Saturday, May 18, 2024

ಪ್ರಾಯೋಗಿಕ ಆವೃತ್ತಿ

ಕಾವೇರಿ ಹೋರಾಟ| ಇಂಡುವಾಳು ಬಳಿ ರಸ್ತೆತಡೆ; ರೈತರ ಬಂಧನ

ಕೆಆರ್’ಎಸ್ ಅಣೆಕಟ್ಟೆಯಿಂದ ತಮಿಳುನಾಡಿಗೆ ನೀರು ಬಿಟ್ಟಿರುವುದನ್ನು ಖಂಡಿಸಿ ಮಂಡ್ಯ ಜಿಲ್ಲೆಯಲ್ಲಿ ಹಲವಾರು ದಿನದಿಂದ ಹೋರಾಟ ನಡೆಯುತ್ತಿದ್ದು, ಮಂಗಳವಾರ ಮಂಡ್ಯ ತಾಲ್ಲೂಕಿನ ಇಂಡುವಾಳು ಬಳಿ ಮೈ-ಬೆಂ ಹೆದ್ದಾರಿಯ ಸರ್ವಿಸ್ ರಸ್ತೆ ಯಲ್ಲಿ ರಸ್ತೆತಡೆ ರೈತಸಂಘದ ಕಾರ್ಯಕರ್ತರ ಪ್ರತಿಭಟಿಸಿದರು.

ಇಂಡುವಾಳು ಸರ್ಕಾರಿ ಶಾಲಾ ಆವರಣದಿಂದ ಮೆರವಣಿಗೆ ಹೊರಟ ನೂರಾರು ರೈತರು, ಸರ್ವಿಸ್ ರಸ್ತೆಯಲ್ಲಿ ಸಾಗಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ, ಜಿಲ್ಲಾ ಶಾಸಕರು ಮತ್ತು ಸಂಸದರ ವಿರುದ್ಧ ದಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಸರ್ವಿಸ್ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿಪಡಿಸಿದ್ದರಿಂದ, ಅರ್ಧ ತಾಸಿಗೂ ಹೆಚ್ಚು ಸಮಯ ವಾಹನ ಸಂಚಾರ ಅಸ್ತವ್ಯಸ್ತ ಉಂಟಾಯಿತು. ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ವಾಗ್ವಾದ ನಡೆದು ಪರಸ್ಪರ ತಳ್ಳಾಟ- ನೂಕಾಟ ಉಂಟಾಗಿ ಪೊಲೀಸರು ಪ್ರತಿಭಟನಾ ನಿರತರನ್ನು ಬಂಧಿಸಿದರು, ಈ ವೇಳೆ ಐದಾರು ರೈತರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಪೊಲೀಸರ ದೌರ್ಜನ್ಯದ ವಿರುದ್ಧ ಬಂದಿತ ರೈತರು ಆಕ್ರೋಶ ವ್ಯಕ್ತಪಡಿಸಿದರು.

ರೈತರ ಪರ ಸಂಸತ್ತಿನಲ್ಲಿ ದನಿ ಎತ್ತಬೇಕಾದ ಸಂಸದ ಸುಮಲತಾ ಅಂಬರೀಶ್ ಬೀದಿ ಗಿಳಿದು ಹೋರಾಟ ಮಾಡುವ ಮೂಲಕ ರೈತರನ್ನು ದಿಕ್ಕು ತಪ್ಪಿಸುತ್ತಿದ್ದಾರೆ, ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷದವರು ಬೀದಿಗಿಳಿದು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಿದ್ದರೆ, ರಾಜ್ಯದ ಕಾಂಗ್ರೆಸ್ ಸರ್ಕಾರ ನೀರನ್ನೆಲ್ಲ ತಮಿಳುನಾಡಿಗೆ ಹರಿಸಿ ಇದೀಗ ಸರ್ವ ಪಕ್ಷ ಸಭೆ ಕರೆದು ರೈತರ ಪರ ಮೊಸಳೆ ಕಣ್ಣೀರು ಸುರಿಸಲು ಮುಂದಾಗಿದೆ ಎಂದು ಕಿಡಿಕಾರಿದರು.

ಪ್ರತಿಭಟನಾಕಾರರು ಮುಖ್ಯ ಹೆದ್ದಾರಿಗೆ ನುಗ್ಗಿ ರಸ್ತೆತಡೆ ನಡೆಸಿದ ಸಂದರ್ಭದಲ್ಲಿ ರೈತಸಂಘ (ಮೂಲ ಸಂಘಟನೆ) ದ ಜಿಲ್ಲಾಧ್ಯಕ್ಷ ಇಂಡುವಾಳು ಚಂದ್ರಶೇಖರ್, ಮುಖಂಡರಾದ ಮಂಜೇಶ್ ಗೌಡ, ಸೊ.ಶಿ. ಪ್ರಕಾಶ್, ಬನ್ನೂರು ನಾರಾಯಣ, ಸಿದ್ದೇಗೌಡ, ಇ.ಬಸವರಾಜ್, ಕಸ್ತೂರಿ ಕರ್ನಾಟಕ ಜನಪರ ವೇದಿಕೆ ರಮೇಶ್ ಗೌಡ ಸೇರಿ ನೂರಾರು ಮಂದಿಯನ್ನು ಬಂಧಿಸಿ ಕರೆದೊಯ್ದರು.

ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ತಿಮ್ಮಯ್ಯ ನೇತೃತ್ವದಲ್ಲಿ ಪೊಲೀಸ್ ಬಿಗಿ ಭದ್ರತೆ ಒದಗಿಸಲಾಗಿತ್ತು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!