ವೈಜ್ಞಾನಿಕ ಕೃಷಿ ,ಸಮರ್ಪಕ ಯಾಂತ್ರೀಕರಣ, ಸಮಗ್ರ ಬೇಸಾಯ ಪದ್ದತಿ ಅಳವಡಿಕೆಯಿಂದ ರೈತರ ಆರ್ಥಿಕತೆ ಹೆಚ್ಚಿಸಲಿದೆ ಎಂದು ಕೃಷಿ ಸಚಿವರಾದ ಎನ್ ಚಲುವರಾಯಸ್ವಾಮಿ ತಿಳಿಸಿದ್ದಾರೆ.
ಕೊಡಗು ಜಿಲ್ಲೆಯ ಪೊನ್ನಂಪೇಟೆಯ ಕೂರ್ಗ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಯಲ್ಲಿ ಏರ್ಪಡಿಸಿರುವ ಮೂರು ದಿನಗಳ ಕೃಷಿ ಯಂತ್ರ ಮೇಳವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜನಸಾಮಾನ್ಯರು, ಕೃಷಿಕರ ಶ್ರೇಯೋಭಿವೃದ್ದಿಗೆ ನಮ್ಮ ಸರ್ಕಾರದ ಆದ್ಯತೆ ನೀಡಲಿದೆ ಎಂದರು.
ರಾಜ್ಯದ ಸರ್ಕಾರದ ಕೃಷಿಕರ ಅನುಕೂಲಕ್ಕಾಗಿ 600ಕ್ಕೂ ಹೆಚ್ಚು ಯಂತ್ರಧಾರೆ ಕೇಂದ್ರ ಗಳನ್ನು ತೆರದಿದೆ,
ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚು ಯಾಂತ್ರೀಕರಣ ಪ್ರೋತ್ಸಾಹ ಯೋಜನೆ ಜಾರಿಗೆ ತರಲಾಗುತ್ತಿದೆ ಎಂದು ಹೇಳಿದರು.
ಕಟಾವು ಹಬ್ ಸ್ಥಾಪನೆಗೆ 50 ಕೋಟಿ
ರಾಜ್ಯದಲ್ಲಿ ಹೈಟೆಕ್ ಕಟಾವು ಹಬ್ ಸ್ಥಾಪನೆಗೆ 50 ಕೋಟಿ ಮೀಸಲಿರಿಸಲಾಗಿದ್ದು 70:30ರ ಸಹಾಯಧನ- ಬಂಡವಾಳ ಹೂಡಿಕೆ ಅನುಪಾತದಲ್ಲಿ ರೈತರೇ ಇದನ್ನು ಸ್ಥಾಪಿಸಿ ನಡೆಸ ಬಹುದಾಗಿದೆ ಎಂದು ಸಚಿವರು ಹೇಳಿದರು.
ಕೂರ್ಗ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆ ವತಿಯಿಂದ ಖಾಸಗಿಯಾಗಿ ವಿದ್ಯಾರ್ಥಿಗಳಿಗೆ ಕೃಷಿಯಲ್ಲಿ ತಾಂತ್ರಿಕ ಶಿಕ್ಷಣ ನಿಡುತ್ತಿರುವುದು ಹಾಗೂ ಕೃಷಿಗೆ ಪೂರಕವಾದ ಯಂತ್ರ ಮೇಳವನ್ನು ಆಯೋಜಿಸಿರುವುದು ಅಭಿನಂದನಾರ್ಹ ಎಂದು ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು .
ಕಾವೇರಿ, ನಮ್ಮ ನಾಡಿನ ಜೀವನದಿ ಕೊಡಗಿನಲ್ಲಿ ಹುಟ್ಟಿ ರಾಜ್ಯದ ಕೋಟ್ಯಾಂತರ ಜನರ ಜೀವನಾಧಾರವಾಗಿ ಹರಿಯುತ್ತಿದೆ. ಈ ಬಾರಿ ಬರ ಪರಿಸ್ಥಿತಿ ತಲೆದೋರಿದ್ದು ನೀರಿನ ಹಂಚಿಕೆ ಸಮಸ್ಯೆಯೂ ಉದ್ಭವವಾಗಿದೆ. ಕೇಂದ್ರಕ್ಕೆ ಬೆಳೆ ಪರಿಹಾರಕ್ಕೆ ಮನವಿ ಸಲ್ಲಿಸಿದ್ದೇವೆ . ರಾಜ್ಯ ಸರ್ಕಾರ ರೈತರ ಹಿತ ಕಾಯಲು ಬದ್ದವಾಗಿದೆ ಎಂದು ತಿಳಿಸಿದರು.
ವೀರರ ನಾಡು
ಕೊಡಗು ವಿಭಿನ್ನ ಸಂಸ್ಕೃತಿ, ಸುಂದರ ಪ್ರಕೃತಿ ಹೊಂದಿರುವ ವೀರರ ನಾಡು, ಇಲ್ಲಿಗೆ ಭೇಟಿ ನೀಡುವುದೇ ಒಂದು ಸಂತೋಷ ಎಂದು ಅವರು ಅಭಿಮಾನದ ನುಡಿಗಳನ್ನಾಡಿದರು.
ರಾಜ್ಯದಲ್ಲಿ ನೂತನ ಸರ್ಕಾರದ ಬಂದು ನಾಲ್ಕು ತಿಂಗಳಲ್ಲಿ ನಾವು ನೀಡಿದ ಭರವಸೆ ಈಡೇರಿಸಿದ್ದೇವೆ. ನುಡಿದಂತೆ ನಡೆದಿದ್ದು ಜನಪರ ಯೋಜನೆಗಳನ್ನು ಜಾರಿಗೆ ತರುತ್ತಿದ್ದೇವೆ. ರೈತರಿಗೆ 5 ಲಕ್ಷ ರೂ.ಗಳವರಗೆ ಶೂನ್ಯ ಬಡ್ಡಿದರದಲ್ಲಿ ಸಾಲ, ಸ್ತ್ರೀ ಶಕ್ತಿ,ಸ್ವಸಹಾಯ ಸಂಘಗಳಿಗೂ ಆರ್ಥಿಕ ನೆರವು ಒದಗಿಸುತ್ತಿದೆ ಎಂದು ಅವರು ವಿವರಿಸಿದರು.
ಗೃಹಲಕ್ಷ್ಮಿ ಯೋಜನೆ ಎಲ್ಲಾ ಅರ್ಹ ಫಲಾನುಭವಿಗಳಿಗೆ ತಲುಪಬೇಕಿದೆ. ಹಾಗಾಗಿ ಪ್ರತಿ ಮನೆಯ ಸಮೀಕ್ಷೆ ನಡೆಸಿ ಬಿಟ್ಟು ಹೋದವರನ್ನು ಗುರುತಿಸಿ ಸೌಲಭ್ಯ ಒದಗಿಸಲು ಎಲ್ಲಾ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಸಿ.ಇ.ಒಗಳಿಗೆ ಸೂಚನೆ ನೀಡಲಾಗಿದೆ ಎಂದು ಸಚಿವರಾದ ಚಲುವರಾಯಸ್ವಾಮಿ ತಿಳಿಸಿದರು..
ಇದೇ ವೇಳೆ ಮುಖ್ಯಮಂತ್ರಿಯವರ ಕಾನೂನು ಸಲಹೆಗಾರಾದ ಎ.ಎಸ್ ಪೊನಣ್ಣ ಅವರ ವ್ಯಕ್ತಿತ್ವ, ಜನಪರ ಕಾಳಜಿ ಬಗ್ಗೆ ಕೃಷಿ ಸಚಿವರು ಶ್ಲಾಘಿಸಿದರು. ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರಾದ ಎ.ಎಸ್ ಪೊನ್ನಣ್ಣ ಅವರು ಕೃಷಿಯ ಪ್ರಾಮುಖ್ಯತೆ, ತಂತ್ರಜ್ಞಾನ ಅಳವಡಿಕೆಯ ಲಾಭ , ರಾಜ್ಯ ಸರ್ಕಾರದ ಜನಪರ ಕಾಳಜಿ ಬಗ್ಗೆ ವಿವರಿಸಿದರು.
ಇದೇ ವೇಳೆ ಸಮಾರಂಭದಲ್ಲಿ ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹಲವರನ್ನು ಸನ್ಮಾನಿಸಲಾಯಿತು. ಕೃಷಿ ಸಚಿವರಾದ ಎನ್ ಚಲುವರಾಯಸ್ವಾಮಿ ಅವರು ಇಂದು ಕೊಡಗು ಜಿಲ್ಲೆ ಪೊನ್ನಂಪೇಟೆ ತಾಲ್ಲೂಕಿನ ಶ್ರೀಮಂಗಲ ಗ್ರಾಮದಲ್ಲಿ, 66/11ಕೆ.ವಿ ವಿದ್ಯುತ್ ಉಪಕೇಂದ್ರ ಉದ್ಘಾಟಿಸಿದರು. ಮುಖ್ಯಮಂತ್ರಿಯವರ ಕಾನೂನು ಸಲಹೆಗಾರರಾದ ಎ.ಎಸ್ ಪೊನ್ನಣ್ಣ, ಲೋಕಸಭಾ ಸದಸ್ಯರಾದ ಪ್ರತಾಪ್ ಸಿಂಹ ಮತ್ತಿತರರು ಹಾಜರಿದ್ದರು




