Thursday, September 19, 2024

ಪ್ರಾಯೋಗಿಕ ಆವೃತ್ತಿ

ಕುಂಬಾರರ ಕುಲಶಾಸ್ತ್ರ ಅಧ್ಯಯನ; ಸಮರ್ಪಕ ಮಾಹಿತಿ ನೀಡಲು ಸಲಹೆ

ಕುಂಬಾರ ಸಮುದಾಯದ ಸ್ಥಿತಿಗತಿಗಳ ಅಧ್ಯನಕ್ಕಾಗಿ ಸರ್ಕಾರದಿಂದ ಆರಂಭಗೊಂಡಿರುವ ಕುಲಶಾಸ್ತ್ರ ಅಧ್ಯಯನಕ್ಕೆ ಕುಲಬಾಂಧವರು ಸಮರ್ಪಕವಾದ ಮಾಹಿತಿ ನೀಡಬೇಕು ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಆರ್‌.ಶ್ರೀನಿವಾಸ್‌ ಸಲಹೆ ನೀಡಿದರು.

ನಗರದ ಗಾಂಧಿ ಭವನದಲ್ಲಿ ಸರ್ವಜ್ಞ ಕುಂಬಾರ ಸೇವಾ ಟ್ರಸ್ಟ್‌, ಕುಂಬಾರ ಜಾಗೃತಿ ವೇದಿಕೆಯಿಂದ ನಡೆದ ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವವರಿಗೆ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಪ್ರಸ್ತುತದಲ್ಲಿ ಕುಂಬಾರ ಜನಾಂಗದ ಕುಲವೃತ್ತಿಗಳು ವಿನಾಶದ ಅಂಚಿನಲ್ಲಿದೆ. ಈ ಜನಾಂಗದ ಶ್ರೇಯೋಭಿವೃದ್ಧಿಗಾಗಿ ಹಾಗೂ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸ್ಥಿತಿಗತಿಗಳನ್ನು ಅಧ್ಯಯನ ಮಾಡಲು, ಹಂಪಿ ವಿಶ್ವವಿದ್ಯಾನಿಲಯದ ತಂಡ, ಕುಲಶಾಸ್ತ್ರ ಅಧ್ಯಯನವನ್ನು ನಡೆಸುತ್ತಿದ್ದು, ಆನ್‌ಲೈನ್‌ ಮೂಲಕವು ಮಾಹಿತಿಯನ್ನು ಒದಗಿಸಲು ಅವಕಾಶವಿರುವುದರಿಂದ ವಿದ್ಯಾರ್ಥಿ ವರ್ಗ, ಈ ಕಾರ್ಯಕ್ರಮದಲ್ಲಿ ಹೆಚ್ಚಾಗಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.

ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನ ಅಭಿನಂದಿಸುವುದರ ಜೊತೆಗೆ ಭವಿಷ್ಯದ ಶಿಕ್ಷಣ ಮತ್ತು ಮುಂದಿನ ಜೀವನದ ವಿಧಾನಗಳ ಬಗ್ಗೆ ಅರಿವು ಮೂಡಿಸಲು, ಅತ್ಯಗತ್ಯವಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿ, ಉನ್ನತ ಸ್ಥಾನಕ್ಕೆ ಏರಿದ ನಂತರ ತಮ್ಮ ಸಮುದಾಯದ ಋಣವನ್ನು ತೀರಿಸುವ ಕೆಲಸವನ್ನು ಮಾಡಬೇಕು ಎಂದು ಸಲಹೆ ನೀಡಿದರು.

ಭೂ ದಾಖಲೆಗಳ ಇಲಾಖೆಯ ಸಹಾಯಕ ನಿರ್ದೇಶಕಿ ಮಮತ ಮಾತನಾಡಿ, ವಿದ್ಯಾರ್ಥಿ ದಿಸೆಯಲ್ಲಿಯೇ ಶಿಕ್ಷಣದ ಮೌಲ್ಯ ಅರಿತುಕೊಳ್ಳುವುದು ಮುಖ್ಯವಾಗಬೇಕು. ಆ ಮೂಲಕ ವಿದ್ಯಾರ್ಥಿಗಳು ಭವಿಷ್ಯ ರೂಪಿಸಿಕೊಳ್ಳುವ ಕಡೆ ಗಮನ ಹರಿಸಬೇಕು. ಜೊತೆಗೆ ಭವಿಷ್ಯದ ಸ್ಪಷ್ಟತೆ ಇರಬೇಕು. ಪರಿಶ್ರಮದ ಅಧ್ಯಯನದ ಮೂಲಕ ಎಲ್ಲವನ್ನೂ ಪಡೆದುಕೊಳ್ಳುವ ಅವಕಾಶವಿದ್ದು, ಆ ದಾರಿಯಲ್ಲೇ ಸಾಗಬೇಕು ಎಂದು ತಿಳಿಸಿದರು.

ಮಡಿಕೇರಿ ಗ್ರಾಹಕರ ಆಯೋಗದ ರೇಣುಕಾಂಬ ಮಾತನಾಡಿ, ಪೋಷಕರು ವಿದ್ಯಾರ್ಥಿಗಳಿಗೆ ಬಲವಂತದ ಶಿಕ್ಷಣ ಏರಬಾರದು, ತಮ್ಮ ಮಕ್ಕಳು ವೈದ್ಯಕೀಯ, ಎಂಜಿನಿಯರ್‌ ಶಿಕ್ಷಣವನ್ನು ಓದಿದರೇ ಮಾತ್ರವೇ ಸಾರ್ಥಕ ಎಂಬ ಭಾವನೆಯನ್ನು ಬಿಡಬೇಕು. ಮಕ್ಕಳಿಗೆ ಹಾಗೂ ಅವರ ಆಸಕ್ತಿಗೆ ಅನುಗುಣವಾಗಿ ಓದುವ ಸ್ವಾತಂತ್ರ್ಯವನ್ನು ನೀಡಬೇಕು ಎಂದು ಸಲಹೆ ನೀಡಿದರು.

ಮೈಸೂರಿನ ಕ್ರಡಿಟ್‌ ಐ ಸಂಸ್ಥೆಯ ಡಾ.ಎಂ.ಪಿ.ವರ್ಷ, ಡಿ.ದೇವರಾಜು ಅರಸು ಹಿಂದುಳಿದ ವರ್ಗಗಳ ವೇದಿಕೆ ಜಿಲ್ಲಾಧ್ಯಕ್ಷ ಎಲ್‌.ಸಂದೇಶ್‌, ಮೈಸೂರು ವಾಣಿಜ್ಯ ತೆರಿಗೆ ಇಲಾಖೆಯ ನಿವೃತ್ತ ಅಧಿಕಾರಿ ಕೆ.ಎಂ.ನಾಗರಾಜು, ಜಿಲ್ಲಾ ಕುಂಬಾರರ ಜಾಗೃತಿ ಅಧ್ಯಕ್ಷ ಎಂ.ಕೃಷ್ಣ, ಶ್ರೀರಂಗಪಟ್ಟಣ್ಣ ಅಬಕಾರಿ ನಿರೀಕ್ಷಕ ಶಿವಣ್ಣ, ಬೆಂಗಳೂರು ಕುಂಬಾರ ಸಂಘಧ ಲೆಕ್ಕಪರಿಶೋಧಕ ಸಿ.ಎಂ.ಸೋಮ್‌ ಸುಂದರ್‌ ಮಾತನಾಡಿದರು.

ಅಧ್ಯಕ್ಷತೆಯನ್ನು ಸರ್ವಜ್ಞ ಕುಂಬಾರ ಸೇವಾ ಟ್ರಸ್ಟ್‌ ಅಧ್ಯಕ್ಷ ಆರ್‌.ಶ್ರೀನಿವಾಸ್‌ ವಹಿಸಿದ್ದರು. ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವವರಿಗೆ ಇದೇ ಸಂದರ್ಭದಲ್ಲಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಕುಂಬಾರರ ಜಾಗೃತಿ ವೇದಿಕೆಯ ಪದಾಧಿಕಾರಿಗಳಾದ ಪುರ ಕಾಂತರಾಜು, ಕೆರಗೋಡು ವೆಂಕಟೇಶ್, ಯಲಿಯೂರು ಪ್ರದೀಪ್‌, ದಾಸಪ್ಪ, ಆನಂದ್, ಸಿದ್ದರಾಜು, ಬಸವರಾಜು ಮತ್ತಿತರರು ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!