Thursday, September 19, 2024

ಪ್ರಾಯೋಗಿಕ ಆವೃತ್ತಿ

ಜ. 22ರಂದು ರಾಹುಲ್ ಯಾತ್ರೆ ಸ್ಥಗಿತಗೊಳಿಸಲಿ ಎಂದ ಅಸ್ಸಾಂ ಸಿಎಂ; ಯಾತ್ರೆ ತಡೆಯುವ ಹುನ್ನಾರವೆಂದ ಕಾಂಗ್ರೆಸ್

ಜನವರಿ 22 ರಂದು ಅಯೋಧ್ಯೆಯಲ್ಲಿ ನಡೆಯುವ ಪ್ರಾಣ ಪ್ರತಿಷ್ಠಾನ ದಿನದಂದು ಭಾರತ್ ಜೋಡೋ ನ್ಯಾಯ ಯಾತ್ರೆಯನ್ನು ಸ್ಥಗಿತಗೊಳಿಸುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಅಸ್ಸಾಂ ಮುಖ್ಯಮಂತ್ರಿ ಮನವಿ ಮಾಡಿದ್ದಾರೆ.

ರಾಹುಲ್ ಗಾಂಧಿ ಜನವರಿ 22ರಂದು ಕೈಗೊಳ್ಳುವ ಅಲ್ಪಸಂಖ್ಯಾತ ಪ್ರಾಬಲ್ಯದ ಕೆಲವೊಂದು ಸೂಕ್ಷ್ಮ ಪ್ರದೇಶಗಳಲ್ಲಿ ಸೇನೆಯನ್ನು ನಿಯೋಜಿಸಿದ ನಂತರ ಅಸ್ಸಾಂ ಮುಖ್ಯಮಂತ್ರಿ ಈ ಹೇಳಿಕೆ ನೀಡಿದ್ದಾರೆ.

“ರಾಮ ಮಂದಿರದ ಪ್ರಾಣ ಪ್ರತಿಷ್ಠಾನ ನಡೆಯುವ ಸೋಮವಾರ ಬಟಾದರವ ಪ್ರದೇಶಕ್ಕೆ ಭೇಟಿ ನೀಡದಂತೆ ರಾಹುಲ್ ಗಾಂಧಿ ಅವರಿಗೆ ಮನವಿ ಮಾಡುತ್ತೇವೆ. ಇದು ಅಸ್ಸಾಂಗೆ ತಪ್ಪು ಸಂದೇಶ ರವಾನಿಸುತ್ತದೆ” ಎಂದು ಅಸ್ಸಾಂ ಮುಖ್ಯಮಂತ್ರಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

“ಅಸ್ಸಾಂಗೆ ನೋವು ತಂದೊಡ್ಡುವ ಅನಗತ್ಯ ಸ್ಪರ್ಧೆ ಬೇಡ. ರಾಹುಲ್ ಗಾಂಧಿ ಅವರು ಪ್ರಾಣ ಪ್ರತಿಷ್ಠಾಪನಾ ದಿನದ ನಂತರ ಯಾತ್ರೆಗೆ ತೆರಳಲಿ” ಎಂದು ಅಸ್ಸಾಂ ಸಿಎಂ ತಿಳಿಸಿದರು.

ಭಾರತ್ ಜೋಡೋ ನ್ಯಾಯ ಯಾತ್ರೆ ಅಸ್ಸಾಂ ಕೆಲವೊಂದು ಪ್ರದೇಶಗಳಿಗೆ ಆಗಮಿಸದಂತೆ ಅಲ್ಲಿನ ಸಿಎಂ ಹೇಳಿಕೆಯ ಬಗ್ಗೆ ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ “ ನಮ್ಮ ವಿನಂತಿಯು ಪರಿಗಣನೆಯಲ್ಲಿದೆ. ನಾವು ಸರಿಯಾದ ಮಾರ್ಗಗಳಲ್ಲಿ ಸಂಚರಿಸಲು ಅನುಮತಿ ಕೇಳಿದ್ದೇವೆ. ಆದರೆ ಸರ್ಕಾರಿ ಅಧಿಕಾರಿಗಳು ಅನಗತ್ಯ ಗೊಂದಲ ಸೃಷ್ಟಿಸುತ್ತಿದ್ದಾರೆ. ಇತ್ತೀಚಿಗಷ್ಟೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಸಾಗಿದ ಗುವಾಹಟಿ ಮಾರ್ಗದಲ್ಲಿಯೇ ನಾವು ಸಂಚರಿಸಲು ರಾಜ್ಯ ಸರ್ಕಾರಕ್ಕೆ ಮನವಿ ಕೇಳಿದ್ದೇವೆ. ಅವರ ಉದ್ದೇಶವು ನಮ್ಮನ್ನು ತಡೆಯುವುದಾಗಿದೆ” ಎಂದರು.

ಮೂರು ದಿನಗಳ ಅಸ್ಸಾಂ ಯಾತ್ರೆಯ ನಂತರ ಭಾರತ್ ಜೋಡೋ ಯಾತ್ರೆಯು ಶನಿವಾರ(ಜ.20) ಒಂದು ದಿನ ಅರುಣಾಚಲ ತಲುಪಿತು. ಈಗ ಪುನಃ ಇಂದಿನಿಂದ(ಜ.21) ಜನವರಿ 25ರವರೆಗೂ ಅಸ್ಸಾಂನಲ್ಲಿಯೇ ಸಂಚರಿಸಲಿದೆ.

ಜನವರಿ 18ರಂದು ಯಾತ್ರೆ ಅಸ್ಸಾಂಗೆ ಪ್ರವೇಶಿಸಿದ ದಿನದಂದು ಜೋರಾತ್ ಜಿಲ್ಲೆಯಲ್ಲಿ ಯಾತ್ರೆ ಹಾಗೂ ಯಾತ್ರೆಯ ಸಂಘಟಕರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

ಭಾರತ್ ಜೋಡೋ ಯಾತ್ರೆ ಸಾಗಿದ ಬಿಜೆಪಿ ಆಡಳಿತದ ಇತರ ರಾಜ್ಯಗಳಲ್ಲಿ ಈ ರೀತಿಯ ತೊಂದರೆ ಸೃಷ್ಟಿಯಾಗಿಲ್ಲ. ಅಸ್ಸಾಂನಲ್ಲಿ ಮಾತ್ರ ಈ ರೀತಿಯ ತೊಂದರೆ ಸೃಷ್ಟಿಸಲಾಗುತ್ತಿದೆ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.

ಕೃಪೆ: ಈದಿನ.ಕಾಂ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!