Thursday, September 19, 2024

ಪ್ರಾಯೋಗಿಕ ಆವೃತ್ತಿ

ತಮಿಳುನಾಡಿಗೆ ನೀರು ಬಿಡುಗಡೆ ವಿರೋಧಿಸಿ ರಸ್ತೆತಡೆ: ಪ್ರತಿಭಟನೆ

ಕಾವೇರಿ ಜಲಾನಯನ ಪ್ರದೇಶದ ಅಣೆಕಟ್ಟೆಗಳಿಂದ ತಮಿಳುನಾಡಿಗೆ ನೀರು ಹರಿಸುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯ ಹೋರಾಟ ಮುಂದುವರೆದಿದ್ದು, ಕಾವೇರಿ ಹೋರಾಟಗಾರರು ಧರಣಿ, ರಸ್ತೆತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಸರ್ ಎಂ ವಿ ಪ್ರತಿಮೆ ಎದುರು ನಡೆಯುತ್ತಿರುವ ನಿರಂತರ ಧರಣಿಯಲ್ಲಿ ಸಮಿತಿಯ ಮುಖಂಡರ ಜೊತೆಗೂಡಿದ ಜಾನಪದ ಕಲಾವಿದರು, ಹಾಡುಗಳ ಮೂಲಕ ಕಾವೇರಿ ನದಿ ನೀರಿನ ವಿಚಾರದಲ್ಲಿ ರೈತರಿಗೆ ಆಗಿರುವ ಅನ್ಯಾಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಬೆಂಗಳೂರು – ಮೈಸೂರು ಹೆದ್ದಾರಿಗೆ ಇಳಿದ ಹೋರಾಟಗಾರರು ಕೆಲ ಹೊತ್ತು ವಾಹನ ಸಂಚಾರಕ್ಕೆ ಅಡ್ಡಿಪಡಿಸಿದರು, ಸುಮಾರು ಅರ್ಧ ತಾಸು ಹೆದ್ದಾರಿ ತಡೆದ ಹಿನ್ನೆಲೆಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು. ರಸ್ತೆಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದವು.

ಸರ್ಕಾರಿ ಬಸ್ ಗಳಲ್ಲಿ ಪ್ರಯಾಣ ಮಾಡುತ್ತಿದ್ದವರು ಅಲ್ಲಿಯೇ ಇಳಿದು ಬಸ್ ನಿಲ್ದಾಣ ದತ್ತ ಹೊರಟರು. ಅಕ್ಕ ಪಕ್ಕದ ರಸ್ತೆಯಿಂದ ಹೆದ್ದಾರಿಗೆ ಬರುತ್ತಿದ್ದ ವಾಹನಗಳನ್ನು ಸಹ ಪ್ರತಿಭಟನಾಕಾರರು ತಡೆದ ಹಿನ್ನೆಲೆಯಲ್ಲಿ ವಾಹನ ಸವಾರರಿಗೆ ಕಾವೇರಿ ಹೋರಾಟದ ಬಿಸಿ ತಟ್ಟಿತು.

ಕೇಂದ್ರ – ರಾಜ್ಯ ಸರ್ಕಾರ, ಸಂಸದರು, ಶಾಸಕರ ವಿರುದ್ಧ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದರು, ಆಳುವ ಸರ್ಕಾರಗಳು, ಚುನಾಯಿತ ಜನಪ್ರತಿನಿಧಿಗಳು ತಮ್ಮ ಹೊಣೆಯನ್ನು ಸಮರ್ಥವಾಗಿ ನಿರ್ವಹಿಸುತ್ತಿಲ್ಲ, ಇದರಿಂದ ರೈತರು ಮತ್ತು ಜನತೆಗೆ ಸಂಕಷ್ಟ ಎದುರಾಗಿದೆ ಎಂದು ಕಿಡಿಕಾರಿದರು.

ರಾಜ್ಯ ಸರ್ಕಾರ ನೆರೆ ರಾಜ್ಯಕ್ಕೆ ನೀರು ಬಿಡುವುದಿಲ್ಲ ಎಂದು ಹೇಳುತ್ತಿಲ್ಲ, ಶಾಸಕರು ಕಂಡು ಕಾಣದಂತೆ ಇದ್ದಾರೆ, ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಿ ಪರಿಹಾರ ರೂಪಿಸುತ್ತಿಲ್ಲ, ಸಂಸದರು ದೆಹಲಿಗೆ ಹೋಗಿ ಪ್ರಧಾನ ಮಂತ್ರಿ ಮೇಲೆ ಒತ್ತಡ ಹಾಕಲು ಮುಂದಾಗುತ್ತಿಲ್ಲ, ಜನಪ್ರತಿನಿಧಿಗಳ ನಿರ್ಲಕ್ಷ್ಯ ದಿಂದ ರೈತ ಕುಟುಂಬಗಳು ಬೀದಿಗೆ ಬೀಳುವ ಪರಿಸ್ಥಿತಿ ಎದುರಾಗಿದೆ ಎಂದು ಅಸಹನೆ ವ್ಯಕ್ತಪಡಿಸಿದರು.

ತಮಿಳುನಾಡಿಗೆ ನೀರು ಬಿಡುವುದಿಲ್ಲ ಎಂದು ರಾಜ್ಯ ಸರ್ಕಾರ ಘೋಷಣೆ ಮಾಡಿ, ನೀರು ನಿಲ್ಲಿಸುವವರೆಗೂ  ಕಾವೇರಿ ಚಳವಳಿ ನಿಲ್ಲಿಸುವ ಪ್ರಶ್ನೆಯೇ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹೋರಾಟದ ನೇತೃತ್ವವನ್ನು  ಸುನಂದಾ ಜಯರಾಂ, ಕೆ ಬೋರಯ್ಯ, ಇಂಡುವಾಳು ಚಂದ್ರಶೇಖರ್, ಮುದ್ದೇಗೌಡ, ಕನ್ನಡ ಸೇನೆ ಮಂಜುನಾಥ್,ಮಹಾಂತಪ್ಪ, ಜಾನಪದ ಕಲಾವಿದರ ಸಂಘದ ಗೊರವಾಲೆ ಚಂದ್ರಶೇಖರ್, ದೇವರಾಜ್ ಕೊಪ್ಪ, ಕಾರಸವಾಡಿ ದೇವರಾಜ್, ಸಂತೋಷ್ ಕುಮಾರ್, ಕೆ ಎನ್ ಮಹದೇವ, ವೈರಮುಡಿ, ಮುದಗಂದೂರು ಕೃಷ್ಣಯ್ಯ ಸೇರಿದಂತೆ ಹಲವರು ವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!