Friday, September 20, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಬರ ಪರಿಹಾರ; ಉದ್ಯೋಗ ಖಾತ್ರಿ ಕೆಲಸಕ್ಕೆ ಆಗ್ರಹಿಸಿ ಪ್ರತಿಭಟನೆ

ರಾಜ್ಯದಲ್ಲಿ ಬರಗಾಲ ಆವರಿಸಿದ್ದು, ಇಂತಹ ಸಂದರ್ಭದಲ್ಲಿ ಕೂಡಲೇ ಬರ ಪರಿಹಾರ ಬಿಡುಗಡೆ ಮಾಡಿ, ಕೂಲಿಕಾರರ ಕೈಗಳಿಗೆ ಹೆಚ್ಚಿನ ಉದ್ಯೋಗ ಒದಗಿಸಬೇಕೆಂದು ಆಗ್ರಹಿಸಿ ಮಂಡ್ಯದಲ್ಲಿ ಕೃಷಿ ಕೂಲಿಕಾರರು ಸೋಮವಾರ ಪ್ರತಿಭಟನೆ ನಡೆಸಿದರು.

ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ನೇತೃತ್ವದಲ್ಲಿ ಮಂಡ್ಯನಗರದ ಸಂಜಯ ವೃತ್ತದಿಂದ ಮೆರವಣಿಗೆ ಹೊರಟ ಕೃಷಿ ಕೂಲಿಕಾರರು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.

ಬರ ಪರಿಸ್ಥಿತಿಯಲ್ಲಿ ಸಂಕಷ್ಟದ ಸಮಯ ಎದುರಾಗಿದ್ದು ಕೇಂದ್ರದ ಕಡೆ ಬೊಟ್ಟು ಮಾಡದೆ ತುರ್ತಾಗಿ ಬರ ಪರಿಹಾರ ಬಿಡುಗಡೆ ಮಾಡಬೇಕು, ಬರ ಸನ್ನಿವೇಶದಲ್ಲಿ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕಾಮಗಾರಿ ಸೃಷ್ಟಿಸಿ ಕೃಷಿ ಕೂಲಿಕಾರರಿಗೆ ಕೆಲಸ ನೀಡಬೇಕು, ಕೆಲಸದ ದಿನವನ್ನ ನೂರು ದಿನಕ್ಕೆ ಬದಲಾಗಿ 200 ದಿನಕ್ಕೆ ಹೆಚ್ಚಿಸಬೇಕು, ಕೂಲಿ ಹಣ 316 ರೂ ಗೆ 100 ರೂ ಸೇರಿಸಿ ನೀಡಬೇಕು, ಸರ್ಕಾರ ನಿಗದಿಪಡಿಸಿರುವ ಕನಿಷ್ಠ ಕೂಲಿ 484 ರೂ ಸಂದಾಯ ಮಾಡಬೇಕು, ನೂರು ದಿನ ಕೆಲಸ ಮಾಡಿರುವ ಕೂಲಿಕಾರರಿಗೆ ಹೆಚ್ಚುವರಿ 50 ದಿನ ಕೆಲಸ ನೀಡಬೇಕು, ಪ್ರತಿ 15 ದಿನಕ್ಕೊಮ್ಮೆ ಕೂಲಿ ಪಾವತಿಸಬೇಕು ಎಂದು ಆಗ್ರಹಿಸಿದರು.

ಉದ್ಯೋಗ ಖಾತ್ರಿಯಲ್ಲಿ ಗುತ್ತಿಗೆದಾರರು, ಯಂತ್ರದ ಹಾವಳಿ ತಪ್ಪಿಸಬೇಕು, ಯೋಜನೆಯಲ್ಲಿ ಪ್ರತಿದಿನ ಎರಡು ಬಾರಿ ಹೆಬ್ಬೆಟ್ಟು ನೀಡಿ ಫೋಟೋ ತೆಗೆಯುವ ನೀತಿ ರದ್ದು ಪಡಿಸಬೇಕು.  ನಗರ ಪ್ರದೇಶಕ್ಕೂ ಉದ್ಯೋಗ ಖಾತ್ರಿ ವಿಸ್ತರಿಸಬೇಕು ಎಂದು ಒತ್ತಾಯಿಸಿದರು.

ಸಾಲ ವಸೂಲಾತಿ ನಿಲ್ಲಿಸಿ

ಬರಗಾಲ ಪರಿಸ್ಥಿತಿ ಇರುವುದರಿಂದ ಬ್ಯಾಂಕ್, ಮೈಕ್ರೋ ಫೈನಾನ್ಸ್ ಗಳಲ್ಲಿ ಕೂಲಿಕಾರರು ಪಡೆದಿರುವ ಸಾಲ ವಸೂಲಾತಿಯನ್ನು ನಿಲ್ಲಿಸಬೇಕು, ಮೈಕ್ರೋ ಫೈನಾನ್ಸ್ ಸಾಲ ನಿಷೇಧಿಸಿ ಉಪಕಸಬ್ಬು ಕೈಗೊಳ್ಳಲು ಬ್ಯಾಂಕ್ ನಿಂದ 2 ಲಕ್ಷದವರೆಗೆ ಸಾಲ ನೀಡಬೇಕು, ವಲಸೆ ಕಾರ್ಮಿಕರ ಕಾಯ್ದೆ ಕಟ್ಟುನಿಟ್ಟಾಗಿ ಜಾರಿ ಮಾಡಿ ಜಿಲ್ಲೆಯಲ್ಲಿ ಕಬ್ಬು ಕಡಿಯಲು ಬಂದಿರುವ ವಲಸೆ ಕಾರ್ಮಿಕರಿಗೆ ಮೂಲ ಸೌಕರ್ಯ ಕಲ್ಪಿಸಬೇಕು, ಅವರ ಮಕ್ಕಳಿಗೆ ಸಮರ್ಪಕ ಶಿಕ್ಷಣ ನೀಡಬೇಕು, ಜಿಲ್ಲೆಯಲ್ಲಿ ಕೆಟ್ಟು ನಿಂತಿರುವ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ದುರಸ್ತಿ ಮಾಡಬೇಕು ಎಂದು ಆಗ್ರಹಿಸಿದರು.

ರೈತರಿಗೆ ಪ್ರತಿ ಎಕರೆಗೆ 25 ಸಾವಿರ ಬರ ಪರಿಹಾರ ನೀಡಬೇಕು, ಸರ್ಕಾರಿ ಭೂಮಿಯಲ್ಲಿ ವಾಸಿಸುತ್ತಿರುವ ಬಡ ಜನತೆಗೆ ಹಕ್ಕು ಪತ್ರ ನೀಡಬೇಕು, ನಿವೇಶನ ರಹಿತರಿಗೆ ನಿವೇಶನ ಸೌಲಭ್ಯ ಕಲ್ಪಿಸಿ ವಸತಿ ನಿರ್ಮಿಸಿ ಕೊಡಬೇಕು, ಜಿಲ್ಲೆಯ ಎಲ್ಲಾ ಸ್ಮಶಾನ ಸೌಲಭ್ಯ ಕಲ್ಪಿಸಬೇಕು, ನರಿಪುರದಲ್ಲಿ ಪಡಿತರ ವಿತರಣೆಗೆ ಉಪ ಕೇಂದ್ರ ತೆರೆಯಬೇಕು, ಅಂಗವಿಕಲರು, ವೃದ್ಧರು, ಒಂಟಿ ಮಹಿಳೆಯರ ಕುಟುಂಬಗಳ ಮನೆ ಬಾಗಿಲಿಗೆ ಪಡಿತರ ವಿತರಿಸಬೇಕು ಎಂದು ಒತ್ತಾಯಿಸಿದರು.

ಕರ್ನಾಟಕ ಪ್ರಾಂತ ಕೂಲಿಕಾರರ ಸಂಘದ ರಾಜ್ಯಾಧ್ಯಕ್ಷ ಎಂ ಪುಟ್ಟಮಾದು, ಜಿ.ಎನ್. ನಾಗರಾಜು, ಬಿ ಹನುಮೇಶ್, ಬಿ.ಎಂ ಶಿವಮಲ್ಲಯ್ಯ, ಅನಿತಾ, ಬಿ ಎ ಮಧುಕುಮಾರ್, ಅಮಾಸಯ್ಯ, ಆರ್.ರಾಜು, ಜಿ.ಎಚ್ ಗಿರೀಶ್,ರಾಮಣ್ಣ, ಟಿ.ಹೆಚ್ ಆನಂದ, ಮಹಾದೇವ, ಲಕ್ಷ್ಮಿ, ಎಚ್.ಎಸ್ ಮಂಜುಳಾ ಮತ್ತಿತರರು ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!