Friday, September 20, 2024

ಪ್ರಾಯೋಗಿಕ ಆವೃತ್ತಿ

ಸಂಕ್ರಾಂತಿವರೆಗೆ ನಾಲೆಗಳಲ್ಲಿ ನೀರು ಹರಿಸಿ: ರೈತಸಂಘದ ಒತ್ತಾಯ

ಕೆ.ಆರ್.ಎಸ್ ಅಣೆಕಟ್ಟೆಯಲ್ಲಿ ಪ್ರಸ್ತುತ 96.41 ಅಡಿ ನೀರಿದ್ದು, ಸದರಿ ನೀರನ್ನು ಕುಡಿಯುವ ನೀರಿನ ಉದ್ದೇಶಕ್ಕೆ ಮಾತ್ರ ಬಳಸಬೇಕೆಂದು ನೀರಾವರಿ ಇಲಾಖೆ ಪ್ರಧಾನ ಕಾರ‍್ಯದರ್ಶಿ ರಾಕೇಶ್‌ಸಿಂಗ್ ಮೌಖಿಕ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದ್ದು, ಇದನ್ನು ಒಪ್ಪಲು ಸಾಧ್ಯವಿಲ್ಲ. ಕೃಷಿಕರ ಸುಗ್ಗಿ ಹಬ್ಬವಾಗಿರುವ ಸಂಕ್ರಾಂತಿಗೆ ಒಂದು ಕಟ್ಟು ನೀರು ಹರಿಸಬೇಕು ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಎ.ಎಲ್. ಕೆಂಪೂಗೌಡ ಒತ್ತಾಯಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಡ್ಯ ಜಿಲ್ಲೆಯ ಎಳೂ ತಾಲೂಕುಗಳನ್ನು ಬರ ಪೀಡಿತ ಎಂದು ಸರ್ಕಾರ ಘೋಷಣೆ ಮಾಡಿದೆ. ಈ ಸಂಬಂಧ ಬರ ಪರಿಹಾರ ಮತ್ತು ಬೆಳೆ ಪರಿಹಾರ ನೀಡಲು ಸರ್ಕಾರ ಮುಂದಾಗಬೇಕು. ಕನಿಷ್ಟ ಎಕರೆಗೆ ₹ 25 ಸಾವಿರ ಪರಿಹಾರ ನೀಡಬೇಕು. ಭವಿಷ್ಯದಲ್ಲಿ ಜನ-ಜಾನುವಾರುಗಳಿಗೆ ಕುಡಿಯುವ ನೀರು ಹಾಗೂ ಮೇವು ಪೂರೈಕೆಗೆ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಉಸ್ತುವಾರಿ ಸಚಿವರು ಕೂಡಲೇ ನೀರಾವರಿ ಸಲಹಾ ಸಮಿತಿ ಸಭೆ ಕರೆದು ಬೇಸಿಗೆ ಬೆಳೆಗೆ ನೀರು ಅಲಭ್ಯವಾಗುವ ಪರಿಸ್ಥಿತಿಯನ್ನು ರೈತರಿಗೆ ಮನವರಿಕೆ ಮಾಡಬೇಕು. ಪ್ರಸ್ತುತ ಕಬ್ಬು, ಭತ್ತ, ರಾಗಿ ಬೆಳೆಗಳ ಬೆಳೆ ಪ್ರಮಾಣ ಕುಸಿತವಾಗಿದ್ದು, ರೈತರ ನೆರವಿಗೆ ಸರ್ಕಾರ ಧಾವಿಸಬೇಕು ಎಂದು ಒತ್ತಾಯಿಸಿದರು.

ಡಿ. 23ರಂದು ವಿಶ್ವ ರೈತ ದಿನಾಚರಣೆ ಮತ್ತು ಮಾಜಿ ಪ್ರಧಾನಿ ಚೌಧರಿ ಚರಣ್‌ಸಿಂಗ್ ಹಾಗೂ ಮಾಜಿ ಶಾಸಕ ಕೆ.ಎಸ್. ಪುಟ್ಟಣ್ಣಯ್ಯ ಅವರ ಹುಟ್ಟುಹಬ್ಬದ ಅಂಗವಾಗಿ ರಾಯಚೂರು ಜಿಲ್ಲಾ ಕೇಂದ್ರದ ವೀರಶೈವ ಕಲ್ಯಾಣ ಮಂಟಪದಲ್ಲಿ ರಾಜ್ಯ ಮಟ್ಟದ ರೈತ ಸಮಾವೇಶ ನಡೆಯಲಿದ್ದು, ಸದರಿ ಸಮಾವೇಶದಲ್ಲಿ ರೈತರನ್ನು ಕಾಡುತ್ತಿರುವ ಸಮಸ್ಯೆಗಳ ಬಗ್ಗೆ ಸುಧೀರ್ಘವಾಗಿ ಚರ್ಚಿಸಿ ಪರಿಹಾರ ಕಂಡುಕೊಳ್ಳಲು ಸರ್ಕಾರದ ಮೇಲೆ ಒತ್ತಡ ತರಲಾಗುವುದು ಎಂದು ತಿಳಿಸಿದರು.

ಬೆಳಗಾವಿಯಲ್ಲಿ ರೈತರನ್ನುಒಕ್ಕಲೆಬ್ಬಿಸಲು ಪ್ರಯತ್ನಿಸಿದ ಸಂದರ್ಭದಲ್ಲಿ ಅಸಹಕಾರ ತೋರಿದ ರೈತರ ಮೇಲೆ ಉದ್ದಟತನದಿಂದ ನಡೆದುಕೊಂಡು ತೊಡೆ ತಟ್ಟಿರುವ ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ್ ಗುಳೇದ ಅವರ ವರ್ತನೆಯನ್ನು ಜಿಲ್ಲಾ ರೈತ ಸಂಘ ತೀವ್ರವಾಗಿ ಖಂಡಿಸಿದ್ದು, ಇಂತಹ ದುರ್ವತನೆ ಪೊಲೀಸ್ ವರಿಷ್ಠಾಧಿಕಾರಿ ತರವಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಂಡ್ಯ ಜಿಲ್ಲೆಯಲ್ಲಿ ಮೈಕ್ರೋ ಫೈನಾನ್ಸ್ ಹಾವಳಿ ಹೆಚ್ಚಾಗಿದ್ದು, ಜಿಲ್ಲಾಡಳಿತ ಈ ಬಗ್ಗೆ ಸೂಕ್ತ ನಿಗಾ ವಹಿಸಬೇಕು. ಮುಗ್ದ ಜನರನ್ನು ವಂಚಿಸುವ ಮೈಕ್ರೋ ಫೈನಾನ್ಸ್ ಹಾವಳಿಯನ್ನು ನಿಯಂತ್ರಣಕ್ಕೆ ತರಬೇಕು ಎಂದು ಒತ್ತಾಯಿಸಿದರು.

ಮಂಡ್ಯ ಹಾಲು ಒಕ್ಕೂಟ ರೈತರಿಂದ ಖರೀದಿ ಮಾಡುವ ಪ್ರತಿ ಲೀಟರ್ ಹಾಲಿಗೆ 1.75 ರೂ. ಕಡಿತ ಮಾಡಿದ್ದು, ಇದರಿಂದಾಗಿ ತುಂಬಾ ತೊಂದರೆಯಾಗಿದೆ. ಹೈನುಗಾರಿಕೆಯಲ್ಲಿ ತೊಡಗಿರುವ ರೈತರಿಗೆ ತುಂಬಾ ನಷ್ಟವಾಗುತ್ತಿದ್ದು, ತಕ್ಷಣ ಕಡಿತ ಮಾಡಿರುವ ಹಾಲಿನ ದರವನ್ನು ಹೆಚ್ಚಳ ಮಾಡಬೇಕು. ಇಲ್ಲದಿದ್ದಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಗೋ‍ಷ್ಠಿಯಲ್ಲಿ ರೈತ ಮುಖಂಡರಾದ ಪ್ರಸನ್ನ ಎನ್. ಗೌಡ, ಲಿಂಗಪ್ಪಾಜಿ, ಮರುವನಹಳ್ಳಿ ಶಂಕರ್ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!