Thursday, September 19, 2024

ಪ್ರಾಯೋಗಿಕ ಆವೃತ್ತಿ

ಕೇಂದ್ರ ಬಜೆಟ್ ಚುನಾವಣಾ ಗಿಮಿಕ್; ರಾಜ್ಯಕ್ಕೆ ಯಾವುದೇ ಯೋಜನೆ ಇಲ್ಲ: ಚಲುವರಾಯಸ್ವಾಮಿ

ಈ ಬಾರಿಯ ಕೇಂದ್ರ ಬಜೆಟ್ ಕೃಷಿಕರಿಗೆ ಮತ್ತೆ ನಿರಾಸೆ ಮೂಡಿಸಿದ್ದು, ಇದೊಂದು ಚುನಾವಣಾ ಗಿಮಿಕ್ ಬಜೆಟ್‌ ಎಂದಷ್ಟೇ ಹೇಳಬಹುದು ಎಂದು ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.

ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇವಲ ಅನ್ನದಾತರಿಗೆ ಆದ್ಯತೆ ಎಂಬ ಘೋಷಣೆ
ಇದೆ. ಅದರೆ ನಿರೀಕ್ಷಿತ ದೂರದೃಷ್ಟಿ ಚಿಂತನೆಯ ಯೋಜನೆಗಳು ಇದರಲ್ಲಿ ಕಾಣುತ್ತಿಲ್ಲ. ರಸಗೊಬ್ಬರಗಳ ಬೆಲೆ ಇಳಿಸಬೇಕೆಂಬ ರೈತರ ಕೂಗಿಗೆ ಯಾವುದೇ ಸ್ಪಂದನೆ ದೊರೆತಿಲ್ಲ. ಕಳೆದ 10 ವರ್ಷಗಳಿಂದ ಗೊಬ್ಬರದ ಬೆಲೆ ಏರಿಕೆಯಿಂದ ಕೃಷಿಕ ದೊಡ್ಡ ಹೊರೆ ಹೊರುವಂತಾಗಿದೆ. ಸಬ್ಸಿಡಿಯೂ ಹೆಚ್ಚಳ ಮಾಡಿಲ್ಲ ಎಂದು ಹೇಳಿದರು.

ಬರ ನಿರ್ವಹಣೆ, ಸಂಕಷ್ಟದಲ್ಲಿ ಇರುವ ರೈತರಿಗೆ ನೆರವಿನ ಯೋಜನೆಗಳು ಇಲ್ಲ‌. ಕರ್ನಾಟಕದ ಪಾಲಿಗಂತೂ ತಂಬಾ ನಿರಾಶಾದಾಯಕವಾಗಿದೆ. ನೇರ ತೆರಿಗೆ ಹೆಚ್ಚಳವಾಗಿದೆ. ಅಲ್ಲದೆ ಆದಾಯ ತೆರಿಗೆ ಸ್ಲಾಬ್ ಪರಿಷ್ಕರಣೆ ಮಾಡಬಹುದೆಂಬ ನಿರೀಕ್ಷೆ ಹುಸಿಯಾಗಿದೆ ಎಂದು ತಿಳಿಸಿದರು.

ವಿದ್ಯುತ್ ಅವಘಡಗಳ ಬಗ್ಗೆ ಎಚ್ಚರವಹಿಸಿ

ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ವಿದ್ಯುತ್ ಪೂರೈಕೆ ಮೇಲ್ವಿಚಾರಣೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಚಿವರು, ಇತ್ತೀಚಿನ ದಿನಗಳಲ್ಲಿ ವಿದ್ಯುತ್ ಅವಗಢ ಸಂಭವಿಸಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು, ಚೆಸ್ಕಾಂ ವಿದ್ಯುತ್ ಅವಘಡಳ ಬಗ್ಗೆ ಎಚ್ಚರವಹಿಸಬೇಕು. ಮಂಡ್ಯ ಜಿಲ್ಲೆಯ ಪ್ರಸ್ತುತ ದಿನವಹಿ ವಿದ್ಯುತ್ ಬೇಡಿಕೆ 9.5 ಮಿಲಿಯನ್ ಇದ್ದು, ತಿಂಗಳಿಗೆ 300 ಮಿಲಿಯನ್ ವಿದ್ಯುತ್ ಬೇಡಿಕೆ ಇರುತ್ತದೆ ಎಂದರು.

ಮೈಸೂರಿನ ಕೆ.ಪಿ.ಟಿ.ಸಿ‌ಎಲ್ ಚೀಫ್ ಇಂಜಿನಿಯರ್ ಶಂಕರ್ ಮಾತನಾಡಿ, ಮಂಡ್ಯ ನಗರಕ್ಕೆ ನಿರಂತರ 24 ಗಂಟೆಗಳ 3 ಫೇಸ್ ವಿದ್ಯುತ್ ಸರಬರಾಜು, ಕೈಗಾರಿಕೆಗೆ ನಿರಂತರ 24 ಗಂಟೆಗಳ 3 ಫೇಸ್, ಗ್ರಾಮೀಣ ಭಾಗಕ್ಕೆ ಹಗಲಿನ ವೇಳೆ4 ಗಂಟೆ, ರಾತ್ರಿ ವೇಳೆ 3 ಗಂಟೆ (3 ಫೇಸ್) 9 ಗಂಟೆ (1ಫೇಸ್), ಕಾಡಂಚಿನ ಭಾಗಕ್ಕೆ ಹಗಲಿನಲ್ಲಿ ನಿರಂತರ 7 ಗಂಟೆ 3 ಫೇಸ್ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ ಎಂದರು.

ಜಿಲ್ಲೆಯಲ್ಲಿ 2023-24 ನೇ ಸಾಲಿನಲ್ಲಿ ಪಾಂಡವಪುರ ಮಹದೇಶ್ವರಪುರ, ಬನ್ನಂಗಾಡಿ, ನಾಗಮಂಗಲದ ಗೆಡ್ಡೇನಹಳ್ಳಿ, ಮಳವಳ್ಳಿಯ ವಡಕೆಪುರ, ಕೆ,ಆರ್ ಪೇಟೆಯ ಆನೆಗೊಳ, ಮಂಡ್ಯದ ಕೆಐಎಡಿಬಿ, ಶ್ರೀರಂಗಪಟ್ಟಣದ ತರಿಪುರ, ಮದ್ದೂರಿನ ಸೋಮನಹಳ್ಳಿಯಲ್ಲಿ ವಿದ್ಯುತ್ ಪರಿವರ್ತಕಗಳನ್ನು ಉನ್ನತೀಕರಣ ಮಾಡುವ ಬೃಹತ್ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ.

ನಾಗಮಂಗಲ 11, ಮಂಡ್ಯ 10, ಶ್ರೀರಂಗಪಟ್ಟಣ 6, ಪಾಂಡವಪುರ 6, ಕೆ.ಆರ್ 12, ಮದ್ದೂರು 8, ಮಳವಳ್ಳಿ 10 ಸೇರಿದಂತೆ ಮಂಡ್ಯ ಜಿಲ್ಲೆಯಲ್ಲಿ ಒಟ್ಟು 53 ವಿದ್ಯುತ್ ಕೇಂದ್ರಗಳಿವೆ. ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಅಂಚೆಚಿಟ್ಟನಹಳ್ಳಿ, ಬುಡಗುಂಟೆ, ಬಾಳನಕೊಪ್ಪಲಿ, ಮದ್ದೂರಿನ ತಮರನಕಟ್ಟೆ, ಮಂಡ್ಯ ತಾಲ್ಲೂಕಿನ ತಂಗಳಗೆರೆ, ಬಾಳೇನಹಳ್ಳಿ, ಹುಲಿವಾನ, ಸಂತೆಕಸಲಗೆರೆ, ಶ್ರೀರಂಗಪಟ್ಟಣದ ಕೊಡಿಯಾಲ, ಪಾಂಡವಪುರದ 220 ಕೆ.ವಿ ಪಾಂಡವಪುರ, ಕೆರೆತೊಣ್ಣೂರು, ಕ್ಯಾತನಹಳ್ಳಿಯಲ್ಲಿ ಹೊಸದಾಗಿ ವಿದ್ಯುತ್ ಉಪ ಕೇಂದ್ರಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ ಎಂದರು.

ಜಿಲ್ಲಾಧಿಕಾರಿ ಡಾ ಕುಮಾರ ಮಾತನಾಡಿ, ವಿದ್ಯುತ್ ಸ್ಥಾವರ ನಿರ್ಮಾಣ ಕಾಮಗಾರಿ ಸೇರಿದಂತೆ ವಿವಿಧ ಕಾಮಗಾರಿ ಕೈಗೊಳ್ಳುವ ಮೊದಲು ಕಂದಾಯ ಇಲಾಖೆಯ ಅಭಿಪ್ರಾಯ ಪಡೆದುಕೊಳ್ಳಿ ಎಂದರು.

ಸಭೆಯಲ್ಲಿ ಶಾಸಕ ಪಿ.ರವಿಕುಮಾರ್, ಜಿಲ್ಲಾ ಪಂಚಾಯತಿ ಸಿಇಒ ಶೇಖ್ ತನ್ವೀರ್ ಆಸಿಫ್, ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ಸೇರಿದಂತೆ ಚೆಸ್ಕಾಂ ಹಾಗೂ ಇನ್ನೀತರ ಅಧಿಕಾರಿಗಳು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!