‘ಮಕ್ಕಳು ಸೋಲು ಗೆಲುವನ್ನು ಪಕ್ಕಕ್ಕಿಟ್ಟು ಕ್ರೀಡಾಕೂಟದಲ್ಲಿ ಭಾಗವಹಿಸುವುದರ ಕಡೆಗೆ ಹೆಚ್ಚಿನ ಗಮನ ಹರಿಸಬೇಕು’. ಸೋಲೇ ಬರಲಿ ಗೆಲುವೇ ಬರಲಿ, ಯಾವುದೂ ಕೊನೆ ಅಲ್ಲ, ಹಾಗಾಗಿ ಮುಂದಿನ ಹಂತಗಳಿಗೆ ಹೆಚ್ಚಿನ ಪೂರ್ವ-ತಯಾರಿಯನ್ನು ಮಾಡಿಕೊಳ್ಳಬೇಕು ಎಂದು ಬಿಇಓ ಮಹದೇವು ತಿಳಿಸಿದರು.
ಮಂಡ್ಯನಗರದ ಸಂತ ಜೋಸೆಫರ ವಿದ್ಯಾ ಸಂಸ್ಥೆಯ ಆಟದ ಮೈದಾನದಲ್ಲಿ ಮಂಡ್ಯ ನಗರ ಒಂದನೇ ವೃತ್ತದ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆಗಳ ಹೋಬಳಿ ಮಟ್ಟದ 2023-24ನೇ ಸಾಲಿನ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಇಂದಿನ ಸರ್ಕಾರ ಕ್ರೀಡೆಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ಕೊಡುತ್ತಿದ್ದು, ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿದವರಿಗೆ ಸರ್ಕಾರಿ ಹುದ್ದೆಗಳಿಗೆ ನೇರ ನೇಮಕಾತಿಗೆ ಅವಕಾಶ ಮಾಡಿಕೊಟ್ಟಿದೆ. ಐಪಿಎಲ್ ಆಟಗಾರರಾದ ಹಾರ್ದಿಕ್ ಪಾಂಡ್ಯ, ಉಮೇಶ್ ಜಾದವ್ ಮತ್ತು ರವೀಂದ್ರ ಜಡೇಜಾ ಸೇರಿದಂತೆ ಇನ್ನೂ ಹಲವಾರು ಜನರು ಅವರ ಪ್ರತಿಭೆಯಿಂದ ಮುಂದೆ ಬಂದು ಈ ದಿನ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ನಿಮ್ಮ ಪ್ರತಿಭೆಯನ್ನು ಸತತ ಪ್ರಯತ್ನ ಹಾಗೂ ಪರಿಶ್ರಮದಿಂದ ಹೊರ ತಂದರೆ ನಿಮ್ಮಲ್ಲೂ ಒಬ್ಬರು ಧನರಾಜ್ ಪಿಳ್ಳೈ, ವಿರಾಟ್ ಕೊಹ್ಲಿ, ಸಚಿನ್ ತೆಂಡೂಲ್ಕರ್ ಆಗಬಹುದು’. ಎಂದರು.
ಈ ಸಂದರ್ಭದಲ್ಲಿ ಸಂತಜೋಸೆಫರ ದೇವಾಲಯದ ಫಾದರ್ ಲೂರದ್ ಪ್ರಸಾದ್, ವ್ಯವಸ್ಥಾಪಕರಾದ ಸಿಸ್ಟರ್ ಫ್ರಿಡೋಲಿನ್, ತಾಲ್ಲೂಕು ದೈಹಿಕ ಶಿಕ್ಷಣ ಶಿಕ್ಷಕ ಕುಮಾರಸ್ವಾಮಿ, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ಅಶೋಕ್, ಕನ್ನಡ ಮಾಧ್ಯಮದ ಮುಖ್ಯ ಶಿಕ್ಷಕಿ ಸಿಸ್ಟರ್ ಕಫ್ಲೋರಾ, ಆಂಗ್ಲ ಮಾಧ್ಯಮದ ಮುಖ್ಯ ಶಿಕ್ಷಕಿ ಸಿಸ್ಟರ್ ಶೃತಿ ಹಾಗೂ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಅನಿಲ್ ಕುಮಾರ್ ಸೇರಿದಂತೆ ಇನ್ನಿತರರಿದ್ದರು.




