Thursday, September 19, 2024

ಪ್ರಾಯೋಗಿಕ ಆವೃತ್ತಿ

ಮೇ 19 ರಂದು ಹೊರಗುತ್ತಿಗೆ ನೌಕರರ ಖಾಯಂಗೆ ಆಗ್ರಹಿಸಿ ಪ್ರತಿಭಟನೆ

ರಾಜ್ಯದ 312 ನಗರ ಸ್ಥಳೀಯ ಸಂಸ್ಥೆಗಳಲ್ಲಿ ನಗರಗಳ ಸ್ವಚ್ಚತೆ, ಕುಡಿಯುವ ನೀರಿನ ಸಮರ್ಪಕ ನಿರ್ವಹಣೆಯಲ್ಲಿ ತೊಡಗಿಕೊಂಡಿರುವ 10000 ಹೆಚ್ಚು ಗುತ್ತಿಗೆ ನೌಕರರು ಹಾಗೂ ಪೌರಕಾರ್ಮಿಕರನ್ನು ಖಾಯಂಗೊಳಿಸುವಂತೆ ಮೇ.19 ರಂದು ರಾಜ್ಯಾದ್ಯಂತ ಏಕಕಾಲಕ್ಕೆ ಪ್ರತಿಭಟನೆ ನಡೆಸುವುದಾಗಿ ನಗರ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಎಂ.ಬಿ.ನಾಗಣ್ಣಗೌಡ ತಿಳಿಸಿದರು.

ಸೋಮವಾರ ಬೆಂಗಳೂರಿನ ಗಾಂಧಿ ಭವನದಲ್ಲಿ ರಾಜ್ಯಸಮಿತಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ರಾಜ್ಯದ 312 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಸ ಸಾಗಿಸುವ ವಾಹನ ಚಾಲಕರು, ಕಸ ನಿರ್ವಹಣೆಯ ಸಹಾಯಕರು, ವಾಟರ್ ಮೆನ್ ಒಳಚರಂಡಿ ಕಾರ್ಮಿಕರು, ಡಾಟ ಆಪರೇಟರು, ಸ್ಮಶಾನ ಕಾವಲುಗಾರರು ಸೇರಿದಂತೆ ನಾನಾ ವಿಭಾಗಗಳಲ್ಲಿ ಕಳೆದ 30 ವರ್ಷಗಳಿಂದ ಪೌರಕಾರ್ಮಿಕರೊಟ್ಟಿಗೆ ದುಡಿಯುತ್ತಾ ಬಂದಿದ್ದಾರೆ. ನಗರಗಳ ಸ್ವಚ್ಚತೆ ಕುಡಿಯುವ ನೀರಿನ ನಿರ್ವಹಣೆಯಲ್ಲಿ ಈ ನೌಕರರ ಪಾತ್ರ ಅಪಾರವಾದುದು.

ತೀವ್ರ ಹೋರಾಟದ ನಂತರ 2107 ರಲ್ಲಿ ಪೌರಕಾರ್ಮಿಕರನ್ನು ಖಾಯಂಗೊಳಿಸಲು ಅಂದಿನ ರಾಜ್ಯ ಸರಕಾರ ನಿರ್ಧರಿಸಿತ್ತು, ಅದೇ ಸಂದರ್ಭದಲ್ಲಿ ಪೌರಕಾರ್ಮಿಕರೊಟ್ಟಿಗೆ ಕರ್ತವ್ಯ ನಿರ್ವಹಿಸುವ ಉಳಿದ ಹೊರಗುತ್ತಿಗೆ ನೌಕರರನ್ನು ಗುತ್ತಿಗೆ ಪದ್ದತಿಯಲ್ಲೆ ಉಳಿಸಿ ತಾರತಮ್ಯ ಎಸಗಿತು.

ನಂತರದಲ್ಲಿ ಪೌರಕಾರ್ಮಿಕರನ್ನು ಸಹ ಸಂಪೂರ್ಣವಾಗಿ ಖಾಯಂಗೊಳಿಸಲಿಲ್ಲ. ಈ ಹಿನ್ನೆಲೆಯಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ನೌಕರರನ್ನು ಹಾಗೂ ಪೌರಕಾರ್ಮಿಕರನ್ನು ಖಾಯಂಗೊಳಿಸಲು ಆಗ್ರಹಿಸಿ ಅಂದು ಮೇ.19 ರಂದು ರಾಜ್ಯಾದ್ಯಂತ ಏಕಕಾಲಕ್ಕೆ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುತ್ತಿದೆ.


ಎಲ್ಲಾ 31 ಜಿಲ್ಲೆಗಳ ನಗರ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ನೌಕರರು/ಪೌರಕಾರ್ಮಿಕರು ಒಗ್ಗೂಡಿ ಈ ಹೋರಾಟ ಹಮ್ಮಿಕೊಂಡಿದ್ದು, ಸರ್ಕಾರ ಈ ಹೋರಾಟಕ್ಕೆ ಸ್ಪಂದಿಸದಿದ್ದಲ್ಲಿ ಒಂದು ತಿಂಗಳ ಗಡುವು ನೀಡಿ ಜುಲೈ 01 ರಿಂದ ರಾಜ್ಯಾದ್ಯಂತ ಸ್ವಚ್ಚತೆ ಕುಡಿಯುವ ನೀರು ಎಲ್ಲ ಸೇವೆಯನ್ನು ಸ್ಥಗಿತಗೊಳಿಸಿ ರಾಜ್ಯದ ಅಯಾ ನಗರ ಸ್ಥಳೀಯ ಸಂಸ್ಥೆಗಳ ಅನಿರ್ದಿಷ್ಟಾವಧಿ ಧರಣಿ ಆರಂಬಿಸಲು ತೀರ್ಮಾನಿಸಲಾಗಿದೆ.

ಈ ಹೋರಾಟಕ್ಕೆ ಸರ್ಕಾರದಿಂದ ಸೂಕ್ತ ಪ್ರತಿಸ್ಪಂದನೆ ದೊರಕದಿದ್ದಲ್ಲಿ ರಾಜ್ಯಾದ್ಯಂತ ಹಂತಹಂತವಾಗಿ ಹೋರಾಟ ರೂಪಿಸಲಾಗುವುದು ಎಂದು ಘೋಷಿಸಿದರು.

ಸಭೆಯಲ್ಲಿ ರಾಜ್ಯ ಕಾರ್ಯದರ್ಶಿ ಶ್ರೀನಿವಾಸ್, ರಾಜ್ಯ ಗೌರವಾಧ್ಯಕ್ಷರಾದ ವಿರೇಶ್. ಸಿದ್ರಾಮ್ ಪಾಟೀಲ್, ದಿನೇಶ್.ಪ್ರಕಾಶ್  ಸೇರಿದಂತೆ 30 ಜಿಲ್ಲೆಗಳ ಮುಖಂಡರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!