Friday, September 20, 2024

ಪ್ರಾಯೋಗಿಕ ಆವೃತ್ತಿ

ಸಚಿವರು ಕೆರೆ ಕಬಳಿಸಿದ್ದಾರೆಂಬ ಆರೋಪ ಸತ್ಯಕ್ಕೆ ದೂರವಾದದ್ದು; ರಾಜೇಶ್ ಸ್ಪಷ್ಟನೆ

ಬೆಂಗಳೂರು ಉತ್ತರ ತಾಲೂಕಿನ ದಾಸನಪುರ ಹೋಬಳಿ ಮಾಕಳಿ ಗ್ರಾಮದ ಸರ್ವೆ ನಂ 13ಕ್ಕೆ ಸಂಬಂಧಪಟ್ಟಂತೆ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರ ವಿರುದ್ಧ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಮತ್ತು ಮಾಜಿ ಶಾಸಕ ಸುರೇಶ್‌ಗೌಡ ಮಾಡಿರುವ ಆರೋಪ ನಿರಾಧಾರ ಎಂದು ನಾಗಮಂಗಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜೆ.ರಾಜೇಶ್ ಸ್ಪಷ್ಟನೆ ನೀಡಿದರು.

ನಾಗಮಂಗಲ ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವ ಎನ್.ಚಲುವರಾಯಸ್ವಾಮಿಯವರಿಗೆ ಈ ಜಮೀನು ತಮ್ಮ ಸಹೋದರ ಲಕ್ಷ್ಮಿಕಾಂತ್ ಅವರಿಂದ ಎಂಆರ್ ಸಂಖ್ಯೆ ಎಚ್6 ಮೂಲಕ 2021-22 ರಲ್ಲಿ ದಾನದ ರೂಪದಲ್ಲಿ ಬಂದಿದ್ದು, ಸರ್ಕಾರದ ಯಾವುದೇ ಜಮೀನನ್ನಾಗಲಿ ಅಥವಾ ಕೆರೆಯ ಜಾಗವನ್ನಾಗಲಿ ಕಬಳಿಸಿಲ್ಲ ಎಂದರು.

ಲಕ್ಷ್ಮಿಕಾಂತ್ ಅವರಿಂದ ದಾನ

2006-07ರಲ್ಲಿ ಸಚಿವರ ಸಹೋದರ ಲಕ್ಷ್ಮಿಕಾಂತ್ ಅವರು ಮಾಕಳಿ ಗ್ರಾಮದ ಎ.ಎಚ್.ತಿಮ್ಮರಾಯಪ್ಪ ಎಂಬುವರಿಂದ ಶುದ್ಧ ಕ್ರಯಕ್ಕೆ ಪಡೆದು ಸ್ವಾಧೀನದಲ್ಲಿದ್ದರು. 2021ರಲ್ಲಿ ಲಕ್ಷ್ಮಿಕಾಂತ್ ಅವರು ಸಹೋದರ ಎನ್.ಚಲುವರಾಂಯಸ್ವಾಮಿಯವರಿಗೆ ದಾನ ಮಾಡಿದ ನಂತರ ಚಲುವರಾಯಸ್ವಾಮಿಯವರು ಸ್ವಾಧೀನಾನುಭವದಲ್ಲಿದ್ದಾರೆ. ಇದರಲ್ಲಿ ಅಕ್ರಮ ಎಲ್ಲಿಂದ ಬಂತು ಎಂದು ಪ್ರಶ್ನಿಸಿದರು.

ನಮ್ಮ ನಾಯಕರು ಕಾನೂನು ಬದ್ಧವಾಗಿಯೇ ಇದ್ದಾರೆ, ನಿಮ್ಮಂತೆ( ಸುರೇಶ್ ಗೌಡ) ಪಟ್ಟಣದ ಟಿ.ಬಿ.ಬಡಾವಣೆಯ ಕೋಟೆಬೆಟ್ಟ ರಸ್ತೆಯಲ್ಲಿನ ಸರ್ಕಾರಿ ಜಾಗವನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಮನೆಕಟ್ಟಿಕೊಂಡು ವಾಸಿಸುತ್ತಿಲ್ಲ ಎಂದು ಮಾಜಿ ಶಾಸಕ ಸುರೇಶ್‌ಗೌಡಗೆ ತಿರುಗೇಟು ನೀಡಿದರು.

ದ್ವೇಷಕ್ಕಾಗಿಯೇ ಆರೋಪ ಮಾಡಬಾರದು

ಎಸ್‌ಎಲ್‌ಡಿಬಿ ನಿರ್ದೇಶಕ ತಿಮ್ಮರಾಯಿಗೌಡ ಮಾತನಾಡಿ, ಯಾವುದೇ ಆರೋಪ ಮಾಡುವಾಗ ಸತ್ಯಾ ಸತ್ಯತೆಯನ್ನು ತಿಳಿದು ಮಾತನಾಡಬೇಕು. ಕೇವಲ ರಾಜಕೀಯ ದ್ವೇಷಕ್ಕಾಗಿಯೇ ಆರೋಪ ಮಾಡಬಾರದು, ಕುಮಾರಸ್ವಾಮಿಯವರು ಎರಡು ಬಾರಿ ಮುಖ್ಯಮಂತ್ರಿಯಾಗಿದ್ದವರು, ಸೂಕ್ತ ದಾಖಲೆ ಇಟ್ಟುಕೊಂಡು ಅರೋಪ ಮಾಡಬೇಕೇ ವಿನಃ ಚಲುವರಾಯಸ್ವಾಮಿಯವರನ್ನು ವಿರೋಧಿಸುವುದಕ್ಕಾಗಿಯೇ ಆಪಾದನೆ ಮಾಡುವುದು ಮುಖ್ಯಮಂತ್ರಿಯಾಗಿದ್ದವರಿಗೆ ಶೋಭೆ ತರುವುದಿಲ್ಲ ಎಂದು ತಿರುಗೇಟು ನೀಡಿದರು.

ಸಚಿವರ ಸಹೋದರ ಲಕ್ಷ್ಮಿಕಾಂತ್ ಅವರಿಗೆ 2006ರಲ್ಲೇ ಕ್ರಯವಾಗಿದ್ದು, ಆಗ ಎಚ್.ಡಿ.ಕುಮಾರಸ್ವಾಮಿಯವರೇ ಮುಖ್ಯಮಂತ್ರಿಯಾಗದ್ದರು, ಚಲುವರಾಯಸ್ವಾಮಿಯವರು ಇವರ ಸಂಪುಟದಲ್ಲಿ ಸಚಿವರಾಗಿದ್ದರು. ಆಗ ಇಲ್ಲದ ಅಕ್ರಮ 17 ವರ್ಷದ ನಂತರ ಈಗ ಹೇಗೆ ಬಂತು ಎಂಬುದನ್ನು ಮಾಜಿ ಮುಖ್ಯಮಂತ್ರಿಗಳೇ ಹೇಳಬೇಕು. 2018ರಲ್ಲಿ ಮತ್ತೇ ಮುಖ್ಯಮಂತ್ರಿಯಾದ ಕುಮಾರಸ್ವಾಮಿ ಆಗಲೂ ಈ ವಿಚಾರವನ್ನು ಪ್ರಸ್ತಾಪಿಸದೆ ಈಗ ಚಲುವರಾಯಸ್ವಾಮಿ ಮಂತ್ರಿಯಾಗಿರುವುದನ್ನು ಅರಗಿಸಿಕೊಳ್ಳಲಾಗದೇ ಆರೋಪ ಮಾಡುತ್ತಿದ್ದಾರೆ. ಇಂತಹ ಅರೋಪಗಳಿಂದ ಸಾರ್ವಜನಿಕವಾಗಿ ಕುಮಾರಸ್ವಾಮಿ ಅವರೇ ನಗೆಪಾಟಲಿಗೆ ಈಡಾಗಲಿದ್ದಾರೆ ಎಂದು ಕುಟುಕಿದರು.

ಸೋಲಿನ ಹತಾಶೆಯ ಮಾತು

ರಾಜ್ಯ ಒಕ್ಕಲಿಗರ ಸಂಘದ ಮಾಜಿ ಉಪಾಧ್ಯಕ್ಷ ಎಚ್.ಟಿ.ಕೃಷ್ಣೇಗೌಡ ಮಾತನಾಡಿ, ಸುರೇಶ್‌ಗೌಡರು ಇತ್ತೀಚಿನ ದಿನಗಳಲ್ಲಿ ಸುಳ್ಳು ಆರೋಪಗಳನ್ನು ಮಾಡುವ ಮೂಲಕ ಪೊಳ್ಳು ಆಗುತ್ತಿದ್ದಾರೆ. ದಾಖಲೆಗಳಿಲ್ಲದೇ ಮಾತನಾಡುವುದು ಸರಿಯಲ್ಲ, ಸೋಲಿನ ಹತಾಶೆಯಿಂದ ಏನೇನೋ ಮಾತನಾಡಿ ಜನರನ್ನು ದಿಕ್ಕುತಪ್ಪಿಸುವ ಕೆಲಸವನ್ನು ಮಾಡಬಾರದು ಎಂದರು.

ಚಲುವರಾಯಸ್ವಾಮಿಯವರ ಹೆಸರಿನಲ್ಲಿರುವ ಮಾಕಳಿಯ 3 ಎಕರೆ 31 ಗುಂಟೆ ಜಮೀನಿನ ಲೆಕ್ಕವನ್ನ 2023ರ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಚುನಾವಣಾ ಆಯೋಗಕ್ಕೆ ಕೊಟ್ಟಿದ್ದಾರೆ. ಈ ವಿಚಾರದಲ್ಲಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಶುದ್ಧಹಸ್ತರಾಗಿದ್ದು, ಕಾನೂನಿನ ಪ್ರಕಾರವೇ ಆಸ್ತಿಯನ್ನು ಹೊಂದಿದ್ದಾರೆ. ಇಂತಹ ಸುಳ್ಳು ಅರೋಪ ಮಾಡುವುದನ್ನು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯಾಗಲೀ ಅಥವಾ ಮಾಜಿ ಶಾಸಕ ಸುರೇಶ್‌ಗೌಡರಾಗಲಿ ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ಈ ಸಂಬಂಧ ಜಮೀನಿನ ದಾಖಲೆ ಪತ್ರಗಳನ್ನು ಪ್ರದರ್ಶಿಸಿ ಇಂತಹ ಇಲ್ಲ ಸಲ್ಲದ ಹೇಳಿಕೆಗಳು, ಆರೋಪಗಳು ಮುಂದಿನ ದಿನಗಳಲ್ಲಿ ಮರುಕಳಿಸಿದರೆ ಸುಮ್ಮನಿರುವುದಿಲ್ಲ ಎಂದು ಎಚ್ಚರಿಸಿದರು.

ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಶರತ್‌ರಾಮಣ್ಣ, ಮುಖಂಡ ರವಿಕಾಂತೇಗೌಡ ಗೋಷ್ಠಿಯಲ್ಲಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!