Thursday, September 19, 2024

ಪ್ರಾಯೋಗಿಕ ಆವೃತ್ತಿ

ಒಂದು ದೇಶ-ಒಂದು ಚುನಾವಣೆ ಕಲ್ಪನೆಯಲ್ಲಿ ಬಿಜೆಪಿ ರಾಜಕೀಯ, ಸೈದ್ಧಾಂತಿಕ ಉದ್ದೇಶ ಹೊಂದಿದೆ; ಶಿವಸುಂದರ್

ಒಂದು ದೇಶ-ಒಂದು ಚುನಾವಣೆ ಕಲ್ಪನೆಯಲ್ಲಿ ಬಿಜೆಪಿ ರಾಜಕೀಯ, ಸೈದ್ಧಾಂತಿಕ ಉದ್ದೇಶ ಹೊಂದಿದೆ ಮತ್ತು ಒಂದು ಚುನಾವಣೆ ನಡೆದರೆ ಹಣ ಉಳಿತಾಯವಾಗುತ್ತದೆ ಎನ್ನುವುದು ಹಾಸ್ಯಾಸ್ಪದ ಸಮರ್ಥನೆ ಎಂದು ಹಿರಿಯ ಚಿಂತಕ ಶಿವಸುಂದರ್ ಅವರು ಹೇಳಿದ್ದಾರೆ.

ಬೆಂಗಳೂರಿನ ಭಾರತೀಯ ವಿದ್ಯಾಭವನ ಕೆ.ಆರ್.ವಿ.ಸಭಾಂಗಣದಲ್ಲಿ ಚಿಂತನ ಕರ್ನಾಟಕ ವೇದಿಕೆಯ ವತಿಯಿಂದ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಶಿವಸುಂದರ್ ಅವರು, ಚುನಾವಣೆಗಾಗಿ ಇಡೀ ವಿಶ್ವದಲ್ಲಿಯೇ ಹೆಚ್ಚು ಹಣ ಖರ್ಚು ಮಾಡಿರುವ ಪಕ್ಷ ಬಿಜೆಪಿ ಎಂಬುದು ಎಲ್ಲರಿಗೂ ತಿಳಿದಿದೆ. ಇತರೆ ಪಕ್ಷಗಳು ಬೆಳೆಯಬಾರದು ಎಂದು ಒಂದು ದೇಶ, ಒಂದು ಚುನಾವಣೆ’ ಪ್ರಸ್ತಾಪವನ್ನು ಬಿಜೆಪಿ ಮುಂದಿಟ್ಟಿದೆ ಎಂದು ಹೇಳಿದ್ದಾರೆ.

ಒಂದು ದೇಶ-ಒಂದು ಚುನಾವಣೆ ನಡೆದರೆ ಹಣ ಉಳಿತಾಯವಾಗುತ್ತದೆ ಎನ್ನುವುದು ಹಾಸ್ಯಾಸ್ಪದ ಸಮರ್ಥನೆ. ಬಿಜೆಪಿ ನೂರು ವರ್ಷಗಳ ಅಜೆಂಡಾ ಮುಂದಿಟ್ಟು ಮಾತನಾಡುತ್ತಿದೆ. ಈ ಕಲ್ಪನೆಯ ಹಿಂದೆ ರಾಜಕೀಯ ಮತ್ತು ಸೈದ್ಧಾಂತಿಕ ಉದ್ದೇಶವಿದೆ ಎಂದು ಹೇಳಿದ್ದಾರೆ.

ಸಂವಾದದಲ್ಲಿ ಸಿಪಿಎಂ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಡಾ.ಕೆ.ಪ್ರಕಾಶ್ ಮಾತನಾಡಿ, ಒಂದು ದೇಶ-ಒಂದು ಚುನಾವಣೆ ಕಲ್ಪನೆ ಒಕ್ಕೂಟ ವ್ಯವಸ್ಥೆಯ ಮೇಲಿನ ದಾಳಿಯಾಗಿದೆ. ಇದು ಪ್ರಾದೇಶಿಕ ಆಶಯಗಳನ್ನು ನಾಶ ಮಾಡುತ್ತದೆ ಎಂದು ಹೇಳಿದ್ದಾರೆ.

ಇದೇ ವೇಳೆ ಜೆಡಿಎಸ್ ವಕ್ತಾರ ಸಿ.ಎಂ.ಫೈಜ್ ಮಾತನಾಡಿ, ಒಂದು ದೇಶ ಒಂದು ಚುನಾವಣೆ, ಆಧುನಿಕ ಹಿಟ್ಲರ್ ಪಡೆಗಳು ತಂದಿರುವ ಒಂದು ಪ್ರಸ್ತಾಪವಾಗಿದೆ. ಸಂವಿಧಾನದ ಹಲವು ವಿಧಿಗಳನ್ನು ತಿದ್ದುಪಡಿ ಮಾಡಬೇಕಾಗುತ್ತದೆ. ಖರ್ಚು ಉಳಿತಾಯ ಎಂಬುವುದು ದೊಡ್ಡ ಸುಳ್ಳು ಎಂದು ಹೇಳಿದ್ದಾರೆ.ಪದೇ ಪದೇ ಚುನಾವಣೆ ನಡೆದರೆ ಸಮಯ ಹಾಳಾಗುತ್ತದೆ ಎಂದು ಹೇಳುವವರು ಮುಂದಿನ ದಿನಗಳಲ್ಲಿ 15 ವರ್ಷಗಳಿಗೊಮ್ಮೆ ಚುನಾವಣೆ ನಡೆಸಲು  ಸಮಿತಿ ರಚಿಸಲು ಮುಂದಾಗುತ್ತಾರೆ ಎಂದು ಹೇಳಿದ್ದಾರೆ.

ಎಎಪಿಯ ಪೃಥ್ವಿ ರೆಡ್ಡಿ ಮಾತನಾಡಿ, ಬಿಜೆಪಿಯ ಅಜೆಂಡಾ ಇರುವುದೇ ಒಂದು ನಾಯಕ, ಒಂದು ಪಕ್ಷ ಎಂಬುದಾಗಿದೆ. ರಾಷ್ಟ್ರೀಯ, ರಾಜ್ಯ, ಮುನ್ಸಿಪಲ್, ಹಾಗೂ ಪಂಚಾಯತ್ ಚುನಾವಣೆಗಳ ವಿಷಯಗಳೇ ಬೇರೆ ಬೇರೆಯಾಗಿದೆ. ಆದರೆ ಬಿಜೆಪಿಗೆ ಯಾವುದೇ ವಿಷಯ ಮತ್ತು ನಾಯಕನಿಲ್ಲದ ಕಾರಣ ಈ ರೀತಿಯಾಗಿ ಗೊಂದಲ ಸೃಷ್ಠಿಸಲು ಮುಂದಾಗಿದೆ ಎಂದರು.

ಸಿಪಿಐಎಂಎಲ್ ರಾಜ್ಯ ಕಾರ್ಯದರ್ಶಿ ಕ್ಲಿಫ್ಟನ್ ಡಿ.ರೊಸಾರಿಯೊ ಮಾತನಾಡಿ, ಒಂದು ದೇಶ, ಒಂದು ಚುನಾವಣೆ ಕಲ್ಪನೆಗೆ ತಮಗೆ ಬೇಕಾದಂತಹ ವರದಿ ಬರೆದುಕೊಡಲು ಹೊಸ ಸಮಿತಿ ರಚನೆ ಮಾಡಿದ್ದಾರೆ. ಸಂಪೂರ್ಣವಾಗಿ ಸಂವಿಧಾನದ ಆಶಯಗಳನ್ನು ಬದಿಗಿಟ್ಟು ಸರ್ಜರಿ ಮಾಡಲಾಗುತ್ತಿದೆ. ಸಂವಿಧಾನ ಒಪ್ಪದ ಆರೆಸ್ಸೆಸ್ ನಾಯಕ ಗೋಲ್ವಾಲ್ಕರ್ ಅವರ ಆಶಯದಂತೆ ರಾಜಕೀಯ ಯಜಮಾನಿಕೆಗಾಗಿ ಇದನ್ನು ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಸಂವಾದದಲ್ಲಿ ಚಿಂತಕ ಎ.ನಾರಾಯಣ, ರಂಗಭೂಮಿ ಕಲಾವಿದೆ ಸುಷ್ಮಾ ವೀರ್, ಸರ್ವೋದಯ ಕರ್ನಾಟದ ಪ್ರಧಾನ ಕಾರ್ಯದರ್ಶಿ ಪ್ರಸನ್ನ ಎನ್, ಕೆಪಿಸಿಸಿ ವಕ್ತಾರ ಮಂಜುನಾಥ್ ಅದ್ದೆ, ಎಸ್‍ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಭಾಸ್ಕರ ಪ್ರಸಾದ್, ಕರ್ನಾಟಕ ರಕ್ಷಣಾ ವೇದಿಕೆಯ ಮುಖಂಡ ಚೇತನ್ ಜೀರಾಳ್ ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!