Friday, September 20, 2024

ಪ್ರಾಯೋಗಿಕ ಆವೃತ್ತಿ

”ಅಪ್ಪು” ಅಭಿಮಾನಿಗಳಿಗೆ ದೊಡ್ಮನೆ ಕುಟುಂಬ ಆಭಾರಿ- ಅಶ್ವಿನಿ ಪುನೀತ್ ರಾಜ್ ಕುಮಾರ್

ರಾಜ್ಯಾದ್ಯಂತ ಅಪ್ಪು ಅಭಿಮಾನಿಗಳು ಒಂದಲ್ಲ ಒಂದು, ಅಪ್ಪು ಅವರ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ಅಪ್ಪು ಅಗಲಿಕೆಯ ದುಃಖವನ್ನು ಮರೆಯುವ ಶಕ್ತಿ ತುಂಬುತ್ತಿರುವ ಅಭಿಮಾನಿ ದೇವರುಗಳಿಗೆ ದೊಡ್ಮನೆ ಕುಟುಂಬವು ಆಭಾರಿಯಾಗಿದೆ ಎಂದು ಪುನೀತ್ ರಾಜ್ ಕುಮಾರ್ ಅವರ ಧರ್ಮಪತ್ನಿ ಅಶ್ವಿನಿ ಹೇಳಿದರು.
ಕೆ.ಆರ್.ಪೇಟೆ ಪಟ್ಟಣದಲ್ಲಿ ಪುನೀತ್ ಯುವ ಬ್ರಿಗೇಡ್ ಯುವ ಬಳಗ ಪ್ರತಿಷ್ಠಾಪಿಸಿರುವ ಪುನೀತ್ ರಾಜಕುಮಾರ್ ಅವರ ಪುತ್ಥಳಿಯನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು. ಪುನೀತ್ ರಾಜಕುಮಾರ್ ಅವರ ಪುತ್ಥಳಿ ಲೋಕಾರ್ಪಣೆ ಸಮಾರಂಭದಲ್ಲಿ ಸ್ವತಃ ಪುನೀತ್ ಧರ್ಮಪತ್ನಿ ಅಶ್ವಿನಿ ಅವರು ಭಾಗವಹಿಸಿದ್ದು ಅಪ್ಪು ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿತ್ತು.
ಅಶ್ವಿನಿ ಪುನೀತ್ ರಾಜಕುಮಾರ್ ಅವರು ಆಗಮಿಸುತ್ತಿದ್ದಂತೆಯೇ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಹಾಗೂ ಪುನೀತ್ ಸಾಮ್ರಾಜ್ಯದ ಯುವ  ಬಳಗದ ಪದಾಧಿಕಾರಿಗಳು ಪಟಾಕಿಗಳನ್ನು ಸಿಡಿಸಿ ಪುಷ್ಪವೃಷ್ಟಿ ಮಾಡಿ  ಹೃದಯಸ್ಪರ್ಶಿ ಸ್ವಾಗತ ನೀಡಿದರು. ಕನ್ನಡ ಬಾವುಟಗಳು ಹಾರಾಡಿದವು. ಪುನೀತ್ ಅವರ ಪರವಾಗಿ ಜಯಘೋಷಗಳು ಮೊಳಗಿದವು.
ಶಾಸಕ ಹೆಚ್.ಟಿ.ಮಂಜು ಅವರು  ವೇದಿಕೆ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು. ಬಳಿಕ ಮಾತನಾಡಿದ ಶಾಸಕರು ಪುನೀತ್ ಅವರು ನಟಿಸಿದ ಪ್ರತಿಯೊಂದು ಚಿತ್ರದಲ್ಲಿ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಚಿತ್ರಗಳಲ್ಲಿ ನಟಿಸುವ ಮೂಲಕ ರಾಜ್ಯದ ಮನೆ ಮನೆಯ  ಯುವರಾಜರಾಗಿದ್ದರು. ಇಂತಹ ಅಪರೂಪದ ನಟ ಡಾ.ಪುನೀತ್ ರಾಜ್ ಕುಮಾರ್ ಅವರು ದೈಹಿಕವಾಗಿ ನಮ್ಮೊಡಲೆ ಇಲ್ಲದಿದ್ದರೂ ಅವರ ಆದರ್ಶ ಗುಣಗಳು  ನಮ್ಮೆಲ್ಲರಿಗೂ ಆದರ್ಶವಾಗಿವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಮಾಜ ಸೇವಕ ವಿಜಯ್ ರಾಮೇಗೌಡ, ಆರ್.ಟಿ.ಓ ಅಧಿಕಾರಿಗಳ ಸಂಘದ ರಾಜ್ಯಾಧ್ಯಕ್ಷ ಆರ್.ಟಿ.ಓ  ಮಲ್ಲಿಕಾರ್ಜುನ್,  ಜಯಕರ್ನಾಟಕ ಸಂಘಟನೆಯ ರಾಜ್ಯಾಧ್ಯಕ್ಷ ಡಾ. ಜಗದೀಶ್, ಮಂಡ್ಯ ಜಿಲ್ಲಾಧ್ಯಕ್ಷ ಯೋಗಣ್ಣ ಹಾಗೂ ಪುನೀತ್ ಯುವ ಸಾಮ್ರಾಜ್ಯ ಘಟಕದ ಅಧ್ಯಕ್ಷ ಮಹೇಶ್ ಪುನೀತ್ ಪುತ್ಥಳಿ ಲೋಕಾರ್ಪಣೆ ಕಾರ್ಯಕ್ರಮವನ್ನ  ಸಾಕ್ಷೀಕರಿಸಿದರು.
ಕೆ.ಆರ್.ಪೇಟೆ  ಪಟ್ಟಣದ ಸೈ ಸ್ಕೂಲ್ ಆಫ್ ಡ್ಯಾನ್ಸ್, ಪ್ರಿನ್ಸೆಸ್ ಸ್ಕೂಲ್ ಆಫ್ ಡ್ಯಾನ್ಸ್, ನಾಟ್ಯ ನೃತ್ಯ ಶಾಲೆ, ನೃತ್ಯ ಪಯಣ ನಾಟ್ಯ ಶಾಲೆಯ ವಿದ್ಯಾರ್ಥಿಗಳು ಆಕರ್ಶಕ ನೃತ್ಯ ಪ್ರದರ್ಶನ ಹಾಗೂ ಶಾಸ್ತ್ರೀಯ  ಭರತನಾಟ್ಯ ಪ್ರದರ್ಶನ ನೀಡಿ ರಂಜಿಸಿದರು.
ಪುರಸಭೆ ಅಧ್ಯಕ್ಷ ನಟರಾಜು, ಕಾಮಿಡಿ ಕಿಲಾಡಿಗಳು ಖ್ಯಾತಿಯ ನಟ ಶಿವರಾಜ್ ಕೆ.ಆರ್ ಪೇಟೆ, ಭರ್ಜರಿ ಬ್ಯಾಚುಲರ್ಸ್ ಖ್ಯಾತಿಯ ಮಡುವಿನಕೋಡಿ ಮನೋಹರ್  ಗೌಡ, ಮಂಡ್ಯ ರವಿ, ಶೀಳನೆರೆ ಕೇಶವ್, ಕೆ.ಆರ್.ಪೇಟೆ  ಮಂಜುನಾಥ್, ಸಕಲೇಶಪುರದ ಜೂನಿಯರ್ ಪುನೀತ್ ಅಪ್ಪು ಸೇರಿದಂತೆ ಪುನೀತ್ ಅಭಿಮಾನಿಗಳು ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!