Thursday, September 19, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಸಾಕ್ಯ ಫೌಂಡೇಶನ್ ಉದ್ಘಾಟನೆ- ಜನಪದ ಉತ್ಸವ 

ಮಂಡ್ಯ ನಗರಕ್ಕೆ ಹೊಂದಿಕೊಂಡಿರುವ ಕಿರಗಂದೂರು ಗ್ರಾಮದ ಅಂಬೇಡ್ಕರ್ ಭವನದಲ್ಲಿ ಗುರುವಾರ ಸಾಕ್ಯ ಫೌಂಡೇಶನ್ ಉದ್ಘಾಟನೆ ಹಾಗೂ ಜನಪದ ಉತ್ಸವ ಕಾರ್ಯಕ್ರಮ ನಡೆಯಿತು.

ನಿವೃತ್ತ ಸಹಾಯಕ ಕೃಷಿ ಅಧಿಕಾರಿ ಎಂ.ಎಲ್ ಜವರಪ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜನಪದವನ್ನು ಸಮಾಜಕ್ಕೆ ಬಿತ್ತರಿಸುವಲ್ಲಿ ಸಂಘ ಸಂಸ್ಥೆಗಳ ಪಾತ್ರ ಗಣನೀಯ. ಜನಪದಕ್ಕೆ ಮಾನವನ ಹುಟ್ಟಿನಷ್ಟೇ ಚರಿತ್ರೆ ಇದ್ದು, ನೆಲಮೂಲದ ಸಂಸ್ಕೃತಿಯ ನಂಟನ್ನು ಹರಳುಗಟ್ಟಿಸಿಕೊಂಡಿದೆ. ಜಾನಪದ ಜನಮುಖಿಯಾಗಿರುವುದರ ಜೊತೆಗೆ ಹಿಂದಿನ ಕಾಲದ ಪರಂಪರೆಯನ್ನು ಮನಮುಟ್ಟಿಸುತ್ತದೆ ಎಂದರು.

ಸ್ವಾತಂತ್ರ ಪೂರ್ವದಲ್ಲಿ ಮಹಾತ್ಮ ಜ್ಯೋತಿರಾವ್ ಫುಲೆ ಅವರು, ಸಂಪ್ರದಾಯವಾದಿಗಳ ಉಪಟಳದ ನಡುವೆಯೂ ಸತ್ಯಶೋಧಕ ಸಮಾಜ ಸಂಸ್ಥೆ ಕಟ್ಟುವ ಮೂಲಕ ಶೋಷಿತ ಸಮುದಾಯಗಳ ಪ್ರಗತಿಗೆ ಮುಂದೆಜ್ಜೆ ಇಟ್ಟದ್ದನ್ನು ಸ್ಮರಿಸಿದರು. ಬುದ್ಧರ ತಾತ್ವಿಕತೆಯ ಅಡಿಯಲ್ಲಿ ಜನಿತವಾಗಿರುವ ಸಾಕ್ಯ ಫೌಂಡೇಶನ್ ಮುಂದಿನ ದಿನಗಳಲ್ಲಿ ಒಳ್ಳೆಯ ಕೆಲಸಗಳನ್ನು ಮಾಡಲಿ ಎಂದು ಶುಭ ಹಾರೈಸಿದರು.

ಕರ್ನಾಟಕ ಸ್ವಾಭಿಮಾನಿ ಸಮಸಮಾಜ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ಲೋಕೇಶ್ ಮೌರ್ಯ ಮಾತನಾಡಿ, ಬುದ್ಧನ ಕುಲ ಸಾಕ್ಯ ಕುಲವಾಗಿತ್ತು, ಬುದ್ದ ಮಧ್ಯಮ ಮಾರ್ಗದ ಪ್ರವರ್ತಕನಾಗಿದ್ದ. ಪ್ರಸ್ತುತ ಸಂದರ್ಭದಲ್ಲಿ ಕರ್ನಾಟಕ ಮತ್ತು ತಮಿಳುನಾಡಿನ ನಡುವೆ ನೀರಿನ ಸಂಘರ್ಷ ತಾರಕಕ್ಕೇರಿದ್ದು ಬುದ್ಧನ ಮಾರ್ಗದಲ್ಲಿ ಈ ಸಮಸ್ಯೆಗೆ ಪರಿಹಾರ ಹುಡುಕಬಹುದು ಎಂದರು.

ರಾಮನಗರ ಸ್ನಾತಕೋತ್ತರ ಕೇಂದ್ರದ ಇತಿಹಾಸ ವಿಭಾಗದ ಅಧ್ಯಾಪಕ ಡಾ. ಕುಮಾರಸ್ವಾಮಿ ಮಾತನಾಡಿ, ಸಾಕ್ಯ ಅಂಬೇಡ್ಕರ್ ಮತ್ತು ಬೌದ್ಧ ಧರ್ಮ ಕುರಿತು ವಿಚಾರ ಮಂಡಿಸಿದರು. ಅಕ್ಟೋಬರ್ ಬೌದ್ಧ ಚರಿತ್ರೆಯಲ್ಲಿ ತುಂಬಾ ಮಹತ್ವ ಪಡೆದುಕೊಂಡ ತಿಂಗಳು, ಬಾಬಾ ಸಾಹೇಬ ಬಿಆರ್ ಅಂಬೇಡ್ಕರ್ ಅವರು ಅಕ್ಟೋಬರ್ 13, 1935 ರಲ್ಲಿ ಸಮ್ಮೇಳನವೊಂದರಲ್ಲಿ, ನಾನು ಹಿಂದುವಾಗಿ ಹುಟ್ಟಿದ್ದೇನೆ ಆದರೆ ಹಿಂದೂವಾಗಿ ಸಾಯಲಾರೆ ಎಂದು ನುಡಿದಿದ್ದರು. ಇದಾದ 21 ವರ್ಷಗಳ ತರುವಾಯ ಅಕ್ಟೋಬರ್ 14 ,1956 ರಂದು ಸುಮಾರು 5 ಲಕ್ಷ ಅನುಯಾಯಿಗಳ್ಳೊಟ್ಟಿಗೆ ಅವರು ಬುದ್ಧನನ್ನು ಒಪ್ಪಿಕೊಂಡದ್ದು, ಚರಿತ್ರಾರ್ಹ ಸಂಗತಿ ಎಂದು ವಿಚಾರ ಮಂಡಿಸಿದರು.

ಕಾರ್ಯಕ್ರಮದಲ್ಲಿ ಜಾನಪದ ನೃತ್ಯ, ಸಮೂಹ ಗಾಯನ ಕವಿಗೋಷ್ಠಿಗಳು ನಡೆದವು, ಇದೇ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಗಣ್ಯರನ್ನು ಅಭಿನಂದಿಸಲಾಯಿತು.

ಸಮ ಸಮಾಜ ಸಂಸ್ಥೆಯ ಕೆ ಎಸ್ ಜಯಶ್ರೀ ,ಶ್ವೇತಾ ,ಶೋಭಾ ,ಕಮಲಾಕ್ಷಿ ,ಮರಿಸ್ವಾಮಿ ,ಯಜಮಾನ್ ಶಿವಲಿಂಗಯ್ಯ, ಪರಶಿವಮೂರ್ತಿ ,ಗಂಗಾಧರರ್ಮೂರ್ತಿ ,ಮಧು ,ಕಮಲ, ಸಿಂಧು , ಬಹುಸೃತ್, ಅರಹಂತ್ , ವಿಹಾನ್ಯ ಇನ್ನಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!