Friday, September 20, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ವಿವಿಧೆಡೆ ಜೆಡಿಎಸ್ ನಾಯಕರಿಂದ ಬರ ಅಧ್ಯಯನ

ಜಾತ್ಯತೀತ ಜನತಾದಳದ ತಂಡವು ಮಂಡ್ಯ ವಿಧಾನಸಭಾ ಕ್ಷೇತ್ರದ ಬಸರಾಳು ಹೋಬಳಿಯ ಹನಗನಹಳ್ಳಿ ಹಾಗೂ ನಂದಹಳ್ಳಿ, ಮೇಲುಕೋಟೆ ವಿಧಾನಸಭಾ ಕ್ಷೇತ್ರದ ದುದ್ದ ಹೋಬಳಿಯ ಪುರದಕೊಪ್ಪಲು ಗ್ರಾಮಗಳಲ್ಲಿ ಬರ ಪರಿಸ್ಥಿತಿಯ ಅಧ್ಯಯನ ನಡೆಸಿತು.

ಹನಗನಹಳ್ಳಿಯ ರಾಮೇಗೌಡ ಅವರ ಜಮೀನಿಗೆ ಭೇಟಿ ನೀಡಿ ಟಮೋಟೋ ಬೆಳೆ,ನಂದಹಳ್ಳಿಯ ರೈತರ ಜಮೀನಿನಲ್ಲಿ ಬೆಳೆದಿರುವ ಜೋಳದ ಬೆಳೆ,ಪುರದಕೊಪ್ಪಲು ಶಂಕರೇಗೌಡ ಅವರ ಜಮೀನಿನಲ್ಲಿ ಬೆಳೆದಿರುವ ಬಾಳೆ ಬೆಳೆಗಳು ಹಾಳಾಗಿರುವುದನ್ನು ವೀಕ್ಷಿಸಿತು.

ಅಧ್ಯಯನ ನಡೆಸಿ ವರದಿ

ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಮಾತನಾಡಿ,ಬರಗಾಲದ ಸಂಕಷ್ಟದ ಬಗ್ಗೆ ವಸ್ತು ಸ್ಥಿತಿ ಅಧ್ಯಯನ ನಡೆಸಿ ವರದಿ ಸಲ್ಲಿಸಲಾಗುವುದು,ಪಕ್ಷದ ಶಾಸಕಾಂಗ ನಾಯಕ ಎಚ್.ಡಿ. ಕುಮಾರಸ್ವಾಮಿ ಮತ್ತು ವರಿಷ್ಠರಾದ ಎಚ್.ಡಿ.ದೇವೇಗೌಡ ಬರ ಪರಿಸ್ಥಿತಿ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಗಮನ ಸೆಳೆದು ರೈತರ ಸಂಕಷ್ಟಕ್ಕೆ ಸ್ಪಂದಿಸಲಿದ್ದಾರೆ ಎಂದರು.

nudikarnataka.com

ಕೇಂದ್ರ ಪರಿಹಾರ ಕೊಟ್ಟಿಲ್ಲ ಎಂದು ಬೊಬ್ಬೆ ಹಾಕುತ್ತಿರುವ ರಾಜ್ಯ ಸರ್ಕಾರಕ್ಕೆ ಜವಾಬ್ದಾರಿ ಇದ್ದರೆ ಇಷ್ಟೊತ್ತಿಗೆ ರೈತರ ಸಂಕಷ್ಟಕ್ಕೆ ಸ್ಪಂದಿಸುತ್ತಿತ್ತು,ಹವಾನಿಯಂತ್ರಿತ ಕೊಠಡಿಯಲ್ಲಿ ಸಿದ್ಧಪಡಿಸಿದ ವರದಿಯನ್ನು ತರಿಸಿಕೊಂಡಿದೆ.ಆದರೆ ವಾಸ್ತವ ಪರಿಸ್ಥಿತಿ ಬೇರೆ ಇದೆ, ರೈತರನ್ನು ಭೇಟಿಯಾದಾಗ ವಿದ್ಯುತ್ ಸಮಸ್ಯೆ,ಕೆರೆ ಕಟ್ಟೆಗಳಲ್ಲಿ ನೀರಿಲ್ಲದಿರುವುದು,ಬೆಳೆಗಳೆಲ್ಲ ಒಣಗಿರುವುದು, ಹೇಮಾವತಿ ನದಿ ಪಾತ್ರದಲ್ಲಿ ನೀರಿಲ್ಲದೆ ಬೆಳೆ ಹಾಕದಿರುವುದು ಕಂಡು ಬಂದಿದೆ ಎಂದರು.

ಅಧಿಕಾರಿಗಳ ತಂಡ ರೈತರನ್ನು ಖುದ್ದು ಭೇಟಿಯಾಗಿಲ್ಲ,ಜಮೀನುಗಳಲ್ಲಿನ ಪರಿಸ್ಥಿತಿ ನೋಡಿಲ್ಲ,ಒಣಗಿರುವ ಬೆಳೆಗಳನ್ನು ಕಂಡಿಲ್ಲ ಆದರೂ ಸಹ ವರದಿ ಸಿದ್ದಪಡಿಸಿ ಸರ್ಕಾರಕ್ಕೆ ಸಲ್ಲಿಸಿದ್ದಾರೆ, ಬರ ಪರಿಸ್ಥಿತಿ ಬಗ್ಗೆ ಚಳಿಗಾಲದ ಅಧಿವೇಶನದಲ್ಲಿ ಪಕ್ಷದ ಶಾಸಕರು ಧ್ವನಿ ಎತ್ತಲಿದ್ದಾರೆ ಎಂದರು.

ಪರಿಹಾರ ಕೊಡಲಿ

ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಮಾತನಾಡಿ ಬರ ಪರಿಹಾರ ನೀಡುವಲ್ಲಿ ರಾಜ್ಯ ಸರ್ಕಾರ ಮೊದಲು ತನ್ನ ಜವಾಬ್ದಾರಿ ನಿರ್ವಹಿಸಲಿ. ಕೇವಲ ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡೋದಲ್ಲ. ಮೊದಲು ತಮ್ಮ ಪಾಲಿನ ಬರ ಪರಿಹಾರ ಕೊಡಲಿ. ಆ ಮೂಲಕ ಜವಾಬ್ದಾರಿಯುತ ಸರ್ಕಾರ ಅನ್ನೋದನ್ನ ಸಾಬೀತು ಮಾಡಲಿ ಎಂದು ತಿಳಿಸಿದರು.

ಮಾಜಿ ಶಾಸಕ ಕೆ.ಸುರೇಶ್ ಗೌಡ ಮಾತನಾಡಿ,ರಾಜ್ಯ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ,ಬರ ಪರಿಹಾರಕ್ಕೆ ದುಡ್ಡಿಲ್ಲ ಎಂದು ಕೇಂದ್ರ ಸರ್ಕಾರದ ಕಡೆ ಬೊಟ್ಟು ಮಾಡುತ್ತಿದೆ, ವಸ್ತು ಸ್ಥಿತಿ ಅಧ್ಯಯನ ಮಾಡಿ ನೈಜ ವರದಿ ಸಲ್ಲಿಕೆ ಮಾಡದೆ, ಅವ್ಯೆಜ್ಞಾನಿಕವಾಗಿ ವರದಿ ಸಿದ್ದಪಡಿಸಿ ಕೇಂದ್ರಕ್ಕೆ ನೀಡಿದೆ. ನೈಜ ವರದಿ ನೀಡಿದ್ದರೆ ಇಷ್ಟೊತ್ತಿಗೆ ಕೇಂದ್ರದ ಅನುದಾನ ಬರುತ್ತಿತ್ತು,ಅಧಿಕಾರಿಗಳ ತಂಡ ರೈತರ ಜಮೀನುಗಳಿಗೆ ಹೋಗಿ ಸಮೀಕ್ಷೆ ಮಾಡಿದ್ದಾರಾ,ಶಾಸಕರು,ಸಚಿವರು ಖುದ್ದಾಗಿ ಭೇಟಿಯಾಗಿ ವರದಿ ಸಿದ್ದಪಡಿಸಿದ್ಧಾರಾ ? ಸಚಿವ ಚೆಲುವರಾಯಸ್ವಾಮಿ ಎಲ್ಲಿಗೆ ಹೋಗಿ ಸಮೀಕ್ಷೆ ಮಾಡಿದ್ದಾರೆ, ಅವರ ಸ್ವಗ್ರಾಮದ ಪಕ್ಕದ ಊರಿಗೂ ಹೋಗಿಲ್ಲ ಎಂದು ಹೇಳಿದರು.

ರಾಜ್ಯ ಸರ್ಕಾರ ಇದುವರೆಗೆ ಬರ ಪರಿಹಾರ ನೀಡಿಲ್ಲ,ಕೇಂದ್ರ ಸರ್ಕಾರ ಹಣ ನೀಡುತ್ತಿಲ್ಲ ಎಂದು ಕಾಲಹರಣ ಮಾಡುತ್ತಿದೆ, ಕೇಂದ್ರದ ಮೇಲೆ ಜಾದಳ ಒತ್ತಡ ಹಾಕಲಿ ಎನ್ನುವವರು ರಾಜೀನಾಮೆ ಕೊಟ್ಟು ಹೋಗಲಿ ಎಂದು ಒತ್ತಾಯಿಸಿದರು.

ಗ್ಯಾರಂಟಿಯಿಂದ ಆರ್ಥಿಕ ದಿವಾಳಿಯಾಗಿರುವ ರಾಜ್ಯ ಪಾಪರ್ ಚೀಟಿ ಸರ್ಕಾರವಾಗಿದ್ದು, ಎಚ್ ಡಿ ಕುಮಾರಸ್ವಾಮಿ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿರುವ ಕಾಂಗ್ರೆಸ್ ಗೆ ಜನತೆ ಉತ್ತರ ನೀಡಲಿದ್ದಾರೆ,
ಕೆರೆ ಕಬಳಿಸಿರುವ ಸಚಿವ ಚೆಲುವರಾಯಸ್ವಾಮಿ ವಿರುದ್ಧ ತನಿಖೆ ಮಾಡಲಿ.ಅಸಲಿತನ ಗೊತ್ತಾಗಲಿದೆ, ಕೆರೆಯನ್ನು ಯಾರಿಗಾದರೂ ಮಂಜೂರು ಮಾಡಿಕೊಡಲು ಕಾನೂನಿನಲ್ಲಿ ಅವಕಾಶ ಇದೆಯಾ ಎಂದು ಪ್ರಶ್ನಿಸಿದರು.
ಸಚಿವ ಚೆಲುವರಾಯಸ್ವಾಮಿ ಕಂಪ್ಯೂಟರ್ ಪರಿಣಿತರು,ಅವರು ಕಟ್ ಅಂಡ್ ಫೆಸ್ಟ್ ನಲ್ಲಿ ನಿಸ್ಸಿಮರು ಎಂದು ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ವಿಡಿಯೋ ವೈರಲ್ ಪ್ರಕರಣ ಕುರಿತು ಪ್ರತಿಕ್ರಿಯಿಸಿದರು.

ಶಾಸಕ ಎಚ್.ಟಿ.ಮಂಜು ಮಾತನಾಡಿ,ವಿದ್ಯುತ್ ಕಳ್ಳತನ ಮಾಡಿದ್ದಾರೆ ಎಂದು ಆರೋಪ ಮಾಡುವ ಕಾಂಗ್ರೆಸ್ ಪಕ್ಷಕ್ಕೆ ಎಚ್.ಡಿ.ಕುಮಾರಸ್ವಾಮಿ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ,ವಿಕೃತ ಮನಸ್ಸಿನ ಕಾಂಗ್ರೆಸ್ಸಿಗರು ರಾಜಕೀಯ ತೆವಲಿಗಾಗಿ ಮಾತನಾಡುತ್ತಿದ್ದು, ಇವರ ಕಳ್ಳತನ ಗೊತ್ತಿಲ್ಲವೇ, ಇಡೀ ಸರ್ಕಾರವೇ ಹಣದ ದಂಧೆಯಲ್ಲಿ ನಿರತವಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮನ್ ಮುಲ್ ಮಾಜಿ ಅಧ್ಯಕ್ಷ ಬಿ.ಆರ್. ರಾಮಚಂದ್ರ, ಉಪಾಧ್ಯಕ್ಷ ಎಂ.ಎಸ್. ರಘುನಂದನ್, ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ಯುವ ಘಟಕದ ಜಿಲ್ಲಾಧ್ಯಕ್ಷ ಕೆ.ರವಿ, ಜೆಡಿಎಸ್ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ಸಾತನೂರು ಜಯರಾಮ್, ಹಿಂದುಳಿದ ವರ್ಗ ವಿಭಾಗದ ರಾಜ್ಯಾಧ್ಯಕ್ಷ ಜಯರಾಮ್, ಕೆಂಚನಹಳ್ಳಿ ಪುಟ್ಟಸ್ವಾಮಿ ಮತ್ತಿತರ ಮುಖಂಡರು ಇದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!