Thursday, September 19, 2024

ಪ್ರಾಯೋಗಿಕ ಆವೃತ್ತಿ

ಭ್ರಷ್ಟಾಚಾರ ಸಾಂಕ್ರಾಮಿಕ ರೋಗವಿದ್ದಂತೆ, ಅದರಲ್ಲಿ ಸಿಲುಕಬೇಡಿ- ಸುಜೀತ್

ಭ್ರಷ್ಟಾಚಾರ ಸಾಂಕ್ರಾಮಿಕ ರೋಗವಿದ್ದಂತೆ. ಅದರಲ್ಲಿ ಸಿಲುಕಿ ಹಾಕಿಕೊಂಡು ತೊಂದರೆ ಅನುಭವಿಸುವದಕ್ಕಿಂತ ಭ್ರಷ್ಟಾಚಾರದಲ್ಲಿ ತೊಡಗಿಕೊಳ್ಳದೆ ಪ್ರಾಮಾಣಿಕ ಕರ್ತವ್ಯಕ್ಕೆ ಅಧಿಕಾರಿಗಳು ಮುಂದಾಗಬೇಕು ಎಂದು ಜಿಲ್ಲಾ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ವಿ.ಜೆ.ಸುಜೀತ್ ಹೇಳಿದರು.

ಕೆ.ಆರ್.ಪೇಟೆ ಪಟ್ಟಣದ ಟಿ.ಎ.ಪಿ.ಸಿ.ಎಂ.ಎಸ್ ಸಮುದಾಯ ಭವನದಲ್ಲಿ ಕರ್ನಾಟಕ ಲೋಕಾಯುಕ್ತ ಹಮ್ಮಿಕೊಂಡಿದ್ದ ಭ್ರಷ್ಟಾಚಾರ ವಿರುದ್ಧ ಜಾಗೃತಿ ಅರಿವು ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿದವರು.

ದೇಶದ ಆರ್ಥಿಕ, ಸಾಮಾಜಿಕ ಅಭಿವೃದ್ಧಿಗೆ ಭ್ರಷ್ಟಾಚಾರ ಅಡಚಣೆಯಾಗಿದೆ, ಭ್ರಷ್ಟಾಚಾರ ಕಡಿಮೆ ಇರುವ ರಾಷ್ಟ್ರಗಳು ಎಲ್ಲ ವಲಯಗಳಲ್ಲೂ ಪ್ರಗತಿಪಥದತ್ತ ಸಾಗಿವೆ. ದೇಶದ ನ್ಯಾಯಾಂಗ, ಕಾರ್ಯಾಂಗ ಹಾಗೂ ಶಾಸಕಾಂಗದಲ್ಲಿ ಪಾರದರ್ಶಕತೆಯ ಬದಲಾವಣೆಯ ಮೂಲಕ ಭ್ರಷ್ಟಾಚಾರ ನಿರ್ಮೂಲನೆ ಸಾಧ್ಯ. ಇದರಿಂದ ರಾಷ್ಟ್ರದ ಸುವರ್ಣ ಯುಗ ಪ್ರಾರಂಭವಾಗಲಿದೆ ಎಂದರು.

ಕೇಂದ್ರ ಸರ್ಕಾರದ ನಿರ್ದೇಶನದಂತೆ ಜಿಲ್ಲೆಯ ಪ್ರತಿ ತಾಲೂಕಿನಲ್ಲೂ ಭ್ರಷ್ಟಾಚಾರ ನಿರ್ಮೂಲನೆ ಕುರಿತು ಅರಿವು ಮೂಡಿಸುತ್ತಿದ್ದೇವೆ. ಸರ್ಕಾರಿ ನೌಕರರು, ಖಾಸಗಿ ವಲಯಗಳ ನೌಕರರು ಸೇರಿದಂತೆ ಭ್ರಷ್ಟಾಚಾರ ನಿರ್ಮೂಲನೆಗೆ ಕೈ ಜೋಡಿಸಬೇಕು. ಸ್ವಯಂ ಪ್ರೇರಿತವಾಗಿ ಭ್ರಷ್ಟಾಚಾರ ನಿರ್ಮೂಲನೆಗೆ ಅನೇಕರು ಹೋರಾಡುತ್ತಿದ್ದಾರೆ, ಅಂತಹ ಪ್ರಜ್ಞಾವಂತರಿಗೆ ಬೆಂಬಲ ನೀಡಬೇಕು, ಜನಸಾಮಾನ್ಯರು ತಮ್ಮ ಕೆಲಸಗಳಿಗಾಗಿ ಸರ್ಕಾರಿ ಕಚೇರಿಗಳಿಗೆ ಬರುತ್ತಾರೆ. ಅವರಿಗೆ ಸಬೂಬು, ವಾಯಿದೆ ಹೇಳದೇ ಅವರ ಕೆಲಸಗಳನ್ನು ಆದಷ್ಟು ಶೀಘ್ರವಾಗಿ ಮಾಡಿಕೊಡಬೇಕು.ಹಾಗಾದಾಗ ಸರ್ಕಾರಿ ವ್ಯವಸ್ಥೆಯ ಬಗ್ಗೆ ಅವರಿಗೆ ಮೆಚ್ಚುಗೆ ಮೂಡುತ್ತದೆ ಎಂದು ಅರಿವು ಮೂಡಿಸಿದರು.

ಲೋಕಾಯುಕ್ತ ಪೊಲೀಸ್ ಇನ್ಸ್ಪೆಕ್ಟರ್ ಪ್ರಕಾಶ್ ಮಾತನಾಡಿ ಉನ್ನತ ಗುಣಮಟ್ಟದ ಪ್ರಾಮಾಣಿಕ ಮತ್ತು ನಿಷ್ಠೆಗೆ ನಾವು ಬದ್ಧರಾಗಿರಬೇಕು ಹಾಗೂ ಭ್ರಷ್ಟಾಚಾರದ ವಿರುದ್ಧದ ಹೋರಾಟವನ್ನು ಬೆಂಬಲಿಸಬೇಕು. ಸಾರ್ವಜನಿಕ ಆಡಳಿತದ ಎಲ್ಲಾ ಕ್ಷೇತ್ರಗಳಲ್ಲಿ ಭ್ರಷ್ಟಾಚಾರವನ್ನು ತೊಲಗಿಸಿ ಉತ್ತಮ ಆಡಳಿತಕ್ಕಾಗಿ ಪ್ರಾಮಾಣಿಕ ನೀತಿಗಳನ್ನು ರೂಪಿಸಿ ಪರಿಣಾಮಕಾರಿಯಾಗಿ ಅವುಗಳನ್ನು ಜಾರಿಗೊಳಿಸಲು ಮತ್ತು ಇಂದಿನ ವ್ಯವಸ್ಥೆಯನ್ನು ಸುಧಾರಿಸಲು ಸಂಬಂಧಪಟ್ಟವರೆಲ್ಲರನ್ನು ಒಗ್ಗೂಡಿಸಿ ಜಾಗೃತಿ ಮೂಡಿಸುವುದು ಈ ಸಪ್ತಾಹದ ಉದ್ದೇಶವಾಗಿರುತ್ತದೆ ಎಂದರು.

ತಹಶೀಲ್ದಾರ್ ನಿಸರ್ಗಪ್ರಿಯ ಮಾತನಾಡಿ, ಈ ದಿನ ಪ್ರತಿಜ್ಞಾ ಬೋಧನೆ ಸ್ವೀಕರಿಸಿದ್ದೀರಿ, ಅದನ್ನಯ ಜೀವನದಲ್ಲಿ ಮೈಗೂಡಿಸಿಕೊಂಡು ಸಾರ್ವಜನಿಕರ ಹಿತ ಕಾಪಾಡಲು ಬದ್ದರಾಗಿ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಿ ಎಂದರು.

ಲೋಕಾಯುಕ್ತ ಪೊಲೀಸ್ ಇನ್ಸ್ಪೆಕ್ಟರ್ ಬ್ಯಾಟರಾಯಿಗೌಡ ಭ್ರಷ್ಟಾಚಾರದ ವಿರುದ್ಧದ ಜಾಗೃತಿ ಸಪ್ತಾಹದ ಪ್ರತಿಜ್ಞಾ ವಿಧಿ ಬೋಧಿಸಿದರು.

ಈ ಸಂದರ್ಭದಲ್ಲಿ ಲೋಕಾಯುಕ್ತ ಪೊಲೀಸ್ ಇನ್ಸ್ಪೆಕ್ಟರ್ ಮೋಹನ್ ರೆಡ್ಡಿ, ತಾ.ಪಂ.ಕಾರ್ಯನಿರ್ವಾಹಕ ಸತೀಶ್, ಕ್ಷೇತ್ರ ಶಿಕ್ಷಣಾಧಿಕಾರಿ ಸೀತಾರಾಮ್, ಪುರಸಭಾ ಮುಖ್ಯ ಅಧಿಕಾರಿ ಜಗನ್ ರೆಡ್ಡಿ, ಎ.ಡಿ.ಎಲ್.ಆರ್ ಸಿದ್ದಯ್ಯ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!