನಗರಕೆರೆ ಜಗದೀಶ್, ಮುಖಂಡರಾದ ಸೌಮ್ಯ, ಪ್ರಕಾಶ್, ನಿಂಗಮ್ಮ, ಶಂಕರ್ ಮತ್ತಿತರರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!