Thursday, September 19, 2024

ಪ್ರಾಯೋಗಿಕ ಆವೃತ್ತಿ

ಬಿಜೆಪಿಯೊಳಗೆ ವಿಜಯೇಂದ್ರಗೆ ರಾಜ್ಯಾಧ್ಯಕ್ಷ ಪಟ್ಟ ತಪ್ಪಿಸುವ ಹುನ್ನಾರ ನಡೆದಿದೆಯಾ?

✍️ ಮಾಚಯ್ಯ ಎಂ ಹಿಪ್ಪರಗಿ

ಇಂತದ್ದೊಂದು ಪ್ರಶ್ನೆ ಕಾಡಲು ನಿರ್ದಿಷ್ಟ ಕಾರಣವಿದೆ. ಕರ್ನಾಟಕದ ಬಿಜೆಪಿ ಪಾಲಿಗೆ ಬಿ ಎಸ್ ಯಡಿಯೂರಪ್ಪ ಎಷ್ಟು ಅನಿವಾರ್ಯ ಅನ್ನೋದು ಈ ಚುನಾವಣೆಯಲ್ಲಿ 66 ಸ್ಥಾನಗಳಿಗೆ ಕುಸಿದ ಬಿಜೆಪಿ ಸಾಮರ್ಥ್ಯದಿಂದಾಗಿ ಸತತ ಎರಡನೇ ಬಾರಿಗೆ ಸಾಬೀತಾಗಿದೆ. 2013ರ ಚುನಾವಣೆಯಲ್ಲೂ ಸ್ವತಂತ್ರ ಕೆಜೆಪಿ ಪಕ್ಷ ಕಟ್ಟಿಕೊಂಡು ಬಿಜೆಪಿಗೆ ಚುರುಕು ಮಟ್ಟಿಸಿದ್ದ ಯಡಿಯೂರಪ್ಪನವರು, ಬಿಜೆಪಿಯ ಸಾಮರ್ಥ್ಯವನ್ನು 40ಕ್ಕೆ ಸೀಮಿತಗೊಳಿಸಿದ್ದರು. ಅದಾದ ನಂತರ ಪಾಠ ಕಲಿತಂತೆ ವರ್ತಿಸಿದ ಬಿಜೆಪಿ ಹೈಕಮಾಂಡ್ ಯಡಿಯೂರಪ್ಪನವರಿಗೆ ಮತ್ತೆ ಮಣೆಹಾಕಿ ಅಧಿಕಾರದ ರುಚಿ ಕಂಡಿತು. ನಿಜ ಹೇಳಬೇಕೆಂದರೆ, ಯಡಿಯೂರಪ್ಪನವರ ಮೂಗಿಗೆ ಅಧಿಕಾರದ ತುಪ್ಪ ಸವರಿದ್ದ ಬಿಜೆಪಿ ಹೈಕಮಾಂಡ್ ಆಪರೇಷನ್ ಕಮಲ ನಡೆಸಲು ಎಲ್ಲಾ ಬಗೆಯ ಸಹಕಾರ ನೀಡಿತ್ತು. ಆದರೆ ಆ ಅನೈತಿಕ ರಾಜಕಾರಣದ ಅಪವಾದ ಹೊತ್ತುಕೊಂಡದ್ದು ಮಾತ್ರ ಯಡಿಯೂರಪ್ಪನವರು. ಅಷ್ಟಾದರೂ ಅವರನ್ನು ಅಧಿಕಾರ ಪೂರ್ಣಗೊಳಿಸಲು ಅವಕಾಶ ಕೊಡದೆ, ವಯಸ್ಸಿನ ನೆಪವೊಡ್ಡಿ ಮಧ್ಯಂತರದಲ್ಲೇ ಅತಿ ಹೀನಾಯವಾಗಿ ಸಿಎಂ ಕುರ್ಚಿಯಿಂದ ಹೈಕಮಾಂಡ್ ಕೆಳಗಿಳಿಸಿತ್ತು. ಇದೆಲ್ಲದರ ಹಿಂದೆ ಬಿ.ಎಲ್.ಸಂತೋಷ್ ಸೂತ್ರಧಾರಿಯಾಗಿ ಕೆಲಸ ಮಾಡಿದ್ದರೆ, ಮೋದಿ-ಶಾ ತೆರೆಮರೆಯಲ್ಲಿ ದಾಳಗಳನ್ನು ಉರುಳಿಸಿದ್ದರು. ಯಡಿಯೂರಪ್ಪನವರನ್ನು ಎರಡನೇ ಬಾರಿಗೆ ಮೂಲೆಗುಂಪು ಮಾಡಿ ಚುನಾವಣೆ ಎದುರಿಸಿದ ಬಿಜೆಪಿ ‘ಲಿಂಗಾಯತರ ವಿರೋಧಿ’ ಎಂಬ ಹಣೆಪಟ್ಟಿಯೊಂದಿಗೆ ಹೀನಾಯ ಫಲಿತಾಂಶ ನೋಡಬೇಕಾದದ್ದು ಈಗ ಹಳೇ ವಿಷಯ.

ಆದರೆ, ಈ ನಡುವೆ ಮತ್ತೊಮ್ಮೆ ಯಡಿಯೂರಪ್ಪನವರ ಅನಿವಾರ್ಯತೆಯನ್ನು ಮನಗಂಡ ಬಿಜೆಪಿ ಮುಂಬರುವ ಲೋಕಸಭಾ ಚುನಾವಣೆಯ ವೇಳೆಗಾದರೂ, ಕರ್ನಾಟಕದಲ್ಲಿ ಬಿಜೆಪಿಗೆ ಉಂಟಾಗಿರುವ ಹಿನ್ನಡೆಯನ್ನು ಸರಿಪಡಿಸಿಕೊಳ್ಳುವ ಸಲುವಾಗಿ ಪುನಾಃ ಯಡಿಯೂರಪ್ಪನವರಿಗೆ ಮಣೆ ಹಾಕಲು ಮುಂದಾಗಿದ್ದನ್ನು ನಾವೆಲ್ಲ ಗಮನಿಸಿದ್ದೇವೆ. ಹಾಗಾಗಿಯೇ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳ ವಿರುದ್ಧ ತಾನು ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷ ಸಂಘಟನೆ ಮಾಡುವುದಾಗಿ ಯಡಿಯೂರಪ್ಪನವರೂ ಹೇಳಿಕೆ ನೀಡಿದ್ದರು. ತನಗೆ ಬಿಜೆಪಿ ಹೈಕಮಾಂಡ್ ವಾಪಾಸ್ ಮಣೆ ಹಾಕುವ ಸಂದರ್ಭದಲ್ಲಿ ‘ತನ್ನ ಮಗ ವಿಜಯೇಂದ್ರನನ್ನು ಬಿಜೆಪಿ ರಾಜ್ಯಾಧ್ಯಕ್ಷನನ್ನಾಗಿ ಆಯ್ಕೆ ಮಾಡಬೇಕು’ ಎಂಬ ಷರತ್ತನ್ನು ಯಡಿಯೂರಪ್ಪನವರು ಹೈಕಮಾಂಡ್ ಮುಂದೆ ಇರಿಸಿದ್ದರು ಹಾಗೂ ಹೈಕಮಾಂಡ್ ಅದಕ್ಕೆ ಸಮ್ಮತಿಯನ್ನೂ ನೀಡಿತ್ತು ಎಂಬುದನ್ನು ಬಿಜೆಪಿಯ ಆಂತರಿಕ ಮೂಲಗಳು ಹೇಳುತ್ತವೆ. ರಾಜಕೀಯ ವಾತಾವರಣವೂ ಅದಕ್ಕೆ ಪೂರಕವಾಗಿಯೇ ಸರಿದಾಡಿದ್ದನ್ನು ನಾವು ಗಮನಿಸಬಹುದು. ಕಾಂಗ್ರೆಸ್ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುವ ಮೂಲಕ ಮಾಧ್ಯಮಗಳಲ್ಲಿ ವಿಜಯೇಂದ್ರ ಮಿಂಚಿದ್ದು ಮಾತ್ರವಲ್ಲದೆ, ಕಾವೇರಿ ಹೋರಾಟದಲ್ಲಿಯೂ ವಿಜಯೇಂದ್ರ ಮುಂಚೂಣಿಯಲ್ಲಿದ್ದರು.

ಯಡಿಯೂರಪ್ಪನವರ ರೀ-ಇನ್ನಿಂಗ್ಸ್‌ನಲ್ಲಿ ಎಲ್ಲವೂ ಅಂದುಕೊಂಡಂತೆ ನಡೆಯುತ್ತಿದೆ ಎನ್ನುವ ಹೊತ್ತಿಗೆ ಸರಿಯಾಗಿ ವಿಜಯೇಂದ್ರಗೆ ರಾಜ್ಯಾಧ್ಯಕ್ಷ ಪಟ್ಟ ತಪ್ಪಿಸುವ ‘ವರಿಷ್ಠ’ ಮಟ್ಟದ ಹುನ್ನಾರ ನಡೆಯುತ್ತಿರುವ ವರ್ತಮಾನಗಳು ಕೇಳಿಬರುತ್ತಿವೆ. ಬಿಎಸ್‌ವೈ ಅವರ ಆಪ್ತ ಭಂಟ ಮಾಜಿ ಸಚಿವ ಎಂ ಪಿ ರೇಣುಕಾಚಾರ್ಯ ಇದ್ದಕ್ಕಿದ್ದಂತೆ ಬಿಜೆಪಿ ಹೈಕಮಾಂಡ್, ಮೋದಿ-ಶಾ, ಬಿ ಎಲ್ ಸಂತೋಷ್ ವಿರುದ್ಧ ನೀಡುತ್ತಿರುವ ಹೇಳಿಕೆಗಳೇ ಇದನ್ನು ಸಾಬೀತು ಮಾಡುತ್ತವೆ. ಯಡಿಯೂರಪ್ಪನವರ ಆಣತಿಯಿಲ್ಲದೆ ರೇಣುಕಾಚಾರ್ಯ ಮೋದಿ-ಶಾ ವಿರುದ್ಧವೇ ಮಾತಾಡುವಷ್ಟು ಧೈರ್ಯ ತೋರುವ ವ್ಯಕ್ತಿಯಲ್ಲ. ಆ ಛಾತಿಯೂ ಆತನಿಗಿಲ್ಲ. ಮೊದಲಿನಿಂದಲೂ ಯಡಿಯೂರಪ್ಪನವರ ಮೌತ್‌ಪೀಸ್‌ನಂತೆ ವರ್ತಿಸುತ್ತಾ ಬಂದ ರೇಣುಕಾಚಾರ್ಯ ಈಗ ಇದ್ದಕ್ಕಿದ್ದಂತೆ ಬಿಜೆಪಿ ಹೈಕಮಾಂಡ್ ವಿರುದ್ಧವೇ ಮಾತಾಡುತ್ತಾರೆ ಎಂದರೆ ಯಡಿಯೂರಪ್ಪನವರಿಗೆ ಇರಿಸುಮುರಿಸಾಗುವಂತಹ ವಾತಾವರಣ ಬಿಜೆಪಿ ಅಂಗಳದಲ್ಲಿ ಸೃಷ್ಟಿಯಾಗಿದೆ ಎಂಬುದನ್ನು ಒತ್ತಿ ಹೇಳುತ್ತದೆ. ಸದ್ಯಕ್ಕೆ ಯಡಿಯೂರಪ್ಪನವರಿಗೆ ತಮ್ಮ ಪಕ್ಷದಿಂದ ಇರುವ ನಿರೀಕ್ಷೆ ಒಂದೇ, ಮಗ ವಿಜಯೇಂದ್ರನನ್ನು ರಾಜ್ಯಾಧ್ಯಕ್ಷ ಮಾಡಬೇಕು ಎನ್ನುವುದು. ಆ ಆಸೆಗೆ ತಣ್ಣೀರು ಎರಚುವ ಕೆಲಸ ಹೈಕಮಾಂಡ್ ಮಟ್ಟದಲ್ಲಿ ನಡೆಯುತ್ತಿರುವುದರಿಂದ ಅವರ ಆಪ್ತ ರೇಣುಕಾಚಾರ್ಯ ಹೈಕಮಾಂಡ್ ಮೇಲೆ ದಾಳಿ ಮಾಡುತ್ತಿದ್ದಾರೆ.

ಈ ಹಿಂದೆ ಇದೇ ರೇಣುಕಾಚಾರ್ಯ, ’ಬಿಜೆಪಿ ರಾಜ್ಯಾಧ್ಯಕ್ಷನಾಗಿ ಪಕ್ಷವನ್ನು ಮುನ್ನಡೆಸುವ ಸಾಮರ್ಥ್ಯ ವಿಜಯೇಂದ್ರಗೆ ಇದೆ’ ಎಂದು ಹೇಳಿದ್ದನ್ನು ನಾವಿಲ್ಲಿ ಸ್ಮರಿಸಿಕೊಳ್ಳಬಹುದು. ಈಗ ಆತ ಬಿಜೆಪಿ ಮೇಲೆ ಮಾಡುತ್ತಿರುವ ಆರೋಪದಲ್ಲೂ ‘ಯಡಿಯೂರಪ್ಪನವರನ್ನು ಮೂಲೆಗುಂಪು ಮಾಡಿದರೆ ಪಕ್ಷಕ್ಕೆ ನೆಲೆಯಿಲ್ಲ. ಮೋದಿ ಫೋಟೊ ನೋಡಿಕೊಂಡು ಯಾರೂ ಮತ ಹಾಕಲ್ಲ’ ಎಂಬ ಬಿಎಸ್‌ವೈ ನಿಷ್ಠೆ ಎದ್ದು ಕಾಣುತ್ತಿದೆ. ಅಂದಹಾಗೆ, ವಿಜಯೇಂದ್ರಗೆ ಅವಕಾಶ ತಪ್ಪಿಸುವ ಹುನ್ನಾರ ಇದೇ ಮೊದಲೇನಲ್ಲ. 2022ರ ಜೂನ್‌ನಲ್ಲಿ ನಡೆದ ವಿಧಾನಪರಿಷತ್ ಚುನಾವಣೆಯ ಸಂದರ್ಭದಲ್ಲಿ ವಿಜಯೇಂದ್ರರನ್ನು ಎಂಎಲ್‌ಸಿ ಮಾಡಿ, ಬೊಮ್ಮಾಯಿಯವರ ಸರ್ಕಾರದಲ್ಲಿ ಬಹುಮುಖ್ಯ ಖಾತೆ ಕೊಟ್ಟು ಸಚಿವರನ್ನಾಗಿ ಮಾಡಲಾಗುತ್ತದೆ ಎಂಬ ಮಾತುಗಳು ಕೇಳಿಬಂದಿದ್ದವು. ಟಿಕೇಟ್ ಹಂಚಿಕೆಯಲ್ಲಿ ಅವರ ಹೆಸರು ಮುಂಚೂಣಿಯಲ್ಲಿತ್ತು. ಆದರೆ ಕೊನೇ ಕ್ಷಣದಲ್ಲಿ ಅವರಿಗೆ ಟಿಕೆಟ್ ತಪ್ಪಿಸಿ ಹೇಮಾವತಿ ನಾಯಕ್, ಛಲವಾದಿ ನಾರಾಯಣಸ್ವಾಮಿ, ಸವದಿಯವರನ್ನು ಎಂಎಲ್‌ಸಿ ಮಾಡಲಾಯ್ತು. ಈ ಬೆಳವಣಿಗೆಯ ನಂತರವೇ ಯಡಿಯೂರಪ್ಪ ವಿಪರೀತ ಕೋಪಿಸಿಕೊಂಡು, ಬಿಜೆಪಿಗೆ ಈ ಚುನಾವಣೆಯಲ್ಲಿ ಪಾಠ ಕಲಿಸಿದ್ದು.

ವಿಜಯೇಂದ್ರಗೆ ರಾಜ್ಯಾಧ್ಯಕ್ಷ ಸ್ಥಾನ ತಪ್ಪಿಸುವ ಹುನ್ನಾರ ಮಾತ್ರವಲ್ಲದೇ, ಇತ್ತೀಚೆಗೆ ಏರ್ಪಟ್ಟ ಬಿಜೆಪಿ-ಜೆಡಿಎಸ್ ಮೈತ್ರಿ ಮಾತುಕತೆಯಲ್ಲೂ ಮೋದಿ-ಶಾ ಜೋಡಿ ಯಡಿಯೂರಪ್ಪನವರನ್ನು ಸಂಪೂರ್ಣವಾಗಿ ಹೊರಗಿಟ್ಟಿತ್ತು. ಇದು ಸಹಾ ಅವರ ಅಸಮಾಧಾನಕ್ಕೆ ಕಾರಣವಾಗಿದೆ. ಮೈತ್ರಿ ಚರ್ಚೆಯ ಆರಂಭದ ದಿನಗಳಲ್ಲಿ ಯಡಿಯೂರಪ್ಪನವರ ಬಾಯಿಂದ ಹೊರಬಿದ್ದ ಹೇಳಿಕೆಯನ್ನು, ಒಂದೇ ದಿನದಲ್ಲಿ ಅವರ ಮೇಲೆ ಒತ್ತಡ ತಂದು ವಾಪಾಸು ಪಡೆಯುವಂತೆ ಮಾಡಿದ್ದನ್ನೂ ನಾವಿಲ್ಲಿ ಮರೆಯಲಾಗದು. ಇವೆಲ್ಲವೂ ಬಿಜೆಪಿಯೊಳಗೆ ಯಡಿಯೂರಪ್ಪನವರನ್ನು ಮತ್ತೆ ಮೂಲೆಗುಂಪು ಮಾಡುತ್ತಿರುವ ಹುನ್ನಾರಗಳ ಲಕ್ಷಣಗಳಾಗಿ ಗೋಚರಿಸುತ್ತಿವೆ. ಈ ಆಕ್ಷನ್‌ಗೆ ರಿಯಾಕ್ಷನ್ ರೂಪದಲ್ಲೇ ರೇಣುಕಾಚಾರ್ಯ ಬಾಯಿಯ ಮೂಲಕ ಯಡಿಯೂರಪ್ಪನವರು ಗುಡುಗುತ್ತಿದ್ದಾರೆ. ಒನ್ಸ್ ಎಗೇನ್, ಈ ಎಲ್ಲಾ ಹುನ್ನಾರಗಳ ಹಿಂದೆ ಬಿಎಲ್ ಸಂತೋಷ್ ಕೈವಾಡವಿದೆ ಎನ್ನಲಾಗುತ್ತಿದ್ದು, ಬಿಜೆಪಿ ಮತ್ತೊಮ್ಮೆ ಭಿನ್ನಮತದ ಆಸ್ಪೋಟಕ್ಕೆ ತುತ್ತಾದರೂ ಅಚ್ಚರಿಯಿಲ್ಲ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!