ಡಿಸಿ ಮತ್ತು ಎಸ್ಪಿ ಇರೋದೇ ಜನರ ಸೇವೆ ಮಾಡೋಕೆ. ಅವರು ಸಾರ್ವಜನಿಕರ ಆಸ್ತಿಯನ್ನು ರಕ್ಷಿಸಬೇಕೇ ಹೊರತು, ಆಸ್ತಿ ಹೊಡೆಯಲು ಬಂದವರ ಪರವಾಗಿ ಇರಬಾರದು ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ವಾಗ್ದಾಳಿ ನಡೆಸಿದರು.
ಶ್ರೀರಂಗಪಟ್ಟಣ ತಾಲೂಕಿನ ಗೆಂಡೆಹೊಸಹಳ್ಳಿ ಗ್ರಾಮದಲ್ಲಿ ಶಾಸಕರ ಅನುದಾನದಲ್ಲಿ ನೂತನವಾಗಿ ನಿರ್ಮಿಸುತ್ತಿರುವ ಅಂಬೇಡ್ಕರ್ ಭವನದ ಗುದ್ದಲಿ ಪೂಜೆ ಹಾಗೂ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಮಾಜಿ ಶಾಸಕರ ಮೇಲೆ 420 ಕೇಸುಗಳು ದಾಖಲಾಗಿವೆ. ಈಗ ಅವರ ಕಣ್ಣು ಬಡವರ ಮಕ್ಕಳು ಓದುತ್ತಿರುವ ಶಾಲೆಯ ಮೇಲೆ ಬಿದ್ದಿದೆ. ಇಂತಹ ಅನೇಕ ಅನ್ಯಾಯಗಳನ್ನು ಮಾಡಿಕೊಂಡೇ ಬಂದಿರುವ ಅವರಿಗೆ ರಾಜಕೀಯ ಜೀವನದಲ್ಲಿ ಮುಂದುವರಿಯುವ ಯಾವುದೇ ನೈತಿಕತೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅವನ್ಯಾರೋ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷನಿಗೆ ತಲೆ ಕೆಟ್ಟಂತೆ ಕಾಣುತ್ತಿದೆ. ಆತನಿಗೆ ಸ್ವಲ್ಪ ವಿವೇಕದಿಂದ ಮಾತನಾಡೋಕೆ ಹೇಳಿ ಎಂದರು.
ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸೇರಿದಂತೆ ಸರ್ಕಾರಿ ಅಧಿಕಾರಿಗಳು ಜನರು ಕಟ್ಟುವ ತೆರಿಗೆ ಹಣದಿಂದ ಸಂಬಳ ಪಡೆಯುತ್ತಿದ್ದಾರೆ ಅವರಿಗೆ ಸರಿಯಾಗಿ ಸಾರ್ವಜನಿಕರ ಕೆಲಸಗಳನ್ನು ಮಾಡಿಕೊಡಿ ಎನ್ನುವುದೇ ತಪ್ಪಾ? ಈ ವಿಷಯವಾಗಿ ನನ್ನ ವಿರುದ್ಧ ಪ್ರತಿಭಟನೆ ಮಾಡುವುದಾದರೆ ಕಾಂಗ್ರೆಸ್ ಪಕ್ಷದವರು ಜನವಿರೋಧಿಗಳು ಎಂದು ತಾವೇ ಸಾಬೀತು ಮಾಡಿಕೊಳ್ಳುತ್ತಿದ್ದಾರೆ ಎಂದರು.
ಮಾಜಿ ಶಾಸಕ ರಮೇಶಬಂಡಿಸಿದ್ದೇಗೌಡ ಸರ್ಕಾರಿ ಶಾಲಾ ಕಾಂಪೌಂಡ್ ನಿರ್ಮಿಸದಂತೆ ಯಾವುದೋ ತಲೆಕೆಟ್ಟ ಮಂತ್ರಿಯಿಂದ ಹೇಳಿಸಿದ್ದಾರೆ . ಬೆಂಗಳೂರು, ಮೈಸೂರು, ಮಂಡ್ಯ ಸೇರಿದಂತೆ 4 ನಿವೇಶನಗಳನ್ನು ಅಕ್ರಮವಾಗಿ ಪಡೆದು ಇದೀಗ ಬಡವರ ಮಕ್ಕಳು ಓದುತ್ತಿರುವ ಶಾಲಾ ಜಾಗದ ಮೇಲೆ ನಿಮ್ಮ ಕಣ್ಣು ಬಿದ್ದಿದೆ ಎಂದು ವ್ಯಂಗ್ಯವಾಡಿದರು.
ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಮಾಡದೇ 2 ಬಾರಿ ಶಾಸಕನಾಗಿ ಕಾಲ ಹರಣ ಮಾಡಿರುವ ರಮೇಶಬಾಬು ಬಂಡಿಸಿದ್ದೇಗೌಡ ಸತ್ತವರ ಮೆನೆಗೆ ಹೋಗಿ 15 ರುಪಾಯಿಯ ಹಾರ ಹಾಕಿರುವುದೇ ದೊಡ್ಡ ಸಾಧನೆ. ಇದನ್ನ ಕ್ಷೇತ್ರದ ಜನರು ಗಮನಿಸಿದ್ದಾರೆ.
ಇದೀಗ ಕ್ಷೇತ್ರದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕೆಲಸವನ್ನು ಸಹಿಸಲು ಸಾಧ್ಯವಾಗದೇ, ತಮ್ಮ ಬೆಂಬಲಿಗರನ್ನ ಬಿಟ್ಟು ನ್ಯಾಯಾಲಯದಲ್ಲಿ ತಡೆಯಾಜ್ಞೆ ತರಿಸುವ ಕೆಲಸ ಮಾಡಿದ್ದಾರೆ. ಇಂತಹ ರಮೇಶ್ ಬಂಡಿಸಿದ್ದೇಗೌಡ ಎಷ್ಟೇ ಜನ ಬಂದರೂ ನನ್ನ ಅಭಿವೃದ್ಧಿ ಕೆಲಸಗಳನ್ನ ತಡೆಯಲು ಸಾಧ್ಯವೇ ಇಲ್ಲ ಎಂದು ಎಚ್ಚರಿಕೆ ನೀಡಿದರು.
ನನ್ನ ಅವಧಿಯಲ್ಲಿ ಕ್ಷೇತ್ರದಾದ್ಯಂತ ಮಾಡಿರುವ ಅಭಿವೃದ್ಧಿ ಕೆಲಸದಿಂದ. ನನ್ನ ದುಡಿಮೆಯ ಮೇಲೆ ಮತ ಕೇಳುತ್ತೇನೆ ವಿನಹ ಮಾಜಿ ಶಾಸಕರ ರೀತಿ ಸಾರ್ವಜನಿಕರಿಗೆ ಮೋಸ ಮಾಡಿ ಅವರ ಆಸ್ತಿ ಹೊಡೆಯುವ ಕೆಲಸ ಮಾಡುತ್ತಿಲ್ಲ ಎಂದು ಕಿಡಿಕಾರಿದರು.
ಈ ವೇಳೆ ಜಿ.ಪಂ ಮಾಜಿ ಸದಸ್ಯ ಮರೀಗೌಡ, ದಶರಥ್, ಶಿವಕುಮಾರ್, ಎಪಿಎಂಸಿ ಮಾಜಿ ಅಧ್ಯಕ್ಷ ರಾಮಲಿಂಗು, ಗ್ರಾ.ಪಂ ಅಧ್ಯಕ್ಷೆ ಚನ್ನಮ್ಮ ಸೇರಿದಂತೆ ಚುನಾಯಿತ ಸದಸ್ಯರು ಸೇರಿದಂತೆ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.