ಪ್ರಸ್ತುತ ರಾಜಕೀಯ ಬೆಳವಣಿಗೆಯಲ್ಲಿ ಬಿಜೆಪಿ ಪಕ್ಷದ ಜೊತೆ ಜೆಡಿಎಸ್ ಮೈತ್ರಿ ಅನಿವಾರ್ಯವಾಗಿದ್ದು ಇಂತಹ ಪರಿಸ್ಥಿತಿಗೆ ಕಾಂಗ್ರೆಸ್ ಹಾಗೂ ಸಚಿವ ಚಲುವರಾಯಸ್ವಾಮಿ ಕೂಡ ಕಾರಣ ಎಂದು ಮಾಜಿ ಶಾಸಕ ಕೆ. ಸುರೇಶ್ ಗೌಡ ಆರೋಪಿಸಿದರು.
ಮಂಡ್ಯದ ಬಂದೀಗೌಡ ಬಡಾವಣೆಯಲ್ಲಿರುವ ಜೆಡಿಎಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿ ಜೊತೆ ಜೆಡಿಎಸ್ ಪಕ್ಷ ಮೈತ್ರಿ ಮಾಡಿಕೊಳ್ಳುವಂತಹ ಪರಿಸ್ಥಿತಿಗೆ ಕಾಂಗ್ರೆಸ್ ಪಕ್ಷ ಹಾಗೂ ಚಲುವರಾಯಸ್ವಾಮಿ ನೇರ ಕಾರಣ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಅದನ್ನು ಬೀಳಿಸಲು ಚಲುವರಾಯಸ್ವಾಮಿ ಯಾರೊಂದಿಗೆಲ್ಲ ಮಾತನಾಡಿದರು ಎಂಬ ಸಂಗತಿ ತಿಳಿದಿದೆ. ಸತ್ಯ ಏನೆಂಬುದು ಆತನ ಎದೆಯೊಳಗೆ ಇದೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಬೀಳಲು ಚಲುವರಾಯಸ್ವಾಮಿ ನಡೆಸಿದ ರಾಜಕೀಯ ವ್ಯಭಿಚಾರವೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಯುಪಿಎ ಸರ್ಕಾರ ರಚಿಸಲು ದೇವೇಗೌಡರು ಎಷ್ಟೆಲ್ಲಾ ಸಹಕಾರ ನೀಡಿದ್ದರು ಎಂಬುದು ಎಲ್ಲರಿಗೂ ಗೊತ್ತಿದೆ. ಆದರೆ ಇಂದು ಐ ಎನ್ ಡಿ ಐ ಎ ಒಕ್ಕೂಟದಲ್ಲಿ ಜೆಡಿಎಸ್ ಇಲ್ಲ. ಆದ್ದರಿಂದ ಅನಿವಾರ್ಯವಾಗಿ ಬಿಜೆಪಿ ಜೊತೆಗೆ ಹೋಗಲೇಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ದೈನೇಸಿ ಸ್ಥಿತಿ
135 ಸ್ಥಾನ ಗೆದ್ದಿರುವ ಕಾಂಗ್ರೆಸ್ ಪಕ್ಷದಲ್ಲಿ ಲೋಕಸಭಾ ಚುನಾವಣೆಗೆ ಸೂಕ್ತ ಅಭ್ಯರ್ಥಿಗಳು ಇಲ್ಲವೇ? ಅವರೇಕೆ ಅನ್ಯ ಪಕ್ಷಗಳ ನಾಯಕರನ್ನು ಸೆಳೆಯುತ್ತಿದ್ದಾರೆ? ನುಡಿದಂತೆ ನಡೆದಿದ್ದೇವೆ ಎನ್ನುವ ಸರ್ಕಾರ 135 ಸ್ಥಾನ ಗೆದ್ದಿದ್ದರೂ ಕೂಡ ಅನ್ಯ ಪಕ್ಷದವರ ಮನೆ ಬಾಗಿಲು ತಟ್ಟುತ್ತಿರುವ ದೈನೇಸಿ ಸ್ಥಿತಿಗೆ ಇಳಿದಿದೆ ಎಂದು ವ್ಯಂಗ್ಯವಾಡಿದರು.
ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಇಂದ ನನಗೆ ಬಹಳ ನೋವಾಗುತ್ತಿದೆ ಎಂಬ ಚಲುವರಾಯಸ್ವಾಮಿಯವರ ಮಾತಿಗೆ ತಿರುಗೇಟು ನೀಡಿದ ಅವರು, ಅವರಿಗೆ ಜನ ಆಶೀರ್ವಾದ ಮಾಡಿದ್ದಾರೆ. ಚೆನ್ನಾಗಿ ಮೇಯ್ದು ಕೊಳ್ಳಲಿ. ಮಲ್ಲಿಕಾರ್ಜುನ ಖರ್ಗೆಯವರನ್ನು ಸಿಎಂ ಮಾಡುತ್ತೇವೆ ಎಂದು ಕಾಂಗ್ರೆಸ್ ಪಕ್ಷ ಹೇಳಿತ್ತು. ಆದರೆ ಅವರನ್ನು ಸಿಎಂ ಮಾಡಲಾಗಿದೆಯೇ ಎಂದು ಪ್ರಶ್ನಿಸಿದರು.
ಅನ್ಯ ಪಕ್ಷಗಳಿಂದ ಅಭ್ಯರ್ಥಿಗಳನ್ನು ಸೆಳೆಯುವ ಹೀನಾಯ ಸ್ಥಿತಿಗೆ ಕಾಂಗ್ರೆಸ್ ಪಕ್ಷ ತಲುಪಿದೆ.ನರೇಂದ್ರ ಮೋದಿ ಅವರನ್ನು ವಿಶ್ವವೇ ಹೊಗಳುತ್ತಿದೆ. ಅಂತಹದ್ರಲ್ಲಿ ನಾವುಗಳು ಹೊಗಳುವುದರಲ್ಲಿ ತಪ್ಪೇನಿದೆ ಎಂದರು.
ಪಕ್ಷದ ತೀರ್ಮಾನಕ್ಕೆ ಬದ್ಧ
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ನಾಯಕರಾದ ದೇವೇಗೌಡರು ಮತ್ತು ಕುಮಾರಸ್ವಾಮಿ ಅವರ ತೆಗೆದು ಕೊಳ್ಳುವ ತೀರ್ಮಾನಕ್ಕೆ ಬದ್ಧವಾಗಿದ್ದೇವೆ. ನಾನು ಲೋಕಸಭಾ ಚುನಾವಣೆಯ ಅಭ್ಯರ್ಥಿ ಅಲ್ಲ. ಆದರೆ ಪಕ್ಷ ತೀರ್ಮಾನಿಸಿದರೆ, ಅದಕ್ಕೆ ಬದ್ಧನಾಗಿ ಇರುತ್ತೇನೆ. ಅತೃಪ್ತ ಆತ್ಮಗಳು ಎಲ್ಲಾ ಪಕ್ಷದಲ್ಲೂ ಇರುತ್ತವೆ. ಅದರಂತೆ ಜೆಡಿಎಸ್ ಪಕ್ಷದಲ್ಲೂ ಇವೆ. ಕಾಂಗ್ರೆಸ್ ಪಕ್ಷದಲ್ಲೂ ಇವೆಬಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಡಿ. ರಮೇಶ್, ಮಾಜಿ ಶಾಸಕ ಅನ್ನದಾನಿ,ಮನ್ಮುಲ್ ಮಾಜಿ ಅಧ್ಯಕ್ಷ ಬಿ.ಆರ್.ರಾಮಚಂದ್ರು ಮತ್ತಿತರರಿದ್ದರು.




