Friday, September 20, 2024

ಪ್ರಾಯೋಗಿಕ ಆವೃತ್ತಿ

ಮದ್ದೂರು| ಐಜಿಪಿ ರವಿಕಾಂತೇಗೌಡ ತೇಜೋವಧೆ ಖಂಡಿಸಿ ಬೃಹತ್ ಪ್ರತಿಭಟನೆ

ಮುಖ್ಯಮಂತ್ರಿ ಹಾಗೂ ರಾಷ್ಟ್ರಪತಿ ಪದಕ ಪುರಸ್ಕೃತ ದಕ್ಷ ಪೊಲೀಸ್ ಅಧಿಕಾರಿ ಬಿ.ಆರ್.ರವಿಕಾಂತೇಗೌಡ ವಿರುದ್ದ ಕೆಲವು ಕಿಡಿಗೇಡಿಗಳು ಕಪೋಲಕಲ್ಪಿತ ಅಪಪ್ರಚಾರವೆಸಗುತ್ತಿರುವುದನ್ನು ಖಂಡಿಸಿ ಮದ್ದೂರು ಪಟ್ಟಣದಲ್ಲಿ ಗುರುವಾರ ಬೃಹತ್ ಪ್ರತಿಭಟನೆ ನಡೆಯಿತು.

ಮದ್ದೂರು ಪಟ್ಟಣದ ಪ್ರವಾಸಿ ಮಂದಿರ ವೃತ್ತದಲ್ಲಿ ಬೆಂಗಳೂರು- ಮೈಸೂರು ಹೆದ್ದಾರಿ ತಡೆದು ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿದ ಪ್ರತಿಭಟನಕಾರರು, ಉಪ ತಹಶೀಲ್ದಾರ್ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ನಾಡಪ್ರಭು ಕೆಂಪೇಗೌಡ ಒಕ್ಕಲಿಗರ ಸಂಘದ ಗೌರವಾಧ್ಯಕ್ಷ ಡಾ.ಬಿ.ಕೃಷ್ಣ ಮಾತನಾಡಿ, ಪ್ರಾಮಾಣಿಕ ಹಾಗೂ ದಕ್ಷ ಅಧಿಕಾರಿಗಳ ಮೇಲೆ ಸಮಾಜಘಾತುಕ ಶಕ್ತಿಗಳು ಪ್ರಹಾರ ನಡೆಸುವುದನ್ನು ಹತ್ತಿಕ್ಕಲು ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು. ಕಳೆದ 26 ವರ್ಷಗಳ ಅವಧಿಯಲ್ಲಿ ರಾಜ್ಯ ಪೊಲೀಸ್ ಇಲಾಖೆಯ ವಿವಿಧ ಹುದ್ದೆಗಳಲ್ಲಿ ಉತ್ತಮವಾಗಿ ಸೇವೆ ಸಲ್ಲಿಸಿರುವ  ಬಿ.ಆರ್.ರವಿಕಾಂತೇಗೌಡ ವಿರುದ್ದ ಸುಳ್ಳು ವರದಿ ಪ್ರಕಟಿಸಿರುವ ಖಾಸಗಿ ಸುದ್ದಿಸಂಸ್ಥೆ ಹಾಗೂ ಭೂ ಕಬಳಿಕೆಗೆ ಹುನ್ನಾರ ನಡೆಸುತ್ತಿರುವ ಕೆ.ಜೆ.ಕೃಷ್ಣ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಮನ್ಮುಲ್ ನಿರ್ದೇಶಕಿ ರೂಪ ಮಾತನಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸುವುದು ಹಾಗೂ ಮಾಧ್ಯಮ ರಂಗವನ್ನು ದುರುಪಯೋಗಪಡಿಸಿಕೊಂಡಿರುವ ವ್ಯಕ್ತಿಗಳ ಮೇಲೆ ಕಾನೂನು ಕ್ರಮ ಆಗಬೇಕು, ಆ ಮೂಲಕ ಪ್ರಾಮಾಣಿಕ ಅಧಿಕಾರಿಗಳಿಗೆ ರಕ್ಷಣೆ ನೀಡಬೇಕೆಂದು ಒತ್ತಾಯಿಸಿದರು.

ಸಂಘಟನೆಯ ಮುಖಂಡ ಡಿ.ಪಿ.ಶಿವಪ್ಪ ಮಾತನಾಡಿ, ಸಮಾಜದ ವಿವಿಧ ಕ್ಷೇತ್ರಗಳ ಬಲವರ್ಧನೆಗೆ ಸಹಕಾರ ನೀಡುವ ರವಿಕಾಂತೇಗೌಡರಂತಹ ಅಧಿಕಾರಿಗಳ ಬೆಂಬಲಕ್ಕೆ ಸಮಾಜದ ವಿವಿಧ ಸಂಘಟನೆಗಳು ಕೈ ಜೋಡಿಸಬೇಕು. ಆ ಮೂಲಕ ನೈತಿಕ ಬೆಂಬಲ ವ್ಯಕ್ತಪಡಿಸಬೇಕೆಂದು ಒತ್ತಾಯಿಸಿದರು.

ದೇಶಹಳ್ಳಿ ಮೋಹನ್ ಕುಮಾರ್ ಮಾತನಾಡಿ, ಭೂ ಮಾಫಿಯಾ ಹತ್ತಿಕ್ಕಲು ಶ್ರಮಿಸುವ ಅಧಿಕಾರಿಗಳಿಗೆ ಸರ್ಕಾರ ಆಸರೆಯಾಗಬೇಕು, ಸಮಾಜಕ್ಕೆ ಸುಳ್ಳು ಸುದ್ದಿ ಬಿತ್ತರಿಸುವ ಸುದ್ದಿ ಸಂಸ್ಥೆ ಮೇಲೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಮುಖಂಡರಾದ ಇಂದುಕುಮಾರ್, ಅಜ್ಜಹಳ್ಳಿ ರಾಮಕೃಷ್ಣ, ರವಿ ಕುಮಾರ್, ರಾಜೇಶ್, ಉಮಾಶಂಕರ್, ಶಂಕರಯ್ಯ, ಉಮೇಶ್, ಮಾರಸಿಂಗನಹಳ್ಳಿ ರಾಮಚಂದ್ರು, ಹೊಂಬಯ್ಯ, ಸಿದ್ದರಾಮು ಸೇರಿದಂತೆ ಸಾವಿರಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!