Thursday, September 19, 2024

ಪ್ರಾಯೋಗಿಕ ಆವೃತ್ತಿ

ಜಗ್ಗಿ ವಾಸುದೇವ್ ಫೌಂಡೇಶನ್‌ನ ಅಕ್ರಮಗಳ ತನಿಖೆಗೆ ಹೈಕೋರ್ಟ್ ಆದೇಶ

ಜಗ್ಗಿ ವಾಸುದೇವ್ ಅವರ ಇಶಾ ಫೌಂಡೇಶನ್ ಕೊಯಮತ್ತೂರಿನಲ್ಲಿರುವ ತನ್ನ ಕ್ಯಾಂಪಸ್‌ನ 20.805 ಹೆಕ್ಟೇರ್ ಭೂಮಿಯಲ್ಲಿ ಅನಧಿಕೃತ ನಿರ್ಮಾಣಗಳನ್ನು ಮಾಡಿದೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಅಕ್ರಮಗಳು ಕಂಡು ಬಂದರೆ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪಟ್ಟಣ ಮತ್ತು ಗ್ರಾಮಾಂತರ ಯೋಜನಾ ಜಂಟಿ ನಿರ್ದೇಶಕರಿಂದ ತನಿಖೆ ನಡೆಸುವಂತೆ ಮದ್ರಾಸ್ ಹೈಕೋರ್ಟ್ ಆದೇಶಿಸಿದೆ.

ಕೊಯಮತ್ತೂರಿನ ಇಕ್ಕರೈ ಬೊಳುವಂಪಟ್ಟಿಯಲ್ಲಿರುವ ಇಶಾ ಫೌಂಡೇಶನ್‌ನ 150 ಎಕರೆ ಕ್ಯಾಂಪಸ್, 112 ಅಡಿ ಆದಿಯೋಗಿ ಪ್ರತಿಮೆ ಸೇರಿದಂತೆ ಅನೇಕ ನಿಯಮಗಳ ಸ್ಪಷ್ಟ ಉಲ್ಲಂಘನೆ ಮಾಡಿದೆ ಎಂದು ನ್ಯೂಸ್‌ಲಾಂಡ್ರಿ ವರದಿ ಮಾಡಿತ್ತು.

ಈ ಆದಿಯೋಗಿ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದ್ದಾರೆ. ಆಗಿನ ಉಪ ನಿರ್ದೇಶಕ ಆರ್ ಸೆಲ್ವರಾಜ್ ಅವರು, ”ತಮ್ಮ ಇಲಾಖೆಯ ಅನುಮೋದನೆಯಿಲ್ಲದೆ ಈ ಪ್ರತಿಮೆಯನ್ನು ನಿರ್ಮಿಸಲಾಗಿದೆ” ಎಂದು ಹೇಳಿದ್ದಾರೆ.

2021ರಲ್ಲಿ ವೆಲ್ಲಿಯಂಗಿರಿ ಹಿಲ್ ಟ್ರೈಬಲ್ ಪ್ರೊಟೆಕ್ಷನ್ ಸೊಸೈಟಿಯ ಅರ್ಜಿದಾರರಾದ ಪಿ ಮುತ್ತಮ್ಮಾಳ್ ಅವರನ್ನು , ನ್ಯೂಸ್‌ಲಾಂಡ್ರಿ ಭೇಟಿ ಮಾಡಿದಾಗ, ”2017ರಲ್ಲಿ ಅರ್ಜಿ ಸಲ್ಲಿಸಿದ್ದಕ್ಕಾಗಿ ಇಶಾ ಫೌಂಡೇಶನ್‌ನವರು ಕಿರುಕುಳ ನೀಡಿದ್ದರು” ಎಂದು ಹೇಳಿದ್ದರು.

ವೆಲ್ಲಿಯಂಗಿರಿಯ ತಪ್ಪಲಿನಲ್ಲಿ ಇಶಾ ಫೌಂಡೇಶನ್ ನಡೆಸುತ್ತಿರುವ ನಿರ್ಮಾಣ ಕಾಮಗಾರಿಗೆ ಆಕ್ಷೇಪ ವ್ಯಕ್ತಪಡಿಸಿದ ನಂತರ ಇಕ್ಕರೈ ಬೊಳುವಂಪಟ್ಟಿಯ ಮುತ್ತತ್ತು ಅಯಾಲ್ ವಸಾಹತು ಪ್ರದೇಶದಲ್ಲಿರುವ ತಮ್ಮ ಮನೆಯನ್ನು ಪಿ ಮುತ್ತಮ್ಮಾಳ್ ಅವರು ತೊರೆದರು. ಆಗಸ್ಟ್ 18ರಂದು ಮದ್ರಾಸ್ ಹೈಕೋರ್ಟ್ ಈ ನಿರ್ದೇಶನ ನೀಡಿದೆ.

ಇದೀಗ ಈ ಬಗ್ಗೆ ಮಾತನಾಡಿದ ಮುತ್ತಮ್ಮಲ್ ಅವರು, ”ಕ್ರಮ ಕೈಗೊಳ್ಳುವುದು ಸರ್ಕಾರದ ಕೆಲಸ. ಸರ್ಕಾರವು ಅಕ್ರಮ ಕಟ್ಟಡಗಳನ್ನು ತೆಗೆದುಹಾಕಬೇಕು ಮತ್ತು ಅರಣ್ಯ, ವನ್ಯಜೀವಿಗಳು ಮತ್ತು ಬುಡಕಟ್ಟು ಜನರಿಗೆ ಯಾವುದೇ ಹಾನಿಯಾಗದಂತೆ ನೋಡಿಕೊಳ್ಳಬೇಕು” ಎಂದು ಹೇಳಿದ್ದಾರೆ.

‘ಯಾವುದೇ ಎನ್‌ಒಸಿ ದಾಖಲೆ ಇಲ್ಲ

ಪಟ್ಟಣ ಮತ್ತು ಗ್ರಾಮಾಂತರ ಯೋಜನೆಯ ಜಂಟಿ ನಿರ್ದೇಶಕ ತಿರು ಆರ್ ರಾಜಗುರು ಅವರು ಸಲ್ಲಿಸಿದ ಸ್ಥಿತಿ ವರದಿಯನ್ನು ಮದ್ರಾಸ್ ಹೈಕೋರ್ಟ್ ಗಮನಿಸಿದೆ. ಇಶಾ ಫೌಂಡೇಶನ್ ನಿರ್ಮಾಣಕ್ಕೆ ಅನುಮತಿ ಕೋರಿಲ್ಲ ಅಥವಾ ನಿರಾಕ್ಷೇಪಣಾ ಪ್ರಮಾಣಪತ್ರವನ್ನೂ ಪಡೆದಿಲ್ಲ ಎಂದು ವರದಿ ತಿಳಿಸಿದೆ.

ಆನಂತರ ಮುಖ್ಯ ನ್ಯಾಯಮೂರ್ತಿ ಎಸ್ ವಿ ಗಂಗಾಪುರವಾಲಾ ಮತ್ತು ನ್ಯಾಯಮೂರ್ತಿ ಪಿ ಡಿ ಆದಿಕೇಶವುಲು ಅವರ ಪೀಠ ತನಿಖೆಗೆ ಆದೇಶಿಸಿದೆ.

ವರದಿಯಲ್ಲಿ 15.53 ಎಕರೆ ನಂಜೈ ಭೂಮಿ ಅಥವಾ ಜೌಗು ಪ್ರದೇಶ ಮತ್ತು 5.275 ಹೆಕ್ಟೇರ್ ಪುಂಜೈ ಅಥವಾ ಒಣ ಭೂಮಿ ಸೇರಿದಂತೆ 20.805 ಹೆಕ್ಟೇರ್ ಭೂಮಿಯಲ್ಲಿ ನಿರ್ಮಾಣವನ್ನು ಉಲ್ಲೇಖಿಸಲಾಗಿದೆ. ಕಚೇರಿಯಲ್ಲಿ ಜಿಲ್ಲಾಧಿಕಾರಿ ಎನ್‌ಒಸಿ, ಮಾಲಿನ್ಯ ನಿಯಂತ್ರಣ ಮಂಡಳಿ ಎನ್‌ಒಸಿ, ಗುಡ್ಡಗಾಡು ಪ್ರದೇಶ ಸಂರಕ್ಷಣಾ ಪ್ರಾಧಿಕಾರ ಎನ್‌ಒಸಿ, ಅಗ್ನಿಶಾಮಕ ಇಲಾಖೆ ಎನ್‌ಒಸಿ ಇತ್ಯಾದಿಗಳ ಬಗ್ಗೆ ಯಾವುದೇ ದಾಖಲೆ ಕಂಡುಬಂದಿಲ್ಲ.

ಇಕ್ಕರೈ ಬೊಳುವಂಪಟ್ಟಿ ಪಂಚಾಯಿತಿಯೊಂದಿಗೆ ಪರಿಶೀಲಿಸಿದಾಗ, ಪಂಚಾಯಿತಿ ಅಧ್ಯಕ್ಷರಿಂದ ಯಾವುದೇ ಅನುಮತಿ ನೀಡಲಾಗಿಲ್ಲ ಎಂದು ಸಲ್ಲಿಸಲಾಗಿದೆ. ಧಾರ್ಮಿಕ ಕಟ್ಟಡಕ್ಕೆ ಜಿಲ್ಲಾಧಿಕಾರಿ ಎನ್‌ಒಸಿ ನೀಡಿಲ್ಲ ಎಂದು ಸಲ್ಲಿಸಲಾಗಿದೆ.

”ಜಿಲ್ಲೆಯ ಪಟ್ಟಣ ಮತ್ತು ಗ್ರಾಮ ಯೋಜನೆ ಜಂಟಿ ನಿರ್ದೇಶಕರು, ಅರ್ಜಿದಾರರು ಮತ್ತು ಇಶಾ ಫೌಂಡೇಶನ್ ಸಲ್ಲಿಸಬಹುದಾದ ದಾಖಲೆಗಳನ್ನು ಪರಿಗಣಿಸುತ್ತಾರೆ. ಜಾರಿಯಲ್ಲಿರುವ ಅನುಮತಿಯ ಬಗ್ಗೆ ಪರಿಶೀಲಿಸುತ್ತಾರೆ. ಅದು ಕ್ರಮಬದ್ಧವಾಗಿಲ್ಲದಿದ್ದರೆ, ಮುಂದಿನ ಕ್ರಮಗಳನ್ನು ತೆಗೆದುಕೊಳ್ಳಬೇಕು. ಯೋಜನೆ ಮತ್ತು ನಿರಾಕ್ಷೇಪಣಾ ಪ್ರಮಾಣಪತ್ರಕ್ಕೆ ಅನುಗುಣವಾಗಿ ನಿರ್ಮಿಸಲಾಗದ ಕಟ್ಟಡಕ್ಕೆ ಸಂಬಂಧಿಸಿದಂತೆ ತ್ವರಿತವಾಗಿ ಕ್ರಮಕೈಗೊಳ್ಳಬೇಕು” ಎಂದು ನ್ಯಾಯಾಲಯವು ಆದೇಶಿಸಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!