Friday, September 20, 2024

ಪ್ರಾಯೋಗಿಕ ಆವೃತ್ತಿ

ಹೈಕೋರ್ಟ್‌ ವಿಡಿಯೋ ಕಾನ್ಫರೆನ್ಸ್‌ ವೇಳೆ ಅಶ್ಲೀಲ ಚಿತ್ರ ಪ್ರದರ್ಶನ: ಅನಾಮಿಕರ ವಿರುದ್ಧ ಎಫ್‌ಐಆರ್‌

ಕರ್ನಾಟಕ ಹೈಕೋರ್ಟ್‌ನ ವಿವಿಧ ಕೋರ್ಟ್‌ ಹಾಲ್‌ಗಳ ವಿಡಿಯೋ ಕಾನ್ಫರೆನ್ಸ್‌ ವಿಚಾರಣೆಯ ವೇಳೆ ಅಶ್ಲೀಲ ಚಿತ್ರ ಪ್ರದರ್ಶನಗೊಂಡ ಆರೋಪಕ್ಕೆ ಸಂಬಂಧಿಸಿದಂತೆ ಅನಾಮಿಕರ ವಿರುದ್ಧ ಮಂಗಳವಾರ ಎಫ್‌ಐಆರ್‌ ದಾಖಲಾಗಿದೆ.

ಹೈಕೋರ್ಟ್‌ ಕಂಪ್ಯೂಟರ್ಸ್‌ ರಿಜಿಸ್ಟ್ರಾರ್‌ ಕಚೇರಿಯ ಎನ್‌ ಸುರೇಶ್‌ ಅವರು ನೀಡಿದ ದೂರಿನ ಅನ್ವಯ ಅನಾಮಿಕರ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯಿದೆ ಸೆಕ್ಷನ್‌ಗಳಾದ 67 ಮತ್ತು 67(ಎ) ಅಡಿ ಕೇಂದ್ರೀಯ ಸೈಬರ್ ಅಪರಾಧ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ಬಾರ್ & ಬೆಂಚ್ ವರದಿ ಮಾಡಿದೆ.

ಕರ್ನಾಟಕ ಹೈಕೋರ್ಟ್‌ನ 6, 12, 18, 23, 24, 26 ಮತ್ತು ಇತರೆ ಹಾಲ್‌ಗಳಲ್ಲಿ ನ್ಯಾಯಮೂರ್ತಿಗಳು ಕಲಾಪ ನಡೆಸುತ್ತಿದ್ದಾಗ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಹಾಜರಾದ ಅಪರಿಚಿತರು, ಅಶ್ಲೀಲ ಚಿತ್ರಗಳನ್ನು ಪ್ರದರ್ಶಿಸಿ, ನ್ಯಾಯಾಲಯದ ಕಲಾಪಕ್ಕೆ ಅಡ್ಡಿಪಡಿಸಿದ್ದಾರೆ. ಅಪರಿಚಿತ ಆಸಾಮಿಗಳ ಐಪಿ ವಿಳಾಸಕ್ಕೆ ಸಂಬಂಧಿಸಿದ ಮಾಹಿತಿ ಪಡೆದು ಕ್ರಮ ಕೈಗೊಳ್ಳಬೇಕು ಎಂದು ಸೈಬರ್ ಪೊಲೀಸರಿಗೆ ಸಲ್ಲಿಸಲಾದ ದೂರಿನಲ್ಲಿ ಕೋರಲಾಗಿದೆ.

ಈ ಮಧ್ಯೆ, ಈ ಘಟನೆಯು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಕರ್ನಾಟಕ ಹೈಕೋರ್ಟ್‌ ಬೆಂಗಳೂರು, ಧಾರವಾಡ ಮತ್ತು ಕಲಬುರ್ಗಿ ಪೀಠದಲ್ಲಿನ ಕೋರ್ಟ್‌ಗಳ ವಿಡಿಯೋ ಕಾನ್ಫರೆನ್ಸ್‌ ಮತ್ತು ಲೈವ್‌ ಸ್ಟ್ರೀಮಿಂಗ್‌ ಅನ್ನು ನಿರ್ಬಂಧಿಸಿದೆ.

ಈ ಸಂಬಂಧ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ, “ನಾವು ಎಲ್ಲ ಲೈವ್‌ ಸ್ಟ್ರೀಮಿಂಗ್‌ಗಳನ್ನು ನಿರ್ಬಂಧಿಸುತ್ತಿದ್ದೇವೆ. ವಿಡಿಯೋ ಕಾನ್ಫರೆನ್ಸ್‌ಗೂ ಅವಕಾಶ ಇರುವುದಿಲ್ಲ. ದುರದೃಷ್ಟವಶಾತ್‌ ತಂತ್ರಜ್ಞಾನ ದುರ್ಬಳಕೆ ಅಥವಾ ಕೆಲವರಿಂದ ಅನುಚಿತ ವರ್ತನೆ ನಡೆದಿದೆ. ಇದು ಅನಿರ್ಬಂಧಿತ ಪರಿಸ್ಥಿತಿಯಾಗಿದೆ. ಇದೆಲ್ಲದರ ನಡುವೆ ಕರ್ನಾಟಕ ಹೈಕೋರ್ಟ್‌ ಸಾರ್ವಜನಿಕರ ಹಿತದೃಷ್ಟಿಯಿಂದ ವಿಸ್ತೃತ ನೆಲೆಯಲ್ಲಿ ತಂತ್ರಜ್ಞಾನ ಬಳಕೆ ಮಾಡುವುದರ ಪರವಾಗಿ ಕರ್ನಾಟಕ ಹೈಕೋರ್ಟ್‌ ಇರಲಿದೆ. ವ್ಯವಸ್ಥೆಯ ಹಿತಾಸಕ್ತಿಯ ದೃಷ್ಟಿಯಿಂದ ಈ ನಿರ್ಧಾರ ಮಾಡಲಾಗಿದೆ. ಮಾಧ್ಯಮದವರಿಗೆ ವಿಚಾರ ತಿಳಿಸಿ. ನಮ್ಮ ನಿರ್ಧಾರದಿಂದ ತೊಂದರೆಯಾಗಬಹುದು. ಆದರೂ ನಮಗೆ ಸಹಕರಿಸಿ” ಎಂದು ಕೋರಿದ್ದರು.

ಆನಂತರ ಹೈಕೋರ್ಟ್‌ನ ರಿಜಿಸ್ಟ್ರಾರ್‌ ಜನರಲ್‌ ಕೆ ಎಸ್‌ ಭರತ್‌ ಕುಮಾರ್‌ ಅವರು “ಸೈಬರ್‌ ಭದ್ರತಾ ಕಾರಣಗಳಿಗಾಗಿ ಬೆಂಗಳೂರು, ಧಾರವಾಡ ಮತ್ತು ಕಲಬುರ್ಗಿ ಪೀಠಗಳಲ್ಲಿನ ಎಲ್ಲಾ ಕಡೆ ವಿಡಿಯೊ ಕಾನ್ಫರೆನ್ಸ್‌ ಸೇವೆಯನ್ನು ಸದ್ಯಕ್ಕೆ ಅಮಾನತು ಮಾಡಲಾಗಿದೆ” ಎಂದು ಮಾಹಿತಿ ನೀಡಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!