Thursday, September 19, 2024

ಪ್ರಾಯೋಗಿಕ ಆವೃತ್ತಿ

ಇಸ್ರೇಲ್-ಹಮಾಸ್ ಸಂಘರ್ಷ| ವಿಶ್ವಸಂಸ್ಥೆಯ ನಿರ್ಣಯಕ್ಕೆ ಭಾರತ ಗೈರು: ಪ್ರಿಯಾಂಕ ಗಾಂಧಿ ಕಿಡಿ

ಇಸ್ರೇಲ್-ಹಮಾಸ್ ಸಂಘರ್ಷದ ಕುರಿತು ವಿಶ್ವಸಂಸ್ಥೆಯ ನಿರ್ಣಯಕ್ಕೆ ಭಾರತ ಗೈರಾಗಿದೆ. ಈ ಬಗ್ಗೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

”ಇಸ್ರೇಲ್ ದಾಳಿಯಿಂದ ಫೆಲೆಸ್ತೀನ್‌ನಲ್ಲಿ ಸಾವಿರಾರು ಪುರುಷರು, ಮಹಿಳೆಯರು ಮತ್ತು ಮಕ್ಕಳು ಸಾವಿಗೀಡಾಗುತ್ತಿರುವಾಗ ಭಾರತ ಮೌನವಾಗಿ ನೋಡುತ್ತಿದೆ. ಭಾರತವು ಪ್ರತಿಯೊಂದಕ್ಕೂ ವಿರುದ್ಧವಾಗಿ ನಿಲ್ಲುತ್ತಿದೆ” ಎಂದು ಪ್ರಿಯಾಂಕಾ ಹೇಳಿದ್ದಾರೆ.

ಇಸ್ರೇಲ್-ಹಮಾಸ್ ಸಂಘರ್ಷದಲ್ಲಿ ತಕ್ಷಣದ ಮಾನವೀಯ ಒಪ್ಪಂದ ಮತ್ತು ಗಾಝಾ ಪಟ್ಟಿಯಲ್ಲಿ ಅಡೆತಡೆಯಿಲ್ಲದ ಮಾನವೀಯ ಪ್ರವೇಶಕ್ಕಾಗಿ ಕರೆ ನೀಡಿ ‘ನಾಗರಿಕರ ರಕ್ಷಣೆ ಮತ್ತು ಕಾನೂನು ಮತ್ತು ಮಾನವೀಯ ಜವಾಬ್ದಾರಿಗಳನ್ನು ಎತ್ತಿಹಿಡಿಯುವುದು’ ಎಂಬ ಶೀರ್ಷಿಕೆಯ ಜೋರ್ಡಾನ್ ಕರಡು ನಿರ್ಣಯದ ಮೇಲೆ ನಡೆದ ಮತದಾನದಿಂದ ಭಾರತ ದೂರ ಉಳಿದಿದೆ.

ಈ ವಿಚಾರವಾಗಿ ಎಕ್ಸಾನಲ್ಲಿ ಪೋಸ್ಟ್ ಮಾಡಿದ ಪ್ರಿಯಾಂಕಾ ಗಾಂಧಿ, ”ಮಹಾತ್ಮಗಾಂಧಿಯವರ “ಕಣ್ಣಿಗೆ ಒಂದು ಕಣ್ಣು ಇಡೀ ಜಗತ್ತನ್ನು ಕುರುಡನನ್ನಾಗಿ ಮಾಡುತ್ತದೆ’ ಎಂಬ ಹೇಳಿಕೆಯನ್ನು ಉಲ್ಲೇಖಿಸಿದ್ದಾರೆ.

”ಗಾಝಾದಲ್ಲಿ ಕದನ ವಿರಾಮಕ್ಕಾಗಿ ನಡೆದ ಮತದಾನದಿಂದ ನಮ್ಮ ದೇಶವು ದೂರ ಉಳಿದಿರುವುದಕ್ಕೆ ನನಗೆ ಆಘಾತ ಮತ್ತು ನಾಚಿಕೆಯಾಗುತ್ತಿದೆ” ಎಂದು ಹೇಳಿದ್ದಾರೆ.

”ನಮ್ಮ ದೇಶವು ಅಹಿಂಸೆ ಮತ್ತು ಸತ್ಯದ ತತ್ವಗಳ ಮೇಲೆ ಸ್ಥಾಪಿತವಾಗಿದೆ, ನಮ್ಮ ಸ್ವಾತಂತ್ರ್ಯ ಹೋರಾಟಗಾರರು ತಮ್ಮ ಪ್ರಾಣವನ್ನು ಅರ್ಪಿಸಿದ ತತ್ವಗಳು, ಈ ತತ್ವಗಳು ನಮ್ಮ ರಾಷ್ಟ್ರೀಯತೆಯನ್ನು ವ್ಯಾಖ್ಯಾನಿಸುವ ಸಂವಿಧಾನದ ಆಧಾರವಾಗಿದೆ” ಎಂದು ಅವರು ಹೇಳಿದ್ದಾರೆ.

ಶುಕ್ರವಾರವೂ ಈ ವಿಚಾರವಾಗಿ ಎಕ್ಸಾನಲ್ಲಿ ಪೋಸ್ಟ್ ಮಾಡಿದ್ದ ಅವರು, ”ಗಾಝಾದಲ್ಲಿ 7,000 ಜನರನ್ನು ಕೊಂದ ನಂತರವೂ ರಕ್ತಪಾತ ಮತ್ತು ಹಿಂಸಾಚಾರದ ಚಕ್ರ ನಿಂತಿಲ್ಲ. ಈ 7,000 ಜನರಲ್ಲಿ 3,000 ಮುಗ್ಧ ಮಕ್ಕಳು” ಎಂದು ಪ್ರಿಯಾಂಕಾ ಗಾಂಧಿ ಬೇಸರ ವ್ಯಕ್ತಪಡಿಸಿದ್ದರು.

”ಇನ್ನೂ ಎಷ್ಟು ಜೀವಗಳನ್ನು ಕಳೆದುಕೊಂಡ ನಂತರ, ಮಾನವೀಯತೆಯ ಸಾಮೂಹಿಕ ಪ್ರಜ್ಞೆಯು ಅಂತಿಮವಾಗಿ ಜಾಗೃತವಾಗುತ್ತದೆ? ಅಥವಾ ಅಂತಹ ಪ್ರಜ್ಞೆಯು ಈಗ ಉಳಿದಿಲ್ಲವೇ?” ಎಂದು ಪ್ರಿಯಾಂಕಾ ಗಾಂಧಿ ಪ್ರಶ್ನಿಸಿದ್ದರು.

ವಿಶ್ವ ಸಂಸ್ಥೆಯ ಸಾಮಾನ್ಯ ಅಧಿವೇಶನದಲ್ಲಿ ಮಂಡಿಸಲಾದ ಈ ಗೊತ್ತುವಳಿಗೆ 120 ದೇಶಗಳು ಬೆಂಬಲ ಸೂಚಿಸಿದರೆ, ಇಸ್ರೇಲ್, ಅಮೆರಿಕಾ, ಹಂಗೇರಿ ಹಾಗೂ ಐದು ಪೆಸಿಫಿಕ್ ದ್ವೀಪ ರಾಷ್ಟ್ರಗಳನ್ನು ಒಳಗೊಂಡಂತೆ ಕೇವಲ 14 ದೇಶಗಳು ಮಾತ್ರ ಅದರ ವಿರುದ್ಧ ಮತ ಚಲಾಯಿಸಿದವು.

ಮತದಾನದಿಂದ ದೂರ ಉಳಿದ 45 ರಾಷ್ಟ್ರಗಳ ಪೈಕಿ ಭಾರತವೂ ಒಂದಾಗಿದ್ದು, ಅವೆಲ್ಲವೂ ಪಾಶ್ಚಿಮಾತ್ಯ ಸೇನಾ ಮೈತ್ರಿಕೂಟದ ಭಾಗವಾಗಿವೆ. ಅವೆಲ್ಲವೂ ಶುಕ್ರವಾರ ಮಧ್ಯಾಹ್ನ ನ್ಯೂಯಾರ್ಕ್ ನಲ್ಲಿ ನಡೆದ ತುರ್ತು ವಿಶ್ವ ಸಂಸ್ಥೆ ಸಾಮಾನ್ಯ ಅಧಿವೇಶನದ ಮತದಾನದಿಂದ ದೂರ ಉಳಿಯುವ ನಿರ್ಧಾರಕ್ಕೆ ಬಂದವು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!