Sunday, October 27, 2024

ಪ್ರಾಯೋಗಿಕ ಆವೃತ್ತಿ

ಜನ ಜಾನುವಾರುಗಳಿಗೆ ನೀರು, ಮೇವಿನ ಸಮಸ್ಯೆಯಾಗದಂತೆ ಕ್ರಮವಹಿಸಿ: ರವಿಕುಮಾರ್

ಈಗಾಗಲೇ ರಾಜ್ಯ ಹಾಗೂ ಜಿಲ್ಲೆಗೆ ಬರ ಆವರಿಸಿದ್ದು, ಮುಂಬರುವ ದಿನಗಳಲ್ಲಿ ಬೇಸಿಗೆ ಆವರಿಸಲಿದೆ. ಈ ಕಾರಣ ಜಾನುವಾರುಗಳ ನೀರು ಮೇವು ಹಾಗೂ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಿ ಎಂದು ಶಾಸಕ ಪಿ.ರವಿಕುಮಾರ್ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಮಂಡ್ಯ ಜಿಲ್ಲಾ ಪಂಚಾಯತ ಕಾವೇರಿ ಸಭಾಂಗಣದಲ್ಲಿ 2023-24ನೇ ಸಾಲಿನ ಡಿಸೆಂಬರ್ 2023 ರ ಅಂತ್ಯದವರೆಗಿನ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕುಡಿಯುವ ನೀರಿನ ಸಮಸ್ಯಾತ್ಮಕ ಗ್ರಾಮಗಳಿಗೆ ಸಂಬಂಧಿಸಿದ ಅಧಿಕಾರಿಗಳು ಪರಿಶೀಲನೆ ನಡೆಸಿ ಅವಶ್ಯಕ ನೀರು ಸೌಲಭ್ಯ ಕಾರ್ಯ ಕೈಗೆತ್ತಿಕೊಳ್ಳಬೇಕು. ಕುಡಿಯುವ ನೀರಿನ ಸಮಸ್ಯೆ ಇರುವ ಗ್ರಾಮಕ್ಕೆ ಅವಶ್ಯಕ ಟ್ಯಾಂಕರ್‌ಗಳ ಮೂಲಕ ನೀರು ಕೊಡಬೇಕು. ಜೊತೆಗೆ ಕ್ಷೇತ್ರದ ಯಾವುದೇ ಗ್ರಾಮದಲ್ಲಿ ಸಮಸ್ಯೆ ಕಂಡುಬರದ ರೀತಿಯಲ್ಲಿ ಅಧಿಕಾರಿಗಳು ಕೆಲಸ ನಿರ್ವಹಿಸಿ ಎಂದು ನಿರ್ದೇಶನ ನೀಡಿದರು.

ಜಾನುವಾರುಗಳು ಆಕಸ್ಮಿಕವಾಗಿ ಅಥವಾ ರೋಗ ರುಜುನುಗಳಿಂದ ಮೃತಪಟ್ಟರೆ ಸರ್ಕಾರದಿಂದ ನೀಡುವ ಪರಿಹಾರವನ್ನು ತಲುಪಿಸಿ. ಈ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕೆಲಸವಾಗಲಿ. ಗ್ರಾಮಗಳ ಡೈರಿ ಹಾಗೂ ಪಂಚಾಯತ ವ್ಯಾಪ್ತಿಯಲ್ಲಿ ಬ್ಯಾನರ್ ಅಳವಡಿಸಿ ಅರಿವು ಮೂಡಿಸಿ ಎಂದರು.

ಮಂಡ್ಯ ತಾಲೂಕು ವ್ಯಾಪ್ತಿಯಲ್ಲಿ ಜಲ ಜೀವನ್ ಮಿಷನ್ ಯೋಜನೆಯ ಕಾಮಗಾರಿ ಪೂರ್ಣಗೊಳಿಸಿ. ಆರೋಗ್ಯ ಇಲಾಖೆಯಿಂದ ಕೋವಿಡ್ ಬಗ್ಗೆ ಜಾಗೃತಿ, ಗರ್ಭಿಣಿಯರಿಗೆ ಕಿಟ್ ವಿತರಣೆ, ಮಕ್ಕಳಿಗೆ ಚುಚ್ಚು ಮದ್ದು ಸೇರಿದಂತೆ ಆರೋಗ್ಯ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿ ಎಂದರು.

ಕಳೆದ ಬಾರಿ ಜಿಲ್ಲೆಯು ಎಸ್.ಎಸ್.ಎಲ್.ಸಿ ಫಲಿತಾಂಶ ರಾಜ್ಯದಲ್ಲಿ ಎರಡನೇ ಸ್ಥಾನದಲ್ಲಿದ್ದು, ಜಿಲ್ಲೆಯಲ್ಲಿ ಮಂಡ್ಯ ತಾಲ್ಲೂಕು ಪ್ರಥಮ ಸ್ಥಾನದಲ್ಲಿದೆ. ಈ ಬಾರಿ ಜಿಲ್ಲೆ ರಾಜ್ಯದಲ್ಲಿಯೇ ಪ್ರಥಮ ಸ್ಥಾನ ಬರುವ ನಿಟ್ಟಿನಲ್ಲಿ ಮಕ್ಕಳನ್ನು ಸಿದ್ಧಗೊಳಿಸಿ . ಮಕ್ಕಳಿಗೆ ಪರೀಕ್ಷಾ ಭಯ ಹೋಗಲಾಡಿಸುವುದು ಸೇರಿದಂತೆ ವ್ಯಕ್ತಿತ್ವ ವಿಕಸನದ ತರಬೇತಿ ನೀಡಿರಿ ಎಂದರು.

ನರೇಗಾ ಯೋಜನಯಡಿ ಕೂಲಿ ಕಾರ್ಮಿಕರಿಗೆ ಕೆಲಸ ನೀಡಿ‌. ಜೊತೆಗೆ ಕೃಷಿ ಹೊಂಡ, ಎರೆಹುಳು ತೊಟ್ಟಿ ಯೋಜನೆ ಸೇರಿದಂತೆ ನರೇಗಾ ಯೋಜನೆಗಳನ್ನು ಜಿಲ್ಲೆಯಲ್ಲಿ ಸಮರ್ಪಕವಾಗಿ ಅನುಷ್ಠಾನಗೊಳಿಸಿ ಎಂದರು.

ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವ್ಯಾಪ್ತಿಯ ಹಾಸ್ಟೆಲ್ ಗಳಲ್ಲಿ ಶುಚಿತ್ವ ಕಾಪಾಡಿಕೊಳ್ಳಿ, ಮಕ್ಕಳಿಗೆ ಪೌಷ್ಟಿಕ ಅಹಾರ ನೀಡಿ, ಜೊತೆಗೆ ಅಧಿಕಾರಿಗಳು ಹಾಸ್ಟೆಲ್ ದಿಢೀರ್ ಭೇಟಿ ನೀಡಿ ಕುಂದು ಕೊರತೆ ಆಲಿಸಿ ಎಂದರು.

ಸಭೆಯಲ್ಲಿ ತಹಶಿಲ್ದಾರ್ ಡಾ.ಶಿವಕುಮಾರ್ ಬಿರಾದರ, ತಾಲ್ಲೂಕ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ವೀಣಾ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!