Friday, September 20, 2024

ಪ್ರಾಯೋಗಿಕ ಆವೃತ್ತಿ

ಹೆಚ್ಚು ಪ್ರದೇಶದಲ್ಲಿ ತಮಿಳುನಾಡು ಬೆಳೆ ಬೆಳೆಯುತ್ತಿದೆ- ಬೊಮ್ಮಾಯಿ

ನಿಗಧಿಗಿಂತ ಹೆಚ್ಚು ಪ್ರದೇಶದಲ್ಲಿ ತಮಿಳುನಾಡು ಬೆಳೆ ಬೆಳೆಯುತ್ತಿದೆ, ಈ ವಿಚಾರದ ಬಗ್ಗೆ ರಾಜ್ಯ ಸರ್ಕಾರ ಯಾಕೆ ಹೇಳ್ತಿಲ್ಲ. ಇವರು ಹೇಳೋವರೆಗೂ ಅವರ ಪರ ಆದೇಶ ಆಗ್ತಾನೆ ಇರುತ್ತದೆ. ಕರ್ನಾಟಕ ಸರ್ಕಾರದ ಕೇವಲ ಡಿಫೆನ್ಸ್ ಮಾಡೋದಲ್ಲ, ಅಫೆನ್ಸಿವ್ ಆಗಿಯೂ ಇರಬೇಕು ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

ಮಂಡ್ಯದಲ್ಲಿ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ನಡೆಯುತ್ತಿರುವ ನಿರಂತರ ಹೋರಾಟದಲ್ಲಿ ಭಾಗವಹಿಸಿ ಮಾತನಾಡಿದ ಅವರು, CWRC, CWMA ಅಧಿಕಾರಿಗಳು ನಿಯಮಗಳನ್ನು ಓದಬೇಕು. ತಮಿಳುನಾಡಿನ ಎಷ್ಟು ಬೆಳೆ ಬೆಳೆಯಬೇಕು, ಎಷ್ಟು ನೀರು ಬಳಸಬೇಕು ಎಂಬ ನಿಯಮವಿದೆ‌. ಆದರೆ ಜಲಾಶಯದ ನೀರಿನ ಮಟ್ಟ ನೋಡಿ ಆದೇಶ ಮಾಡ್ತಾರೆ. ನಮ್ಮ ನೀರು ನಮ್ಮ ಹಕ್ಕು ಎಂದವರು ನೀರು ಉಳಿಸಿಕೊಳ್ಳಲಿಲ್ಲ. ತಮಿಳುನಾಡು ಅಕ್ರಮವಾಗಿ ಹೆಚ್ಚು ನೀರು ಬಳಸಿದ್ದಾರೆ. ಅಕ್ರಮ ನೀರಾವರಿಗೆ ಅಕ್ರಮ ನೀರು ಬಳಕೆ ಮಾಡಿದೆ ತಮಿಳುನಾಡು ಎಂದು ಆರೋಪಿಸಿದರು.

ಈ ಹಿಂದೆಯೂ ನೀರು ಬಿಡಲು ಸುಪ್ರೀಂ ಆದೇಶ ಮಾಡಿತ್ತು. ಆದರೆ ನಾನು ಅಧಿಕಾರದಲ್ಲಿದ್ದಾಗ ನೀರು ಬಿಟ್ಟಿರಲಿಲ್ಲ. ದೆಹಲಿಯಲ್ಲಿ ನಮ್ಮ ವಕೀಲರನ್ನು ಭೇಟಿ ಮಾಡಿದಾಗ ನೀರು ಬಿಡಿ ವಾದ ಮಾಡ್ತೀವಿ ಎಂದರು. ನೀರು ಬಿಟ್ಟಮೇಲೆ ನಿಮ್ಮ ಅವಶ್ಯಕತೆ ಏನಿದೆ ಎಂದು ಕೇಳಿದೆ. ಮತ್ತೊಬ್ಬ ವಕೀಲ ಉದಯ್ ಹೊಳ್ಳಾರನ್ನು ಸಂಪರ್ಕಿಸಿದಾಗ ವಾದ ಮಾಡಲು ತಯಾರಾದರು. ಆ ನಂತರ ನಮ್ಮ ವಕೀಲರು ನಾವೇ ವಾದ ಮಾಡ್ತೀವಿ ಎಂದ್ರು. ಅದೃಷ್ಟಕ್ಕೆ ಚೆನ್ನಾಗಿ ವಾದ ಮಾಡಿದ್ರು. ನೀರು ಬಿಡುವ ಪ್ರಮಾಣ ಕಡಿಮೆ ಮಾಡಿ, 2 ತಿಂಗಳ ಕಾಲಾವಕಾಶ ನೀಡಿದ್ರು. ಪುಣ್ಯಕ್ಕೆ ಮಳೆಯೂ ಹೆಚ್ಚು ಬಿದ್ದು ನೀರಿನ ಸಮಸ್ಯೆಯೂ ಬಗೆಹರಿಯಿತು ಎಂದರು.

ಮೇಕೆದಾಟು ಯೋಜನೆಗೆ ತಮಿಳುನಾಡು ವಿರೋಧ ಮಾಡ್ತಾ ಬಂದಿದೆ. ನಮ್ಮ ಅವಧಿಯಲ್ಲಿ ಮೇಕೆದಾಟು ಯೋಜನೆಗೆ ಡಿಪಿಆರ್ ರೂಪಿಸಲಾಗಿತ್ತು. ಡಿಪಿಆರ್ ವಿರುದ್ಧ ತಮಿಳುನಾಡು ಸುಪ್ರೀಂ ಕೋರ್ಟ್‌ಗೆ ಹೋಗಿದೆ.
ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಸಮರ್ಥ ವಾದ ಮಂಡಿಸಿ ಯೋಜನೆಗೆ ಅನುಮತಿ ಪಡೆಯಬೇಕು.
ಈ ರಾಜ್ಯ ಸರ್ಕಾರ ಮೊದಲಿಂದಲೂ ಎಡವಿದೆ. ಎಲ್ಲಾ ಲೂಟಿ ಆದಮೇಲೆ ಕೋಟೆ ಬಾಗಿಲು ಹಾಕಿದ್ದೇವೆ ಎನ್ನುತ್ತೇವೆ. ನೀರು ಬಿಡುವ ಮುನ್ನ ಸುಪ್ರೀಂ‌ಗೆ ಅರ್ಜಿ ಹಾಕಬೇಕಿತ್ತು ಎಂದರು.

ವಕೀಲರ ಸಭೆ ಮಾಡ್ತೀರಾ?, ಏನು ನಿರ್ಣಯ ಆಗುತ್ತದೆ ಗೊತ್ತಾಗಲ್ಲ. ಕಾವೇರಿ ನೀರಿನ ವಿಚಾರ ಹುಡುಗಾಟದ ವಿಷಯ ಆಗಬಾರದು. ಜೂನ್, ಜುಲೈನಲ್ಲಿ ಕೆರೆ,ಕಟ್ಟೆಗಳು, ಕಾಲುವೆಗೆ ಬಿಡಬೇಕಿತ್ತು. ಆಗ ನೀರು ನಮ್ಮ ಭೂಮಿಯಲ್ಲಿರುತ್ತಿತ್ತು. ಆದರೆ ನೀವು ನೀರು ಶೇಕರಣೆ ಮಾಡಿ ತಮಿಳುನಾಡಿಗೆ ಹರಿಸುವಂತೆ ಆಗಿದೆ.
ಕಾವೇರಿ ತಾಯಿ‌ಯಲ್ಲಿ ಪ್ರಾರ್ಥಿಸುತ್ತೇನೆ. ಸಮೃದ್ಧ ಮಳೆಯಾಗಿ ಸಂಕಷ್ಟ ದೂರ ಆಗಲಿ ಎಂದರು.

ಡಿಕೆಶಿ ಅವರು ಕೆ.ಆರ್‌.ಎಸ್‌‌.ಗೆ ಒಳಹರಿವು ಹೆಚ್ಚಿದೆ, ನಾವು ನೀರು ಬಿಡ್ತಾ ಇಲ್ಲ ಅಂತಾರೆ. ಆದ್ರೆ ನಾನು ಮಾಹಿತಿ ತೆಗೆದುಕೊಂಡಿದ್ದಾಗ ಹೇಳಿದ್ದು 2 ಸಾವಿರ ಕ್ಯೂಸೆಕ್ ಬಿಡ್ತಾ ಇದಾರೆ ಎಂದು ಗೊತ್ತಾಗಿದೆ. ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡ್ತಾ ಇದ್ದಾರೆ. ಸಂಕಷ್ಟ ಸೂತ್ರಗಳಲ್ಲಿ ಎರಡು ಮಾಡೆಲ್ ಇವೆ. ಗಣಿತಶಾಸ್ತ್ರದ ಒಂದು  ಮಾಡೆಲ್ ಇದೆ. ಏನು ಮಾಡಿದ್ರೆ ಒಳ್ಳೆಯದು ಎಂದು ತಜ್ಞರ ಜೊತೆ ಚರ್ಚೆ ಮಾಡಿ. ರಾಜ್ಯ ಒಳ್ಳೆಯದು ಆದ್ರೆ ನಾವು ಬರ್ತೀವಿ ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವ ಆರ್.ಅಶೋಕ್, ಬಿಜೆಪಿ ಮುಖಂಡರಾದ ಅಶ್ವತ್ ನಾರಾಯಣ್, ಅಶೋಕ್ ಜಯರಾಂ, ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಪಿ.ಉಮೇಶ್ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!