Thursday, September 19, 2024

ಪ್ರಾಯೋಗಿಕ ಆವೃತ್ತಿ

ಕೆಲವು ಶ್ರೀಮಂತರ ಶೋಕಿ, ಮೌಢ್ಯ, ದುರಹಂಕಾರ……..

✍️ ವಿವೇಕಾನಂದ ಎಚ್.ಕೆ 

ಹುಲಿ ಉಗುರು, ಆನೆ ದಂತ, ನವಿಲು ಗರಿ, ಜಿಂಕೆ – ಹುಲಿಯ ಚರ್ಮ, ಮೀನಿನ ವಾಸ್ತು, ಹಾವಿನ ವಿಷ, ಸಾರಂಗದ ಕೊಂಬು, ಆನೆ – ಕರಡಿಯ ಕೂದಲು ಹೀಗೆ ಕೆಲವು ಸಂರಕ್ಷಿತ ಪ್ರಾಣಿಗಳ ವಸ್ತುಗಳನ್ನು ಉಪಯೋಗಿಸುವ ಖಯಾಲಿ…….

ಪ್ರಕೃತಿಯ ಮಡಿಲಿನ ರಾಷ್ಟ್ರಕವಿ ಕುವೆಂಪು ಒಂದು ಕಡೆ ಹೇಳುತ್ತಾರೆ ” ಹೂವು ಬಳ್ಳಿಗೆ ಅಲಂಕಾರವೇ ಹೊರತು ವಿಗ್ರಹಕ್ಕಲ್ಲ “. ಹಾಗೆಯೇ ವಚನಕಾರ ಅಂಬಿಗರ ಚೌಡಯ್ಯ ಒಂದು ವಚನದಲ್ಲಿ ಹೇಳುವ ಸಾರಾಂಶ ಹೀಗಿದೆ..

” ಆರೈಕೆಗೆ ಬಿತ್ತಿದ ಗಿಡದ ಹೂವನ್ನು ಕೊಯ್ದು, ಊರಿನವರು ಬಾಯಾರಿಕೆಗಾಗಿ ಕಟ್ಟಿಸಿದ ಕೆರೆಯ ನೀರನ್ನು ತಂದು, ನಾಡಿನ ಜನರೆಲ್ಲ ನೋಡಲಿ ಎಂದು ಆಡಂಬರಕ್ಕಾಗಿ, ಬಹಿರಂಗವಾಗಿ ಪೂಜೆ ಮಾಡುವುದು ತಪ್ಪು. ಹಾಗೆ ಪೂಜೆ ಮಾಡುವುದರಿಂದ ಅದರ ಪುಣ್ಯ ಹೂವಿಗೋ, ನೀರಿಗೋ ಅಥವಾ ಪೂಜಿಸಿದ ಮನುಷ್ಯನಿಗೋ ನನಗಂತೂ ಗೊತ್ತಿಲ್ಲ. ನಿನಗಾದರೂ ಗೊತ್ತಿದ್ದರೆ ಹೇಳು ಎಂದು ಅಂಬಿಗರ ಚೌಡಯ್ಯ ತನ್ನ ಇಷ್ಟ ದೈವವನ್ನು ಕೇಳುತ್ತಾರೆ ”

ಆದರೆ ಈ ಮೂರ್ಖ – ಅಮಾನವೀಯ ಕೆಲವು ಜ್ಯೋತಿಷ್ಯ ಶಾಸ್ತ್ರಕಾರರು ಮೇಲೆ ಹೇಳಿದ ಪ್ರಾಣಿಗಳ ಅಂಗಾಂಗಗಳು ಧರಿಸಿದರೆ ಮನುಷ್ಯರಿಗೆ ಲಾಭವಾಗುತ್ತದೆ ಎಂದು ಬಹಿರಂಗವಾಗಿ ಹೇಳುತ್ತಾರೆ. ತಪ್ಪು ಕಲ್ಪನೆಯ ಪರಮಾವಧಿ. ಮಾಧ್ಯಮಗಳಿಗೆ ಅವರೇ ಮಹತ್ವದ ವ್ಯಕ್ತಿಗಳು….

ಮನುಷ್ಯನ ಆಸೆಗಳಿಗೆ ಮಿತಿಯೇ ಇಲ್ಲ. ಸಣ್ಣ ಮಟ್ಟದ ನಟರುಗಳು ದೊಡ್ಡ ಸ್ಟಾರ್ ಗಳಾಗುವುದು, ಸಾಮಾನ್ಯ ವ್ಯಕ್ತಿಗಳು ಜನಪ್ರಿಯ ಸ್ವಾಮೀಜಿಗಳಾಗಿ ಖ್ಯಾತಿ ಪಡೆಯುವುದು, ಬಡ ಕಾರ್ಮಿಕ ಶ್ರೀಮಂತ ಉದ್ಯಮಿಯಾಗುವುದು, ಒಬ್ಬ ಪಕ್ಷದ ಕಾರ್ಯಕರ್ತ ಮಂತ್ರಿಯಂತ ಉನ್ನತ ಹುದ್ದೆಗೇರುವುದು ಈ ಸಮಾಜದಲ್ಲಿ ಸಹಜವಾಗಿ ನಡೆಯುತ್ತದೆ…….

ಇದಕ್ಕಾಗಿ ಅವರ ಶ್ರಮ, ಪ್ರತಿಭೆ, ಪರಿಸ್ಥಿತಿ ಎಲ್ಲವೂ ಕಾರಣವಾಗಿರುತ್ತದೆ. ಆದರೆ ಅದನ್ನು ಸರಿಯಾಗಿ ಅರ್ಥಮಾಡಿಕೊಳ್ಳದೆ, ಯಶಸ್ಸಿನ ನಂತರ ಅಷ್ಟಕ್ಕೇ ತೃಪ್ತಿಯಾಗಿ ಆ ಕ್ಷೇತ್ರದಲ್ಲಿ ಮತ್ತಷ್ಟು ಸಾಧನೆ ಮಾಡುತ್ತಾ, ಯಶಸ್ಸು ನೀಡಿದ ಸಮಾಜಕ್ಕೆ ನಿಷ್ಕಲ್ಮಶವಾಗಿ ಒಂದಷ್ಟು ಸಹಾಯ ಮಾಡುವುದನ್ನು ಮರೆತು ಮತ್ತಷ್ಟು ಸುಖ ಸಂತೋಷ ಹಣ ಅಧಿಕಾರದ ವ್ಯಾಮೋಹಕ್ಕೆ ಬಲಿಯಾಗಿ ಈ ರೀತಿಯ ಮೂಢನಂಬಿಕೆಗಳಿಂದ ಕಾನೂನು ಬಾಹಿರ, ಧರ್ಮ ಬಾಹಿರ ಕೆಲಸಗಳಲ್ಲಿ ತೊಡಗುವ ಇವರ ವರ್ತನೆಗೆ ಏನು ಹೇಳುವುದು……..

ಇಷ್ಟು ದಿನ ಈ ಬಗ್ಗೆ ಸರಿಯಾಗಿ ಸಾರ್ವಜನಿಕರಿಗೆ ಮಾಹಿತಿ ನೀಡಿ ಜಾಗೃತ ಗೊಳಿಸದ ಅರಣ್ಯ ಇಲಾಖೆಯವರ ಬೇಜವಾಬ್ದಾರಿ ಸಹ ಇಲ್ಲಿ ಎದ್ದು ಕಾಣುತ್ತದೆ…

ಮನುಷ್ಯನು ಸಹ ಒಂದು ಪ್ರಾಣಿ. ಆತನ ಯಾವ ಅಂಗಗಳೂ ಶ್ರೇಷ್ಠವೂ ಅಲ್ಲ ಕನಿಷ್ಠವೂ ಅಲ್ಲ. ಅದೊಂದು ಸಹಜ ಸೃಷ್ಟಿಯ ಕೊಡುಗೆ. ಅಷ್ಟು ಮಾತ್ರದ ಸಾಮಾನ್ಯ ಜ್ಞಾನವೂ ಇಲ್ಲದಾಯಿತೇ ಅಥವಾ ತನ್ನ ಅಂತಸ್ತಿನ ಪ್ರದರ್ಶನದ ದುರಹಂಕಾರವೇ……

ಈ‌ ಸಂದರ್ಭದಲ್ಲಿ ಈ ಸಮಾಜದಲ್ಲಿ ಪ್ರತಿನಿತ್ಯ ಅನರ್ಹ ಅಪಾಯಕಾರಿ ಶಾಸ್ತ್ರ ಹೇಳುವವರಿಂದ ಮೌಡ್ಯ ಬಿತ್ತಿ ಈ ರೀತಿಯ ಘಟನೆಗಳಿಗೆ ಪ್ರಚೋದನೆ ನೀಡುತ್ತಿರುವ ಮಾಧ್ಯಮಗಳ ಮೇಲೆ ಸಹ ಕ್ರಮ ಕೈಗೊಳ್ಳಬೇಕು. ಆಗ ಇದನ್ನು ಬುಡ ಸಮೇತ ಕಿತ್ತು ಹಾಕಬಹುದು.

ನೆನಪಿಡಿ, ಈ‌ ಸೃಷ್ಟಿಯಲ್ಲಿ ಎಲ್ಲರೂ ಸಹಜ ಆರೋಗ್ಯವಾಗಿ ಜೀವಿಸಬೇಕೆಂದರೆ ಪ್ರಕೃತಿಯ ಸಸ್ಯಗಳು, ಜೀವರಾಶಿಗಳು, ಬೆಟ್ಟ, ಗುಡ್ಡ, ಕಾಡು, ನದಿ, ಸಮುದ್ರ, ಸರೋವರ, ಹಿಮ ಪರ್ವತಗಳು, ಮರುಭೂಮಿಗಳು ಎಲ್ಲವೂ ತನ್ನ ಮೂಲ ಸ್ವರೂಪದಲ್ಲಿ ಅಸ್ತಿತ್ವದಲ್ಲಿ ಇರಬೇಕು. ಇಲ್ಲದಿದ್ದರೆ ಪ್ರಕೃತಿ ತನ್ನ ನಿಯಂತ್ರಣ ಮೀರುತ್ತದೆ. ಆಗ ಪ್ರಾಕೃತಿಕ ವಿಕೋಪಗಳು ಹೆಚ್ಚಾಗಿ ಎಲ್ಲಕ್ಕೂ ತೊಂದರೆಯಾಗುತ್ತದೆ. ಈಗ ಆಗುತ್ತಿರುವುದು ಸಹ ಅದೇ. ಇದನ್ನು ತಡೆಗಟ್ಟುವಲ್ಲಿ ಪ್ರತಿಯೊಬ್ಬ ನಾಗರಿಕರ ಜವಾಬ್ದಾರಿ ಇದೆ. ದಯವಿಟ್ಟು ಸ್ವಲ್ಪ ಎಚ್ಚರಿಕೆ ವಹಿಸಿ‌‌………

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!