Friday, September 20, 2024

ಪ್ರಾಯೋಗಿಕ ಆವೃತ್ತಿ

ಮಳವಳ್ಳಿ| ಜಾತಿನಿಂದನೆ ಪ್ರಕರಣ: ತಪ್ಪಿತಸ್ಥರ ಬಂಧನಕ್ಕೆ ಆಗ್ರಹ; ಸಮಾಜ ಕಲ್ಯಾಣಾಧಿಕಾರಿ ಸಸ್ಪೆಂಡ್ ಗೆ ಒತ್ತಾಯ

ಮಳವಳ್ಳಿ ತಾಲ್ಲೂಕಿನ ಹಾಡ್ಲಿ ಸರ್ಕಲ್ ಬಳಿ ಗೌಡಗೆರೆ ಗ್ರಾಮದ ದಲಿತ ಯುವಕ ಕಿರಣ್ ಎಂಬುವವರ ಮೇಲೆ ಮೇಲ್ಜಾತಿಯ ಕೆಲವರು ಜಾತಿ ನಿಂದನೆ ಮಾಡಿ, ದೌರ್ಜನ್ಯ ನಡೆಸಿದ್ದು, ತಪ್ಪಿತಸ್ಥರನ್ನು ಕೂಡಲೇ ಬಂಧಿಸಬೇಕು, ಅರೋಪಿಗಳ ವಿರುದ್ದ ಜಾತಿನಿಂದನೆ ಕೇಸು ದಾಖಲಿಸಿ ಹಾಗೂ ನೊಂದ ಯುವಕನಿಗೆ ಪರಿಹಾರ ಕೊಡಿಸುವಲ್ಲಿ ನಿರ್ಲಕ್ಷ್ಯ ವಹಿಸಿದ ಸಮಾಜಕಲ್ಯಾಣ ಇಲಾಖೆ ಅಧಿಕಾರಿಯನ್ನು ಕೂಡ ಅಮಾನತುಗೊಳಿಸಬೇಕೆಂದು ಆಗ್ರಹಿಸಿ ಕರ್ನಾಟಕ ಅಹಿಂದ ಒಕ್ಕೂಟದ ಪದಾಧಿಕಾರಿಗಳು ಮಳವಳ್ಳಿ ಪಟ್ಟಣ ಅಂಬೇಡ್ಕರ್ ಭವನದ ಎದುರು ಪ್ರತಿಭಟನೆ ನಡೆಸಿ, ತಹಶೀಲ್ದಾರ್‌ ಅವರನ್ನು ಒತ್ತಾಯಿಸಿದರು.

ಅಹಿಂದ ಒಕ್ಕೂಟದ ಭಾಸ್ಕರ್ ಪ್ರಸಾದ್ ಮಾತನಾಡಿ, ಕಿರಣ್ ಎಂಬ ದಲಿತ ಯುವಕನನ್ನು ಜಾತಿ ಹಿಡಿದು ನಿಂದನೆ ಮಾಡಿರುವುದಲ್ಲದೇ ಹಲವಾರು ಮಂದಿ ಹೊಡೆದು ಹಲ್ಲೆ ನಡೆಸಿದ್ದಾರೆ, ಕೂಡಲೇ ತಪ್ಪಿತಸ್ಥರನ್ನು ಬಂಧಿಸಿ ನೊಂದ ಯುವಕನಿಗೆ ನ್ಯಾಯ ನೀಡಬೇಕು, ಹಲ್ಲೆ ಪ್ರಕರಣ ವಿಷಯವಾಗಿ ಸಮಾಜ ಕಲ್ಯಾಣ ಅಧಿಕಾರಿಯನ್ನು ಭೇಟಿ ಮಾಡಲು ಹೋದಾಗ ಕಚೇರಿ ಒಳಗೆ ಬಿಡದೇ ಹೊರಗಡೆ ನಿಲ್ಲಿಸಿ ಕಳುಹಿಸಿದ್ದಾರೆ, ಅವರ ವಿರುದ್ದವು ಕೇಸು ದಾಖಲಿಸಿ ಅವರನ್ನು ಕೂಡಲೇ ಅಮಾನತುಗೊಳಿಸಬೇಕು, ನಮ್ಮ ಬೇಡಿಕೆ ಈಡೇರದಿದ್ದರೇ ಮಳವಳ್ಳಿ ತಾಲ್ಲೂಕು ಕಚೇರಿಯಿಂದ ಮಂಡ್ಯ ಜಿಲ್ಲಾಧಿಕಾರಿಗಳ ಕಚೇರಿ ವರೆಗೆ ಅರೆಬೆತ್ತಲೆ ಮೆರವಣಿಗೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ತಹಶೀಲ್ದಾರ್ ಲೊಕೇಶ್ ಮಾತನಾಡಿ, 48 ಗಂಟೆಗಳಲ್ಲಿ ಆರೋಪಿಗಳನ್ನು ಪೊಲೀಸರು ಬಂಧಿಸಲಿದ್ದಾರೆ, ಜಾತಿ ನಿಂದನೆ ಕೇಸು ದಾಖಲಿಸಲಾಗುವುದು ಜೊತೆಗೆ ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ವಿರುದ್ದ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಕ್ರಮ ಕೈಗೊಳ್ಳುವಂತೆ ಶಿಫಾರಸ್ಸು ಮಾಡಲಾಗುವುದು ಎಂದರು. ಸಭೆಯಲ್ಲಿ   ಡಿವೈಎಸ್‌ಪಿ ಕೃಷ್ಣಪ್ಪ, ಗ್ರೇಡ್-2 ತಹಶೀಲ್ದಾರ್ ಕುಮಾರ್ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಕರ್ನಾಟಕ ಅಹಿಂದ ಒಕ್ಕೂಟದ ಪ್ರೊ.ಹರಿರಾಮ್, ಮುಖಂಡರಾದ ಲಲಿತಾ ನಾಯಕ್, ಭಾಸ್ಕರ್‌ರಾವ್, ಅರೆರಾಂ, ಶಂಕರ್, ರಾಮಲಿಂಗಯ್ಯ, ದಿನೇಶ್, ಗಣೇಶ್, ಜಯಸುಧಾ, ದಿಲೀಪ್ ಸೇರಿದಂತೆ ಇತರರು ಇದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!