Thursday, September 19, 2024

ಪ್ರಾಯೋಗಿಕ ಆವೃತ್ತಿ

ನೀರಿಲ್ಲದೆ ಒಣಗಿರುವ ಕಬ್ಬಿಗೆ ಪರಿಹಾರ ನೀಡಿ- ಕಬ್ಬು ಒಪ್ಪಿಗೆದಾರರ ಸಂಘ ಒತ್ತಾಯ

ಕೃಷ್ಣರಾಜಸಾಗರ ಜಲಾಶಯದಿಂದ ತಮಿಳುನಾಡಿಗೆ ನೀರು ಹರಿಸಿದ ಹಿನ್ನೆಲೆಯಲ್ಲಿ ಹಾಲಿ ಬೆಳೆದಿರುವ ಕಬ್ಬಿಗೆ ನೀರಿಲ್ಲದೆ ಒಣಗಿರುವುದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಪ್ರತಿ ಎಕರೆಗೆ 50 ಸಾವಿರ ರೂ. ಪರಿಹಾರ ಘೋಷಿಸಬೇಕೆಂದು ಮೈಶುಗರ್ ಕಬ್ಬು ಒಪ್ಪಿಗೆದಾರರ ಸಂಘದ ಅಧ್ಯಕ್ಷ ಶಂಭೂನಹಳ್ಳಿ ಕೃಷ್ಣ ಸರ್ಕಾರವನ್ನು ಆಗ್ರಹಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾವೇರಿ ನದಿ ನಿರ್ವಹಣಾ ಪ್ರಾಧಿಕಾರದ ಆದೇಶದಂತೆ ತಮಿಳುನಾಡಿಗೆ ನೀರು ಹರಿಸಿರುವುದಾಗಿ ರಾಜ್ಯ ಸರ್ಕಾರ ಹೇಳೀದೆ. ಆದರೆ, ಪ್ರಸ್ತುತ ಕಾವೇರಿ ಜಲಾನಯನ ವ್ಯಾಪ್ತಿಯಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿ ನೀರಿನ ಕೊರತೆ ಇದ್ದಲ್ಲಿ ಎಷ್ಟು ಪ್ರಮಾಣದ ನೀರನ್ನು ಬಿಡಬೇಕೆಂಬುದರ ಬಗ್ಗೆ ಸ್ಪಷ್ಟ ಮಾಹಿತಿ ನೀಡಿಲ್ಲ. ಆದ್ದರಿಂದ ರಾಜ್ಯ ಸರ್ಕಾರ ತ.ನಾಡಿಗೆ ನೀರು ಬಿಡುವ ಬಗ್ಗೆ ಮರುಪರಿಶೀಲನೆ ಮಾಡಬೇಕೆಂದು ಒತ್ತಾಯಿಸಿದರು.

ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ತಮಿಳುನಾಡಿಗೆ ಕಾವೇರಿ ನೀರು ಬಿಟ್ಟಿರುವ ವಿಚಾರವಾಗಿ ಇದುವರೆಗೂ ಯಾವುದೇ ಸಭೆ ಕರೆಯದೇ ನಿರ್ಲಕ್ಷ್ಯ ವಹಿಸಿದೆ. ಇದು ಜಿಲ್ಲೆಯ ರೈತರಲ್ಲಿ ಆತಂಕ ಸೃಷ್ಟಿಸಿದ್ದು, ಕೂಡಲೇ ಹೊಸ ಕಾರ್ಯಕಾರಿ ಮಂಡಳಿ ರಚನೆ ಮಾಡಬೇಕು. ಇಲ್ಲದಿದ್ದಲ್ಲಿ ಸಮಿತಿ ಇಲ್ಲವೆಂದು ತೀರ್ಮಾನಿಸಿ, ಹೊಸ ಸಮಿತಿ ರಚನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

1.8 ಟನ್ ಕಬ್ಬು ನುರಿತ

ಜು.6ರಂದು ಪ್ರಾರಂಭವಾದ ಮೈಶುಗರ್ ಕಾರ್ಖಾನೆಯಲ್ಲಿ ಆ.26ರವರೆಗೆ ಸುಮಾರು 1,10,873 ಟನ್ ಕಬ್ಬು ಅರೆಯಲಾಗಿದೆ. ಅಂತೆಯೇ 1,072 ರೈತರಿಗೆ ಟನ್‌ಗೆ 2,820 ರೂ. ಎಫ್‌ಆರ್‌ಪಿ ದರದ ಅನುಗುಣವಾಗಿ 19,58 ಕೋಟಿ ರೂ.ಗಳನ್ನು ಸಂದಾಯ ಮಾಡಿರುವುದು ಸಂತಸದ ವಿಚಾರ ಎಂದರು.

ಪ್ರತಿದಿನ 500ಕ್ಕೂ ಹೆಚ್ಚು ಎತ್ತಿನಗಾಡಿಯಲ್ಲಿ ಕಬ್ಬು ಸರಬರಾಜು ಮಾಡಲಾಗುತ್ತಿದೆ. ಈ ಸಾಲಿನಲ್ಲಿ 5 ಲಕ್ಷ ಟನ್ ಕಬ್ಬು ಅರೆಯುವ ಗುರಿ ಹೊಂದಿರುವುದರಿಂದ ಕಾರ್ಖಾನೆ ವ್ಯಾಪ್ತಿಯ ರೈತರು ಮೈಶುಗರ್‌ಗೆ ಕಬ್ಬು ಸರಬರಾಜು ಮಾಡಬೇಕು ಎಂದು ಮನವಿ ಮಾಡಿದರು.

ಭಾರತದ ಹೆಮ್ಮೆಯ ಇಸ್ರೋ ಸಂಸ್ಥೆಯಿಂದ ನಡೆಸಿದ ಚಂದ್ರಯಾನ-೩ ಯಶಸ್ವಿಯಾಗಿದೆ. ಇದಕ್ಕೆ ಸಂಸ್ಥೆಯಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಹಗಲಿರುಳು ಶ್ರಮಿಸಿದ ಎಲ್ಲರಿಗೂ ಕಬ್ಬು ಬೆಳೆಗಾರರ ಪರವಾಗಿ ಧನ್ಯವಾದ ಹೇಳುತ್ತೇನೆ. ಮುಂದಿನ ದಿನದಲ್ಲಿ ಇನ್ನಷ್ಟು ಸಾಧನೆ ಮಾಡುವಂತಾಗಲಿ ಎಂದು ಹಾರೈಸಿದರು.

ಗೋಷ್ಠಿಯಲ್ಲಿ ಸಂಘದ ಪತ್ರಿಕಾ ಕಾರ್ಯದರ್ಶಿ ಎಂ.ಜೆ.ನಾಗರಾಜು, ನಿರ್ದೇಶಕರಾದ ಬಿ.ಮಾದೇಗೌಡ, ಅಶೋಕ್, ಸಾಮಾಜಿಕ ಹೋರಾಟಗಾರ ತುಳಸೀಧರ್ ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!