Sunday, November 22, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಮದ್ದೂರು ತಮಿಳು ಕಾಲೋನಿ ಸಮಸ್ಯೆ ಬಗೆಹರಿಸದ ಸ್ಲಂ ಬೋರ್ಡ್ ಕಚೇರಿಗೆ ಮುತ್ತಿಗೆ

ಮದ್ದೂರು ತಮಿಳು ಕಾಲೋನಿಯನ್ನು ಕೊಳಗೇರಿ ಅಭಿವೃದ್ದಿ ಮಂಡಳಿಗೆ ಹಸ್ತಾಂತರಿಸಿ, ಸರ್ವೆ ನಡೆಸಿ, ಅಲ್ಲಿನ ನಿವಾಸಿಗಳಿಗೆ ಹಕ್ಕುಪತ್ರ ವಿತರಿಸುವಂತೆ ಜಿಲ್ಲಾಧಿಕಾರಿಯವರು ಆದೇಶ ನೀಡಿದ್ದರೂ, ಆ ನಿಟ್ಟಿನಲ್ಲಿ ಕ್ರಮ ಕೈಗೊಳ್ಳದ ಮಂಡ್ಯ ಕೊಳಗೇರಿ ಅಭಿವೃದ್ದಿ ಮಂಡಳಿಗೆ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ನೇತೃತ್ವದಲ್ಲಿ ಶನಿವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಯಿತು.

ಹೋರಾಟಗಾರರು ಈ ಹಿಂದೆ ಅನಿರ್ದಿಷ್ಟಾವದಿ ಧರಣಿ ಕೈಗೊಂಡಾಗ ಜಿಲ್ಲಾಧಿಕಾರಿ ಡಾ.ಕುಮಾರ ಅವರು, ಧರಣಿನಿರತರು ಹಾಗೂ ಸಂಬಂಧಿಸಿದ ಅಧಿಕಾರಿಗಳ ಸಭೆ ಕರೆದು, ಕೂಡಲೇ ಮದ್ದೂರು ತಮಿಳು ಕಾಲೋನಿಯನ್ನು ಸರ್ವೆ ನಡೆಸಿ, ಕೊಳಗೇರಿ ಅಭಿವೃದ್ದಿ ಮಂಡಳಿಗೆ ಹಸ್ತಾಂತರಿಸಿ, ಅಲ್ಲಿನ ವಾಸ ಮಾಡುತ್ತಿರುವ ನಿವಾಸಿಗಳಿಗೆ ಹಕ್ಕುಪತ್ರಗಳನ್ನು ನೀಡಿ ಎಂದು ಸೂಚಿಸಿದ್ದರು. ಆದರೆ ಮಂಡಳಿಯ ಅಧಿಕಾರಿಗಳು ಜಿಲ್ಲಾಧಿಕಾರಿ ಆದೇಶಕ್ಕೆ ಸೊಪ್ಪು ಹಾಕುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಘೋಷಣೆಗಳನ್ನು ಕೂಗಿದರು.

ಮದ್ದೂರು ಪಟ್ಟಣದ ಕೆ.ಇ.ಬಿ. ಕಚೇರಿ ಮುಂಭಾಗದಲ್ಲಿರುವ ತಮಿಳು ಕಾಲೋನಿಯಲ್ಲಿ ಸುಮಾರು 70 ವರ್ಷಗಳಿಂದ ಸುಮಾರು 114 ಕುಟುಂಬಗಳು ವಾಸವಿದ್ದು, ಅವರ ಹೆಸರಿನಲ್ಲಿ ಯಾವ ದಾಖಲೆಗಳು ಇಲ್ಲ, ಈ ಕಾರಣದಿಂದ ಪಟ್ಟಭದ್ರ ಹಿತಾಸಕ್ತಿಗಳು ಆ ಜಾಗವನ್ನು ಕಬಳಿಸಲು ಸಂಚು ರೂಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ನೇತೃತ್ವದಲ್ಲಿ ಹೋರಾಟ ನಡೆಸಲಾಗುತ್ತಿದೆ, ನಮ್ಮ ಕೆಲಸಗಳನ್ನು ಮಾಡಿಕೊಡಲು ಕೊಳಚೆ ಅಭಿವೃದ್ದಿ ಮಂಡಳಿ ಆದಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ಧಾರೆಂದು ದೂರಿದರು.

ಕೊಳಗೇರಿ ಅಭಿವೃದ್ದಿ ಮಂಡಳಿಯ ಎಇಇ ಭೂಗಳ್ಳರ ಜೊತೆ ಶಾಮೀಲಾಗಿದ್ದು, ವಸತಿ ರಹಿತರ ಕೆಲಸ ನಿರ್ವಹಿಸಲು ಹಿಂದೇಟು ಹಾಕುತ್ತಿದ್ದಾರೆ, ಹಾಗಾಗಿ ಅವರನ್ನು ವರ್ಗಾವಣೆ ಮಾಡಿ, ದಕ್ಷ ಅಧಿಕಾರಿಗಳನ್ನು ನೇಮಕ ಮಾಡಬೇಕೆಂದು ಒತ್ತಾಯಿಸಿದರು.

ಸರ್ಕಾರಿ ಜಾಗಗಳಲ್ಲಿ ಘೋಷಣೆಯಾಗಿರುವ ಕೊಳಚೆ ಪ್ರದೇಶಗಳ ಸ್ಥಳಕ್ಕೆ ಆರ್.ಟಿ.ಸಿ. ಬದಲಾವಣೆಯ ಕೆಲಸ ತುರ್ತು ಆಗಬೇಕಿದೆ. ಮಂಡ್ಯ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಕೊಳಚೆ ಪ್ರದೇಶಗಳಿಗೆ ಹಕ್ಕುಪತ್ರ ವಿತರಿಸುವ ಸರ್ವೆ ಕಾರ್ಯ ನಡೆಸಬೇಕು.

ವಸತಿ ರಹಿತ ಕುಟುಂಬಗಳು ಮತ್ತು ಕೊಳಚೆ ಪ್ರದೇಶಗಳನ್ನು ಗುರುತಿಸಿ ಜಿಲ್ಲಾದ್ಯಂತ ಎಷ್ಟು ವಸತಿಗಳು ಬೇಕಿದೆ ಎನ್ನುವುದರ ಸಮೀಕ್ಷೆ ಮಾಡಿ ಸರ್ಕಾರಕ್ಕೆ ವರದಿ ನೀಡಿ ಡಿ.ಪಿ.ಆರ್‌. ಮಾಡಿ ಕಳಿಸಬೇಕು ವಸತಿ ಸೌಲಭ್ಯವನ್ನು ನೀಡಬೇಕು ಹಾಗೂ ನಗರ ಪ್ರದೇಶಗಳಲ್ಲಿ ಹೆಚ್ಚುವರಿ ಕುಟುಂಬಗಳು ಒಂದೇ ಮನೆಯಲ್ಲಿ ವಾಸ ಮಾಡುತ್ತಿರುವುದನ್ನು ಸಮೀಕ್ಷಿಸಿ ಸರ್ಕಾರಕ್ಕೆ ಮತ್ತು ಜಿಲ್ಲಾಡಳಿತಕ್ಕೆ ವರದಿ ನೀಡಿ ಬೇಕಿರುವ ಭೂಮಿಯನ್ನು ಮಂಜೂರು ಮಾಡಿಸಿ ಹೆಚ್ಚುವರಿ ಕುಟುಂಬಗಳಿಗೆ ನೀಡಬೇಕೆಂದು ಆಗ್ರಹಿಸಿದರು.

ಹೋರಾಟ ಸಮಿತಿ ರಾಜ್ಯ ಕಾರ್ಯದರ್ಶಿ ಸಿದ್ದರಾಜು, ಮುಖಂಡರಾದ ವೈದುನ, ಉಮಾ, ಚಂದ್ರಶೇಖರ್, ರೂಪ, ಲತಾ, ಚಲುವೆ ಮತ್ತಿತರರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ