Thursday, September 19, 2024

ಪ್ರಾಯೋಗಿಕ ಆವೃತ್ತಿ

ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ವಿಳಂಬ: ಅಧಿಕಾರಿಗಳ ವಿರುದ್ದ ಜಿಲ್ಲಾಧಿಕಾರಿ ಗರಂ

ನಾಲೆಗಾಗಿ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ನೀಡಲು ವಿಳಂಬ ಮಾಡುತ್ತಿರುವ ಅಧಿಕಾರಿಗಳ ವಿರುದ್ದ ಜಿಲ್ಲಾಧಿಕಾರಿ ಡಾ.ಕುಮಾರ್ ಗರಂ ಆಗಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ಸೋಮವಾರ ನಡೆಯಿತು.

ಮಂಡ್ಯನಗರದ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ
ಹೇಮಾವತಿ ನೀರು ಬಳಕೆದಾರರ ಸಂಘ, ಪಾಂಡವಪುರ ಉಪವಿಭಾಗಾಧಿಕಾರಿ, ವಿಶೇಷ ಭೂಸ್ವಾಧಿನಾಧಿಕಾರಿ, ಕಾವೇರಿ‌ ನೀರಾವರಿ ನಿಗಮದ ಅಧಿಕಾರಿಗಳು ಹಾಗೂ ಕಂದಾಯ ಇಲಾಖೆಯ ಸಭೆ ಜಂಟಿ ಸಭೆಯಲ್ಲಿ ಜಿಲ್ಲಾಧಿಕಾರಿಗಳು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕಿಡಿಕಾರಿದರು.

ಹೇಮಾವತಿ ನಾಲೆಗಳಿಗಾಗಿ ಭೂಮಿ ಕಳೆದುಕೊಂಡು 25 ವರ್ಷವಾದರೂ ರೈತರಿಗೆ ಪರಿಹಾರ ನೀಡದ್ದರಿಂದ ಆಕ್ರೋಶಗೊಂಡ ಜಿಲ್ಲಾಧಿಕಾರಿ ಕುಮಾರ್, ಅಧಿಕಾರಿಗಳ ವಿರುದ್ದ ದೂರು ದಾಖಲಿಸಿ ಎಂದು ರೈತರಿಗೆ ತಿಳಿಸಿದರು, ನಾಲೆ ಮಾಡುವಾಗ ರೈತರ ಜಮೀನಿಗೆ ಹೋಗುವ ಅಧಿಕಾರಿಗಳು ಅವರ ಒಪ್ಪಿಗೆ ಪಡೆಯದೆ ಕಾಲುವೆ ನಿರ್ಮಿಸಿದ್ದಲ್ಲದೆ, ಇಷ್ಟು ವರ್ಷವಾದರೂ ಅವರಿಗೆ ಪರಿಹಾರ ನೀಡದೆ ವಿಳಂಬ ಮಾಡಿದ್ದೇಕೆ ? ರೈತರ ಜಮೀನು ನಾಲೆಗೆ ಹೋಗಿದೆ ಎಂಬ ಮಾಹಿತಿಯು ನಿಮ್ಮ ಬಳಿ ಇಲ್ಲವೇ ?  ಹೀಗಾದರೆ ಹೇಗೆ ? ಎಂದು ಕಿಡಿಕಾರಿದರು.

ಸರ್ವೇ ಇಲಾಖೆಗೆ ಕಟ್ಟಿಸಿ

ದೂರವಾಣಿ ಮೂಲಕ ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಹೇಶ್ ಅವರನ್ನು ಸಂಪರ್ಕಿಸಿ 11 ಇ ಸ್ಕೆಚ್ ಗೆ ಹಣ ನೀಡುವಂತೆ ಕೋರಿ, ಅದಕ್ಕೆ ಸಮ್ಮತಿಯನ್ನು ಪಡೆದುಕೊಂಡರು. ನಾಗಮಂಗಲ ತಾಲ್ಲೂಕಿನ ಬಿಂಡಿಗನವಿಲೆ, ಬೆಳ್ಳೂರು, ಕಸಬಾ ಮತ್ತು ದೇವಲಾಪುರ ಹೋಬಳಿ 42 ಗ್ರಾಮಗಳ 545 ಸರ್ವೆ ನಂಬರ್ ಗಳಿಗೆ ಅಂದಾಜು 5 ಲಕ್ಷ ಹಣವನ್ನು ಸರ್ವೇ ಇಲಾಖೆಗೆ ಕಟ್ಟಿಸಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ನನ್ನ ಬಳಿ ಹೇಮಾವತಿ ನೀರು ಬಳಕೆದಾರರ ಸಂಘದ ಪದಾಧಿಕಾರಿಗಳು ಮತ್ತು ಹಲವು ರೈತರು, ಸಾಕಷ್ಟು ಭಾರಿ ಬಂದು ಭೂ ಪರಿಹಾರ ಕೊಡಿಸಿ ಎಂದು ಮನವಿ ಮಾಡಿದ್ದಾರೆ. ನೀವು ನಾಲೆ ತೆಗೆದು ಸುಮ್ಮನೆ ಕುಳಿತರೆ ಹೇಗೆಂದು ನೀರಾವರಿ ಇಲಾಖೆ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡರು. ಈ ನಡುವೆ 11ಇ ಸ್ಕೆಚ್ ಮಾಡುವಾಗ ಆರ್ ಟಿ ಸಿ ಮತ್ತು ಭೂಮಿಗೂ ತಾಳೆ ಬರದಿದ್ದರೆ, ನೀವು ತಹಸಿಲ್ದಾರ್ ಕುಳಿತು ಇದನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಬಹು ಬೇಗ ಪ್ತಕರಣಗಳನ್ನು ಇತ್ಯರ್ಥಗೊಳಿಸಿ ಎಂದು ಪಾಂಡವಪುರ ಉಪವಿಭಾಗಾಧಿಕಾರಿ ನಂದೀಶ್ ಅವರಿಗೆ ಸೂಚಿಸಿದರು.

ಗುತ್ತಿಗೆ ನೌಕರರನ್ನು ನೇಮಕ ಮಾಡಿಕೊಳ್ಳಿ

ಭೂಸ್ವಾಧೀನ ಇಲಾಖೆಯಲ್ಲಿ ಏಕೈಕ ನೌಕರರಿದ್ದು ಮೇಲಾಧಿಕಾರಿಗಳಿಗೆ ಬರೆದು ಗುತ್ತಿಗೆ ಆಧಾರದ ಮೇಲೆ ಕಂಪ್ಯೂಟರ್ ಅಪರೇಟರ್ ಮತ್ತು ನೌಕರರನ್ನು‌ ನೇಮಕ ಮಾಡಿಕೊಳ್ಳುವಂತೆ ವಿಶೇಷ ಭೂಸ್ವಾಧಿನಾಧಿಕಾರಿ ವಿಶ್ವನಾಥ್ ಅವರಿಗೆ ಸೂಚನೆ ನೀಡಿದರು.

ನಾಗಮಂಗಲ ತಾಲ್ಲೂಕಿನ ಮೈಲಾರಪಟ್ಟಣದ ಹೇಮಾವತಿ ನೀರು ಬಳಕೆದಾರರ ಸಂಘದ ಅಧ್ಯಕ್ಷ ಬಿ.ಸಿ.ಮೋಹನ್ ಕುಮಾರ್ ಮಾತನಾಡಿ, ನೀರಾವರಿ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಇಷ್ಟು ವರ್ಷವಾದರೂ ರೈತರಿಗೆ ಪರಿಹಾರ ನೀಡಿಲ್ಲ.‌ ನೀರಾವರಿ ಇಲಾಖೆ ಅಧಿಕಾರಿಗಳು ನಾಲೆಯಲ್ಲಿ ನೀರು ಬಿಡಲು ಬಂದಾಗ ರೈತರು ಪರಿಹಾರ ಕೊಡಿ ಎಂದು ನೀರು ಬಿಡಲು ಅಡ್ಡಿ ಪಡಿಸುತ್ತಾರೆ. ಆಗ ಅಧಿಕಾರಿಗಳು ಪೊಲೀಸರಿಗೆ ರೈತರ ಮೇಲೆ ದೂರು ನೀಡಿ, ನೀರು ತೆಗೆದುಕೊಂಡು ಹೋಗುತ್ತಾರೆ, ಇದು ಪ್ರತಿ ವರ್ಷ ಆಗುತ್ತಿದೆ. ಈಗ 11ಇ ಸ್ಕೆಚ್ ಗೆ ಆದೇಶ ಆಗಿರುವ ರೈತರಿಗೆ ಶೀಘ್ರಗತಿಯಲ್ಲಿ ಸ್ಕೆಚ್ ಮಾಡಿಸಿ ಪರಿಹಾರ ಕೊಡಿಸಿ ಎಂದು ಮನವಿ ಮಾಡಿದರು.

ಪ್ರತಿ 15 ದಿನಗಳಿಗೊಮ್ಮೆ ತಮ್ಮ ನೇತೃತ್ವದಲ್ಲಿ ವಿಶೇಷ ಭೂಸ್ವಾಧಿನಾಧಿಕಾರಿ, ಪಾಂಡವಪುರ ಉಪ ವಿಭಾಗಾಧಿಕಾರಿ, ನಾಗಮಂಗಲ ತಹಶಿಲ್ದಾರ, ಮತ್ತು ನಾಗಮಂಗಲದ ಭೂದಾಖಲೆಗಳ ಸಹಾಯಕ ನಿರ್ದೇಶಕರು ಮತ್ತು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಸಭೆ ಸೇರಿ ಚರ್ಚಿಸಿ ಭೂಸ್ವಾಧೀನದ ಪ್ರಗತಿ ಪರಿಶೀಲನೆ ನಡೆಸುತ್ತೇನೆಂದು ಭರವಸೆ ನೀಡಿದರು.

ಕಾವೇರಿ ನೀರಾವರಿ ನಿಗಮದ ವ್ಯಾಪ್ತಿಗೆ ಬರುವ ಹೇಮಾವತಿ ಎಡದಂಡೆ ನಾಲೆ, ನಾಗಮಂಗಲದ ಎಕ್ಸಿಕ್ಯೂಟಿವ್ ಇಂಜಿನಿಯರ್ ಸಿ.ಎನ್. ಶಿಲ್ಪ, ಎಇಇ ಭಾಸ್ಕರ್, ನಾಗಮಂಗಲ ಶಾಖಾ ಕಾಲುವೆ ಯಡಿಯೂರು ವಿಭಾಗದ ಎಕ್ಸಿಕ್ಯೂಟಿವ್ ಇಂಜಿನಿಯರ್ ಎಸ್.ಟಿ.ಶ್ರೀನಿವಾಸ್  ಗಮನ ಹರಿಸಿ ಪರಿಹಾರ ನೀಡುತ್ತೇವೆ ಎಂದರು.

ಅರೆ ಖುಷ್ಕಿ ಬೆಳೆಗಳಾದ ರಾಗಿ, ಅವರೆ, ತರಣಿ ಬೆಳೆಗಳು ಮಳೆಯಿಲ್ಲದೆ ಒಣಗುವ ಸ್ಥಿತಿ ಉಂಟಾಗಿದೆ. ಜೊತೆಗೆ ಕೆರೆ ಕಟ್ಟೆಗಳು ಬರಿದಾಗುತ್ತಿದ್ದು ಜಾನುವಾರುಗಳಿಗೆ ಕುಡಿಯಲು ನೀರಿಲ್ಲದ ಪರಿಸ್ಥಿತಿ ತಲೆದೋರಿದೆ. ನಾಗಮಂಗಲ ಶಾಖಾ ಕಾಲುವೆಯ ವಿತರಣಾ ನಾಲೆಗಳಾದ 17, 18 ಮತ್ತು 19ರಲ್ಲಿ ಕೇವಲ 4-5 ದಿನ ನೀರು ಹರಿಸಿದ್ದು ಮತ್ತೆ ನೀರು ಬಿಟ್ಟಿಲ್ಲ, ಹೀಗಾಗಿ ಹೇಮಾವತಿ ನಾಲೆಗಳಿಗೆ ನೀರು ಬಿಡುವಂತೆಯೂ ಜಿಲ್ಲಾಧಿಕಾರಿಗಳಲ್ಲಿ ರೈತರು ಮತ್ತು ಹೇಮಾವತಿ ನೀರು ಬಳಕೆದಾರರ ಸಂಘ ಮನವಿ ಮಾಡಿತು.

ಎಇಇಗಳಾದ ಜೆ.ಬಿ.ರುದ್ರೇಶ್, ಸುಧಾಜೈನ್, ರಾಜೇಗೌಡ, ಎಇ ಗಳಾದ ರಾಜು, ನವೀನ್, ಭೂಸ್ವಾಧೀನ ಇಲಾಖೆಯ ಪಾರ್ವತಿ, ಹೇಮಾವತಿ ನೀರು ಬಳಕೆದಾರರ ಸಂಘದ ಕಾರ್ಯದರ್ಶಿ ನರಸಿಂಹೇಗೌಡ, ಖಜಾಂಚಿ ಎಚ್.ಎಂ.ವೆಂಕಟೇಶ್, ನಿರ್ದೇಶಕರಾದ ರಾಜಣ್ಣ, ಬೋರೇಗೌಡ, ಎಚ್.ಎಂ.ನಾಗೇಶ್,
ಮೈಲಾರಪಟ್ಟಣ, ಯಗಟಹಳ್ಳಿ, ಕೃಷ್ಣಾಪುರ, ಚಿಕ್ಕಜಟಕ, ಕೆರೆಮೇಗಲಕೊಪ್ಪಲು, ತೊಳಲಿ ಗ್ರಾಮಗಳ ನೂರಾರು ರೈತರು ಸಭೆಯಲ್ಲಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!