Friday, September 20, 2024

ಪ್ರಾಯೋಗಿಕ ಆವೃತ್ತಿ

ಕೊಳಗೇರಿ ನಿವಾಸಿಗಳಿಗೆ ಹಕ್ಕುಪತ್ರ- ಮೂಲಭೂತ ಸೌಕರ್ಯ ಒದಗಿಸಿ: ಡಾ.ಕುಮಾರ

ಮಂಡ್ಯ ನಗರದಲ್ಲಿರುವ ಹಲವು ಕೊಳಗೇರಿಗಳಲ್ಲಿನ ಸಮಸ್ಯೆಗಳ ನಿವಾರಣೆ ಸಂಬಂಧ ಅಧಿಕಾರಿಗಳೊಂದಿಗೆ ಚರ್ಚಿಸಿದ ಜಿಲ್ಲಾಧಿಕಾರಿ ಡಾ.ಕುಮಾರ,ಸ್ಲಂ ನಿವಾಸಿಗಳಿಗೆ ಹಕ್ಕುಪತ್ರ ಸೇರಿದಂತೆ ವಿವಿಧ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಸೂಚಿಸಿದರು.

ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಕೊಳಗೇರಿ ಪ್ರದೇಶಗಳಲ್ಲಿ ವಾಸ ಮಾಡುತ್ತಿರುವ ಜನಗಳ ಕುಂದು ಕೊರತೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮಂಡ್ಯ ನಗರದ ಹಾಲಹಳ್ಳಿಯ ನ್ಯೂ ತಮಿಳ್ ಕಾಲೋನಿ ಜಾಗವು, ಸರ್ಕಾರಿ ಖರಾಬು ಜಾಗವಾಗಿದ್ದು, ಸರ್ವೆ ನಂ. 3 ರಲ್ಲಿ 1.39 ಎಕರೆ ಪ್ರದೇಶವು ಘೋಷಿತ ಕೊಳಚೆ ಪ್ರದೇಶವಾಗಿರುತ್ತದೆ. ನಗರಸಭೆ ವತಿಯಿಂದ ಕರ್ನಾಟಕ ಕೊಳಚೆ ಅಭಿವೃದ್ಧಿ ಮಂಡಳಿಗೆ ಹಸ್ತಾಂತರವಾಗಿದ್ದು,15 ದಿನದೊಳಗಾಗಿ 170 ಕುಟುಂಬಗಳಿಗೆ ಹಕ್ಕು ಪತ್ರ ವಿತರಿಸಲು ಕ್ರಮ ಕೈಗೊಳ್ಳುವಂತೆ ಡಾ.ಕುಮಾರ ಅವರು ಕೊಳಚೆ ಅಭಿವೃದ್ಧಿ ಮಂಡಳಿಯ ಕಾರ್ಯಪಾಲಕ ಅಭಿಯಂತರ ಹರೀಶ್ ಅವರಿಗೆ ಸೂಚನೆ ನೀಡಿದರು.

ಹಕ್ಕುಪತ್ರ ನೀಡುವ ಸಂಬಂಧ ಕ್ರಮ

ಮಂಡ್ಯ ನಗರದ ಲ್ಯಾಂಡ್ ಆರ್ಮಿ ಸ್ಲಂ ಪ್ರದೇಶ ಖಾಸಗಿ ಹಾಗೂ ಮಂಡ್ಯ ವಿವಿಗೆ ಸೇರಿದೆ ಎಂಬ ಹಿನ್ನೆಲೆಯಲ್ಲಿ 15 ದಿನಗಳೊಳಗೆ ಪ್ರಸ್ತಾವನೆ ಸಲ್ಲಿಸಿ ಭೂಮಿಯ ಮಾಲೀಕತ್ವದ ಬಗ್ಗೆ ಸ್ಪಷ್ಟನೆ ಪಡೆಯುವಂತೆ ಸೂಚಿಸಿದರು.
ಕಾಳಪ್ಪ ಬಡಾವಣೆಯಲ್ಲಿ 79 ಕುಟುಂಬಗಳಿದ್ದು, ಪರಿಚಯ ಪತ್ರ ನೀಡಲಾಗಿದೆ‌. ಹಕ್ಕುಪತ್ರ ನೀಡುವ ಸಂಬಂಧ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳು ತಿಳಿಸಿದರು.

ಹೊಸಹಳ್ಳಿ ಗುರುಮಠ ಸ್ಲಂನಲ್ಲಿ 68 ಕುಟುಂಬಗಳು 20 ಗುಂಟೆ ಜಾಗದಲ್ಲಿ ವಾಸಿಸುತ್ತಿವೆ.ಈ ಜಾಗ ಸರ್ಕಾರಿ ಕಟ್ಟೆ ಎಂದಿದ್ದು,ಈ ಬಗ್ಗೆ 10 ದಿನದೊಳಗೆ ಪ್ರಸ್ತಾವನೆ ಸಲ್ಲಿಸಬೇಕು.ಕಾಳಿಕಾಂಭ ಸ್ಲಂ ಜಾಗದ ವಿಷಯ ನ್ಯಾಯಾಲಯ ದಲ್ಲಿರುವುದರಿಂದ ಕೂಡಲೇ ತಡೆಯಾಜ್ಞೆ ತೆರವುಗೊಳಿಸಬೇಕು. ಸರ್ವೆ ನಂ.645 ಕಾಳಿಕಾಂಭ  ಕಲ್ಯಾಣ ಮಂಟಪವಿದ್ದು, ಇದು ಸಕ್ಕರೆ ಕಾರ್ಖಾನೆ ಜಾಗದಲ್ಲಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ನೀಡಿ ಮುಂದಿನ ಕ್ರಮಕ್ಕೆ ಮುಂದಾಗುವಂತೆ ಸೂಚಿಸಿದರು.

ಒಂದೇ ಒಂದು ನಿವೇಶನ ನೀಡಿಲ್ಲ

ಕಳೆದ 60 ವರ್ಷಗಳಿಂದ ಸ್ಲಂ ನಿವಾಸಿಗಳಿಗೆ ಒಂದೇ ಒಂದು ನಿವೇಶನ ನೀಡಿಲ್ಲ.ಒಂದು ಮನೆಯಲ್ಲಿ ಎರಡು-ಮೂರು ಸಂಸಾರಗಳು ಜೀವನ ಮಾಡುತ್ತಿರುವ ಹಿನ್ನೆಲೆಯಲ್ಲಿ ನಗರದಿಂದ 10 ಕಿಲೋ ಮೀಟರ್ ವ್ಯಾಪ್ತಿಯಲ್ಲಿ 10 ರಿಂದ 20 ಎಕರೆ ಸ್ಥಳ ಗುರುತಿಸುವಂತೆ ತಹಶೀಲ್ದಾರ್ ಶಿವಕುಮಾರ್ ಬಿರಾದಾರ್ ಅವರಿಗೆ ಸೂಚನೆ ನೀಡಿದರು.

ಹೊನ್ನಯ್ಯ ಬಡಾವಣೆ ಹಾಗೂ ಹಾಲಹಳ್ಳಿ ಬಡಾವಣೆಗಳಲ್ಲಿ ಕರ್ನಾಟಕ ಕೊಳಚೆ ಅಭಿವೃದ್ಧಿ ಮಂಡಳಿ ವತಿಯಿಂದ ಕೈಗೊಳ್ಳಬೇಕಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಿ ನಂತರ ಮಂಡ್ಯ ನಗರಸಭೆಗೆ ಹಸ್ತಾಂತರ ಮಾಡುವಂತೆ ತಿಳಿಸಿದರು. ಕೆರೆ ಅಂಗಳದ ವಿವೇಕಾನಂದ ಬಡಾವಣೆಯಲ್ಲಿ ಬಾಕಿ ಇರುವ ನಿವೇಶನಗಳನ್ನು ಅರ್ಹ ಫಲಾನುಭವಿಗಳಿಗೆ ವಿತರಿಸಿ, ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ, ನಗರಸಭೆಗೆ ಹಸ್ತಾಂತರ ಮಾಡುವಂತೆ ತಾಕೀತು ಮಾಡಿದರು.

ಜಿ-3 ಮಾದರಿಯಲ್ಲಿ ಮನೆ

ಇಂದಿರಾ ಬಡಾವಣೆಯಲ್ಲಿ ವಾಸವಾಗಿರುವ 128 ಸ್ಲಂ ಕುಟುಂಬಗಳು ವಾಸವಾಗಿದ್ದು, ಇವರಿಗೆ ಹಕ್ಕುಪತ್ರ ನೀಡಿ ವಸತಿ ಯೋಜನೆಯಡಿ ಮನೆ ನಿರ್ಮಿಸಿ ಕೊಡಲು ಸ್ಥಳ ಗುರುತಿಸಬೇಕಿರುತ್ತದೆ. ಇದಕ್ಕೆ 4 ಎಕರೆ ಜಮೀನಿನ ಅವಶ್ಯಕತೆ ಇದ್ದು, ಜಮೀನು ಸಿಗುವುದು ಕಷ್ಟಕರವಾಗಿರುತ್ತದೆ. ಒಂದು ಎಕರೆ ಗುರುತಿಸಿ ಜಿ-3 ಮಾದರಿಯಲ್ಲಿ ಮನೆ ನಿರ್ಮಿಸುವುದು ಉತ್ತಮ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಸ್ಲಾಟರ್ ಹೌಸ್ ಸ್ಲಂ ಗೆ ಸಂಬಂಧಿಸಿದಂತೆ ಇಲ್ಲಿ ವಾಸವಾಗಿರುವ 60 ಕುಟುಂಬಗಳಿಗೆ ಹಕ್ಕು ಪತ್ರ ವಿತರಣೆ ಹಾಗೂ ಅವಶ್ಯಕ ಕುಟುಂಬಗಳಿಗೆ ರಾಜೀವ ಗಾಂಧಿ ನಗರ ಆಶ್ರಯದಡಿ ವಸತಿ ಯೋಜನೆ ಕಲ್ಪಿಸಲು ಸರ್ವೆ ಮಾಡಿ ವರದಿ ನೀಡುವಂತೆ ತಿಳಿಸಿದರು.

ಸಭೆಯಲ್ಲಿ ಉಪವಿಭಾಗಾಧಿಕಾರಿ ಶಿವಮೂರ್ತಿ, ಜಿಲ್ಲಾ ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕಿ ಎಂ. ವಿ.ತುಷಾರಮಣಿ, ನಗರ ಸಭೆ ಪೌರಾಯುಕ್ತ ಆರ್. ಮಂಜುನಾಥ್, ತಹಶೀಲ್ದಾರ್ ಶಿವಕುಮಾರ್ ಬಿರಾದಾರ, ಜಿಲ್ಲಾ ಸರ್ಕಾರಿ ಆಸ್ಫತೆಯ ಅಧೀಕ್ಷಕ ಡಾ. ಶ್ರೀಧರ್,ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಕಾರ್ಯಪಾಲಕ ಸಹಾಯಕ ಕಾರ್ಯಪಾಲಕ ಅಭಿಯಂತರರು ಜವಾಹರ್ ಜೋಗಿ, ಜಿಲ್ಲಾ ವಾರ್ತಾಧಿಕಾರಿ ಎಸ್. ಹೆಚ್ ನಿರ್ಮಲ, ಸ್ಲಂ ನಿವಾಸಿಗಳ ಮುಖಂಡರಾದ  ಎನ್.ನಾಗೇಶ್, ಸಿದ್ಧರಾಜು, ಪೂರ್ಣಿಮ, ಶಿಲ್ಪ, ಕೃಷ್ಣ, ಪ್ರಕಾಶ್, ವೈದುನ, ಚಂದ್ರಶೇಖರ್, ಮಮತ, ಮೋಹನ್, ವಿಜಯಕುಮಾರ್ ಇನ್ನಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!