Friday, September 20, 2024

ಪ್ರಾಯೋಗಿಕ ಆವೃತ್ತಿ

ಕಾವೇರಿ ಹೋರಾಟಕ್ಕೆ 100 ದಿನ; ಕೇಂದ್ರ- ರಾಜ್ಯ ಸರ್ಕಾರಗಳ ವಿರುದ್ದ ಕಪ್ಪುಬಾವುಟ ಪ್ರದರ್ಶನ

ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ಮಂಡ್ಯದಲ್ಲಿ ನಿರಂತರವಾಗಿ ನಡೆಯುತ್ತಿರುವ ಕಾವೇರಿ ಹೋರಾಟ 100ನೇ ದಿನಕ್ಕೆ ಕಾಲಿಟ್ಟಿದೆ, ಈ ಸಂದರ್ಭದಲ್ಲಿ ಹೋರಾಟಗಾರರು ಸರ್ಕಾರ ವಿರುದ್ದ ಕಪ್ಪು ಬಾವುಟ ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ -ರಾಜ್ಯ ಸರ್ಕಾರ, ಕಾವೇರಿ ನದಿ ನೀರು ಪ್ರಾಧಿಕಾರ, ಕಾವೇರಿ ನದಿ ನೀರು ನಿಯಂತ್ರಣ ಸಮಿತಿ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದ ಹೋರಾಟಗಾರರು ರಾಜ್ಯದ ಹಿತವನ್ನು ಕಾಯುವಲ್ಲಿ ಸರ್ಕಾರಗಳು ವಿಫಲವಾಗಿವೆ ಎಂದು ದೂರಿದರು.

ಇಂದಿನ ಸರದಿ ಉಪವಾಸದಲ್ಲಿ ಮೆಣಸಗೆರೆಯ ಅರ್ಚಕ ಶಿವಲಿಂಗಪ್ಪ, ಕನ್ನಡ ಸೇನೆ ಪಾಂಡವಪುರ ತಾಲೂಕು ಅಧ್ಯಕ್ಷ ದೇವು, ಕಲ್ಲಹಳ್ಳಿ ಶಂಕರೇಗೌಡ, ಆಜಾದ್ ನಗರದ ಫಯಾಜ್, ಪಣಕನಹಳ್ಳಿ ಶಿವರಾಮು ಉಪವಾಸ ಕೈಗೊಂಡರು.

ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿ ಆಶ್ರಯದಲ್ಲಿ ರೈತ, ದಲಿತ, ಪ್ರಗತಿಪರ, ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಹಾಗೂ ಅತಿಥಿ ಉಪನ್ಯಾಸಕರು ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ರಸ್ತೆ ತಡೆ ನಡೆಸಿದರು.

ಕಾವೇರಿ ನದಿ ನೀರು ರಕ್ಷಣೆಗಾಗಿ ಕಳೆದ ನೂರು ದಿನದಿಂದ ಹೋರಾಟ ಮಾಡುತ್ತಾ ಬಂದಿದ್ದರೂ ಸಹ ರಾಜ್ಯ ಸರ್ಕಾರ ತಮಿಳುನಾಡಿಗೆ ನಿರಂತರ ನೀರು ಹರಿಸುತ್ತಾ, ಈಗಲೂ ಸಹ ಕದ್ದು ಮುಚ್ಚಿ ನೀರು ಹರಿಸುತ್ತಿದೆ, ಅಷ್ಟೇ ಅಲ್ಲದೆ ವಿಧಾನಮಂಡಲದ ಅಧಿವೇಶನದಲ್ಲಿ ಕಾವೇರಿ ವಿವಾದ ಕುರಿತು ಚರ್ಚಿಸದೆ ಉದಾಸೀನತೆ ತೋರಿ ಕಾಲ ಹರಣ ಮಾಡುತ್ತಿದೆ ಎಂದು ಆಕ್ರೋಶಿಸಿದರು. ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳ ನಡುವೆ ಜಲ ವಿವಾದ ಉಂಟಾದಾಗ ಎರಡು ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಮಾತುಕತೆ ನಡೆಸಲು ಮುಂದಾಗದ ಪ್ರಧಾನಿ ನರೇಂದ್ರ ಮೋದಿ,ಸಂಕಷ್ಟ ಸನ್ನಿವೇಶದಲ್ಲೂ ಹಠಮಾರಿತನದಿಂದ ನೀರು ಹರಿಸಿಕೊಳ್ಳುತ್ತಿರುವ ತಮಿಳುನಾಡು, ರಾಷ್ಟ್ರೀಯ ಜಲ ನೀತಿ ರೂಪಿಸದ ಕೇಂದ್ರ ಸರ್ಕಾರದ ವಿರುದ್ಧ ಹೋರಾಟಗಾರರು ಕಿಡಿಕಾರಿದರು.

ಹೋರಾಟಗಾರ್ತಿ ಸುನಂದ ಜಯರಾಂ ಮಾತನಾಡಿ, ಜನಪ್ರತಿನಿಧಿಗಳ ಮೇಲೆ ಮತದಾರರ ಋಣ ಇದೆ, ಆದರೆ ಕಾವೇರಿ ವಿಚಾರದಲ್ಲಿ ಜನಪ್ರತಿನಿಧಿಗಳು ನಿರ್ಲಕ್ಷ್ಯ,ಉದಾಸೀನತೆ ತೋರಿದ್ದಾರೆ, ಜ್ವಲಂತ ಸಮಸ್ಯೆಯನ್ನ ಗಂಭೀರವಾಗಿ ಪರಿಗಣಿಸದೆ ರಾಜ್ಯ ಸರ್ಕಾರ ಹೊಣೆಗಾರಿಕೆ ನಿರ್ವಹಿಸದೆ ಜಾಣತನ ಪ್ರದರ್ಶಿಸುತ್ತಿದೆ. ಕಾವೇರಿ ಹೋರಾಟಗಾರರ ಕಿವಿಗೆ ಹೂವು ಮೂಡಿಸಲು ಸಾಧ್ಯವಿಲ್ಲ,ಸದನದಲ್ಲಿ ಕಾವೇರಿ ವಿಚಾರ ಚರ್ಚಿಸದೆ ಇದೂವರೆಗೆ ಕಾಲಹರಣ ಮಾಡಿದ್ದು ಸಾಕು. ಇನ್ನು ಎರಡು ದಿನ ಕಾಲಾವಕಾಶವಿದ್ದು ಚರ್ಚಿಸಿ ದೃಢ ನಿರ್ಧಾರ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಮಾಜಿ ಶಾಸಕ ಕೆ ಟಿ ಶ್ರೀಕಂಠೇಗೌಡ ಮಾತನಾಡಿ, ಕಾವೇರಿ ಹೋರಾಟ ಐತಿಹಾಸಿಕ ದಾಖಲೆ ಮಾಡಿದೆ, ಶತಮಾನದಲ್ಲಿಯೇ ನೂರು ದಿನ ಪೂರೈಸಿರುವ ಹೋರಾಟ ಇತಿಹಾಸದ ಪುಟ ಸೇರಿದೆ, ಇಂತಹ ಹೋರಾಟಕ್ಕೆ ಕೇಂದ್ರ ರಾಜ್ಯ ಸರ್ಕಾರದ ನಿರ್ಲಕ್ಷ್ಯತೆ, ಕಾವೇರಿ ನದಿ ನೀರು ನಿಯಂತ್ರಣ ಸಮಿತಿ ಹಾಗೂ ಪ್ರಾಧಿಕಾರದ ಪಕ್ಷಪಾತ ಕಾರಣ ಎಂದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಜಿ.ಬಿ ಶಿವಕುಮಾರ್, ಸಮಿತಿಯ ಪ್ರಧಾನ ಕಾರ್ಯದರ್ಶಿ ಬೋರಯ್ಯ, ರೈತ ಸಂಘದ ಇಂಡುವಾಳು ಚಂದ್ರಶೇಖರ್, ಸಾದೊಳಲು ಸ್ವಾಮಿ, ಕೀಲಾರ ಕೃಷ್ಣ, ಮೈಶುಗರ್ ಮಾಜಿ ಅಧ್ಯಕ್ಷ ಸಿದ್ದರಾಮೇಗೌಡ, ಕನ್ನಡ ಸೇನೆ ಮಂಜುನಾಥ್, ಅಂಬುಜಮ್ಮ, ಸವಿತಾ, ಸೌಭಾಗ್ಯ,ಸುಜಾತ,ಸತ್ಯಾನಂದ ಸ್ವಾಮಿ, ತೂಬಿನಕೆರೆ ಲಿಂಗರಾಜು, ಮಹಾಂತೇಶಪ್ಪ, ಎಸ್ ನಾರಾಯಣ್, ದಸಂಸ ಎಂ ವಿ ಕೃಷ್ಣ, ನಿವೃತ್ತ ಇಂಜಿನಿಯರ್ ಕೆಂಪೇಗೌಡ, ಹುರುಗಲವಾಡಿ ರಾಮಯ್ಯ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!